ಕೇವಲ ಪ್ರಚಾರಕ್ಕಾಗಿ ಬಂದ್ ಮಾಡಿದರೆ ನಮ್ಮ ಬೆಂಬಲವಿಲ್ಲ: ನಟ ನಿಖಿಲ್ ಕುಮಾರಸ್ವಾಮಿ ಕೇವಲ ಮಾಧ್ಯಮದಲ್ಲಿ ಪ್ರಚಾರ ಪಡೆಯಲು ಬಂದ್ ಮಾಡಿದರೆ ನಮ್ಮ ಬೆಂಬಲವಿರುವುದಿಲ್ಲ ಎಂದು ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಅವರು ಭಾನುವಾರ ಹೇಳಿದ್ದಾರೆ. ರಾಮನಗರ: ಕೇವಲ ಮಾಧ್ಯಮದಲ್ಲಿ ಪ್ರಚಾರ ಪಡೆಯಲು ಬಂದ್ ಮಾಡಿದರೆ ನಮ್ಮ ಬೆಂಬಲವಿರುವುದಿಲ್ಲ ಎಂದು ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಅವರು ಭಾನುವಾರ ಹೇಳಿದ್ದಾರೆ.ನಿಖಿಲ್ ಕುಮಾರಸ್ವಾಮಿ ಅವರು ಅಭಿನಯಿಸಿರುವ ರೈಡರ್ ಸಿನಿಮಾ ರಾಜ್ಯಾದ್ಯಂತ ಡಿಸೆಂಬರ್ 22ರಂದು ಬಿಡುಗಡೆಗೊಂಡಿದ್ದು, ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇಂದು ಈ ಸಿನಿಮಾದ ಪ್ರಮೋಷನ್‍ಗಾಗಿ ರಾಮನಗರದ ಶಾನ್ ಚಿತ್ರಮಂದಿರಕ್ಕೆ ನಿಖಿಲ್ ಭೇಟಿ ನೀಡಿದ್ದರು.ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 31 ನೇ ತಾರೀಖು ಕರ್ನಾಟಕ ಬಂದ್ ಕರೆ ನೀಡಿರುವುದರಿಂದ ನಮ್ಮ ಚಿತ್ರರಂಗಕ್ಕೆ ಬಹಳ ದೊಡ್ಡ ಹೊಡೆತ ಬೀಳಲಿದೆ. 31ನೇ ದಿನಾಂಕ ಹಲವು ಕನ್ನಡ ಸಿನಿಮಾಗಳು ಬಿಡುಗಡೆ ಆಗಲಿದ್ದು, ಆ ಸಿನಿಮಾಗಳಿಗೆ ಹೊಡೆತ ಬೀಳಲಿದೆ. ನಮಗೆ ಮೊದಲ 3 ದಿನದ ಕಲೆಕ್ಷನ್ ಬಹಳ ಮುಖ್ಯ. ಆದರೆ ಆ ದಿನವೇ ಬಂದ್ ಮಾಡಿದರೆ ತೊಂದರೆಯಾಗುತ್ತದೆ. ಸಾರ್ವಜನಿಕರಿಗೆ ಸಹಾಯವಾಗುತ್ತದೆ ಎಂದರೆ ಬಂದ್ ಮಾಡಲಿ. ಆದರೆ ಕೇವಲ ಮಾಧ್ಯಮದಲ್ಲಿ ಪ್ರಚಾರ ಪಡೆಯಲು ಬಂದ್ ಮಾಡಬಾರದು. ಆ ರೀತಿಯ ಬಂದ್‍ಗೆ ಯಾವುದೇ ಕಾರಣಕ್ಕೂ ನಾವು ಬೆಂಬಲಿಸುವುದಿಲ್ಲ ಎಂದು ಹೇಳಿದ್ದಾರೆ.