ಮೊದಲ ಪರೀಕ್ಷಾರ್ಥ ಉಡಾವಣೆ ಇಲ್ಲಿ ಎರಡು ದಾರಿಗಳಿವೆ. ದುಡ್ಡಿನ ಹಿಂದೆ ಹೊರಡುವ ಮನುಷ್ಯ, ಮತ್ತೊಂದು ಸಾವಿನ ಹಿಂದೆ ಹೊರಡುವವನು. ಇಲ್ಲಿ ಎರಡು ದಾರಿಗಳಿವೆ. ದುಡ್ಡಿನ ಹಿಂದೆ ಹೊರಡುವ ಮನುಷ್ಯ, ಮತ್ತೊಂದು ಸಾವಿನ ಹಿಂದೆ ಹೊರಡುವವನು. ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳುವ ಗೊಂದಲ ಬೇಕಿಲ್ಲ. ಯಾಕೆಂದರೆ ಏಕಕಾಲದಲ್ಲಿ ಎರಡೂ ದಾರಿಗಳಲ್ಲಿ ಪಯಣಿಸಬಹುದು. ಅಷ್ಟರ ಮಟ್ಟಿಗೆ ನಿರ್ದೇಶಕರ ತಾಂತ್ರಿಕ ಜಾಣ್ಮೆಯನ್ನು ಮನಸಾರೆ ಮೆಚ್ಚಿಕೊಳ್ಳಬಹುದು. ದುಡ್ಡಿದ್ರೆ ದುನಿಯಾ ಎಂಬ ಮಾತು ಕ್ಲೀಷೆ ಎನ್ನಿಸಿದರೂ, ಆ ದುಡ್ಡಿನ ಆಸೆಬುರುಕರ ದುನಿಯಾದ ಭೀರಕತೆಯನ್ನು ಹೇಳುತ್ತಲೇ, ಸಾವೇ ನೆಮ್ಮದಿಯ ಬದುಕಿಗೆ ಸರಿಯಾದ ದಾರಿ ಎನ್ನುವ ಅಧುನಿಕ ಯಮನ ಸೈಕೋ ಮನಃಸ್ಥಿತಿಯ 'ಸ್ಟೋರಿ-ಕಥೆ' ಅತಿ ಉತ್ಸಾಹದಿಂದ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಹೊರಟ ವಿದ್ಯಾರ್ಥಿಯ ಪೂರ್ವ ತರಬೇತಿಯಂತೆ. ವಿದ್ಯಾರ್ಥಿಯಾಗಿ ನಿರ್ದೇಶಕ ಜಗದೀಶ್, ಪರೀಕ್ಷೆ ಪ್ರಶ್ನೆ ಪತ್ರಿಕೆಯಾಗಿ'ಸ್ಟೋರಿ ಕಥೆ', ಉತ್ತರಗಳಾಗಿ ತಿಲಕ್, ಪ್ರತಾಪ್ ನಾರಾಯಣ, ನೇಹಾ ಪಾಟೀಲ್, ಪಾರ್ವತಿ ನಾಯರ್, ನಾರಾಯಣ ಸ್ವಾಮಿ ಮತ್ತಿತರರು. ಇನ್ನು ಮೌಲ್ಯ ಮಾಪಕರು ಪ್ರೇಕ್ಷಕರು. ಒಂದೇ ಸಿನಿಮಾ, ಅದರಲ್ಲಿ ಎರಡು ಕಥೆಗಳು ಒಟ್ಟಿಗೆ ಸಾಗುತ್ತವೆ. ಅಂದರೆ ಇಲ್ಲಿ ಜಿಗ್ ಜಾಗ್ ತಂತ್ರದಲ್ಲಿ ನಿರೂಪಣೆಯಾಗುತ್ತದೆ. ಒಂದು ಕಥೆ ಎಳೆ ಪ್ರಾರಂಭವಾಗಿ ಅದು ಒಂದು ಕುತೂಹಲ ಘಟ್ಟಕ್ಕೆ ಬಂದಾಗ ಅದನ್ನು ಅಲ್ಲೇ ಬಿಟ್ಟು ಮತ್ತೊಂದರ ಎಳೆಯನ್ನು ಮುಂದುವರೆಸುವುದು, ಅದರ ಕೊನೆಯಲ್ಲಿ ಮತ್ತೊಂದು ಕಥೆಯ ಆರಂಭವನ್ನು ತಂದು ಸೇರಿಸಿ ಮಗದೊಂದು ಕಥೆಯ ಅಂಚನ್ನು ಹಿಡಿದು ಸಾಗುವುದು. ಇದು ಜಿಗ್ ಜಾಗ್ ನಿರೂಪಣೆಯ ತಂತ್ರ. ಸಾವು, ಬದುಕು ಮತ್ತು ದುಡ್ಡು ಈ ಮೂರೇ ಅಂಶಗಳ ಸುತ್ತ ತಿರುಗುವ 'ಸ್ಟೋರಿ ಕಥೆ' ಚಿತ್ರದ್ದು ಕಡಿಮೆ ಪಾತ್ರಗಳು. ಆದರೆ 'ಸಣ್ ಸ್ಟೋರಿ' ಅಂತೂ ಅಲ್ಲ. ಕೊಂಚ 'ಬಿಗ್ ಸ್ಟೋರಿ'ನೇ. ಪ್ರೀತಿಗಾಗಿ ಎಲ್ಲವನ್ನೂ ಬಿಟ್ಟು ಬಂದ ಜೋಡಿ ಭವಿಷ್ಯದ ಬದುಕಿನ ಕನಸು ಕಾಣುತ್ತದೆ. ಇನಿಯಾ ಎನ್ನಿಸಿಕೊಂಡವನು ದುಡ್ಡು ಸಂಪಾದನೆಗೆ ಹೊರಡುತ್ತಾನೆ. ಅದೇ ಸಂದರ್ಭದಲ್ಲಿ ಎಲ್ಲ ರೋಗಗಳಿಗೂ ಮದ್ದು ಕಂಡು ಹಿಡಿದು ಅದನ್ನು ಮನುಷ್ಯನ ಮೇಲೆ ಪ್ರಯೋಗ ಮಾಡಿದರೆ ತಾನು ಗೆದ್ದಂತೆ ಎಂದು ಹೊರಟವನ 'ಸ್ಟೋರಿ'ಯ ನಿಜವಾದ ಮುಖವಾಡ ಬಯಲಾಗುತ್ತದೆ. ಹಣದ ಹಿಂದೆ ಹೊರಟವನು ಮತ್ತೆ ವಾಪಸು ಬರಲ್ಲ ಎನ್ನುವಲ್ಲಿಗೆ ಚಿತ್ರ ಮುಕ್ತಾಯವಾದರೂ, ಅಲ್ಲಿನ ಪಾತ್ರಗಳ ಓಟ ಕೊನೆಯಾಗದು. ಹೀಗಾಗಿ 'ಬದುಕಕ್ಕೆ ಸಾಯ್ತವ್ನೆ ನರಮನಸ...' ಹಾಡು ಸೂಕ್ತ. ನಿರ್ದೇಶಕ ಮೊದಲ ಚಿತ್ರದಲ್ಲಿ ಬೆಚ್ಚಿ ಬೀಳಿಸುವ ಎರಡು ಕಥೆಗಳನ್ನು ಹೇಳಿದ್ದಾರೆ. ನೆಮ್ಮದಿಯಾಗಿ ಬದುಕಿದಂತೆ ನೆಮ್ಮದಿಯಾಗಿ ಸಾಯಬೇಕೆನ್ನುವವನ ವ್ಯಕ್ತಿತ್ವವನ್ನು ಯಾವುದೇ ತಿರುವುಗಳಿಲ್ಲದೇ ಹೇಳುತ್ತಲೇ, 'ಡೆತ್ ಗೇಮ್‌' ಮೂಲಕ ಅಚ್ಚರಿಗೊಳಿಸಿದ್ದಾರೆ. ಇಡೀ ಚಿತ್ರ ನಿರ್ದೇಶಕನ ಮೊದಲ ಪರೀಕ್ಷಾರ್ಥ ಉಡಾವಣೆ ಆದ್ದರಿಂದ ಎಲ್ಲ ಪಾತ್ರಗಳು ಬಂದು ಹೋಗುತ್ತವೆ. ಇಂಥ ಚಿತ್ರಗಳಿಗೆ ಸಂಕಲನಕಾರನ ಕತ್ತರಿ ಇನ್ನೂ ಶಾರ್ಪ್ ಆಗಬೇಕಿತ್ತು. ಆದರೆ ಬೆದರು ಮುಖದ ಪ್ರತಾಪ್ ನಾರಾಯಣನ ನೈಜವಾಗಿ ಕಾಣಿಸಿಕೊಂಡಿದ್ದಾರೆ. ಸಸ್ಪೆನ್ಸ್ ಚಿತ್ರವಾದರೂ ಭಯ ಬೀಳಿಸುವ ರೀರೆಕಾರ್ಡಿಂಗ್, ಸಂಗೀತದ ಅಬ್ಬರವಿಲ್ಲ ಎನ್ನುವದೇ ಸಮಧಾನ. ಇಂಥ ಪ್ರಯೋಗಗಳು ಹೆಚ್ಚಿನ ಸಂದರ್ಭದಲ್ಲಿ ಪ್ರಯೋಗಕ್ಕೆ ಸೀಮಿತ. -ಆರ್.ಕೇಶವಮೂರ್ತಿ