'ನಿತ್ಯ' ಕಾವಿಗಳ ಬಗ್ಗೆ 'ಕಟ್ಟೆಚ್ಚರ'ವಾಗಿರಿ 'ಖಾವಿ, ಖಾದಿ, ಖಾಕಿ ಬಗ್ಗೆ ಜನ ಸಾಮಾನ್ಯರಿಗೆ ಭಯ- ಭಕ್ತಿಯ ಜೊತೆ ಒಂದಲ್ಲ ಒಂದು ಹಂತದಲ್ಲಿ ಸಿಟ್ಟು, ಅಸಮದಾನ ಇದ್ದೇ ಇರುತ್ತದೆ... 'ಖಾವಿ, ಖಾದಿ, ಖಾಕಿ ಬಗ್ಗೆ ಜನ ಸಾಮಾನ್ಯರಿಗೆ ಭಯ- ಭಕ್ತಿಯ ಜೊತೆ ಒಂದಲ್ಲ ಒಂದು ಹಂತದಲ್ಲಿ ಸಿಟ್ಟು, ಅಸಮದಾನ ಇದ್ದೇ ಇರುತ್ತದೆ. ಇತ್ತೀಚಿನ ದಿನಗಳಲ್ಲಿ ಈ ಮೂರು ವಸ್ತ್ರಗಳ ಪೈಕಿ ಕಾವಿಗಳ ಬಗ್ಗೆಯಂತೂ ಇನ್ನಿಲ್ಲದಂತೆ ಜನ ರೊಚ್ಚಿಗೆದ್ದಿದ್ದಾರೆ. ಇಂಥ ಕಾವಿಧಾರಿಗಳ ಬಗ್ಗೆ ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ವ್ಯಂಗ್ಯ ಮಾಡಲಾಗಿದೆ. ಕಾವಿಗಳ ಕಪಟಗಳ ಬಗ್ಗೆ ಎಷ್ಟೇ ಎಚ್ಚರಿಕೆ ಮೂಡಿಸಿದರೂ ಜನ ಇಂಥವರಿಂದ 'ಆರ್ಟ್ ಆಫ್ ಚೀಟಿಂಗ್‌'ಗೆ ಒಳಗಾಗುತ್ತಿದ್ದಾರೆ. ಮೋಸ ಹೋಗುವವರು ಇರುವ ತನಕ ಮೋಸ ಮಾಡುವ ಇಂಥ ಕಪಟ ಸನ್ಯಾಸಿ 'ಗುರು'ಗಳು ಸಮಾಜದಲ್ಲಿ 'ನಿತ್ಯ' ಸಂಚರಿಸುತ್ತಾರೆ ಎಂಬುದು ಮಾತ್ರ 'ಸತ್ಯ'. ಕಾವಿಯೊಳಗಿನ ಈ ಅಸಹ್ಯ ಕರ್ಮಕಾಂಡಗಳನ್ನು ತೆರೆದಿಟ್ಟು 'ಯಾರಿವನು...?' ಎಂದು ಪ್ರಶ್ನಿಸಿದ್ದಾರೆ ನಿರ್ದೇಶಕ ಕಂ ನಿರ್ಮಾಪಕ ಮದನ್ ಪಟೇಲ್. ಮಾಧ್ಯಮಗಳಲ್ಲಿ ಬಂದಿರುವ ಸುದ್ದಿಗಳನ್ನು ಒಟ್ಟು ಮಾಡಿಕೊಂಡು ಸಿನಿಮಾ ಮಾಡಬಹುದು ಎಂಬುದಕ್ಕೆ 'ಅಟ್ಟಹಾಸ'ದ ನಂತರ 'ಯಾರಿವನು...?' ಸೇರ್ಪಡೆಗೊಂಡಿದೆ. ಚಿತ್ರ ನೋಡಿದ ಮೇಲೆ 'ಯಾರಿವನು?' ಎಂದು ಪ್ರೇಕ್ಷಕ ಪ್ರಶ್ನೆ ಮಾಡುವ ಗೋಜಿಗೆ ಹೋಗಲ್ಲ. ಯಾಕೆಂದರೆ 'ಅವ ನಮ್ಗೆ ಗೊತ್ತು' ಎಂದುಕೊಳ್ಳುತ್ತಾನೆ. ಈ ಕಾರಣಕ್ಕೆ ಚಿತ್ರದ ಕತೆ ನೋಡುಗನಿಗೆ ಹೊಸದಾಗಿ ಕಾಣಿಸದಿದ್ದರೆ ಅದಕ್ಕೆ ನಿರ್ದೇಶಕರು ಜವಾಬ್ದಾರರಲ್ಲ. ಒಂದು ಕಾಲದಲ್ಲಿ ಬೀದಿ ಬಿಕಾರಿಯಾಗಿದ್ದ ಸತ್ಯಾನಂದ ಎಂಬ ಸನ್ಯಾಸಿ ಇದ್ದಕ್ಕಿದ್ದಂತೆ ಸ್ವಾಮಿಯಾಗಿದ್ದು, ಸಮಾಜ ಸೇವೆ, ಯೋಗ, ಹೆಣ್ಣು ಮಕ್ಕಳ ಮಾನ ದೋಚಿ ರಾಸಲೀಲೆ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದು, ಗಣ್ಯರ ಅಶ್ರಯ ಪಡೆದು ಕೋಟಿ ಕೋಟಿ ಆಸ್ತಿ ಮಾಡಿದ್ದು ಹೇಗೆ? ಎಂಬುದನ್ನು ಬಿಡಿ ಬಿಡಿ ಘಟನೆಗಳಂತೆ 'ಯಾರಿವನು?' ಚಿತ್ರದಲ್ಲಿ ಮದನ್ ಪಟೇಲ್ 'ಸೆರೆ ಹಿಡಿದಿದ್ದಾರೆ'. ಆಯ್ದ ಕವನಗಳು, ಬಿಡಿ ಬಿಡಿ ಲೇಖನಗಳ ಸಂಪಾದನೆ, ಸಂಗ್ರಹ ಕತೆಗಳು ಎನ್ನುವ ಹೆಸರಿನಲ್ಲಿ ಪುಸ್ತಕಗಳಂತೆ 'ಯಾರಿವನು...?' ಚಿತ್ರವೂ ಅಷ್ಟೇ, ನಿತ್ಯ ಮಾಧ್ಯಮಗಳಲ್ಲಿ ರೋಚಕವಾಗಿ ಬಿಂಬಿತವಾದ ಸುದ್ದಿಗಳ ಒಟ್ಟು ಸಂಗ್ರಹದಂತೆ. ಒಬ್ಬ ಕಾವಿಯ ಸುತ್ತ ಜೋತಿಷ್ಯಿಗಳ 'ಬ್ರಹ್ಮಾಂಡ'ವನ್ನು ತೆರೆದಿಡುವ ನಿರ್ದೇಶಕರ ಸಾಹಸ ಮೆಚ್ಚಿಕೊಳ್ಳಬೇಕು. ಆದರೆ ಚಿತ್ರದ ಮೊದಲರ್ಧ ಸಾಕ್ಷ್ಯ ಚಿತ್ರದಂತೆ ಮೂಡಿ ಬಂದಿದ್ದು,ವಿರಾಮದ ನಂತರ ಕತೆ ಶುರುವಾಯಿತು ಎಂದುಕೊಳ್ಳುವಾಗ ಚಿತ್ರ ಮುಗಿಯುತ್ತದೆ. ಹೀಗಾಗಿ 'ಮುಂಡಾಯ್ಸಿ ಬೇಡ್ರೋ, ಮೋಸ ಹೋಗ್ ಬ್ಯಾಡ್ರೋ' ಎನ್ನುವ ಇದೇ ಚಿತ್ರದ ಹಾಡಿನ ಸಾಲು ಸಿನಿಮಾ ಮುಗಿದ ಮೇಲೆ ಪ್ರೇಕ್ಷಕನ ಗೀತೆಯಾಗುತ್ತದೆ. ಸತ್ಯಾನಂದನಾಗಿ ರವಿಚೇತನ್ ಕಾಣಿಸಿಕೊಂಡಿದ್ದಾರೆ. ಇನ್ನೂ 'ಇಂಥ ಕಾಮಿ ಸ್ವಾಮಿಗಳ ಬಗ್ಗೆ 'ಕಟ್ಟೆಚ್ಚರ'ವಾಗಿರಿ' ಎಂದು ಭೋದಿಸುವ ಪಾತ್ರದಲ್ಲಿ ಮದನ್ ಪಟೇಲ್ ಅಭಿನಯಿಸಿದ್ದಾರೆ. ಸಿನಿ ಟೆಕ್ ಸೂರಿ ಕ್ಯಾಮೆರಾದಲ್ಲಿ ಹಾಡುಗಳ ಚಿತ್ರೀಕರಣ ಚೆನ್ನಾಗಿ ಮೂಡಿ ಬಂದಿದೆ. ಒಂದು ರೀತಿಯಲ್ಲಿ 'ಯಾರಿವನು...?', ಕಾಮಿ ಸ್ವಾಮಿಗಳ ಬಗ್ಗೆ ಜನರಲ್ಲಿ 'ಕಟ್ಟೆಚ್ಚರ' ಮೂಡಿಸುವ ಚಿತ್ರ. - ಕೇಶು