ಅಮೀರ್ ಖಾನ್, ಶಾರೂಕ್ ಖಾನ್ ಮಾತನಾಡಿದರೆ ನಕಾರಾತ್ಮಕ ಪ್ರತಿಕ್ರಿಯೆ ಎದುರಿಸುವ ಆತಂಕದಲ್ಲಿದ್ದಾರೆ : ಸೋನಮ್ ಕಪೂರ್ ನಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗುವ ಆತಂಕದಿಂದ ಶಾರೂಕ್ ಖಾನ್, ಅಮೀರ್ ಖಾನ್ ಯಾವುದೇ ವಿಷಯದ ಬಗ್ಗೆ ಮಾತನಾಡುವುದಕ್ಕೂ ಹೆದರುತ್ತಾರೆ. ಮುಂಬೈ: ನಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗುವ ಆತಂಕದಿಂದ ಶಾರೂಕ್ ಖಾನ್, ಅಮೀರ್ ಖಾನ್ ಯಾವುದೇ ವಿಷಯದ ಬಗ್ಗೆ ಮಾತನಾಡುವುದಕ್ಕೂ ಹೆದರುತ್ತಾರೆ ಎಂದು ಬಾಲಿವುಡ್ ನಟಿ ಸೋನಮ್ ಕಪೂರ್ ಹೇಳಿದ್ದಾರೆ. ಶಾರೂಕ್ ಖಾನ್ ಅಥವಾ ಅಮೀರ್ ಖಾನ್ ನೀಡುವ ಹೇಳಿಕೆಗಳಿಗೆ ನಮ್ಮ ಪ್ರತಿಕ್ರಿಯೆಗಳನ್ನು ಊಹಿಸಿಕೊಳ್ಳಿ, ನಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗುವ ಆತಂಕದಿಂದ ಅವರು ಮಾತನಾಡುವುದಕ್ಕೆ ಬೆದರುವಂತಾಗಿದೆ. ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯವನ್ನು ತಿಳಿಸುವ ಹಕ್ಕಿದೆ. ವ್ಯಕ್ತಿಗತ ಅಭಿಪ್ರಾಯಗಳನ್ನು ನಾವು ಗೌರವಿಸಬೇಕು ಎಂದು ನೀರ್ಜಾ ಸಿನಿಮಾದ ಹಾಡೊಂದನ್ನು ಬಿಡುಗಡೆ ಮಾಡಿದ ಸೋನಮ್ ಕಪೂರ್ ಹೇಳಿದ್ದಾರೆ. ಇತ್ತೀಚೆಗಷ್ಟೆ ಶಾರೂಕ್ ಖಾನ್ ಹಾಗೂ ಅಮೀರ್ ಖಾನ್ ದೇಶದಲ್ಲಿ ಅಸಹಿಷ್ಣುತೆ ಇದೆ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಖಂಡನೆ ವ್ಯಕ್ತವಾಗಿತ್ತು. ಅಲ್ಲದೇ ಇದಾದ ಕೆಲವೇ ದಿನಗಳಲ್ಲಿ ಬಿಡುಗಡೆಯಾದ ದಿಲ್ ವಾಲೆ ಚಿತ್ರವನ್ನು ಬಹಿಷ್ಕರಿಸುವಂತೆ ಕರೆ ನೀಡಲಾಗಿತ್ತು. ಅಸಹಿಷ್ಣುತೆ ಬಗ್ಗೆ ಅಮೀರ್ ಖಾನ್, ಶಾರೂಕ್ ಖಾನ್ ನೀಡಿದ್ದ ಹೇಳಿಕೆಗೆ ವ್ಯಕ್ತವಾದ ಪ್ರತಿಕ್ರಿಯೆಯನ್ನು ಹೆದರಿಕೆ ಮೂಡಿಸುವಂಥದ್ದು ಎಂದು ಸೋನಮ್ ಕಪೂರ್ ಹೇಳಿದ್ದಾರೆ.