ವಿಷ್ಣು ಅಭಿಮಾನಿಗಳ ಕನಸು ನನಸು: ಮೈಸೂರಲ್ಲಿ 'ವಿಷ್ಣುವರ್ಧನ್ ಸ್ಮಾರಕ' ಅನಾವರಣ ಖ್ಯಾತ ನಟ ಸಾಹಸಸಿಂಹ ವಿಷ್ಣುವರ್ಧನ್ ಅವರ ಅಭಿಮಾನಿಗಳ ದಶಕಗಳ ಕನಸು ಕೊನೆಗೂ ನನಸಾಗಿದ್ದು, ಮೈಸೂರಿನಲ್ಲಿ ಇಂದು ವಿಷ್ಣು ಸ್ಮಾರಕ ಅನಾವರಣವಾಗಿದೆ. ಮೈಸೂರು: ಖ್ಯಾತ ನಟ ಸಾಹಸಸಿಂಹ ವಿಷ್ಣುವರ್ಧನ್ ಅವರ ಅಭಿಮಾನಿಗಳ ದಶಕಗಳ ಕನಸು ಕೊನೆಗೂ ನನಸಾಗಿದ್ದು, ಮೈಸೂರಿನಲ್ಲಿ ಇಂದು ವಿಷ್ಣು ಸ್ಮಾರಕ ಅನಾವರಣವಾಗಿದೆ.ಚಲನಚಿತ್ರ ನಟ ವಿಷ್ಣುವರ್ಧನ್ ಅಭಿಮಾನಿಗಳ ಮುಗಿಲುಮುಟ್ಟುವ ಜಯಘೋಷದ ನಡುವೆ 'ಸಾಹಸಸಿಂಹ ವಿಷ್ಣುವರ್ಧನ್ ಸ್ಮಾರಕ'ವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾನುವಾರ ಲೋಕಾರ್ಪಣೆ ಮಾಡಿದರು. ಮೈಸೂರಿನ ಮಾನಂದವಾಡಿ ರಸ್ತೆಯ ಹಾಲಾಳು ಗ್ರಾಮದ ಉದ್ಬೂರ್ ಗೇಟ್ ಬಳಿ ನಿರ್ಮಿಸಲಾದ ಸ್ಮಾರಕದಲ್ಲಿ 'ಆಪ್ತರಕ್ಷಕ' ಚಲನಚಿತ್ರದ ಪಾತ್ರದ ಮಾದರಿಯಲ್ಲಿ ನಿರ್ಮಿಸಲಾದ 7 ಅಡಿ ಎತ್ತರದ ಪ್ರತಿಮೆಯನ್ನೂ ಅವರು ಅನಾವರಣಗೊಳಿಸಿದರು. ಇದನ್ನೂ ಓದಿ: ಕನ್ನಡದ 'ಯಜಮಾನ' ಡಾ. ವಿಷ್ಣುವರ್ಧನ್ 13ನೇ ವರ್ಷದ ಪುಣ್ಯಸ್ಮರಣೆಸ್ಮಾರಕ ಲೋಕಾರ್ಪಣೆ ವೇಳೆ ಸಂಸದ ಪ್ರತಾಪಸಿಂಹ, ಶಾಸಕರಾದ ಜಿ.ಟಿ.ದೇವೇಗೌಡ, ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಕೋಟೆ ಎಂ.ಶಿವಣ್ಣ, ಮೇಯರ್ ಶಿವಕುಮಾರ್, ಮುಡಾ ಅಧ್ಯಕ್ಷ ಯಶಸ್ವಿ ಎಸ್. ಸೋಮಶೇಖರ್, ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಉಪ ಮೇಯರ್ ಡಾ.ಡಿ.ರೂಪಾ ಇದ್ದರು. ವೇದಿಕೆ ಮುಂಭಾಗದಲ್ಲಿ ನಟಿ ಭವ್ಯಾ, ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ರಮೇಶ್ ಭಟ್ ಹಾಗೂ ವಿಷ್ಣುವರ್ಧನ್ ಕುಟುಂಬದ ಸದಸ್ಯರು ಇದ್ದರು.ಇದನ್ನೂ ಓದಿ: ಅಂದು ಡಾ.ವಿಷ್ಣುವರ್ಧನ್ ಜೊತೆ, ಇಂದು ಅನಿರುದ್ಧ್ ಜೊತೆ ಎಸ್.ನಾರಾಯಣ್ 'ಸೂರ್ಯವಂಶ'ಅಭಿಮಾನಿಗಳಿಗೆ ನಿರಾಸೆ: ಸಾವಿರಾರು ಸಂಖ್ಯೆಯಲ್ಲಿ ‌ನಾಡಿನ ಮೂಲೆಮೂಲೆಗಳಿಂದ ಆಗಮಿಸಿದ್ದ ಅಭಿಮಾನಿಗಳಿ‌ಗೆ ಸ್ಮಾರಕ ವೀಕ್ಷಣೆಗೆ ಅವಕಾಶ ಸಿಗದೆ‌ ನಿರಾಶರಾದರು. ಸ್ಥಳದಲ್ಲೇ ಕುಳಿತು ಆಕ್ರೋಶ ವ್ಯಕ್ತಪಡಿಸಿದರು. ಸುರಕ್ಷತಾ ಸಿದ್ಧತೆಗಳು ಇಲ್ಲ. ಪೊಲೀಸರು ನಾಳೆ ಬರುವಂತೆ ಹೇಳಿದ್ದಾರೆ. ದಯವಿಟ್ಟು ಸಹಕರಿಸಿ ಎಂದು ನಟ ಅನಿರುದ್ಧ ಮನವೊಲಿಸಲು ಯತ್ನಿಸಿದರು‌. ಆದರೂ ಅಭಿಮಾನಿಗಳ ಒತ್ತಾಯ, ಆಕ್ರೋಶ ಕೇಳುತ್ತಲೇ ಇತ್ತು.