ಸರ್ವಂ 'ಯಶ್' ಮಯಂ! ಯಶ್ ತಾವೊಬ್ಬ ಪರಿಪೂರ್ಣ ಎಂಟರ್ ಟೈನರ್ ಎಂಬುದನ್ನು ಮತ್ತೊಮ್ಮೆ ಸಾಬೀತು... ಚಿತ್ರಮಂದಿರಕ್ಕೆ ಚಿತ್ರ ನೋಡಲು ತೆರಳುವಾಗ ಮೊದಲು ಆಸುಪಾಸಿನ ಮೆಡಿಕಲ್ ಸ್ಟೋರ್ ಗಳಿಗಾಗಿ ಅಲೆದಾಡಿ ತಲೆನೋವಿನ ಮಾತ್ರೆ ಕೊಂಡೊಯ್ಯುವ ಅಭ್ಯಾಸವಿದ್ದರೆ, ನಿಮ್ಮ ಆ ತಾಪತ್ರಯವನ್ನು ಇಲ್ಲವಾಗಿಸುವ ಸಿನೆಮಾ 'ಗಜಕೇಸರಿ'. ಈ ಚಿತ್ರ ಪೂರ್ತಿಯಾಗಿ ಯಶ್ ಮಯ. ಅವರ ಹೈಟು, ಫೈಟು, ಡ್ಯಾನ್ಸು, ರೊಮ್ಯಾನ್ಸು ಯಾವುದರಲ್ಲೂ ಕೊರತೆ ಕಾಣುವುದಿಲ್ಲ. ಯಶ್ ತಾವೊಬ್ಬ ಪರಿಪೂರ್ಣ ಎಂಟರ್ ಟೈನರ್ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ತೆರೆಮೇಲೆ ನಟ/ ನಟಿಯರು ಎಷ್ಟೇ ಪಸಂದಾಗಿ ಕಂಡರೂ, ಶಿಳ್ಳೆಗಳು ಎಷ್ಟೇ ಜೋರಾಗಿ ಬೀಳುತ್ತಿದ್ದರೂ ಕ್ಯಾಮೆರಾ ಹಿಂದಿರುವ ಚಿತ್ರತಂಡವನ್ನು ಮರೆಯಲಾಗದು. 'ಮುಂಗಾರು ಮಳೆ' ಖ್ಯಾತಿಯ ಛಾಯಾಗ್ರಾಹಕ ಕೃಷ್ಣ 'ಗಜಕೇಸರಿ' ಮೂಲಕ ನಿರ್ದೇಶಕರಾಗಿದ್ದಾರೆ. ಚೊಚ್ಚಲ ಚಿತ್ರದಲ್ಲೇ ಅವರು ಗಮನ ಸೆಳೆದಿದ್ದಾರೆ, ಅವರಿಂದ ರಂಜನೀಯ ಮತ್ತು ಉತ್ತಮ ಚಿತ್ರಗಳನ್ನು ಭವಿಷ್ಯತ್ತಿನಲ್ಲಿ ನಿರೀಕ್ಷಿಸಬಹುದು. ಗಜಕೇಸರಿಯಲ್ಲಿ ಪ್ರಮುಖವಾಗಿ ಸತ್ಯ ಹೆಗಡೆ ಛಾಯಾಗ್ರಹಣ ಮತ್ತು ಯಶ್ ಜುಗಲ್ ಬಂದಿ ಮೋಡಿ ಮಾಡಿದೆ. ಕಾಡಿನ ಸೌಂದರ್ಯ, ಚಿತ್ರದ ಹೊಡೆದಾಟದ ದೃಶ್ಯಗಳಲ್ಲಿ ವೈಡ್ ಆಂಗಲ್, ಕ್ಲೋಸಪ್, ಪ್ಯಾನರೋಮ, ಶಾಟ್ ಗಳು ಮುಂತಾದ ಪಟ್ಟುಗಳೆಲ್ಲವನ್ನೂ ಸಮರ್ಪಕವಾಗಿ ಬಳಸಿರುವ ಸತ್ಯ ಹೆಗಡೆಯವರ ಕೆಲಸ ಗಮನ ಸೆಳೆಯುತ್ತದೆ. ನಾಯಕಿ ಅಮೂಲ್ಯ ತಮ್ಮ 'ಅಮುಲ್ ಬೇಬಿ' ಇಮೇಜ್ ನಿಂದ ಹೊರಬರಲು ಪ್ರಯತ್ನಿಸಿರುವುದು ಗೋಚರಿಸುತ್ತದೆ, ತುಂಡ್ ಚಡ್ಡಿ ಸಾವಾಸದಿಂದಾಗಿ ಕೆಲವು ಕಡೆಗಳಲ್ಲಿ ಅವರು ಯಶಸ್ವಿಯಾಗಿದ್ದಾರೆ ಕೂಡ! ಚಿತ್ರದಲ್ಲಿ ಅವರ ಅಭಿನಯಕ್ಕೆ ಅವಕಾಶ ಕಮ್ಮಿ, ಆದರೆ ಗ್ಲಾಮರ್ ಗೆ ಅವಕಾಶ ಸಿಕ್ಕಿದೆ. ಪ್ರೇಕ್ಷಕರನ್ನು ಕಾಮಿಡಿ ಟ್ರ್ಯಾಕಿನಲ್ಲಿ ಕೊಂಡೊಯ್ಯಲು ರಂಗಾಯಣ ರಘು ಮತ್ತು ಸಾಧು ಕೋಕಿಲರವರಿದ್ದಾರೆ. ಇಷ್ಟಕ್ಕೂ ಹೇಗೆ ಎಲ್ಲಾ ಜೋಕುಗಳು ಫನ್ನಿಯಾಗಿರಬೇಕೆಂದಿಲ್ಲವೋ ಹಾಗೆಯೇ ಎಲ್ಲಾ ಜೋಕುಗಳಿಗು ನೀವು ನಗಲೇಬೇಕೆಂಬ ನಿಯಮವಿಲ್ಲವಲ್ಲ! ಡಿಡಿ1 ರ ಹೆಸರಾಂತ ಪೌರಾಣಿಕ ಧಾರವಾಹಿ 'ಚಂದ್ರಕಾಂತ' ಖ್ಯಾತಿಯ ಶಹಬಾಝ್ ಖಾನ್ ಈ ಚಿತ್ರದಲ್ಲಿ ಶತ್ರುಸೈನ್ಯದ ರಾಜನಾಗಿ ಅಭಿನಯಿಸಿರುವುದು ವಿಶೇಷ. ಮಠಾಧಿಪತಿಯಾಗಿ ಅನಂತ್ ನಾಗ್, ಮತ್ತು ಅವರ ಸಹಾಯಕನಾಗಿ ಮಂಡ್ಯ ರಮೇಶ್, ಯಶ್ ತಾಯಿಯಾಗಿ ಗಿರಿಜಾ ಲೋಕೇಶ್ ತಾರಾಗಣವಿದೆ ಚಿತ್ರದಲ್ಲಿ. ಹರಿಕೃಷ್ಣರ ಸಂಗೀತದಲ್ಲಿ ಮೂಡಿ ಬಂದಿರುವ ಚಿತ್ರದ ಬಹುತೇಕ ಹಾಡುಗಳಲ್ಲಿ ಮಾಧುರ್ಯವಿಲ್ಲದಿದ್ದರೂ, ಸಹನೀಯ. ಇರುವ ಒಂದು ಮಾಧುರ್ಯಭರಿತ ಹಾಡು ತೆಲುಗಿನ ಮಗಧೀರನಿಂದ ಪ್ರೇರಣೆ ಪಡೆದುಕೊಂಡಿದ್ದು. ಹಾಗೆ ನೋಡಿದರೆ ಕತೆಯಿಂದ ಹಿಡಿದು ಚಿತ್ರದಲ್ಲಿ ಪ್ರೇರಣೆಯಿಂದ ಬಂದಂತಹವುಗಳು ಹಲವಾರಿವೆ. ಚಿತ್ರದಲ್ಲಿ ನಕಾರಾತ್ಮಕ ಅಂಶಗಳಿಲ್ಲ ಅಂತಿಲ್ಲ, ಉದಾಹರಣೆಗೆ ಎರಡನೇ ಭಾಗದಲ್ಲಿ ಬರುವ ಪೌರಾಣಿಕ ಹಿನ್ನಲೆ, ಚಿತ್ರದ ಓಟವನ್ನು ಸ್ವಲ್ಪ ಮಟ್ಟಿಗೆ ತಗ್ಗಿಸುತ್ತದೆ, ಅಲ್ಲದೆ ಆಸ್ಥಾನದ ದೃಶ್ಯಾವಳಿಗಳು ಕೃತಕವಾಗಿ ತೋರಿ ಧಾರಾವಾಹಿಯ ದೃಶ್ಯಗಳಂತೆ ಭಾಸವಾಗುತ್ತದೆ. ಆದರೆ ಅವ್ಯಾವುದೂ ಪ್ರೇಕ್ಷಕನನ್ನು ಹೆಚ್ಚು ಬಾಧಿಸದೆ ಇರುವುದರಲ್ಲಿ ಯಶ್ ಮತ್ತು ತಾಂತ್ರಿಕ ವರ್ಗದ ಕೃಪೆಯಿದೆ. ಚಿತ್ರ ಕತೆ- ಗಜಕೇಸರಿ ಯೋಗದಲ್ಲಿ ಹುಟ್ಟಿದ ನಾಯಕ ಕೃಷ್ಣ(ಯಶ್) ತನ್ನ ಮನೆದೇವರ ಮಠಕ್ಕೆ ಮಠಾಧೀಶನಾಗಬೇಕೆಂದೂ, ಇಲ್ಲವಾದರೆ ಇನ್ನೊಂದು ತಿಂಗಳಲ್ಲಿ ಮಠಕ್ಕೆ ಆನೆಯೊಂದನ್ನು ನೀಡಬೇಕೆಂದು ಸ್ವಾಮೀಜಿ(ಅನಂತ್ ನಾಗ್) ಫರ್ಮಾನು ಹೊರಡಿಸಿದಾಗ, ಮದುವೆಯಾಗುವ ಕನಸು ಹೊತ್ತಿದ್ದ ಕೃಷ್ಣ ಆನೆಯನ್ನು ಕರೆತರಲು ಆನೆಗುಡ್ಡಕ್ಕೆ ಪ್ರಯಾಣ ಬೆಳೆಸುತ್ತಾನೆ. ಆಲ್ಲಿ ಕಾಡಿನಲ್ಲಿ ಆದಿವಾಸಿಗಳ ಹಾಡಿಯಲ್ಲಿನ ಗುಡಿಸಲೊಂದರಲ್ಲೇ ನಾಯಕ ಮತ್ತು ಪಕ್ಷಿಗಳ ಬಗೆಗೆ ಅಧ್ಯಯನ ನಡೆಸುತ್ತಿದ್ದ ನಾಯಕಿ ಇಬ್ಬರೂ ಉಳಿದುಕೊಳ್ಳುವಂತಾಗುತ್ತದೆ. ಹಾಡಿಯ ಜನರಿಗೆ ತೊಂದರೆ ಕೊಡುತ್ತಿದ್ದ ಆನೆಯನ್ನು ನಾಯಕ ಪಳಗಿಸುತ್ತಾನೆ. ಈ ಮಧ್ಯ ನಾಯಕ ಕೃಷ್ಣನನ್ನೂ, ಹಾಡಿಯ ವಂಶಸ್ಥರನ್ನೂ ಕನೆಕ್ಟ್ ಮಾಡುವ ಫ್ಲ್ಯಾಷ್ ಬ್ಯಾಕ್ ಒಂದು ಅನಾವರಣಗೊಳ್ಳುತ್ತದೆ, ನಾಯಕ ಆದಿವಾಸಿಗಳ ರಕ್ಷಕನಾಗುತ್ತಾನೆ. ಹಾಡಿಯ ಜನರನ್ನು ಅನೈತಿಕವಾಗಿ ಕಾಡಿನಿಂದ ಒಕ್ಕಲೆಬ್ಬಿಸುವ ಪ್ರಯತ್ನ ನಡೆಯುತ್ತದೆ, ಅದರ ಹಿಂದಿದ್ದವನು ಕಾಡಿನ ಮಾಫಿಯಾ ದೊರೆ. ಅವನನ್ನು ಎದುರು ಹಾಕಿಕೊಳ್ಳುತ್ತಾನೆ ಕೃಷ್ಣ. 'ಗಜಕೇಸರಿ' ಚಿತ್ರ ಅತ್ಯುತ್ತಮವಲ್ಲದಿದ್ದರೂ ಮುಂಚೆಯೇ ಹೇಳಿದಂತೆ ತಲೆನೋವು ಮಾತ್ರೆಯ ಅವಶ್ಯಕತೆಯಿಲ್ಲದೆ ನೋಡಬಹುದಾದ ಅಚ್ಚುಕಟ್ಟಾದ ಸಿನೆಮಾ. ಕೊಟ್ಟ ಕಾಸಿಗೆ ಮನರಂಜನೆ ಗ್ಯಾರೆಂಟಿ! - ಹರ್ಷವರ್ಧನ್ (ಕನ್ನಡಪ್ರಭ ಡಾಟ್ ಕಾಮ್)