ರಣವೀರ್-ದೀಪಿಕಾ ಮದುವೆ ನವೆಂಬರ್ 19ಕ್ಕೆ? ಬಾಲಿವುಡ್ ಖ್ಯಾತ ಜೋಡಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಇದೇ ವರ್ಷ ... ನವದೆಹಲಿ: ಬಾಲಿವುಡ್ ಖ್ಯಾತ ಜೋಡಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಇದೇ ವರ್ಷ ನವೆಂಬರ್ 19ರಂದು ಮದುವೆಯಾಗಲಿದ್ದಾರೆ ಎಂದು ಫಿಲ್ಮ್ ಫೇರ್ ಸಿನಿ ಪತ್ರಿಕೆ ವರದಿ ಮಾಡಿದೆ. ಆದರೆ ಈ ಬಗ್ಗೆ ಇನ್ನೂ ರಣವೀರ್ ಆಗಲಿ ದೀಪಿಕಾ ಆಗಲಿ ದೃಢಪಡಿಸಿಲ್ಲ. ಈ ಹಿಂದೆ ತಮ್ಮ ಮದುವೆ ಬಗ್ಗೆ ಕೇಳಿಬಂದ ಸುದ್ದಿಯನ್ನು ನಿರಾಕರಿಸಿದ್ದ ರಣವೀರ್ ಸಿಂಗ್, ಅಂತಹ ಬೆಳವಣಿಗೆಯೇನು ಆಗಿಲ್ಲ, ಮದುವೆ ನಡೆಯುವುದಿದ್ದರೆ ನಾನೇ ಮೊದಲು ಎಲ್ಲರಿಗೂ ತಿಳಿಸುತ್ತೇನೆ ಎಂದಿದ್ದರು. ಸಾರ್ವಜನಿಕವಾಗಿ ಹಲವು ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದ ದೀಪ್ ವೀರ್ ಎಂದೇ ಅಭಿಮಾನಿಗಳಿಂದ ಕರೆಸಿಕೊಳ್ಳುವ ಈ ಕ್ಯೂಟ್ ಜೋಡಿ ತಮ್ಮ ಸಂಬಂಧದ ಬಗ್ಗೆ ಇದುವರೆಗೆ ಒಪ್ಪಿಕೊಂಡಿಲ್ಲ. ಬಾಲಿವುಡ್ ನಲ್ಲಿ ಇತ್ತೀಚೆಗೆ ಮದುವೆ ಸಂಭ್ರಮ ಜೋರಾಗಿದೆ.ಕಳೆದ ಡಿಸೆಂಬರ್ ನಲ್ಲಿ ಅನುಷ್ಕಾ ಶರ್ಮ ಮತ್ತು ವಿರಾಟ್ ಕೊಹ್ಲಿ, ನಂತರ ಈ ತಿಂಗಳು ಸೋನಂ ಕಪೂರ್-ಆನಂದ್ ಅಹುಜಾ ನಂತರ ನೇಹಾ ದುಪಿಯಾ ಮತ್ತು ಅಂಗದ್ ಬೇಡಿ ವಿವಾಹವಾಗಿದ್ದಾರೆ.