'ಅಲೆ'ಗಳು ಎಲ್ಲೂ ಅಬ್ಬರಿಸಲ್ಲ! ತನ್ನ ಪಾಡಿಗೆ ತಾನಿರುವ ಪ್ರೇಕ್ಷಕ ಒಮೊಮ್ಮೆ ನಗುತ್ತಾನೆ. ಹಾಗಂತ ಇದು ಕಾಮಿಡಿ ಚಿತ್ರವಲ್ಲ, ನಾಯಕ, ನಾಯಕಿ ಮರ ಸುತ್ತುತ್ತಾರೆ, ಕನಸು ಕಾಣುತ್ತಾರೆ ಅಂದ ಮಾತ್ರಕ್ಕೆ ಪೂರ್ತಿ ಲವ್ ಸ್ಟೋರಿ ಅಲ್ಲ. ಚಿತ್ರದ ಆರಂಭದಲ್ಲೇ ಪಿಸ್ತೂಲು ಸದ್ದು ಮಾಡುತ್ತದೆ. ಚೇಸಿಂಗ್ ದೃಶ್ಯಗಳಿವೆ. ಆದರೂ ಸಾಹಸಮಯ ಚಿತ್ರವಲ್ಲ. ಹೀಗೆ ಯಾವುದೋ ಒಂದಕ್ಕೆ ಬ್ರಾಂಡ್ ಆಗದ ಹೊಸಬರ ಬಾಂಡ್ ಚಿತ್ರವಿದು. ಇದೊಂದು ರೀತಿ ಸಣ್ಣ ಪುಟ್ಟ ನದಿಗಳಿಂದ ಸಮುದ್ರ ರೂಪುಗೊಂಡಂತೆ. ಬಂದು ಹೋಗುವ ಪುಟ್ಟ ಪುಟ್ಟ ಪಾತ್ರಗಳು, ಹಾಸ್ಯ ದೃಶ್ಯಗಳು, ಕೇಳುಗರನ್ನು ತಂಪಾಗಿಸುವ ಸಂಗೀತ, ಒಮ್ಮೆ ಕೇಳಿ ಅನಂದಿಸಬಹುದಾದ ಹಾಡುಗಳು, ಅದ್ದೂರಿ ಲೊಕೇಷನ್‌ಗಳ ಸಿನೆಮಾ. ಸಣ್ಣ ಸಣ್ಣ 'ಅಲೆ'ಗಳು ಸೇರಿ ದೊಡ್ಡ ಉಬ್ಬರವನ್ನು ಸೃಷ್ಟಿಸದಿದ್ದರೂ 'ಓಕೆ' ಎನ್ನಿಸುವ ಸಿನಿಮಾ ಇದು. ಗೋಪಿಕಿರಣ್ ನಿರ್ದೇಶನದ 'ಅಲೆ' ಚಿತ್ರದ ಸಾರಾಂಶ ಇದು. ಹೊಸಬರ 'ಅಲೆ'ಯಾಗಿರುವ ಕಾರಣಕ್ಕೆ ಚಿತ್ರದಲ್ಲಿ ಬರುವ ಎಡರು ತೊಡರುಗಳು ಹಾಯಾಗಿ ಕೂತಿರುವ ಪ್ರೇಕ್ಷಕನನ್ನು ಬೆದರಿಸುತ್ತವೆ. 'ಈಗ ಕೊಟ್ರೆ ನನ್ ಏಟು ಅಷ್ಟೇ' ಎನ್ನುವ ನಾಯಕನ ಡೈಲಾಗ್‌ನಲ್ಲಿ ಸೀರಿಯಸ್ಸೂ ಇದೆ, ಹಾಸ್ಯವೂ ಉಂಟು. ಆದರೆ ಅದು ಗಂಭೀರವಾಗಯೇ ಇರಬೇಕಿತ್ತು ಎನ್ನುವ ಪ್ರೇಕ್ಷಕನಿಗೆ ಆ ದೃಶ್ಯ ರುಚಿಸದಿರಬಹುದು. ಕಿರಣ್‌ಕುಮಾರ್ ರೆಡ್ಡಿ ಸ್ನೇಹಿತರ ಜೊತೆ ಸೇರಿ ಮೊದಲ ಚಿತ್ರಕ್ಕೆ ಬೇಕಾದಷ್ಟು ಹಣ ಸುರಿದಿದ್ದಾರೆ. ಅವರ ಬಜೆಟ್ ಹಾಡುಗಳಲ್ಲಿ ಮಾತ್ರ ಕಂಡಿದೆ. ಅದು ಮಾತಿನ ಭಾಗದಲ್ಲಿ ಕಾಣದೆ ಸಪ್ಪೆ ಎನ್ನಿಸಿದೆ. ನಾಯಕನಿಗೆ ಹುಡುಗಿಯನ್ನು ಲವ್ ಮಾಡುವುದೇ ಮೇಜರ್ ಉದ್ಯೋಗ. ಆ ಹುಡುಗಿ ತನ್ನ ಸೋದರ ಮಾವನ ಬಲೆಯಲ್ಲಿರುವ ಮೀನು. ಯಾರಾದರೂ ಈ ಮೀನಿಗೆ ಗಾಳ ಹಾಕಿದರೆ ಸ್ಪಾಟ್‌ನಲ್ಲೇ ಯಮನ ದರ್ಶನ ಮಾಡಿಸುವ ತಾಕತ್ತು ಮಾವನದ್ದು. ಯಾಕೆಂದರೆ ಆಕೆ ಶ್ರೀಮಂತೆ. ನಾಯಕಿಯಆಸ್ತಿಯನ್ನು ತನ್ನ ಹೆಸರಿಗೆ ಮಾಡಿಕೊಳ್ಳುವ ದುರುದ್ದೇಶ ಸೋದರತ್ತೆಯದ್ದು. ಇಂಥ ಹುಡುಗಿಯ ಹಿಂದೆ ಪೆದ್ದನಂತೆ ಹೋಗಿ ಮುದ್ದು ಎನ್ನಿಸಿಕೊಳ್ಳುವ ನಾಯಕನ ಪ್ರೇಮದಾಟಕ್ಕೆ ಸಾಕು ತಂದೆ, ಸ್ನೇಹಿತರ ಬೆಂಬಲ. ಇದೇ ತನ್ನ ಪ್ರೀತಿಗೆ ಸಿಕ್ಕ ಸರ್ವಪಕ್ಷಗಳ ಬೆಂಬಲ ಎಂದುಕೊಂಡು ಹುಡುಗಿ ಜೊತೆ ಮರು ಸುತ್ತಲು ಹೋಗುತ್ತಾನೆ ನಾಯಕ. ನಿರೀಕ್ಷೆಯಂತೆ ಮಾವ ಅಡ್ಡಗಾಲು ಹಾಕುತ್ತಾನೆ. ಮುಂದೆ ಆ್ಯಕ್ಷನ್ ಲವ್ ಸ್ಟೋರಿ. ಇದರ ನಡುವೆ ಇಷ್ಟವಾಗುವ ಒಂದು ಫ್ಲ್ಯಾಷ್ ಬ್ಯಾಕ್, ಒಂದಷ್ಟು ಟ್ವಿಸ್ಟ್‌ಗಳು, ಕೇಳುವಂಥ ಹಾಡು, ಸಂಗೀತ ಮತ್ತು ನೋಡಲು ಅಡ್ಡಿ ಇಲ್ಲದ ಲೊಕೇಷನ್‌ಗಳು. ಸಣ್ಣ ಸಣ್ಣ ಘಟನೆ, ಮಾತು, ದೃಶ್ಯಗಳ ಮೂಲಕವೇ 'ಅಲೆ'ಗೆ ಅಣೆಕಟ್ಟು ಕಟ್ಟಿದ್ದಾರೆ ನಿರ್ದೇಶಕ ಗೋಪಿಕಿರಣ್. ಆದರೆ ಇಡಿಯಾಗಿ ಚಿತ್ರ ನೋಡಿದಾಗ ನಿರೂಪಣೆ, ಕಂಟಿನ್ಯೂಟಿ ಕಡೆ ನಿರ್ದೇಶಕರು ಗಮನ ಕೊಟ್ಟಿಲ್ಲ ಅನ್ನಿಸುತ್ತೆ. ಫ್ಲ್ಯಾಷ್ ಬ್ಯಾಕ್ ಎಪಿಸೋಡ್ ಅನ್ನು ಇನ್ನಷ್ಟು ವಿಸ್ತರಿಸಿ, ಪ್ರೆಸೆಂಟ್ ದೃಶ್ಯಗಳಿಗೆ ಅಲ್ಲಲ್ಲಿ ಕತ್ತರಿ ಹಾಕಬೇಕಿತ್ತು. ಆದರೆ 'ಅಲೆ'ಗೆ ನ್ಯಾಯ ಒದಗಿಸಿರುವುದು ಮಾತ್ರ ಮನೋಮೂರ್ತಿ ಸಂಗೀತ ಹಾಗೂ ಮೂರು ಹಾಡುಗಳು. ರಾಮಕೃಷ್ಣ, ಚಂದ್ರಶೇಖರ್, ಪೆಟ್ರೋಲ್ ಪ್ರಸನ್ನ, ಸುರೇಶ್ಚಂದ್ರ, ಬಿರಾದರ್, ಬುಲೆಟ್ ಪ್ರಕಾಶ್, ತೆಲುಗಿನ ಸುಮಂತ್ ಶೆಟ್ಟಿ, ಶಕೀಲಾ ಹೀಗೆ ಒಂದಿಷ್ಟು ಜನರ ಪಾತ್ರಗಳು ಬರುತ್ತವೆ. ಇವರ ಪೈಕಿ ಪ್ರಸನ್ನ ತುಸು ಹೆಚ್ಚು ಅಬ್ಬರಿಸಿದ್ದಾರೆ. ಇನ್ನು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಡೆ ಇಲ್ಲಿ ಅತಿಥಿ. ನಾಯಕ, ನಾಯಕಿ ಪಾರ್ಕ್‌ನಲ್ಲಿ ಕೂತಿದ್ದಾರೆ. 'ಅಯ್ಯೋ ಸೋರ್ತಿದೆ' ಎನ್ನುತ್ತಾಳೆ. 'ಏನು!?' ಅಂತ ನಾಚಿಕೊಳ್ಳುತ್ತಾನೆ ನಾಯಕ. 'ನಾನ್ ಹೇಳಿದ್ದು ಐಸ್ ಕ್ರೀಮ್, ಬೇಗ ತಿನ್ನು' ಅಂತಾಳೆ ನಾಯಕಿ. ಚಿತ್ರದಲ್ಲಿ ಆಗಾಗ ಬರುವ ಇಂಥ ಡೈಲಾಗ್‌ಗಳ ಮೂಲಕ ಸಂಭಾಷಣೆಗಾರ ವಿಜಯ್ ಭರಮಸಾಗರ 'ಫನ್ ಸ್ಪೆಷಲಿಸ್ಟ್‌' ಎನ್ನಿಸಿಕೊಳ್ಳಲು ಹೊಗಿದ್ದಾರೆ. 'ಪರಿ' ಚಿತ್ರದಲ್ಲಿ 'ಪರಿ ಪರಿಯಾಗಿ ಕಾಡಿ'ದರೂ ಅಲ್ಲಿ ನಿಲ್ಲದ ವಿಜಯ್‌ನ ಮಾತು ಇಲ್ಲಿ 'ಅಲೆ'ಯಾಗಿದೆ. ರಾಜಾ ಅವರ ಛಾಯಾಗ್ರಹಣದ ಪ್ರತಿಭೆ ಹಾಡುಗಳಿಗೆ ಸೀಮಿತವಾಗುತ್ತದೆ. ನಟಿ ಹರ್ಷಿಕಾ ಪೂಣಚ್ಚ ಹಿಂದೆಗಿಂತ ಹೆಚ್ಚು ಗ್ಲಾಮರ್ ಆಗಿದ್ದಾಳೆ. ಅವಿವಾ ಬಿದ್ದಪ್ಪ ಹಾಗೆ ಬಂದು ಹೀಗೆ ಹೋದರೂ ತಮ್ಮ 'ದೈಹಿಕ' ಅಭಿನಯದಿಂದ ನೆನಪಲ್ಲಿ ಉಳಿಯುತ್ತಾರೆ. ನಾಯಕ ತನುಷ್‌ಗೆ ಇದು ಮೊದಲ ಚಿತ್ರ. ಅಭಿನಯದಲ್ಲಿ ಮತ್ತಷ್ಟು ಪಳಗಬೇಕಿದೆ. - ಆರ್. ಕೇಶವಮೂರ್ತಿ