ಅತ್ಯಾಚಾರ ಹೇಳಿಕೆ: ಸಲ್ಮಾನ್ ಖಾನ್ ವಿರುದ್ಧ ದೂರು ದಾಖಲು ಸುಲ್ತಾನ್ ಚಿತ್ರದ ಶೂಟಿಂಗ್ ನಂತರ ಮಹಿಳೆಯೊಬ್ಬಳು ಅತ್ಯಾಚಾರಕ್ಕೆ ಒಳಗಾದಂತಹ ಅನುಭವ ನನಗಾಗಿತ್ತು ಎಂಬ ಸಲ್ಮಾನ್ ಖಾನ್ ಹೇಳಿಕೆಯನ್ನು ಖಂಡಿಸಿ... ಮುಂಬೈ: ಸುಲ್ತಾನ್ ಚಿತ್ರದ ಶೂಟಿಂಗ್ ನಂತರ ಮಹಿಳೆಯೊಬ್ಬಳು ಅತ್ಯಾಚಾರಕ್ಕೆ ಒಳಗಾದಂತಹ ಅನುಭವ ನನಗಾಗಿತ್ತು ಎಂಬ ಸಲ್ಮಾನ್ ಖಾನ್ ಹೇಳಿಕೆಯನ್ನು ಖಂಡಿಸಿ, ರಾಷ್ಟ್ರೀಯ ಕಾಂಗ್ರೆಸ್ ಮಹಿಳಾ ಮೋರ್ಚಾ ನಾಗಪುರದಲ್ಲಿ ದೂರು ದಾಖಲಿಸಿದೆ. ರಾಷ್ಟ್ರೀಯ ಕಾಂಗ್ರೆಸ್ನ ಮಹಾರಾಷ್ಟ್ರ ಮಹಿಳಾ ಮೋರ್ಚಾ ಅಧ್ಯಕ್ಷೆ ಚಿತ್ರಾ ವಾಘ್ ಲಿಖಿತ ದೂರನ್ನು ಸಿತಬುಲ್ಡಿ ಪೊಲೀಸ್ ಠಾಣೆಗೆ ನೀಡುವ ಮೂಲಕ ಪ್ರಕರಣ ದಾಖಲಿಸಿದ್ದಾರೆ. ಸಲ್ಮಾನ್ ಖಾನ್ ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಅಷ್ಟೇ ಅಲ್ಲ ಮಹಿಳೆಯರನ್ನು ಲಘುವಾಗಿ ಪರಿಗಣಿಸಿ ಅವಮಾನ ಮಾಡಿದ್ದಾರೆ. ಆದ್ದರಿಂದ ಸಂಬಂಧಿಸಿದ ಐಪಿಸಿ ಕಾನೂನಿನ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದೇವೆ ಎಂದು ತಿಳಿಸಿದ್ದಾರೆ. ಪೊಲೀಸ್ ಠಾಣೆಯ ಮುಂದೆ ಕೂಡ ಮಹಿಳಾ ಸದಸ್ಯರು ಕಪ್ಪು ರಿಬ್ಬನ್ ಪಟ್ಟಿ ಕಟ್ಟಿಕೊಂಡು ಸಲ್ಮಾನ್ ವಿರುದ್ಧ ಘೊಷಣೆ ಕೂಗಿದರು. ಮಂಗಳವಾರ ಸಲ್ಮಾನ್ ಹೇಳಿಕೆಯನ್ನು ಖಂಡಿಸಿದ್ದ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ಲಲಿತಾ ಮಂಗಳಂ, ಏಳು ದಿನಗಳೊಳಗೆ ಸಲ್ಮಾನ್ ಬಹಿರಂಗವಾಗಿ ಕ್ಷಮೆಯಾಚಿಸುವಂತೆ ಆಗ್ರಹಿಸಿದ್ದರು.