ಹಳೆ ಮೈದಾನದಲ್ಲಿ ಹೊಸ ಪ್ರೇಮ ಕನಸು ತುಂಬಾ ನೈಸ್ ಆದ ಹೈವೇ ರಸ್ತೆ. ಜೋರಾಗಿ ಗಾಡಿ ಓಡಿಸುತ್ತಿದ್ದೇವೆ. ದಿಢೀರ್ ಅಂತ ಯೂ ಟರ್ನ್ ತೆಗೆದುಕೊಳ್ಳಬೇಕು. ಬ್ರೇಕ್ ಹಾಕಿ ಟರ್ನ್ ಮಾಡಲಿಕ್ಕೆ ಆಗದಷ್ಟು ವೇಗ. ಯೂ ಟರ್ನ್ ತೆಗೆದುಕೊಳ್ಳುವ ಆ ಅನುಭವ, ಥ್ರಿಲ್, ರೋಮಾಂಚನ ಇದೆಯಲ್ಲ; ಅದನ್ನೊಮ್ಮೆ ಕಲ್ಪಿಸಿಕೊಳ್ಳಿ. ಅದು ಆ ಕ್ಷಣಕ್ಕೆ ಮಾತ್ರವಲ್ಲ. ಅಬ್ಬಾ! ಯಾವ ಅಪಾಯವೂ ಇಲ್ಲದೇ ಬಚಾವ್ ಆಗಿಬಿಟ್ಟೆ ಎಂದು ದಾರಿಯುದ್ದಕ್ಕೂ ನಿಟ್ಟುಸಿರು ಬಿಡುತ್ತ ಗಾಡಿ ಓಡಿಸುತ್ತೇವೆ. ಮತ್ತೊಂದು ಯು ಟರ್ನ್ ಬರುವ ತನಕ. ಟರ್ನ್‌ಗಳು ಹಾಗಿರಲಿ, ಬಿಡುಗಡೆಯಾಗಿ ಕೇವಲ ಒಂದು ವಾರಕ್ಕೆಲ್ಲ 'ರಿಟರ್ನ್‌' ತೆಗೆದುಕೊಳ್ಳುವ ಚಿತ್ರಗಳ ನಡುವೆ ಹೀಗೊಂದು ಭರಪೂರ ಯೂ ಟರ್ನ್‌ಗಳ ಅನುಭವ ನೀಡುವ ಚಿತ್ರ 'ಗೊಂಬೆಗಳ ಲವ್‌'. ಒಂದು ಪ್ರೇಮ ಕಥೆಯನ್ನು ಹೀಗೂ ಹೇಳಬಹುದೇ? ನಾಯಕನ ಸಿಕ್ಸ್ ಪ್ಯಾಕ್, ನಾಯಕಿಯ ಸೆಕ್ಸಿ ಅಪೀಲ್, ಇಮ್ಯಾಜಿನೇಷನ್ ಸಾಂಗ್ಸ್, ಸಿಕ್ಕಾಪಟ್ಟೆ ಫೈಟ್ಸ್, ಅದ್ದೂರಿ ಸೆಟ್‌ಗಳು... ಇವ್ಯಾವುವೂ ಇಲ್ಲದೆ ಸುಂದರ ಕಥೆ ಹೇಳಲು ಸಾಧ್ಯವೇ? ಸಿದ್ಧ ಸೂತ್ರಗಳೇ ಸಿನಿಮಾ ರಂಗವನ್ನು ಆಳುತ್ತಿರುವಾಗ, ಯಾವುದೋ 'ಲಾಜಿಕ್‌' ಹೆಸರಿನಲ್ಲಿ 'ಲಾರ್ಜ್‌' ಕಿಕ್ಕನ್ನೂ ಕೊಡದ ಪ್ರೇಮ ಚಿತ್ರಗಳನ್ನು ಉಣಬಡಿಸುತ್ತಿರುವಾಗ ಯಾವ ಲಾಜಿಕ್ಕು, ಮ್ಯಾಜಿಕ್ಕೂ ಇಲ್ಲದೇ ಅಪರೂಪದ ಪ್ರೇಮಕಥೆ ಹೇಳುವುದು ಅಸಾಧ್ಯ ಎನ್ನುವವರು 'ಗೊಂಬೆಗಳ ಲವ್‌' ಚಿತ್ರವನ್ನು ಒಮ್ಮೆ ನೋಡಬೇಕು. ನಿರ್ದೇಶಕ ಸಂತೋಷ್‌ರಿಗೆ ಮಾತ್ರವಲ್ಲ, ನಿರ್ಮಾಪಕ ಅಜಯ್ ರಾಜ್ ಅರಸ್, ನಾಯಕ ಅರುಣ್, ನಾಯಕಿ ಪಾವನಿ ಹಾಗೂ ತೆರೆಯ ಹಿಂದೆ ಕೆಲಸ ಮಾಡಿದ ಬಹುತೇಕರಿಗೂ ಇದು ಮೊದಲ ಚಿತ್ರ. ನಟಿ ಶ್ರುತಿ, ಅಚ್ಯುತ್ ಕುಮಾರ್, ಶಶಿಕಲಾ, ರಾಮಕೃಷ್ಣ ಹೀಗೆ ಕೆಲವರ ಹೊರತಾಗಿ ಎಲ್ಲ ಹೊಸ ಮುಖಗಳೇ. ಆದರೆ ಮೊದಲ ಪ್ರಯತ್ನದಲ್ಲೇ ಗಾಂಧಿನಗರದ 'ಸೂತ್ರ'ಧಾರಿಗಳನ್ನು ನಾಚಿಸುವಂಥ ಚಿತ್ರ ಕೊಟ್ಟಿದ್ದಾರೆ. ಇಡೀ ಚಿತ್ರದಲ್ಲಿ ಯಾವುದೂ ಫಾರ್ಮಲ್ ಅಲ್ಲ, ಹಾಗೆ ಯಾವುದರಲ್ಲೂ ಸೋ ಕಾಲ್ಡ್ ಲಾಜಿಕ್ ಇಲ್ಲ. ಸಂಭಾಷಣೆ, ಪಾತ್ರಧಾರಿಗಳ ಕಾಸ್ಟ್ಯೂಮ್, ಡೈಲಾಗ್ ಡೆಲವರಿ, ಕ್ಯಾಮೆರಾ ಆ್ಯಂಗಲ್, ನೆರಳು-ಬೆಳಕಿನ ವಿನ್ಯಾಸ, ಚಿತ್ರೀಕರಣದ ಸ್ಥಳ ಹೀಗೆ ಎಲ್ಲವೂ ಅಪರಿಚಿತ ಮತ್ತು ಅಪರೂಪ. 'ಅಪ್ಪ- ಅಮ್ಮ ಇರೋದೋ ಪ್ರೀತಿ ಮಾಡೋ ಮಕ್ಕಳನ್ನ ಹೊಡೆಯೋಕೆ. ಅವರು ಹೊಡಿತಾನೆ ಇರ್ಲಿ, ನಮ್ ಪಾಡಿಗೆ ನಾವ್ ಲವ್ ಮಾಡೋಣ' ಎನ್ನುವಂಥ ತೀರಾ ಸಹಜ ಸಂಭಾಷಣೆಗಳಿಂದ ಪ್ರೇಕ್ಷಕರನ್ನು ಓಣಿ, ಗಲ್ಲಿಗಳಲ್ಲಿ ಸುತ್ತಾಡಿಸಿ ಕೊನೆಗೆ ನಿರೀಕ್ಷಿಸಿಯೂ ಇರದ ಸನ್ನಿವೇಶಕ್ಕೆ ಚಿತ್ರವನ್ನು ತಂದು ನಿಲ್ಲಿಸಲಾಗುತ್ತದೆ. ಸಿನಿಮಾ ನಿಜವಾದ ಜೀವ ಪಡೆದುಕೊಳ್ಳುವುದು ವಿರಾಮದ ನಂತರ. ಪ್ರೀತಿ, ಪ್ರೇಮ ಅಂತ ಗಲ್ಲಿ ಗಲ್ಲಿ ಸುತ್ತಾಡುವ ಪ್ರೇಮಿಗಳಿಬ್ಬರು. ಇವರ ಪ್ರೇಮಕ್ಕೆ ಅಡ್ಡ ಬರುವ ಹುಡುಗಿಯ ಅಪ್ಪ, 'ಸಾರ್ ನಿಮ್ ಮಗಳನ್ನ ಕೊಟ್ಟು ಮದುವೆ ಮಾಡಿ' ಅಂತ ಹುಡುಗಿಯ ಅಪ್ಪನನ್ನು ಗೋಗರೆದು ಒದೆ ತಿನ್ನುವ ಗೊತ್ತು-ಗುರಿ ಇಲ್ಲದ ನಾಯಕ, ಇವರ ಪ್ರೀತಿಯ ಕಥೆಯನ್ನು ಕೇಳುತ್ತ ಹೋಗುವ ಮಹಿಳಾ ಪೊಲೀಸ್ ಇದು ದೃಶ್ಯಗಳ ತಿರುಳು. ಈ 'ಗೊಂಬೆಗಳ ಲವ್‌'ನ ಕಥೆ ನಿಜ ಅಲ್ಲ, ಅದು ಕನಸು ಎಂದು ಗೊತ್ತಾಗುವಷ್ಟರಲ್ಲಿ ಗಾಢವಾದ ವಿಷಾದದ ನಗೆಯಲ್ಲಿ ಸಿನಿಮಾ ಮುಗಿಯುತ್ತದೆ. ದೇಹ ಚಲನೆ ಕಳೆದುಕೊಂಡು ಹೊರಗಿನ ಜಗತ್ತನ್ನೇ ಕಾಣಲಾಗದೆ ಜೀವಂತ ಶವಗಳಾಗಿ ಬದುಕುತ್ತಿರುವ ಇಬ್ಬರು ಪ್ರೇಮಿಗಳು, ಸಾಯುವ ಗಳಿಗೆಯಲ್ಲಿ ಹೊಟ್ಟೆ ಹಸಿವನ್ನು ಮರೆಯಲು ಪ್ರೀತಿಯ ಕನಸು ಕಾಣುತ್ತಾರೆ. ಈ ಕನಸಿನ ಮೂಲಕ ಚಿತ್ರವನ್ನು ಕಟ್ಟಿಕೊಡುವ ನಿರ್ದೇಶಕ ಸಂತೋಷ್‌ರದ್ದು ನಿಜಕ್ಕೂ ಹೊಸ ಪ್ರಯತ್ನ. ಶ್ರೀನಾಥ್ ವಿಜಯ್‌ರ ಸಂಗೀತದಲ್ಲಿ ಎರಡು ಹಾಡುಗಳು ಕೇಳುವಂತಿವೆ. ಹೊಸ ಪ್ರಯೋಗದ ಚಿತ್ರ ಎಂದು ನಿರ್ಲಕ್ಷಿಸದೇ ಹೊಸ ಕನಸಿನ ಸಿನಿಮಾ ಎಂದುಕೊಂಡು ತಪ್ಪದೆ ಒಮ್ಮೆ 'ಗೊಂಬೆಗಳ ಲವ್‌' ನೋಡಿ. ಹಳೆ ಮೈದಾನದಲ್ಲಿ ಹೊಸ ಪ್ರೇಮದ ಚಿತ್ರಗಳನ್ನು ಕಣ್ತುಂಬಿಕೊಳ್ಳುತ್ತೀರಿ. - ಆರ್.ಕೇಶವಮೂರ್ತಿ