ಯೇ ಅಂದರ್ ಕೀ ಖಾಸ್‌ಬಾತ್ ಹೈ ಸಾಮಾನ್ಯವಾಗಿ ಸಿನಿಮಾ ವಿಮರ್ಶೆಗಳಲ್ಲಿ ಸಿನಿಮಾದಿಂದ ಹೊರಗಿರುವ ವಿಷಯಗಳ ಬಗ್ಗೆ ಮಾತನಾಡುವುದು ಕಡಿಮೆ. ಆದರೆ ಅಂದರ್ ಬಾಹರ್ ಚಿತ್ರದ ಬಗ್ಗೆ ಹೇಳುವಾಗ ಒಂದು ಮಾತು ಹೇಳಿಯೇ ಮುಂದುವರಿಯಬೇಕಾದ ಅಗತ್ಯವಿದೆ. ಅದು ಚಿತ್ರದ ಪ್ರಚಾರ ಮತ್ತು ಔಟ್‌ಲುಕ್‌ಗೆ ಸಂಬಂಧಪಟ್ಟಿದ್ದು. ಈ ಚಿತ್ರದ ನಾಯಕ ಶಿವರಾಜ್‌ಕುಮಾರ್ ಅಲ್ಲದೆ ಹೋಗಿದ್ದಿದ್ದರೆ, ಈ ಚಿತ್ರದ ಬಗ್ಗೆ ಯಾರೂ ಯಾವ ನಿರೀಕ್ಷೆಯೂ ಇಲ್ಲದೆ ಹೋಗುವಂತಾಗಿದ್ದಿದ್ದರೆ ನಿಜಕ್ಕೂ ಅಂದರ್‌ಬಾಹರ್ ಒಂದು ಸುಂದರ ಅನುಭವ ಕೊಡುವ ಚಿತ್ರ ಎನಿಸಿಕೊಳ್ಳುತ್ತಿತ್ತು, ಅದರಲ್ಲೂ ನಿರ್ದೇಶಕನೊಬ್ಬನ ಮೊದಲ ಚಿತ್ರ ಎಂಬ ಕಾರಣಕ್ಕೆ ಇನ್ನೂ ಹೆಚ್ಚಿನ ಕ್ರೆಡಿಟ್ ಸಿಗುತ್ತಿತ್ತು, ಎಂದೆಲ್ಲ ಅನಿಸಿದರೆ ಎಲ್ಲದಕು ಕಾರಣ ಶಿವರಾಜ್‌ಕುಮಾರ್ ಇಮೇಜು ಮತ್ತು ಚಿತ್ರದ ಶೀರ್ಷಿಕೆ ಪರಮಾತ್ಮ. ಏಕೆಂದರೆ 'ಅಭಿಮಾನಿ ದೇವರೇ ಕಾಪಾಡಬೇಕು' ಎನ್ನುವ ಸಿನಿಮಾ ಇದಲ್ಲ. ಚಿತ್ರದ ಪ್ರಚಾರ ಮತ್ತು ಬಾಹರ್‌ನ ಅಪಿಯರೆನ್ಸ್ ನೋಡಿ ಇದೊಂದು ಅಂಡರ್‌ವರ್ಲ್ಡ್ ಕಥೆ ಎಂದುಕೊಂಡು ಹೋದರೆ ಅಲ್ಲಿ, ಅಂದರ್ ಕೀ ಬಾತ್ ಕುಚ್ ಔರ್ ಹೈ ಎನಿಸಬಹುದು. ಅದರೆ ಕುಚ್ ಖಾಸ್ ಹೈ ಎನಿಸುವುದಂತೂ ನಿಜ. ಇದು ಮನಸ್ಸಿನೊಳಗಿನ ಪಿಸುಮಾತು. ಅಂದರ್ ಹೋದವರಿಗೆ, ಬಾಹರ್ ಆನೇ ತಕ್ ಒಂದಿಷ್ಟು ತಾಳ್ಮೆ ಬೇಕು. ದೃಶ್ಯವೊಂದರಲ್ಲಿ, ನಾಯಕ, ಎರಡು ಮಕ್ಕಳ ಪ್ರಾಣ ಉಳಿಸಬೇಕು ಎಂದು ಡಾಕ್ಟರ್‌ಗೆ ತಾಕೀತು ಮಾಡಿದಾಗ 'ನಾನು ಕೇವಲ ಡಾಕ್ಟರ್, ಮ್ಯಾಜಿಷಿಯನ್ ಅಲ್ಲ' ಎಂಬ ರೆಗ್ಯುಲರ್ ಡೈಲಾಗ್ ಬರುತ್ತದೆ. ಆದರೆ, ನಂತರ ನಾಯಕಿಯ ಪ್ರಾಣ ಉಳಿಸುವ ವಿಷಯ ಬಂದಾಗ ಅದೇ ಡಾಕ್ಟರ್ ನಾಯಕನಿಗೆ ಹೇಳುತ್ತಾಳೆ, 'ಈ ವಿಷಯದಲ್ಲಿ ನಾನೇನೂ ಮಾಡೋಕಾಗಲ್ಲ. ಆದ್ರೆ ನೀವು ಏನು ಬೇಕಾದ್ರೂ ಮಾಡಬಹುದು. ನನಗ್ಗೊತ್ತು ನೀವು ಡಾಕ್ಟರ್ ಅಲ್ಲ, ಬಟ್ ಯೂ ಆರ್ ಎ ಮ್ಯಾಜಿಷಿಯನ್‌'. ಚಿತ್ರದ ಶಕ್ತಿ ಇರುವುದು ಇಂಥ ಸನ್ನಿವೇಶಗಳಲ್ಲಿ. ಚಿತ್ರದ ಅವಧಿ ದೊಡ್ಡದೆನಿಸಿದರೂ ಏನನ್ನು ಕಟ್ ಮಾಡಬೇಕು ಎಂಬ ಪ್ರಶ್ನೆಗೆ ಉತ್ತರ ಹೇಳುವುದು ಕಷ್ಟ. ಇರುವುದೆಲ್ಲವೂ ಬ್ಯೂಟಿಫುಲ್ ಎನಿಸುವಂಥದ್ದೇ. ಆದರೆ, ಅಗತ್ಯ ಬಿದ್ದಾಗ, ತಾನು ಪ್ರೀತಿಯಿಂದ ಸೆರೆಹಿಡಿದ ದೃಶ್ಯಗಳನ್ನೂ ನಿರ್ದಯೆಯಿಂದ ಕಟ್ ಮಾಡುವಷ್ಟು ಕಠೋರ ಮನಸ್ಸಿದ್ದರೆ ಮಾತ್ರ ಸಿನಿಮಾ ಅದ್ಭುತವಾಗಿ ಮೂಡಿಬರಲು ಸಾಧ್ಯ ಎಂಬ ಸಿನಿಮಾ ತತ್ವಗಳನ್ನು ಮೊದಲ ಸಿನಿಮಾ ಮಾಡುವ ಉತ್ಸಾಹಿ ನಿರ್ದೇಶಕರಿಗೆ ಹೇಳುವುದು ಕಷ್ಟ. ಆದರೆ ನಿರ್ದೇಶಕ ಫಣೀಶ್‌ಗೆ ಒಳ್ಳೆಯ ಸಿನಿಮಾ ಮತ್ತು ಓಡುವಂಥ ಸಿನಿಮಾಗಳ ನಡುವಿನ ವ್ಯತ್ಯಾಸ ಗೊತ್ತಿದ್ದರೆ ಒಳ್ಳೆಯದಿತ್ತು. ಮೊದಲರ್ಧದ ಚಿತ್ರಕಥೆಯಲ್ಲಿ ಫಣೀಶ್ ಇನ್ನೊಂದಿಷ್ಟು ವೆರೈಟಿ ತರಬೇಕಿತ್ತೇನೋ. ಆರಂಭದಲ್ಲಿ ರೋಚಕವಾಗಿ ಶುರುವಾಗುವ ಕತೆ, 'ಹಾಸ್ಪಿಟಲ್‌ಗೆ ಶಿಫ್ಟ್‌' ಆದಮೇಲೆ, ಇಂಟರ್‌ವಲ್‌ವರೆಗಿನ 'ಟ್ರೀಟ್ ಮೆಂಟ್‌' ಸರಿ ಇಲ್ಲ ಎನಿಸಬಹುದು. ಪ್ರೇಕ್ಷಕನಿಗೆ ಹಾಸ್ಪಿಟಲ್‌ನಲ್ಲೇ 'ಅಡ್ಮಿಟ್‌' ಆಗಿದ್ದರೂ '108ಕ್ಕೆ ಕರೆ ಮಾಡಬೇಕು' ಎನಿಸಿದರೆ ಅದಕ್ಕೆ ಕಾರಣ ಅಲ್ಲಿಯವರೆಗಿನ ಏಕತಾನತೆ. ಶಿವರಾಜ್‌ಕುಮಾರ್‌ರ ಇಮೇಜಿನಿಂದ ತೀರಾ ಬಾಹರ್ ಹೋಗಿರುವುದು ಕೊರತೆ. ಆದರೆ, ಇಂಟರ್‌ವಲ್‌ನ ನಂತರದ ಅಂದರ್ ಬಾಹರ್‌ನ ಕಥಾ ಹಂದರ ಈ ಕೊರತೆಯನ್ನು ನೀಗಿಸುವುದರಿಂದ ಪ್ರೇಕ್ಷಕ 'ನಿಧಾನವಾಗಿ ಚೇತರಿಸಿಕೊಳ್ಳುತ್ತಾನೆ'. ಶಿವರಾಜ್‌ಕುಮಾರ್ ಅವರದ್ದು ಉಸಿರನ್ನು ಒಳಗೆಳೆದುಕೊಂಡು ಹೊರಗೆ ಬಿಟ್ಟಷ್ಟೇ ಲೀಲಾಜಾಲ ಅಭಿನಯ. ಹಾಗೆ, ನೋಡಿದರೆ, ಅಭಿನಯದ ವಿಷಯದಲ್ಲಿ 'ಅಂದರೂ ಮಹಾನುಭಾವುಡೇ'... ಆದರೆ, ವಿಶೇಷ ವಂದನೆ ಹೇಳಬೇಕು ಎನಿಸುವುದು ನಾಯಕಿ ಪಾರ್ವತಿ ಅವರ ಕಂಗಳಿಗೆ. ಒಳಗೂ ಹೊರಗೂ ಕಂಗೊಳಿಸುವ ಅಭಿನಯ ಮತ್ತು ಸೌಂದರ್ಯ ಅವರದ್ದು. ಬಹುಶಃ ಈ ಚಿತ್ರವನ್ನು ತುಂಬಾ ಚೆನ್ನಾಗಿ ಅರ್ಥಮಾಡಿಕೊಂಡಿರುವುದು ಛಾಯಾಗ್ರಾಹಕ ಶೇಖರ್ ಚಂದ್ರು ಎನ್ನಬಹುದು. ಅದಕ್ಕೆ ಸಾಕಷ್ಟು ಪುರಾವೆ ಒದಗಿಸುವಂತೆ, ಮೊದಲಿನಿಂದ ಕೊನೆಯವರೆಗೆ ಅಚ್ಚರಿ ಮೂಡಿಸುತ್ತಾರೆ ಅವರು. ಫಣೀಶ್‌ರ ಕಲ್ಪನೆಗೆ ಇದಕ್ಕಿಂಥ ಹೆಚ್ಚು ನ್ಯಾಯ ಒದಗಿಸುವುದು ಸಾಧ್ಯವಿರಲಿಲ್ಲವೇನೋ. ವಿಜಯ್‌ಪ್ರಕಾಶ್ ಸಂಗೀತವೂ ಚಿತ್ರದ ಹೈಲೈಟ್‌ಗಳಲ್ಲೊಂದು. ಇದು ಶಿವರಾಜ್‌ಕುಮಾರ್ ಅವರ ರೆಗ್ಯುಲರ್ ಆ್ಯಕ್ಷನ್ ಸಿನಿಮಾ ಎಂದುಕೊಂಡು ಅರ್ಧ ಕತೆ ಊಹಿಸಿಕೊಂಡೇ ಸಿನಿಮಾಕ್ಕೆ ಹೋದರೆ 'ಅದರ್ ಕತೇನೇ ಬೇರೆ' ಅನಿಸಬಹುದು. ಆದರೆ, ಇದು, ಆ ನಿರಾಸೆಯಲ್ಲಿ ಅನಿಸುವಷ್ಟು ಕೆಟ್ಟ ಚಿತ್ರ ಖಂಡಿತಾ ಅಲ್ಲ. 'ಅಂದರ್ ಬಾಹರ್‌' ಚಿತ್ರದ ನಾಯಕ ಅಂಡರ್‌ವರ್ಲ್ಡ್ ಗ್ಯಾಂಬ್ಲರ್ ಎಂದುಕೊಳ್ಳದೆ, ಚಿತ್ರದ ನಾಯಕ, ನಾಯಕಿ ಇಬ್ಬರೂ ನಮ್ಮ ಫ್ಯಾಮಿಲಿ ಮೆಂಬರ್‌ಗಳು ಎಂದುಕೊಂಡು ಸಿನಿಮಾಕ್ಕೆ ಹೋದರೆ ಚೆನ್ನ. ಅಲ್ಲಿಗೂ, ಅಂದರ್ ಬಾಹರ್ ಒಂದು ಕೆಟ್ಟ ಸಿನಿಮಾ ಅನಿಸಿದರೆ, ಅದಕ್ಕೆ, ಅದು ತುಂಬಾ ಒಳ್ಳೆಯ ಸಿನಿಮಾ ಆಗಿರುವುದೂ ಒಂದು ಕಾರಣವಿರಬಹುದು. - ಹರಿ