ಶರಣು ಶರಣಂ 'ಶ್ರೀಧರ'ಮಯಂ 'ಇತಿಹಾಸಕ್ಕೆ ಕೈ ಹಾಕುವುದು ಒಂದೇ, ಇರುವೆ ಹುತ್ತಕ್ಕೆ ಬೆರಳು ತಾಕಿಸುವುದೂ ಒಂದೇ' ಚರಿತ್ರೆಯನ್ನು ಸಿನಿಮಾ ಮಾಡಲು ಹೋಗುವ ಈಗಿನ ನಿರ್ದೇಶಕರ ಮನಸ್ಸಿನಲ್ಲಿ ಮೂಡುವ ಸಾಮಾನ್ಯ ಮಾತು ಇದು. ಯಾಕೆಂದರೆ ಚರಿತ್ರೆಯ ಪುಟಗಳನ್ನು ಸಿನಿಮಾ ಮಾಡಲು ಹೋದರೆ ಅಲ್ಲಿ ವಿವಾದಗಳೇ ಹೆಚ್ಚು. ಆದರೆ, ಯಾವುದೇ ವಿವಾದ, ಅಪಸ್ವರವಿಲ್ಲದೆ ಒಂದು ಐತಿಹಾಸಿಕ ಕಾಲಘಟ್ಟವನ್ನು ಅತ್ಯಂತ ಮುತುವರ್ಜಿಯಿಂದ ತೆರೆ ಮೇಲೆ ಬಿಡಿಸಿಟ್ಟಿದ್ದಾರೆ ನಿರ್ದೇಶಕ ಬಿ.ಎ.ಪುರುಷೋತ್ತಮ್. 'ಮಹಾಶರಣ ಹರಳಯ್ಯ' ಚಿತ್ರ ನೋಡಿದವರಿಗೆ ಈ ಮಾತು ನಿಜವೆನಿಸುತ್ತದೆ. ಕಾಯಕ ಯೋಗಿ ಬಸವಣ್ಣನವರ ಶರಣ ಪರಂಪರೆಗೆ ಕೈ ಹಾಕಿರುವ ಈ ಚಿತ್ರ, ಯಾರಿಗೂ ಶರಣಾಗಿಲ್ಲ. ಆದರೆ, ಇಡೀ ಕಥೆಗೆ ನಟ ಶ್ರೀಧರ್ ಶರಣಾಗಿದ್ದಾರೆ. ಅವರ ಈ ಧನ್ಯತಾ ಭಾವನೆಯ ಅಭಿನಯ ನೋಡಿದರೆ ಪ್ರೇಕ್ಷಕ ಕೂಡ 'ಶರುಣು ಶರಣಾರ್ಥಿ' ಎನ್ನದಿರಲು ಸಾಧ್ಯವಿಲ್ಲ. ಅಷ್ಟರ ಮಟ್ಟಿಗೆ ಹರಳಯ್ಯನ ಪಾತ್ರಧಾರಿ ಶ್ರೀಧರ್, ಮಹಾಶರಣರು. ಸರ್ವಂ 'ಶ್ರೀಧರ'ಮಯಂನಂತಾಗುವ ಬಸವಣ್ಣನವರ ಕಲ್ಯಾಣಿ ಕ್ಷೇತ್ರದ ಕಾಯಕ ಯೋಗಿಗಳ ಹಾಡು, ಪಾಡುಗಳನ್ನು ಹೇಳುತ್ತಾರೆ ನಿರ್ದೇಶಕರು. ಮೇಲು, ಕೀಳು ಎನ್ನುವ ಮನುಷ್ಯ ನಿರ್ಮಿತ ಅಸಮಾನತೆಯ ಗೋಡೆಗಳ ಅವಶೇಷಗಳು ಈಗಲೂ ಜೀವಂತವಾಗಿವೆ. ಆದರೆ, ಮನುಷ್ಯತ್ವದ ಮುಂದೆ ಯಾವ ಗೋಡೆಯೂ ದೀರ್ಘ ಕಾಲ ಬಾಳದು ಎಂದವರು ಕ್ರಾಂತಿ ಪುರುಷ ಬಸವಣ್ಣ. ಇಂಥ ಯೋಗಿಯ ಪಯಣದಲ್ಲಿ ಎದುರಾದ ಹರಳಯ್ಯನ ಕಥೆ ಇಲ್ಲಿದೆ. 12ನೇ ಶತಮಾನದಲ್ಲಿ ಸಂಭವಿಸಿದ ಜಾತೀಯ ಅಸಮಾನತೆಯ ಈ ಕ್ರಾಂತಿಯ ಕಿಡಿ ಎಲ್ಲರಿಗೂ ಗೊತ್ತು. ಜೋಡು ಹೊಲಿಯುವ ಹರಳಯ್ಯ ಮಗ ಮತ್ತು ಬ್ರಾಹ್ಮಣ ಕುಲದ ಮಾದರಸನ ಮಗಳಿಗೂ ತಾನೇ ಮುಂದೆ ನಿಂತು ವಿವಾಹ ಮಾಡಿಸುವ ಮೂಲಕ ಅಂತರ್ ಜಾತಿಯ ವಿವಾಹಕ್ಕೆ ನಾಂದಿ ಹಾಡಿದ ಬಸವಣ್ಣ, ಕಲ್ಯಾಣ ಕ್ಷೇತ್ರದಿಂದ ಗಡಿಪಾರು ಆಗಿ ಕೂಡಲ ಸಂಗಮದಲ್ಲಿ ನೆಲೆಸಿದರೆ, ಹರಳಯ್ಯ, ಮಾದರಸ ಮತ್ತು ಹರಳಯ್ಯನ ಪುತ್ರ ಶೀಲವಂತ ಕಿಡಿಗೇಡಿ ಮಹಾ ಮಂತ್ರಿಯ ಶಿಕ್ಷೆಗೆ ಗುರಿಯಾಗಿ ಸಾವು ಕಾಣುತ್ತಾರೆ. ಬಹುತೇಕರಿಗೆ ಗೊತ್ತಿರುವ ಈ ಚರಿತ್ರೆಯ ಕಥೆಯನ್ನು ಯಾವ ಗೊಂದಲಗಳೂ ಇಲ್ಲದೆ ಪುರುಷೋತ್ತಮ್ ನಿರೂಪಿಸಿದ್ದಾರೆ. ಸಾಮಾನ್ಯವಾಗಿ ಇಂಥ ಚಿತ್ರಗಳು ಸಾಕ್ಷ್ಯ ಚಿತ್ರಗಳಾಗಿ, ಸರ್ಕಾರಿ ದಾಖಲೆಗಳಾಗಿ ಉಳಿಯುವ ಸಾಧ್ಯತೆಗಳೇ ಹೆಚ್ಚು. ಹಾಗಾಗಿಲ್ಲ ಎಂಬುದು ಚಿತ್ರದ ಪ್ಲಸ್ ಪಾಯಿಂಟ್. ಚಿತ್ರ ಮುಗಿಯುವ ಹೊತ್ತಿಗೆ ಯಾವುದನ್ನೂ ಅರೆಕೊರೆಯಾಗಿ ಉಳಿಸಿಲ್ಲ. ಹರಳಯ್ಯನ ಪತ್ನಿ, ಸೊಸೆ ಏನಾದರು, ಬಸವಣ್ಣ ಲಿಂಗೈಕ್ಯರಾಗಿದ್ದು ಎಲ್ಲಿ, ಹರಳಯ್ಯನ ಮನೆ... ಹೀಗೆ ಎಲ್ಲವನ್ನೂ ಒಂದೆರಡು ದೃಶ್ಯಗಳಲ್ಲಿ ಹೇಳಿ ಮುಗಿಸುತ್ತಾರೆ. ಇಡೀ ಚಿತ್ರಕ್ಕೆ ಹರಳಯ್ಯನಾಗಿ ಶ್ರೀಧರ್ ಜೀವ ತುಂಬಿದ್ದು ಮಾತ್ರವಲ್ಲ, ಭಾವುಕ ಸನ್ನಿವೇಶಗಳಲ್ಲಿ ತಮ್ಮ ಟ್ರೇಡ್ ಮಾರ್ಕ್ನ್ನು ಮತ್ತಷ್ಟು ಶಾರ್ಪ್ ಮಾಡಿದ್ದಾರೆ. ಇಂಥ ಚಿತ್ರಗಳಲ್ಲಿ ಶ್ರೀಧರ್ರನ್ನು ಬಿಟ್ಟರೆ ಮತ್ತೊಬ್ಬರು ಪಾತ್ರ ನಿರ್ವಹಿಸಲು ಸಾಧ್ಯವಿಲ್ಲ ಎನ್ನುವಷ್ಟರ ಮಟ್ಟಿಗೆ ಅವರು ಮಿಂಚಿದ್ದಾರೆ. ಇನ್ನು ನಟ ರಮೇಶ್ ಅರವಿಂದ್ ಥೇಟ್ ಬಸವಣ್ಣನವರ ರೂಪವೇ ಆಗಿ ಕಾಣುತ್ತಾರೆ. ಮಾದರಸನ ಪಾತ್ರಧಾರಿ, ಹರಳಯ್ಯನ ಪತ್ನಿ, ವಿಕ್ರಮ್ ಉದಯ್ ಕುಮಾರ್ ಹೆಚ್ಚು ಗಮನ ಸೆಳೆಯುತ್ತಾರೆ. ಕುತಂತ್ರಿಯಾಗಿ ರಮೇಶ್ ಭಟ್, ರಾಜನಾಗಿ ರಾಮಕೃಷ್ಣರ ಅಭಿನಯ ಓಕೆ. ಗೌರಿವೆಂಕಟೇಶ್ ಛಾಯಾಗ್ರಹಣ, ಜಿಮ್ಮಿರಾಜ್ ಸಂಗೀತ ಚಿತ್ರಕ್ಕೆ ಪೂರಕವಾಗಿದೆ. ಗೊತ್ತಿರುವ ಚಾರಿತ್ರಿಕ ಸತ್ಯವನ್ನು ಮತ್ತೊಮ್ಮೆ ನೋಡಿದ ಅನುಭವ ನೀಡುವಲ್ಲಿ ಈ ಚಿತ್ರ ಯಶಸ್ವಿಯಾಗುತ್ತದೆ. - ಆರ್. ಕೇಶವಮೂರ್ತಿ