ಸೈಕೋಗಳ ಲೋಕದಲ್ಲಿ, ಸೆಕೆಂಡ್ ಹಾಫ್ ಶೋಕದಲ್ಲಿ! ಸ್ವಸ್ತಿಕ್ ಚಿತ್ರದಲ್ಲಿ ಪಂಚೆ ಎತ್ತಿಕೊಂಡು ಮಾಸ್ ಜೊತೆ ಕಲರ್ಫುಲ್ಲಾಗಿ ಕುಣಿಯುವ... ಸ್ವಸ್ತಿಕ್ ಚಿತ್ರದಲ್ಲಿ ಪಂಚೆ ಎತ್ತಿಕೊಂಡು ಮಾಸ್ ಜೊತೆ ಕಲರ್ಫುಲ್ಲಾಗಿ ಕುಣಿಯುವ ರಾಘವೇಂದ್ರ ರಾಜ್ ಕುಮಾರ್ ರ ಎರಡೂವರೆ ನಿಮಿಷದ ಕಲರ್ ಕಲರ್ ಹಾಡನ್ನು ಎರಡೂವರೆ ಗಂಟೆಯ ಚಿತ್ರವಾಗಿಸಿದರೆ ಅದು ಕ್ವಾಟ್ಲೆ. ಆದರೆ ಕ್ವಾಟ್ಲೆಗೂ ಸಸ್ತಿಕ್ ಗೂ ಗಡ್ಡ, ರಫ್ ಏಂಡ್ ಟಫ್ ಪಂಚೆ ಬಿಟ್ಟರೆ ಬೇರ್ಯಾವುದೇ ಹೋಲಿಕೆಯಿಲ್ಲ. ಇದು ಪಕ್ಕಾ ಟಪ್ಪಾಂಗುಚ್ಚಿ ಮಾಸ್ ಚಿತ್ರ. ಚಿತ್ರದಲ್ಲಿನ ಹಳ್ಳಿಯ ಚಿತ್ರಣ, ಹಳ್ಳಿ ಹೈದರ ಐಲಾಟ, ಹೆಂಗೆಳೆಯರ ಪ್ರೇಮ ಪ್ರಕರಣಗಳು, ಜಾತ್ರೆ, ನಾಟಕ ಸನ್ನಿವೇಶಗಳು ಅನೇಕ ಪುಸ್ತಕಗಳ ವಿವರಗಳನ್ನು ನೆನಪಿಗೆ ತರುತ್ತವೆ. ಅಭಾಸವೆಂದರೆ ಕ್ವಾಟ್ಲೆಯನ್ನು ಜೆ.ಸಿ.ಕೆ ಉರುಫ್ 'ಚಂದ್ರಕಲಾ' ಅವರು ನಿರ್ದೇಶಿಸಿದ್ದರೂ ಮಹಿಳೆಯರ್ಯಾರೂ ಚಿತ್ರಮಂದಿರದಲ್ಲಿ ಕ್ವಾಟ್ಲೆ ಮಾಡಲಾರರು, ಬಂದರೆ ತಾನೆ ಮಾಡೋಕೆ! ಚಿತ್ರದ ಮೊದಲಾರ್ಧ ಚೆನ್ನಾಗಿ ಮೂಡಿಬಂದಿದ್ದರೂ ಕೊನೆಯಾರ್ಧ ತುಸು ಹೆಚ್ಚೇ ಹಿಂಸಾತ್ಮಕವಾಗಿದೆ. ಪೋಸ್ಟರ್ ಚಿತ್ರ ಮತ್ತು ಅಡಿ ಬರಹ 'ಕ್ವಾಟ್ಲೆಗೆ ಕಂಡೋರ್ ವಸ್ತು ಅಂದ್ರೆ ತುಂಬಾ ಇಷ್ಟ' ನೋಡಿದಾಗ ತೋರುವಂತೆ ನಾಯಕ ಕ್ವಾಟ್ಲೆ ಯಾನೆ ಅಶೋಕ ಸೈಕೋ ಅಲ್ಲ, ಕೇವಲ ಮೆಂಟಲ್ ಅಷ್ಟೆ. ಸೈಕೋಗಳಾಗಿ ಬೇರೆಯವರಿದ್ದಾರೆ, ಒಬ್ಬಿಬ್ಬರಲ್ಲ ನಾಲ್ವರು 'ಉಮೇಶ್ ರೆಡ್ಡಿ'ಗಳು. ಇವನ್ನೆಲ್ಲ ನೋಡುತ್ತಿದ್ದರೆ ಯಾಕೋ ಕನ್ನಡದಲ್ಲಿ ವಿಲನ್ ಗಳು ಜಾಸ್ತಿಯಾಗುತ್ತಿದ್ದಾರೆ ಎನಿಸದಿರದು, ಅದೂ ಬರಿ ವಿಲನ್ ಗಳಲ್ಲ ಕಾಮುಕ ವಿಲನ್ ಗಳು! ಮೊದಲಾರ್ಧದಲ್ಲಿ ಕ್ವಾಟ್ಲೆ ಮಾಡಿಕೊಂಡು ಚಪ್ಪಲಿ ಕದಿಯುತ್ತಾ ಆರಾಮಾಗಿರುವ ನಾಯಕ ನಂತರ ದುಡ್ಡಿನ ಹಿಂದೆ ಬಿದ್ದು ಕಾಮುಕರ ಕಾರ್ಯದಲ್ಲಿ ತಾನೂ ಭಾಗಿಯಾಗುತ್ತಾನೆ. ನಾವು ಹಚ್ಚುವ ಬೆಂಕಿ ಮೊದಲು ನಮ್ಮನ್ನೇ ಸುಡುತ್ತದೆ ಅನ್ನೋದು ತತ್ವ, ಆದರಿಲ್ಲಿ ಆ ಬೆಂಕಿ ತುಸು ಲೇಟಾಗಿ ಸುಡುತ್ತದೆ ನಾಯಕನನ್ನು. ಕ್ವಾಟ್ಲೆಯಾಗಿ ನಟ ಪಾರ್ಥ ಗಮನ ಸೆಳೆಯುತ್ತಾರೆ, ಪಕ್ಕಾ ಲೋಕಲ್ ಸ್ಟಾರ್ ಆಗಿ ಎಣ್ಣೆ ಹೊಡಿಯೋದ್ರಿಂದ ಹಿಡಿದು ಪಕ್ಕದ್ಮನೆ ಹುಡುಗೀಗೆ ಲೈನ್ ಹೊಡಿಯೋ ತನ್ಕ, ಐಟಮ್ ಜೊತೆ ನಾಕ್ ಸ್ಟೆಪ್ ಹಾಕೋದ್ರಿಂದ ಹಿಡಿದು ವಿಲನ್ ಗಳಿಗೆ ನಾಕ್ ತದುಕೋ ತನ್ಕ ಅವರು ಮಿಂಚಿದ್ದಾರೆ. ಕ್ವಾಟ್ಲೆ ಏನೇ ಕ್ವಾಟ್ಲೆ ಮಾಡಿದ್ರೂ ಅವ್ನ ಹಿಂದೆ ಬೀಳೋ ಬಜಾರಿ ನಾಯಕಿಯಾಗಿ ಯಜ್ನಾ ಶೆಟ್ಟಿ ಕೂಡ ತಮ್ಮ ಅಭಿನಯದಿಂದ ಗಮನ ಸೆಳೆಯುತ್ತಾರೆ. ಅವರ ಗೋಳು ಹುಯ್ದುಕೊಳ್ಳುವ ಅಳುಮುಂಜಿಯ ನಟನೆ 'ಮಂಜುನಾಥ'ನ ದಯೆಯಿಂದ ಇಲ್ಲೂ ಮುಂದುವರೆದಿದೆ. ಕನ್ನಡದಲ್ಲಿ 'ಅಭಿನಯ' ಶಾರದೆಯರ ಕೊರತೆಯಿದೆ ಎನ್ನುವವರು ಇವರತ್ತ ಗಮನ ಹರಿಸಬಹುದು. ಚಿತ್ರದ ಒಟ್ಟು 6 ಹಾಡುಗಳಲ್ಲಿ ಒಂದೇ ಒಂದು ಕಮರ್ಷಿಯಲ್ ಬೀಚ್ ಸಾಂಗ್ ಇದೆ 'ಐಸ್ ಕ್ರೀಮ್ ಶಾಪ್ ಅಲ್ಲಿ ಮಟನ್' ಇದ್ದಂಗೆ, ಉಳಿದವು ಟಪ್ಪಾಂಗುಚ್ಚಿಗಳು. ಸಂಗೀತ ನಿರ್ದೇಶಕ ಲಿಯೋ'ರ ಹಾಡುಗಳ್ಯಾವುವೂ ನೆನಪಿನಲ್ಲುಳಿಯುವುದಿಲ್ಲ. ಕೃಷ್ಣಸಾರಥಿಯವರ ಕ್ಯಾಮೆರಾ ವರ್ಕ್ ನಲ್ಲಿ ರಿಚ್ ನೆಸ್ ಇಲ್ಲದಿದ್ದರೂ ಇರುವ ಕ್ಯಾಮೆರದಲ್ಲಿ ಒಳ್ಳೆಯ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ. ಕಲಾ ಸಾಮ್ರಾಟರಿಗೇ ಸವಾಲೆಸೆಯುವಂತೆ ಕತೆ, ಚಿತ್ರಕತೆ, ನಿರ್ದೇಶನ, ಸಂಭಾಷಣೆ, ಗೀತ ರಚನೆ ಎಲ್ಲವನ್ನೂ ಮಾಡಿರುವ ಚಂದ್ರಕಲಾ ಅವರಿಗೆ ಇವೆಲ್ಲಾ ಹೇಗೆ ಸಾಧ್ಯವಾಯಿತೆಂದು ಅತ್ಯಾಶ್ಚರ್ಯಗೊಂಡವರಿಗಾಗಿ ಈ ಮಾಹಿತಿ, 'ಚಿತ್ರದ ನಿರ್ಮಾಪಕಿ ಕೂಡಾ ಅವರೇ!'. ಚಿತ್ರದಲ್ಲಿನ ಸಂದೇಶವನ್ನು ಸಾರಲು ಹಿಂಸಾತ್ಮಕತೆಯ ಹಾದಿ ಹಿಡಿದಿದ್ದಾರೆ ಚಂದ್ರಕಲಾ. ಚಿತ್ರದಲ್ಲಿ ಹಾಸ್ಯವಿದೆ, ನವಿರಾದ ಪ್ರೇಮ ಕತೆಯಿದೆ ಇವೆಲ್ಲವನ್ನೂ ಮರೆಸುವಂತೆ ಹೆಂಗೆಳೆಯರು ನೋಡಲಿಚ್ಛಿಸದ ಅನೇಕ ದೃಶ್ಯಗಳಿವೆ, ಇವೆಲ್ಲವನ್ನೂ ಸಹಿಸುವ ಸಹನ'ಶೀಲತೆ' ನಿಮಗಿದ್ದಲ್ಲಿ ಚಿತ್ರ ನಿಮಗೆ ನೀಟಾಗಿ ಕಾಣಿಸಬಹುದು. ಸಹನೆಯೂ ಒಂದು ಬಗೆಯಲ್ಲಿ ಸಾಹಸವೇ ಅಲ್ಲವೇ? - ಹರ್ಷವರ್ಧನ್