ಸ್ಪೆಷಲ್ ಕೇಸ್ ಕ್ಲೈಮ್ಯಾಕ್ಸ್ ಎಂಬ ಪದಕ್ಕೆ ನಿಜವಾದ ಅರ್ಥ ಕೊಡುವ ದೃಶ್ಯ ಅದು. ಪ್ರೇಕ್ಷಕರಿಗೆ ಅಲ್ಲಿ ಯಾವ ಹೊಸ ಅಚ್ಚರಿಯೂ ಇಲ್ಲ. ಕ್ಲೈಮ್ಯಾಕ್ಸ್ ಎಂಬ ಪದಕ್ಕೆ ನಿಜವಾದ ಅರ್ಥ ಕೊಡುವ ದೃಶ್ಯ ಅದು. ಪ್ರೇಕ್ಷಕರಿಗೆ ಅಲ್ಲಿ ಯಾವ ಹೊಸ ಅಚ್ಚರಿಯೂ ಇಲ್ಲ. ಆದರೂ, ಅಲ್ಲಿಯವರೆಗೂ 'ಮುಚ್ಚಿಟ್ಟ' ವಿಷಯವೊಂದನ್ನು 'ಬಿಚ್ಚಿ' ತೋರಿಸಲಾಗುತ್ತದೆ. ಆಗ, ಎಂಥ ಗಂಡೆದೆಯ ಪ್ರೇಕ್ಷಕರಿಗೂ ಕಣ್ಣೀರನ್ನು ಕಣ್ಣಲ್ಲೇ ಮುಚ್ಚಿಟ್ಟುಕೊಳ್ಳುವುದು ಕಷ್ಟವೇ. ಒಂದು ಹುಡುಗ, ಒಂದು ಹುಡುಗಿ, ಇನ್ನೊಂದು ಹುಡುಗ, ಇನ್ನೊಂದು ಹುಡುಗಿ, ಈ ನಾಲ್ವರ ನಡುವೆ ನಡೆಯುವ ಒಂದು ಘಟನೆ ಎನ್ನುವುದು ಕಥೆಯ 'ಬ್ರೀಫ್‌'ಕೇಸ್ ಆಗಬಹುದು. ಕೇಸ್ ಹಿಸ್ಟರಿ ತೆಗೆದು ನೋಡಿದರೆ ಇದು ತಮಿಳು ಚಿತ್ರದ ರಿಮೇಕ್ ಇರಬಹುದು. ಆದರೆ ಒಟ್ಟಾರೆ ಚಿತ್ರವನ್ನು ಸದಭಿರುಚಿಯ ಸಿನಿಮಾಗಳ ಶೋಕೇಸ್‌ನಲ್ಲಿಡಬಹುದು ಎನಿಸಿದರೆ ಅದಕ್ಕೆ ಕಾರಣ ಚಿತ್ರದ ನಿರ್ದೇಶಕ ಮಹೇಶ್ ರಾವ್. ಹೀರೋ ಎಂದರೆ, ಡ್ಯಾನ್ಸು, ಫೈಟು ಕಲಿತಿದ್ದರೆ ಸಾಕು ಎಂಬ ಅನಿಸಿಕೆಗೆ ಹೊರತಾಗಿರುವ ನಿರಂಜನ್, ಇಲ್ಲಿ ಅದ್ಯಾವುದನ್ನೂ ಮಾಡಿಲ್ಲ. ಆದರೂ ಅವರಿಗಿಲ್ಲಿ ಪರಿಸ್ಥಿತಿಯ ತಾಳಕ್ಕೆ ತಕ್ಕಂತೆ 'ಕುಣಿಯುವ', ತನ್ನ ಅಸ್ತಿತ್ವಕ್ಕಾಗಿ 'ಹೊಡೆದಾಡುವ' ಪಾತ್ರವಿದೆ. ಆ ಲೆಕ್ಕದಲ್ಲಿ ಅವರು 'ಡ್ಯಾನ್ಸ್, ಫೈಟ್‌' ಎರಡನ್ನೂ ಸಮರ್ಥವಾಗಿ ಮಾಡಿದ್ದಾರೆ. ಹಾಗಾಗಿ ಟೋಟಲ್ ಕಮರ್ಷಿಯಲ್ ಎಂಟರ್‌ಟೈನ್‌ಮೆಂಟ್ ಸೂತ್ರವನ್ನು ಬಿಟ್ಟು ಉತ್ತಮ ನಟ ಬೇಕು ಎಂದು ಬಯಸುವ ನಿರ್ದೇಶಕರಿಗೆ ನಿರಂಜನ್ ಸೂಕ್ತ ಆಯ್ಕೆ ಎನಿಸಬಹುದು. ಮೊದಲಾರ್ಧದ ಕಥೆ ಪೊಲೀಸ್ ಆಫೀಸರ್‌ನ ಛೇಂಬರ್‌ನಲ್ಲೇ ನಡೆಯುತ್ತದೆ. ಆದರೆ ಅದಕ್ಕೆ ಫ್ಲ್ಯಾಷ್ ಬ್ಯಾಕ್‌ನ ಟಚ್ ಇದೆ. ಅವಿದ್ಯಾವಂತ ಹುಡುಗನೊಬ್ಬನಿಂದ ಶುರುವಾಗಿ , ವಿದ್ಯಾವಂತ ಹೈ ಕ್ಲಾಸ್ ಹುಡುಗ, ಹುಡುಗಿಯ ಕಥೆಗೆ ಲಿಂಕ್ ಆಗಿ, ಒಂದೇ ಕೇಸಿನ ಎರಡು ಮುಖಗಳು ಇಣುಕುತ್ತವೆ. ಚಿತ್ರದ ನಾಲ್ಕು ಮುಖ್ಯ ಕಂಬಗಳ ನಡುವೆ, ರಂಗಾಯಣ ರಘು ಪಾತ್ರದ ಛಾವಣಿ, ಗಿರಿಜಾ ಲೋಕೇಶ್, ಕರಿಸುಬ್ಬು ಅವರಂಥ ಸಣ್ಣ ಪಿಲ್ಲರ್‌ಗಳು, ಚಿತ್ರಕಥೆಗೆ ಸಹಾಯ ಮಾಡಲು ಬರುವ ನಾಯಕನ ಗೆಳೆಯನಂಥ ಮೆಂಬರ್‌ಗಳು, ಚಿತ್ರದ ಕಥೆಯ ಕೇಸ್, ಸ್ಟಾಂಡ್ ಆಗುವುದಕ್ಕೆ ಇರುವ ಕಾಂಕ್ರೀಟ್ ಎವಿಡೆನ್ಸ್‌ಗಳು. ಇದರ ಜೊತೆಗೆ, ಗೊತ್ತು ಗುರಿಯಿಲ್ಲದೆ ರಸ್ತೆಯಲ್ಲಿ ಬಿದ್ದಿರುವ ಹುಡುಗನ ಆರೈಕೆ ಮಾಡುವ ವೇಶ್ಯೆ, ನಂತರ ಆಕೆಯ ಅವನತಿಯ ಕಾಲದಲ್ಲಿ ಈ ಹುಡುಗನ ಋಣಸಂದಾಯ, ಚಿತ್ರದ ಘನತೆ ಹೆಚ್ಚಿಸುತ್ತವೆ. ನಾಯಕನ ಗೆಳೆಯನ ಪಾತ್ರದಲ್ಲಿರುವ ನಟ ಚುರುಕಾಗಿದ್ದಾನೆ ಎನಿಸಿದರೂ, ಅವರಿಗೆ ಸಂಭಾಷಣೆ ಹೆಚ್ಚು ಸಹಾಯ ಮಾಡಿಲ್ಲ. ಹಾಗೆ ನೋಡಿದರೆ ಇಡೀ ಚಿತ್ರದ ಸಂಭಾಷಣೆಯೇ ತುಸು ಸಪ್ಪೆ ಎನಿಸುವುದು ಚಿತ್ರದ ಅತಿ ಕಡಿಮೆ ದೌರ್ಬಲ್ಯಗಳಲ್ಲೊಂದು. ನಾಯಕಿ, ಸಿಂಧೂ ಲೋಕನಾಥ್‌ಗೆ ಇದು ಹೇಳಿಮಾಡಿಸಿದಂಥ ಪಾತ್ರ ಎನ್ನಬಹುದು. ಸ್ಕೂಲ್ ಗರ್ಲ್ ಆಗಿ ಕಾಣಿಸಿಕೊಂಡಿರುವ ಶ್ವೇತಾ ಪಂಡಿತ್, ಅಭಿನಯದಲ್ಲೂ ಸ್ಕೂಲ್ ಗರ್ಲ್ ಎನಿಸಿದರೆ ಅವರು ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ ಎಂದುಕೊಳ್ಳಬಹುದು. ಕರಿಸುಬ್ಬು, ಗಿರಿಜಾ ಲೋಕೇಶ್ ಚಿತ್ರದ ಕ್ಯಾನ್ವಾಸ್‌ಗೆ ಪರಿಣಾಮಕಾರಿಯಾಗಿ ಒಗ್ಗಿಕೊಂಡಿದ್ದಾರೆ. ಊಸರವಳ್ಳಿಯಂಥ ಪಾತ್ರದಲ್ಲಿ ರಂಗಾಯಣ ರಘು ಬಣ್ಣದ ಮಾತುಗಳಿಂದಲೇ ಬೆರಗು ಹುಟ್ಟಿಸುತ್ತಾರೆ. ಚಿತ್ರದ ಕೇಸ್ ವ್ಯಾಲ್ಯೂ ಹೆಚ್ಚಿಸಿರುವ ಅರ್ಜುನ್ ಜನ್ಯ ಸಂಗೀತದಲ್ಲಿ 'ನಿಂತಲ್ಲಿ ನಿಂತುಕೊಳ್ಳೇ' ಸೇರಿದಂತೆ ಎಲ್ಲ ಹಾಡುಗಳು ನೋಡುಗರ ಮನಸ್ಸಿನಲ್ಲಿ ಕುಂತುಕೊಳ್ಳುತ್ತವೆ. ಅವರ ರೀರೆಕಾರ್ಡಿಂಗ್ ಎದ್ದು ಕಾಣಿಸುತ್ತದೆ. ಸಭಾಕುಮಾರ್ ಅವರ ಕ್ಯಾಮರಾ, ಕೇಸ್ ಲಿಮಿಟ್‌ನಲ್ಲಿ ಅಗತ್ಯವಿರುವ ಕೆಲಸ ಮಾಡಿದೆ. ಹೆಣ್ಣಿನ ರೂಪವನ್ನೇ ಬಂಡವಾಳವಾಗಿಸಿ ಎರಡು ತಾಸಿನ ಡರ್ಟಿ ಪಿಕ್ಚರ್‌ಗಳನ್ನು ಮಾಡಿ, ನಾಲ್ಕು ಕಾಸು ಮಾಡುವ ಉದ್ದೇಶ ಹೊಂದಿದವರ ನಡುವೆ ಕೇಸ್ ನಂ.18/9 ನಂಥ ಅಪರೂಪದ ಚಿತ್ರ ಬಂದಿದೆ. ಚಿತ್ರದ ಬಂಡವಾಳ ಕಡಿಮೆ ಇದ್ದರೂ, ಅದು ಪ್ರೇಕ್ಷಕನನ್ನು ತಲುಪುವ ಆಳ ದೊಡ್ಡದು. - ಹರಿ