ಸಿನಿಮಾ ಕ್ಷೇತ್ರಕ್ಕೆ ಬರಲು ಪೋಷಕರ ವಿರೋಧವಿತ್ತು: ಪ್ರಿಯಾಂಕ ಚೋಪ್ರಾ ಸಿನಿಮಾ ಕ್ಷೇತ್ರಕ್ಕೆ ಬರಲು ಈಕೆ ಕುಟುಂಬ ಸದಸ್ಯರ ವಿರೋಧ ಎದುರಿಸಿದ್ದರಂತೆ ಪ್ರಿಯಾಂಕ ಚೋಪ್ರಾ! ಕೌಲಾಲಂಪುರ್: ಪ್ರಿಯಾಂಕ ಚೋಪ್ರಾ, ಇಂದು ಬಾಲಿವುಡ್ ನ ಬಹು ಬೇಡಿಕೆಯ ನಟಿ. ಆದರೆ ದಶಕದ ಹಿಂದೆ ಸಿನಿಮಾ ಕ್ಷೇತ್ರಕ್ಕೆ ಬರಲು ಈಕೆ ಕುಟುಂಬ ಸದಸ್ಯರ ವಿರೋಧ ಎದುರಿಸಿದ್ದರು. ಸಂಪ್ರದಾಯವಾದಿ ಪಂಜಾಬಿ ಕುಟುಂಬದ ಹಿನ್ನೆಲೆಯುಳ್ಳವರಾಗಿದ್ದರಿಂದ, ಪ್ರಿಯಾಂಕ ಚೋಪ್ರಾ ಚಿತ್ರರಂಗ ಪ್ರವೇಶಿಸುವುದಕ್ಕೆ ಪೋಷಕರೇ ಪ್ರತಿರೋಧವೊಡ್ಡಿದ್ದರಂತೆ. ಈ ವಿಷಯವನ್ನು ಸ್ವತಃ ಪ್ರಿಯಾಂಕ ಚೋಪ್ರಾ ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ. ಕೌಲಾಲಂಪುರ್ ನಲ್ಲಿ ಅಂತರರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿಯಲ್ಲಿ ತಮ್ಮ ನಟನೆಯ ದಿಲ್ ದಡಕ್ ನೆ ದೋ ಚಿತ್ರ ಪ್ರದರ್ಶನದಲ್ಲಿ ಭಾಗವಹಿಸಿ ಸಿನಿಮಾ ಕ್ಷೇತ್ರ ಪ್ರವೇಶಿಸಿದ್ದ ಆರಂಭದ ದಿನಗಳನ್ನು ಹಂಚಿಕೊಂಡ ಪ್ರಿಯಾಂಕ ಚೋಪ್ರಾ, ಪ್ರಾರಂಭದ ದಿನಗಳಲ್ಲಿ ಪೋಷಕರ ವಿರೋಧವಿತ್ತು. ಆದರೆ ನಂತರದ ದಿನಗಳಲ್ಲಿ ನನಗೇನು ಇಷ್ಟವೋ ಅದನ್ನೇ ಮಾಡಲು ಪೋಷಕರು ಪ್ರೋತ್ಸಾಹ ನೀಡಿದರು ಎಂದು ತಿಳಿಸಿದ್ದಾರೆ. ದಿಲ್ ದಡಕ್ ನೆ ದೋ ಚಿತ್ರ ಭಾರತದ ನಾರಿಯರನ್ನು ಪ್ರತಿನಿಧಿಸುತ್ತದೆ. ಮಹಿಳೆಯರ ಬೇಕು ಬೇಡಗಳಿಗೆ ಪ್ರಾಮುಖ್ಯತೆ ನೀಡುವುದಿಲ್ಲ. ಯಾವುದೇ ವಿಷಯದಲ್ಲಿ ತನ್ನ ಅಭಿಪ್ರಾಯವನ್ನು ಬಹಿರಂಗವಾಗಿ ತೋರಿಸದಂತಹ ಪಾತ್ರವನ್ನೇ ದಿಲ್ ದಡಕ್ ನೆ ದೋ ಚಿತ್ರದಲ್ಲಿ ತಾವು ಅಭಿನಯಿಸಿರುವುದಾಗಿ ಪ್ರಿಯಾಂಕ ಚೋಪ್ರಾ ತಿಳಿಸಿದ್ದಾರೆ. ಪ್ರಿಯಾಂಕ ಜತೆ ನಟಿಸಿರುವ ಅನುಷ್ಕಾ ಶರ್ಮಾ ಸಹ ಜೋಯಾ ಅಖ್ತರ್ ನಿರ್ದೇಶನದ ಭಾಗವಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಚಿತ್ರದಲ್ಲಿ ಪ್ರತಿಪಾದಿಸಲಾಗಿರುವ ಲಿಂಗ ಸಮಾನತೆ ಬಗ್ಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಅನುಷ್ಕಾ ಶರ್ಮಾ ತಿಳಿಸಿದ್ದಾರೆ. ಒಳ್ಳೆಯ ಕುಟುಂಬದ ಯುವತಿ ವೃತ್ತಿಪರ ನೃತ್ಯಗಾರ್ತಿಯಾಗುವುದು ಸೂಕ್ತ ಅಲ್ಲ ಎಂಬ ಕಾರಣಕ್ಕೆ ನೃತ್ಯ ಕಲಿಕೆಗೆ ಪೋಷಕರ ವಿರೋಧ ಎದುರಿಸುವ ಪಾತ್ರವನ್ನು ಅನುಷ್ಕಾ ಶರ್ಮಾ ಅಭಿನಯಿಸಿದ್ದಾರೆ. ಪೋಷಕರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮನೆ ಬಿಟ್ಟು ಓಡಿ ಹೋಗಿ ತನ್ನ ಕನಸನ್ನು ಈಡೇರಿಸಿಕೊಳ್ಳುವುದು ಅನುಷ್ಕಾ ಶರ್ಮಾ ನಟಿಸಿರುವ ಭಾಗದ ಸಾರಾಂಶವಾಗಿದೆ.