ಮಿ ಟೂ ಬದಲು ಅದು ಪುರುಷರಿಗಾಗಿ ಇರುವ ಯು ಟೂ ಅಭಿಯಾನವಾಗಬೇಕು: ಶಿಲ್ಪಾ ಶೆಟ್ಟಿ ಮಹಿಳೆಯರು ತಮ್ಮ ಮೇಲಾಗುತ್ತಿರುವ ದೌರ್ಜನ್ಯದ ಬಗ್ಗೆ ಮಾತನಾಡಲು ಇದು ಸಮಯವಾಗಿದ್ದು, ಆದರೆ ... ಮುಂಬೈ: ಮಹಿಳೆಯರು ತಮ್ಮ ಮೇಲಾಗುತ್ತಿರುವ ದೌರ್ಜನ್ಯದ ಬಗ್ಗೆ ಮಾತನಾಡಲು ಇದು ಸಮಯವಾಗಿದ್ದು, ಆದರೆ ಅದು 'ಮಿ ಟು' ಅಭಿಯಾನ ಮೂಲಕ ಅಲ್ಲ, ಬದಲಿಗೆ ಯು ಟೂ ಅಭಿಯಾನ ಎಂದಾಗಬೇಕು, ಏಕೆಂದರೆ ಪುರುಷರ ಕಡೆಯಿಂದ ಆಗುವ ತಪ್ಪು ಇದು ಎಂದು ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹೇಳಿದ್ದಾರೆ. 10 ವರ್ಷಗಳ ಹಿಂದೆ ನಟ ನಾನಾ ಪಾಟೇಕರ್ ಅವರಿಂದ ಎದುರಾಗಿದ್ದ ಲೈಂಗಿಕ ಕಿರುಕುಳ ಬಗ್ಗೆ ಮುಕ್ತವಾಗಿ ಹೇಳಿಕೊಂಡ ನಟಿ ತನುಶ್ರೀ ದತ್ತಾ ಕ್ರಮವನ್ನು ಮುಕ್ತ ಕಂಠದಿಂದ ಶ್ಲಾಘಿಸಿದ ಶಿಲ್ಪಾ ಶೆಟ್ಟಿ, ಇದೊಂದು ಅಭಿಯಾನ ಆರಂಭವಾಗಲು ಸಹಾಯವಾಯಿತು ಎಂದಿದ್ದಾರೆ. ಯಾವುದೇ ವೃತ್ತಿಯಲ್ಲಾಗಲಿ, ಯಾವುದೇ ಪರಿಸರದಲ್ಲಾಗಲಿ ಕೆಲಸ ಮಾಡುವ ಪರಿಸರ ಉತ್ತಮವಾಗಿರಬೇಕು ಮತ್ತು ಸುರಕ್ಷಿತವಾಗಿರಬೇಕು. ಅದನ್ನೇ ಎಲ್ಲರೂ ಅಪೇಕ್ಷಿಸುವುದು, ತನುಶ್ರೀ ದತ್ತಾ ಅವರು ಆರಂಭಿಸಿರುವ ಈ ಅಭಿಯಾನ ನಿಜಕ್ಕೂ ಶ್ಲಾಘನೀಯ, ಇಲ್ಲಿಯವರೆಗೆ ಇಂತಹ ಪ್ರಕರಣಗಳು ಮುಚ್ಚಿ ಹೋಗುತ್ತಿದ್ದವು ಎಂದು ಶಿಲ್ಪಾ ಶೆಟ್ಟಿ ಪಿಟಿಐ ಸುದ್ದಿ ಸಂಸ್ಥೆಗೆ ಹೇಳಿದ್ದಾರೆ. ಮಹಿಳೆಯರು ದುರ್ಬಲರಾಗಬಾರದು ಮತ್ತು ಅವರನ್ನು ಅವರೇ ದೂಷಿಸಿಕೊಳ್ಳುವಂತಾಗಬಾರದು, ಅವರು ಇಂದಿನ ಕಾಲದಲ್ಲಿ ಗಟ್ಟಿಯಾಗಬೇಕು. ತನುಶ್ರೀ ದತ್ತಾ ಮುಕ್ತವಾಗಿ ಹೇಳಿರುವುದು ಎಲ್ಲಿಗೆ ಹೋಗಿ ಮುಟ್ಟುತ್ತದೆ, ಅದರ ಪರಿಣಾಮ ಏನಾಗುತ್ತದೆ ಎಂದು ನನಗೆ ಗೊತ್ತಿಲ್ಲ, ಆದರೆ ಇದು ಅಭಿಯಾನಕ್ಕೊಂದು ಮುನ್ನುಡಿ ಬರೆದಿದೆ ಎಂದರೆ ತಪ್ಪಾಗಲಾರದು. ಜನರು ಸಾಕಷ್ಟು ನೊಂದಿದ್ದಾರೆ. ಮಹಿಳೆಯರು ಎದ್ದು ನಿಂತು ತಮಗಾಗುತ್ತಿರುವ ಅನ್ಯಾಯವನ್ನು ಹೇಳಿಕೊಳ್ಳಲು ಸಮಯ ಬಂದಿದೆ. ಇದರ ಹ್ಯಾಶ್ ಟಾಗ್ ಮಿ ಟೂ ಬದಲು ಪುರುಷರ ಕಡೆ ತೋರಿಸುವ ಯ ಟೂ ಆಗಬೇಕು, ಆದರೆ ನಟ ನಾನಾ ಪಾಟೇಕರ್ ತನುಶ್ರೀ ದತ್ತಾ ಅವರ ಆರೋಪವನ್ನು ನಿರಾಕರಿಸಿದ್ದಾರೆ.