ಕೆ ಶಿವರುದ್ರಯ್ಯ ನಿರ್ದೇಶನದ 'ಸಿಗ್ನಲ್‌ಮ್ಯಾನ್ 1971' ಬಿಡುಗಡೆಗೆ ಸಿದ್ಧ; ಆಗಸ್ಟ್‌ನಲ್ಲಿ ತೆರೆಗೆ ಯಾರೂ ಹತ್ತದ ಅಥವಾ ಇಳಿಯದ ರೈಲ್ವೆ ನಿಲ್ದಾಣದಲ್ಲಿ ಇಪ್ಪತ್ತು ವರ್ಷ ಕೆಲಸ ಮಾಡಿದ ಸಿಗ್ನಲ್‌ಮ್ಯಾನ್‌ನ ಜೀವನಾಧರಿತ ಕಥೆಯನ್ನು ಚಿತ್ರ ವಿವರಿಸುತ್ತದೆ. ಕೆ ಶಿವರುದ್ರಯ್ಯ ನಿರ್ದೇಶಿಸಿದ 'ಸಿಗ್ನಲ್‌ಮ್ಯಾನ್ 1971' ಚಿತ್ರವು ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ, ಚೆನ್ನೈ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ, ಮುಂಬೈ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಮತ್ತು ಬಾಂಗ್ಲಾದೇಶ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಸೇರಿದಂತೆ ಹಲವಾರು ಚಲನಚಿತ್ರೋತ್ಸವಗಳಲ್ಲಿ ಮನ್ನಣೆ ಪಡೆದಿದೆ. ಇದೀಗ ಈ ಚಿತ್ರವನ್ನು ಆಗಸ್ಟ್‌ನಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ.ಯಾರೂ ಹತ್ತದ ಅಥವಾ ಇಳಿಯದ ರೈಲ್ವೆ ನಿಲ್ದಾಣದಲ್ಲಿ ಇಪ್ಪತ್ತು ವರ್ಷ ಕೆಲಸ ಮಾಡಿದ ಸಿಗ್ನಲ್‌ಮ್ಯಾನ್‌ನ ಜೀವನಾಧರಿತ ಕಥೆಯನ್ನು ಚಿತ್ರ ವಿವರಿಸುತ್ತದೆ. ಮಾನವ ಸಂಪರ್ಕವಿಲ್ಲದ ಸ್ಥಳದಲ್ಲಿ ಎರಡು ದಶಕಗಳನ್ನು ಕಳೆದ ನಂತರ, ಆತ ದಿಗ್ಭ್ರಮೆಗೊಳ್ಳುತ್ತಾನೆ. ಸ್ಪಷ್ಟತೆ ಮರಳಿದ ಮೇಲೆ ರಾಜ್ಯ ಮತ್ತು ರಾಷ್ಟ್ರ ಎರಡಕ್ಕೂ ಬೇಕಾದ ವ್ಯಕ್ತಿಯಾಗಿ ವಿಕಸನಗೊಳ್ಳುತ್ತಾನೆ. ಊಟಿಯ ರೈಲ್ವೆ ನಿಲ್ದಾಣ ಸೆಟ್‌ನಲ್ಲಿ ಬಹುತೇಕ ಚಿತ್ರೀಕರಣ ನಡೆದಿದೆ.ಚಿತ್ರದಲ್ಲಿ ಪ್ರಕಾಶ್ ಬೆಳವಾಡಿ, ರಾಜೇಶ್ ನಟರಂಗ ಮತ್ತು ವೆಂಕಟೇಶ್ ಪ್ರಸಾದ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇವರೊಂದಿಗೆ ಡಿಂಪಿ ಪಾಡ್ಯ ಮತ್ತು ವೆಂಕಟೇಶ್ ಪ್ರಸಾದ್ ಸಹ ಇದ್ದಾರೆ.ನಿರ್ಮಾಪಕ ಗಣೇಶ್ ಪ್ರಭು ಮಾತನಾಡಿ, ನಮ್ಮ ಸಂಸ್ಥೆ ನಿರ್ಮಿಸಿದ ಮೊದಲ ಚಿತ್ರ ಇದಾಗಿದ್ದು, ನಾನು ಕೂಡ ನಟಿಸಿದ್ದೇನೆ. ನಾನು ಬಾಂಗ್ಲಾದೇಶದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗವಹಿಸಿದ್ದೆ. ಅಲ್ಲಿ ನಮ್ಮ ಚಿತ್ರವು ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತು. ನಮ್ಮ ಚಿತ್ರದ ಬಗ್ಗೆ ಅಲ್ಲಿನ ಪ್ರೇಕ್ಷಕರಿಂದ ಉತ್ತೇಜನಕಾರಿ ಪ್ರತಿಕ್ರಿಯೆಯನ್ನು ಕೇಳಿ ನಾನು ರೋಮಾಂಚನಗೊಂಡೆ ಎಂದರು.ಚಿತ್ರಕ್ಕೆ ಶೇಖರ್ ಚಂದ್ರು ಅವರ ಛಾಯಾಗ್ರಹಣ, ಸುರೇಶ್ ಅರಸ್ ಅವರ ಸಂಕಲನ, ಔಸೆಪ್ಪಚ್ಚನ್ ಅವರ ಸಂಗೀತ ನಿರ್ದೇಶನ ಮತ್ತು ಸಂತೋಷ್ ಪಾಂಚಾಲ್ ಅವರ ಕಲಾ ನಿರ್ದೇಶನವಿದೆ. ಸಿಗ್ನಲ್‌ಮ್ಯಾನ್ 1971 ಅನ್ನು ಗಣೇಶ್ ಪ್ರಭು ಅವರು ಹಿಂದೂಸ್ತಾನ್ ಮುಕ್ತ ಮೀಡಿಯಾ ಎಂಟರ್‌ಟೈನರ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದಾರೆ.