ಶ್ರೇಯಾ ಘೋಷಾಲ್‌ಗೆ ಕಂಕಣ ಭಾಗ್ಯ ತಮ್ಮ ಸುಮಧುರ ಕಂಠದಿಂದ ಕೇಳುಗರ ಹೃದಯ ಸೂರೆಗೊಂಡಿರುವ ಗಾಯಕಿ ಶ್ರೇಯಾ ಘೋಷಾಲ್. ತಮ್ಮ ಹಾಡಿನ ಮೂಲಕ ... ನವದೆಹಲಿ: ತಮ್ಮ ಸುಮಧುರ ಕಂಠದಿಂದ ಕೇಳುಗರ ಹೃದಯ ಸೂರೆಗೊಂಡಿರುವ ಹಿನ್ನಲೆ ಗಾಯಕಿ ಶ್ರೇಯಾ ಘೋಷಾಲ್. ತಮ್ಮ ಹಾಡಿನ ಮೂಲಕ ಮೋಡಿ ಮಾಡಿದ ಈ ಗಾಯಕಿ ಇದೀಗ ಸದ್ದಿಲ್ಲದೇ ಮದುವೆಯಾಗುವ ಮೂಲಕ ಸುದ್ದಿಯಾಗಿದ್ದಾರೆ. ಫೆ.5 ರಂದು ರಾತ್ರಿ ನಾನು ವಿವಾಹವಾಗಿದ್ದೇನೆ ಎಂದು ಶ್ರೇಯಾ ಘೋಷಾಲ್ ಇವತ್ತು (ಫೆ.6) ತಮ್ಮ ಅಧಿಕೃತ ಫೇಸ್‌ಬುಕ್ ಪೇಜ್‌ನಲ್ಲಿ ಬರೆದುಕೊಂಡಿದ್ದು, ವಿವಾಹದ ಫೋಟೋವನ್ನು ಅಪ್‌ಲೋಡ್ ಮಾಡಿದ್ದಾರೆ. ನಾನು ನಿನ್ನೆ ರಾತ್ರಿ ನನ್ನ ಪ್ರಿಯತಮನನ್ನು ವಿವಾಹವಾಗಿದ್ದೇನೆ. ನನ್ನ ಕುಟುಂಬದ ಸದಸ್ಯರು ಮತ್ತು ಆಪ್ತ ಗೆಳೆಯರ ಸಮ್ಮುಖದಲ್ಲಿ ಬಂಗಾಳಿ ಸಂಪ್ರದಾಯದಂತೆ ನಮ್ಮ ಮದುವೆ ನೆರವೇರಿದೆ. ಶಿಲಾಧಿತ್ಯ ಮತ್ತು ನಾನು ಜೀವನದ ಹೊಸ ಘಟ್ಟಕ್ಕೆ ಕಾಲಿಡುತ್ತಿದ್ದು, ನಿಮ್ಮ ಹಾರೈಕೆಗಳನ್ನು ಬಯಸುತ್ತೇವೆ ಎಂದು ಶ್ರೇಯಾ ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ. ಜನವರಿ 30ರಂದು ಶ್ರೇಯಾ ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ನಾನು ತುಂಬಾನೇ ಆತಂಕಗೊಂಡಿದ್ದೇನೆ ಅಥವಾ ತುಂಬಾ ಉತ್ಸುಕಳಾಗಿದ್ದೇನೆಯೋ ಎಂಬುದು ನನಗೆ ಗೊತ್ತಾಗುತ್ತಿಲ್ಲ. ಈ ಹಿಂದೆ ನನಗೆ ಈ ರೀತಿಯ ಅನುಭವ ಆಗಿರಲಿಲ್ಲ. ಏನಿದ್ದರೂ ಈ ಬಗ್ಗೆ ನಾನು ನಿಮಗೆ ಶೀಘ್ರದಲ್ಲೇ ತಿಳಿಸುತ್ತೇನೆ. ಆದರೆ ನಿಮ್ಮ ಹಾರೈಕೆಗಳು ಬೇಕು..ನೀವು ನಮ್ಮೊಂದಿಗೆ ಇರುತ್ತೀರಲ್ಲಾ ಎಂದು ಸ್ಟೇಟಸ್ ಹಾಕಿದ್ದರು. ಫೇಸ್‌ಬುಕ್‌ನಲ್ಲಿ ಶ್ರೇಯಾ ಅಪ್‌ಡೇಟ್ ಮಾಡಿರುವ ವಿವಾಹ ಫೋಟೋಗೆ ಈಗಾಗಲೇ 6 ಲಕ್ಷಕ್ಕಿಂತ ಹೆಚ್ಚು ಲೈಕ್‌ಗಳು ಸಿಕ್ಕಿದ್ದು, 12 ಸಾವಿರಕ್ಕಿಂತಲೂ ಹೆಚ್ಚು ಶೇರ್ ಆಗಿದೆ.