'ದೈವ, ಭೂತ ಕೋಲ ಕರಾವಳಿ ಭಾಗದ ಜನರ ನಂಬಿಕೆ, ಅದರ ಬಗ್ಗೆ ಮಾತನಾಡಬಾರದು, ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡಬಾರದು': ನಟ ಉಪೇಂದ್ರ ಭೂತಕೋಲವು ಹಿಂದೂ ಸಂಸ್ಕೃತಿಗೆ ಸೇರುತ್ತದೆ ಎಂದು ನಿರ್ದೇಶಕ ರಿಷಬ್ ಶೆಟ್ಟಿಯವರು ಹೇಳಿರುವುದು ನಿಜವಲ್ಲ ಎಂದು ನಟ ಚೇತನ್ ಅಹಿಂಸ ಕಾಂತಾರ ಚಿತ್ರದ ಬಗ್ಗೆ ಮಾತನಾಡಿ ಹೇಳಿರುವುದು ವಿವಾದ ಸೃಷ್ಟಿಸಿದೆ. ಬೆಂಗಳೂರು: ಭೂತಕೋಲವು ಹಿಂದೂ ಸಂಸ್ಕೃತಿಗೆ ಸೇರುತ್ತದೆ ಎಂದು ನಿರ್ದೇಶಕ ರಿಷಬ್ ಶೆಟ್ಟಿಯವರು ಹೇಳಿರುವುದು ನಿಜವಲ್ಲ ಎಂದು ನಟ ಚೇತನ್ ಅಹಿಂಸ ಕಾಂತಾರ ( ) ಚಿತ್ರದ ಬಗ್ಗೆ ಮಾತನಾಡಿ ಹೇಳಿರುವುದು ವಿವಾದ ಸೃಷ್ಟಿಸಿದೆ.ಈ ಬಗ್ಗೆ ಬೆಂಗಳೂರಿನಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ನಟ ಉಪೇಂದ್ರ, ಇಂತಹ ವಿಷಯಗಳನ್ನು ಕೆದಕಲು, ಮಾತನಾಡಲು ಹೋಗಬಾರದು, ಅದು ಬೆಂಕಿಗೆ ತುಪ್ಪ ಸುರಿದಂತೆ ಆಗುತ್ತದೆ. ಭೂತ ಕೋಲ, ದೈವ ನಂಬುವುದು ನಮ್ಮ ವೈಯಕ್ತಿಕ. ಅದನ್ನು ಸಮಾಜದ ಮುಂದೆ ಕಿತ್ತಾಡುವುದು ಅಸಹ್ಯ.ನಾನು ಕರಾವಳಿ ಭಾಗದವನು, ಭೂತ-ಕೋಲಗಳನ್ನು ನೋಡಿಕೊಂಡು ಬೆಳೆದವನು. ನಮ್ಮ ಭಾಗದಲ್ಲಿ ಭೂತ ಕೋಲದ ಬಗ್ಗೆ ವಿಶೇಷವಾದ ನಂಬಿಕೆಯಿದೆ. ಇವತ್ತಿಗೂ ನಮ್ಮ ತಂದೆ ಪ್ರತಿವರ್ಷ ನಾಗನ ಪೂಜೆ ಮಾಡುತ್ತಾರೆ. ಬಹಳ ನಂಬಿಕೆಯಿರುವ ಜಾಗ ಕೂಡ, ಅದರ ಬಗ್ಗೆ ಮಾತನಾಡಬಾರದು ಎಂದರು.ಇದನ್ನೂ ಓದಿ: 'ಕಾಂತಾರ' ಬಗ್ಗೆ ಅಪಸ್ವರ ಎತ್ತುವವರಿಗೆ ನೋ ಕಮೆಂಟ್ಸ್, ಸಂಸ್ಕೃತಿ ಬಗ್ಗೆ ಮಾತನಾಡುವಷ್ಟು ಅರ್ಹತೆ ನನಗಿಲ್ಲ: ರಿಷಬ್ ಶೆಟ್ಟಿಕಾಂತಾರ ಚಿತ್ರವನ್ನು ಬಹಳ ಪರಿಣಾಮಕಾರಿಯಾಗಿ ತೆಗೆದಿದ್ದಾರೆ. ನನಗೂ ಈ ತರಹದ ಚಿತ್ರ ಮಾಡಬೇಕೆಂದಿದೆ. ನೋಡೋಣ ರಿಷಬ್ ಹತ್ತಿರ ಮಾತನಾಡುತ್ತೇನೆ ಎಂದು ನಟ ಉಪೇಂದ್ರ ನಕ್ಕರು.