ಪ್ರೇಕ್ಷಕನಿಗೊಂದು, ನಿರ್ಮಾಪಕನಿಗೊಂದು! 'ಈ ವಯಸ್ಸಿನಲ್ಲಿ ಮದುವೆಯಾಗಿ ಏನ್ ಮಾಡ್ತಿಯಾ?' ಎನ್ನುವ ನಟಿ ಹೇಮಾ ಚೌಧರಿ ಮಾತಿಗೆ, 'ಹಣ್ಣಾಗಿರುವ ಕಾಯಿನಾ ತಿನ್ನಕ್ಕಷ್ಟೇ ಚೆಂದ. ಆದರೆ, ಬಲಿತಿರೋ ಬೀಜನಾ ಬಿತ್ತನೆ ಮಾಡಬಹುದು' ಎಂದು ನಟ ರಂಗಾಯಣ ರಘು ತಿರುಗೇಟಿಡುತ್ತಾರೆ. ನಿರ್ದೇಶಕ ಎಂ.ಎಸ್. ರಮೇಶ್ ಬರೀ ಪವರ್‌ಫುಲ್ ಡೈಲಾಗ್‌ಗಳಿಗೆ ಮಾತ್ರವಲ್ಲ, ಇಂಥ ಪೋಲಿ ಮಾತುಗಳನ್ನೂ ಚೆನ್ನಾಗಿ ಕಂಪೋಸ್ ಮಾಡುವ ತುಂಟತನ ಅವರಲ್ಲಿದೆ ಎಂಬುದಕ್ಕೆ ಈ ಮೇಲಿನ ಎರಡು ಸಾಲುಗಳೇ ಸಾಕ್ಷಿ. ಚಿತ್ರದುದ್ದಕ್ಕೂ ಆಗಾಗ್ಗೆ ಇಂಥ ಪೋಲಿ ಡೈಲಾಗ್‌ಗಳು ರಂಗಾಯಣ ರಘು ಬಾಯಿಂದ ಉದುರುತ್ತ ಅವು 'ಕಾಮಿಡಿ ಟೈಮಿಂಗ್‌' ಎನಿಸಿ ಪ್ರೇಕ್ಷಕರಲ್ಲಿ ಕಚಗುಳಿಯಿಡುತ್ತವೆ. ಅಷ್ಟರ ಮಟ್ಟಿಗೆ 'ದಾಸ್ವಾಳ' ಪ್ರೇಕ್ಷಕನ ಕಿವಿಯನ್ನು ಅಲಂಕರಿಸುತ್ತದೆ. ಆದರೆ, ಎಂ.ಎಸ್. ರಮೇಶ್‌ರ ಡೈಲಾಗ್‌ನಂತೆ ಪವರ್ ಅಲ್ಲದಿದ್ದರೂ, ಓಂ ಸಾಯಿಪ್ರಕಾಶ್ ಸಿನಿಮಾಗಳಲ್ಲಿನ ಪಾತ್ರಗಳ ಹಾಗೆ ಎಮೋಷನಲ್ಲಾಗಿ ನೋಡುಗನಿಗೆ ಸನಿಹವಾಗುವುದು ಹೊಸ ನಟ 'ಸಂಚಾರಿ' ವಿಜಯ್‌ರ ಅಭಿನಯ. ಮೊದಲೇ ಚಿತ್ರದಲ್ಲಿ ತನಗೆ ಸಿಕ್ಕಿರುವ ಚಾಲೆಂಜಿಂಗ್ ಪಾತ್ರವನ್ನು ಸವಾಲಿನಂತೆ ಸ್ವೀಕರಿಸಿರುವ ವಿಜಯ್, ರಂಗಾಯಣ ರಘು, ಅವಿನಾಶ್, ಹೇಮಾ ಚೌಧರಿಯಂಥ ಕಲಾವಿದರ ಕಣ್ಣಲ್ಲಿ ನೀರು ಹಾಕಿಸುತ್ತಾರೆ. ಅತಿ ಎನಿಸಿದರೂ ಓಕೆಯಾಗುವ ರಂಗಾಯಣ ರಘುರ ಮ್ಯಾನರಿಸಂ, ಅವಿನಾಶ್‌ರ ತತ್ವ ಪದಗಳು, ನಗಿಸುವ ಸಂಭಾಷಣೆಗಳು, ಭಾವನಾತ್ಮಕ ಸಂಬಂಧಗಳು, ಕಥೆಯಲ್ಲಿ ಅಡಗಿರುವ ಸಂದೇಶ ಇವಿಷ್ಟು 'ದಾಸ್ವಾಳ'ದಲ್ಲಿ ಘಮಘಮ ಎನಿಸುವ ಅಂಶಗಳು. ಹಾಗಂತ ಚಿತ್ರ ಅದ್ಭುತವಲ್ಲ. ಆದರೆ, ಮೊದಲಾರ್ಧ ಕೊಂಚ ತಾಳ್ಮೆ ವಹಿಸಿದರೆ, ದ್ವಿತಿಯಾರ್ಧದಲ್ಲಿ ಮನಸ್ಸಿಗೆ ನಾಟುವ ಭಾವುಕ ಸನ್ನಿವೇಶಗಳ ಮೂಲಕ ಒಂದೆಡೆ ನಿರ್ದೇಶಕನ ತಾಕತ್ತು, ಮತ್ತೊಂದೆಡೆ ಕಲಾವಿದರ ಪ್ರತಿಭೆ ಎರಡೂ ಅನಾವರಣಗೊಳ್ಳುತ್ತದೆ. ಚಿತ್ರದ ಕಥೆಯ ಥೀಮ್‌ನಲ್ಲಿ 'ಮಠ' ಗುರುಪ್ರಸಾದ್‌ರ 'ಡೈರೆಕ್ಟರ್ ಸ್ಪೆಷಲ್‌' ನೆರಳು ಹಿಂಬಾಲಿಸಿದಂತೆ ಅನಿಸಿದರೂ ಎರಡೂ ಚಿತ್ರಗಳ ಪಾತ್ರಧಾರಿಗಳ ಹಿನ್ನೆಲೆ, ಮುನ್ನೆಲೆಗಳು ಬೇರೆ ಬೇರೆ ಎನ್ನುವುದಕ್ಕೆ ಒಂದು ಕಡೆ ಬಂದು ಸೇರುವ ಪಾತ್ರಧಾರಿಗಳ ಫ್ಲ್ಯಾಷ್‌ಬ್ಯಾಕ್ ಕಾರಣ. 'ನೀನು ಏನೇ ಮಾಡು ಜೀವನದಲ್ಲಿ ನಾಲ್ಕು ಮಂದಿಯನ್ನು ಸಂಪಾದ್ನೆ ಮಾಡಿಕೊಳ್ಳಬೇಕು' ಎನ್ನುವ ಮಾತಿನಿಂದ ಕೆರಳುವ ಮಾವ ಮತ್ತು ಅಳಿಯ, ಆ ನಾಲ್ಕು ಜನರನ್ನ ಹುಡುಕಿಕೊಂಡು ಹೊರಡುತ್ತಾರೆ. ಇಲ್ಲಿ ಮಾವ ಫೋಟೋಗ್ರಾಫರ್ ಆದರೆ, ಅಳಿಯ ಟೂರಿಂಗ್ ಗೈಡ್. ಇವರ ಹುಡುಕಾಟದಲ್ಲಿ ಒಂದಿಷ್ಟು ಜನ ಸಿಗುತ್ತಾರೆ. ಅವರು ತಮ್ಮವರಿಂದಲೇ ನಿರ್ಲಕ್ಷ್ಯ, ಶೋಷಣೆಗೆ ಒಳಗಾದವರು. ಹೀಗೆ ಶೋಷಿತ ನಿರಾಶ್ರಿತರ ತಾಣವಾಗುವ ಒಂದು ಮನೆ, ಜವಾಬ್ದಾರಿ ಇಲ್ಲದ ಮಾವ, ಅಳಿಯ ಇವರ ನಡುವೆ ಕಥೆ ಸಾಗುತ್ತದೆ. ಒಬ್ಬೊಬ್ಬರದ್ದೂ ಒಂದೊಂದು ಕಥೆ ಕೇಳಿದ ಪ್ರೇಕ್ಷಕನಿಗೆ 'ಚದುರಿದ ಚಿತ್ರಗಳ'ನ್ನು ಕಂಡ ಅನುಭವ. ನಿರೂಪಣೆ ಹಾಗೂ ಕಥೆ ಕಟ್ಟುವಿಕೆಯಲ್ಲಿ ನಿರ್ದೇಶಕ, ವಿರಾಮದ ನಂತರ ತೋರುವ ಜಾಣ್ಮೆಯನ್ನು ಆರಂಭದಿಂದಲೇ ತೋರಿಸದಿದ್ದರಿಂದಲೋ ಏನೋ ಒಮ್ಮೊಮ್ಮೆ ಚಿತ್ರ ಸಪ್ಪೆ ಎನಿಸುತ್ತದೆ. ಡೈಲಾಗ್ ಡೆಲಿವರಿ ಮಾಡುವಾಗ, ಕ್ಲೋಸ್‌ಅಪ್‌ನಲ್ಲಿ ಜೋಗಿ ಪ್ರೇಮ್‌ರನ್ನು ಕಂಡಾಗ ರಂಗಾಯಣ ರಘು ಪಕ್ಕ ಮತ್ತೊಬ್ಬ ನಟ ಇದ್ದಿದ್ದರೆ ಒಳ್ಳೆಯದು ಅನಿಸಿದರೆ ಅದು ಪ್ರೇಕ್ಷಕನ ತಪ್ಪಲ್ಲ. ಹಾಸ್ಯ ಹಾಗೂ ದಾಸರಿ ಸೀನು ಅವರ ಕ್ಯಾಮೆರಾ ಇನ್ನಷ್ಟು ಚುರುಕಾಗಬೇಕಿತ್ತು. ಸುಖಾ ಸುಮ್ಮನೆ ಬರುವ ಹಾಡುಗಳಿಗೆ ಗುರುಕಿರಣ್ ಹೆಚ್ಚು ಶ್ರಮ ಹಾಕಿಲ್ಲ ಎಂಬುದೇ ಇಲ್ಲಿ ಅವರ ಸಂಗೀತದ ಹೆಚ್ಚುಗಾರಿಕೆ. ಇದರ ನಡುವೆ ಚಿತ್ರವನ್ನು ಒಮ್ಮೆ ನೋಡಲು ಅಡ್ಡಿ ಇಲ್ಲ ಎಂದರೂ 'ನಿನಗೊಂದು, ನನಗೊಂದು' ಎನ್ನುವ ಚಿತ್ರದ ಟ್ಯಾಗ್‌ಲೈನ್‌ನಂತೆ ಎಲ್ಲ 'ದಾಸ್ವಾಳ'ಗಳನ್ನು ಪ್ರೇಕ್ಷಕನ ಕಿವಿಯ ಮೇಲಿಡಲು ನಿರ್ಮಾಪಕ ಅಣಜಿ ನಾಗರಾಜ್ ತಂಡ ಸಾಕಷ್ಟು ಶ್ರಮ ಹಾಕಿದ್ದಾರೆ. ಆದರೆ, ದಾಸ್ವಾಳ ಹೂವು ಪ್ರೇಕ್ಷಕನಿಗೆ ಮತ್ತು ನಿರ್ಮಾಪಕನಿಗೆ ಸಮನಾಗಿ ಹಂಚಿಕೆಯಾಗಿದೆಯೆನ್ನುವ ಮಾತಿನ ಅರ್ಥ ಅವರವರ ಭಾವಕ್ಕೆ ಬಿಟ್ಟಿದ್ದು. - ಆರ್. ಕೇಶವಮೂರ್ತಿ