'ಅಭಿಮಾನಿ ಡ್ರೈವರು'ಗಳಿಗಾಗಿ! ಸತತ ಸೋಲುಗಳಿಂದ ಬೇಸತ್ತು ಗೆಲುವು ಬಯಸುವ ನಟನೊಬ್ಬನಿಗೆ ಒಂದು ಹೊಸ ಫಾರ್ಮುಲಾ ಇರುವ ಚಿತ್ರ ಮಾತ್ರ ಬ್ರೇಕ್ ಕೊಡಲು ಸಾಧ್ಯ ಎಂಬ ನಂಬಿಕೆಯ ನಡುವೆಯೂ ಗಣೇಶ್ ಗೆಲುವಿಗಾಗಿ ಹಳೆಯ ಪ್ರೇಮಕಥೆಯ ಸೂತ್ರ ಇರುವ ಆಟೋರಾಜನ ಮೊರೆ ಹೋಗಿದ್ದಾರೆ. ಹಾಗಾಗಿ ಅವರ ಕೆರಿಯರ್‌ನಲ್ಲಿ ಮಳೆ ನಿಂತಿದೆ, 'ಗಾಲಿ' ಬೀಸುತ್ತಿದೆ. ಅದು ಆಟೋ ಗಾಲಿ. ಅದರ ಜೊತೆ ಅವರೀಗ ಸದ್ಯಕ್ಕೆ ಗೆಲ್ಲುವ 'ಕುದುರೆ' ಅಲ್ಲದ ಕಾರಣಕ್ಕೆ ರೇಡಿಯೋ 'ಜಾಕಿ'ಯೂ ಆಗಿದ್ದಾರೆ. ಆದರೆ ಆಟೋ ಪ್ರಯಾಣ ಪ್ರಯಾಸ ಎನಿಸದಿದ್ದರೂ ರೂಟ್ ಮಾತ್ರ ಹಳೆಯದೇ ಎನ್ನುವುದು ನಿರಾಸೆ. ಆಟೋ ಓಡಿಸುವ ರಾಜ. ಅವನ ಕಣ್ಣಿಗೆ ಬೀಳುವ ನಾಯಕಿ ರಾಣಿ, ವಿಲನ್‌ಗಳ ಕೆಂಗಣ್ಣಿಗೂ ಬೀಳುತ್ತಾಳೆ. ರೇಡಿಯೋ ಜಾಕಿಗಳಿಗೆ ಎದುರು ಮಾತನಾಡಿ, ಸೈ ಎನಿಸಿಕೊಂಡು ಆಟೋ ಡ್ರೈವರ್ ಕೂಡ ಪಾರ್ಟ್ ಟೈಮ್ ರೇಡಿಯೋ ಜಾಕಿ ಆಗುತ್ತಾನೆ. ಅತ್ತ ಸಿನಿಮಾ ನಟಿಯಾಗಲು ಕೊಳ್ಳೆಗಾಲದಿಂದ ಬಂದ ನಾಯಕಿಯನ್ನು ನಾಯಕನ ಆಟೋ ಫಾಲೋ ಮಾಡುತ್ತಿರುತ್ತದೆ. ಆದರೆ ಅವನಿಂದ ಅನೇಕ ಬಾರಿ ತೊಂದರೆಗೆ ಸಿಲುಕುವ ನಾಯಕಿ ಅದೇ ಆಟೋರಾಜನ ರೇಡಿಯೋ ಜಾಕಿ ಅವತಾರಕ್ಕೆ ಮನಸೋಲುತ್ತಾಳೆ. ಮತ್ತದೇ 'ಅವನೇ ಇವನು' ಎಂದು ನಾಯಕಿಗೆ ಗೊತ್ತಿಲ್ಲದ ಲಾಜಿಕ್ ಚಿತ್ರದ ಸ್ಕ್ರೀನ್ ಪ್ಲೇಗೆ ಹೂರಣ. ಹಲವು ಅವಾಂತರಗಳ ನಂತರ ನಾಯಕಿಗೆ ಸಿನಿಮಾದಲ್ಲಿ ಅವಕಾಶ ಸಿಕ್ಕಮೇಲೆ, ವಿಲನ್‌ಗಳ ಕೈಗೂ ಸಿಕ್ಕಿಬೀಳುತ್ತಾಳೆ. ಮುಂದೆ ಆಗುವ ಅನಾಹುತವನ್ನು ತಪ್ಪಿಸುವ ನಾಯಕ ಆಟೋಪಯಣ ಮುಗಿಸುತ್ತಾನೆ. ಚಿತ್ರದ ಕಥೆಯನ್ನು ಗಮನಿಸಿದರೆ, 'ಯಾರೇ ನೀನು ಚೆಲುವೆ', 'ಕನಸುಗಾರ' ಚಿತ್ರಗಳಿಗೆ 'ಆಟೋರಾಜ' ಲಿಫ್ಟ್ ಕೊಟ್ಟಿದ್ದಾನೆ ಎನಿಸಬಹುದು. ಆದರೆ, ಕೊನೆಗೂ ನಾಯಕಿಗೆ ಸತ್ಯದರ್ಶನ ಆಗದೇ ಇರುವುದನ್ನೇ 'ಆಟೋರಾಜ' ಚಿತ್ರದ ಸ್ಪೆಷಾಲಿಟಿ ಎನ್ನಬಹುದು. ಚಿತ್ರಕಥೆಯಲ್ಲಿ ಬೆಂಗಳೂರಿನ ಆಟೋಗಳಷ್ಟೇ ವೇಗ ಇರುವುದರಿಂದ ನೋಡಿಸಿಕೊಂಡು ಹೋಗುವ ಚಿತ್ರ ಎನ್ನುವುದಕ್ಕಿಂತ ಓಡಿಸಿಕೊಂಡು ಹೋಗುವ ಚಿತ್ರ ಎನ್ನಬಹುದು. ಪ್ರೇಕ್ಷಕ ಕೊಡುವ ಮಿನಿಮಮ್ ಚಾರ್ಜ್‌ಗೆ ಮೋಸವಿಲ್ಲದ ಮಿನಿಮಮ್ ಗ್ಯಾರಂಟಿ ಚಿತ್ರ ಎನ್ನಲೂಬಹುದು. ಆದರೆ ಅದಕ್ಕಿಂತ ಜಾಸ್ತಿ ಹೇಳಲು, ಚಿತ್ರದಲ್ಲಿ ಆಗಾಗ ನಾಯಕ, ನಾಯಕಿಗೆ ಅಡ್ಡಬರುವ ಬೆಕ್ಕಿನಂತೆ ಅಡ್ಡಬರುವುದು ಅದೇ ಹಳೆಯ ಕತೆ. ಆದರೆ ಫಾರ್ ಎ ಚೇಂಜ್ ಚಿತ್ರದ ನಾಯಕ ಗಣೇಶ್ ಅಭಿಮಾನಿ ದೇವರುಗಳನ್ನು ಓಲೈಸುವುದಕ್ಕಿಂತ ಆಟೋ ಡ್ರೈವರುಗಳನ್ನು ಓಲೈಸುವುದೇ ಹೆಚ್ಚು. ಆಟೋರಾಜ ಮತ್ತು ರೇಡಿಯೋ ಜಾಕಿ ಆಗಿ ಡಬಲ್ ಶಿಫ್ಟ್ ಮಾಡಿರುವುದರಿಂದ ಗಣೇಶ್ ಅಭಿನಯದಲ್ಲಿ ಮಾತೂ ಜಾಸ್ತಿ, ಕೆಲಸವೂ ಜಾಸ್ತಿ. ಚಿತ್ರದ 'ಇನ್ನೊಬ್ಬ ನಾಯಕ ಶಂಕರ್‌ನಾಗ್‌' ಅವರದ್ದೂ ಗಮನ ಸೆಳೆಯುವ ಅಪಿಯರೆನ್ಸ್. ಹಳೆಯ ಆಟೋರಾಜ ಚಿತ್ರದ ನಾಯಕಿ ಗಾಯತ್ರಿ ಅವರ ಪಾತ್ರವನ್ನು ಇಲ್ಲಿ ಬಡಹುಡುಗಿ ಭಾಮಾ ಮತ್ತು ಐಶ್ವರ್ಯವಂತೆ ದೀಪಿಕಾ ಅವರಿಗೆ ಅರ್ಧರ್ಧ ಹಂಚಿ ಎರಡು ಭಾಗ ಮಾಡಿದಂತಿದೆ. ಆದರೆ ಅವರ ಅಭಿನಯದಲ್ಲಿ ಗಾಯತ್ರಿ ಅವರ ಅರ್ಧ ಭಾಗ ಕಾಣಿಸುವುದು ಕಷ್ಟ. ಒಂದು ಹಾಡಲ್ಲಿ ಐಟಂ ಗರ್ಲ್‌ನಂತೆ ಕಾಣಿಸಿಕೊಂಡು ಅಲ್ಲಿಯವರೆಗೆ ತಾವೇ ಕಟ್ಟಿಕೊಟ್ಟ ಮುಗ್ಧ, ಅಮಾಯಕ ಹುಡುಗಿಯ ಪಾತ್ರವನ್ನು ಅಳಿಸಿಹಾಕಿದ್ದಾರೆ. ಇನ್ನೊಬ್ಬ ನಾಯಕಿ ದೀಪಿಕಾ ಚಿತ್ರದುದ್ದಕ್ಕೂ ಐಟಂ ಗರ್ಲ್‌ನಂತೇ ಕಾಣುತ್ತಾರೆ. ಉಳಿದಂತೆ ಕಲಾವಿದರ ಲೆಕ್ಕದಲ್ಲಿ 'ಆಟೋರಾಜ' ಚಿತ್ರ ಸ್ಕೂಲ್ ಮಕ್ಕಳನ್ನು ತುಂಬಿಕೊಂಡ ಆಟೋಗಳಂತೆ ಫುಲ್ ರಶ್ಶ್ ಆಗಿದೆ. ಸಾಧುಕೋಕಿಲ ಸರದಿಯಲ್ಲಿ ಮುಂದಿದ್ದಾರೆ. ವಿಶ್ವ ತಮ್ಮ ಟ್ರೇಡ್‌ಮಾರ್ಕ್ ಪಾತ್ರದಲ್ಲಿ ಮಿಂಚಿದ್ದರೆ ಯತಿರಾಜ್ ಕೂಡ ಎಂದಿಗಿಂತ ಹೆಚ್ಚು ಮಾರ್ಕ್ಸ್ ಗಳಿಸುತ್ತಾರೆ. ಅರ್ಜುನ್ ಜನ್ಯ ಸಂಗೀತದಲ್ಲಿ ಆಟೋರಾಗಗಳು ಚಿತ್ರಕ್ಕೆ ಕಿಕ್ ಸ್ಟಾರ್ಟ್ ಕೊಡುತ್ತವೆ. ಮಂಜುನಾಥ ನಾಯ್ಕ್‌ರ ಅಲೆಮಾರಿ ಕ್ಯಾಮೆರಾದಲ್ಲಿ ಆಟೋ ಕೂಡ ಬೆನ್ಝ್ ಕಾರಿನಂತೆ ಕಾಣುತ್ತದೆ. - ಹರಿ