ಪ್ರೀತಿ ಗೀತಿ ಪಜೀತಿ! 'ಹೆಸ್ರೇ ಗರಗಸದಲ್ಲಿ ಕುಯ್ಯೋ ಥರ ಇದ್ಯಲ್ಲ ಗುರೂ..' ಅನ್ಕೊಂಡ್ರೆ ಅದು ನಿಮ್ಮ ... ಹಳೆ ನಿರ್ದೇಶಕ ಇಲ್ಲಿ ನವ ನಾಯಕ, ಹೆಸರು ಬೇರೆ 'ಪ್ರೀತಿ ಗೀತಿ ಇತ್ಯಾದಿ', 'ಹೆಸ್ರೇ ಗರಗಸದಲ್ಲಿ ಕುಯ್ಯೋ ಥರ ಇದ್ಯಲ್ಲ ಗುರೂ..' ಅನ್ಕೊಂಡ್ರೆ ಅದು ನಿಮ್ಮ ತಪ್ಪು ಅಭಿಪ್ರಾಯ. ಅಲ್ಲದೆ ನಿರ್ದೇಶಕ ನಟನಾದ ಮಾತ್ರಕ್ಕೆ ಚಿತ್ರ ಚೆನ್ನಾಗಿಲ್ಲ ಅಂತ ಸುಮ್ ಸುಮ್ನೆ ಏನೇನೋ ಅನ್ಕೋಬಾರ್ದು ಸಿನೆಮಾ 'ಪ್ರೇಮ್'ಗಳು. ಇಲ್ಲಿ ಕೊಂಚ ಕುಯ್ಯಲಾಗಿದೆಯಾದರೂ ಗರಗಸ ಹಿಡ್ಕೊಂಡಿಲ್ಲ, ಬದಲಾಗಿ ಚಾಕು ಬಳಸಲಾಗಿದೆ. ಈ ಚಿತ್ರವನ್ನು ನಿರ್ದೇಶಕ ಯೋಗರಾಜ್ ಭಟ್ಟರ ಟೀಮಿನ ಮತ್ತೊಬ್ಬ, ಮಗದೊಬ್ಬ ಸದಸ್ಯ ವೀರೇಂದ್ರರವರು ನಿರ್ದೇಶಿಸಿದ್ದಾರೆ. ಆ ಟೀಮಿನ ಬಹುತೇಕರು ತಲಾ ಒಂದು ಅಥವಾ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಇದೀಗ ವೀರೇಂದ್ರರ ಸರದಿ. ಅವರ ಪ್ರಯತ್ನ 'ಪ್ರಥಮ ಚುಂಬನಂ ದಂತ ಭಗ್ನಂ' ಆಗಿಬಿಟ್ಟಿದೆ. ದಂತ ಚೂರ್ಣ ತಿಂದರೂ ಹೋಗಲಾರದಂತಹ ಚೂರು ವೇದನೆಯನ್ನೂ ಅವರು ಪ್ರೇಕ್ಷರಿಗೆ ದಯಪಾಲಿಸಿದ್ದಾರೆ. ಚಿತ್ರದಲ್ಲಲ್ಲಿ ಭಟ್ಟರು ಹೀಗೊಮ್ಮೆ ಇಣುಕಿ ಹಾಗೆ ಹೋಗುತ್ತಾರೆ. ಅವರು ನಟಿಸಿಲ್ಲ, ಆದರೆ ನಾಯಕಿಗೆ ಸಂತೋಷ ಅಥವಾ ದುಃಖ ಆದಾಗ ತಮಗೆ ಪ್ರಿಯರಾದವರನ್ನು ತಮ್ಮ ಎಂದಿನ ಫೇವರೆಟ್ ಸ್ಥಳಕ್ಕೆ ಕರೆದೊಯ್ಯೋದು, ಅಕಸ್ಮಾತ್ತಾಗಿ ಆಕೆ ಅವನನ್ನು ಅಪ್ಪಿಕೊಳ್ಳೋದು, ವಿನಾಕಾರಣ ಪಪ್ಪಿ ಕೇಳೋದು ಇತ್ಯಾದಿಗಳು ಭಟ್ಟರ ನಾಯಕಿಯರನ್ನು ನೆನಪಿಸುತ್ತದೆ. ಖೇದವೇನೆಂದರೆ ಭಾವನೆಗಳ ಹಿಡಿದಿಡುವಿಕೆಯಲ್ಲಿ, ಕತೆಯ, ಚಿತ್ರಕತೆಯ ವಿಷಯದಲ್ಲಿ 'ಪ್ರೀತಿ ಗೀತಿ ಇತ್ಯಾದಿ' ಪಕ್ವವಾಗಿಲ್ಲ ಮತ್ತು ಪಾತ್ರಗಳು ಪಾಠ ಒಪ್ಪಿಸುತ್ತವೆ ಪ್ರೇಕ್ಷಕರಿಗೆ. ಯಾವುದೋ ಓಬಿರಾಯನ ಕಾಲದ ಕತೆಯೊಂದನ್ನು ಇಟ್ಟುಕೊಂಡು ನಾಯಕಿ ನಾಯಕ ಮರ ಸುತ್ತುವ ಕತೆಯೊಂದನ್ನು ಹೆಣೆಯಲಾಗಿದೆ. ನಾಯಕ ಪವನ್ ಒಡೆಯರ್, ನಾಯಕಿ ಸಂಗೀತ ಅಭಿನಯಕ್ಕೆ ಗ್ರೇಸ್ ಮಾರ್ಕ್ಸ್ ಕೊಟ್ಟರೂ ಪಾಸಾಗೋದು ಡೌಟು! ಇದ್ದಿದ್ದರಲ್ಲಿ ಗಮನ ಸೆಳೆಯೋದು ನಾಯಕಿಯ ಅಮ್ಮನಾಗಿ ಕಾಣಿಸಿಕೊಂಡಿರುವ ವಿನಯಾ ಪ್ರಸಾದ್ ಮಾತ್ರ. ಹಾಸ್ಯದ ಟಚಪ್ಪಿಗೆ ರಂಗಾಯಣ ರಘುರವರ ರಸಾಯನವಿದ್ದರೂ 'ಓವರ್' ಸಿಹಿಯಿಂದಾಗಿ ಅದೂ ಕೂಡಾ ನಾಲಗೆಗೆ ರುಚಿಸದು. ಇವೆಲ್ಲವುಗಳ ಹೊರತಾಗಿಯೂ ಚಿತ್ರದ ಎರಡನೇ ಭಾಗದಲ್ಲಿ ಕಾಣಿಸಿಕೊಳ್ಳುವ ಹುಚ್ಚನ ಪಾತ್ರ ಮನೋಜ್ಞವಾಗಿ ಮೂಡಿಬಂದಿದೆ. ಈ ವಿಭಾಗದಲ್ಲಿಯೂ ಭಟ್ಟರ ಪ್ರೇರಣೆಯನ್ನು ಪರಿಪೂರ್ಣಗೊಳಿಸಲೆಂಬಂತೆ, ಅವರ ಅನೇಕ ಚಿತ್ರಗಳಲ್ಲಿರುವಂತೆ ಇಲ್ಲಿಯೂ ತತ್ವಜ್ಞಾನವನ್ನು ಕಾಲಜ್ಞಾನವನ್ನು ಹುಚ್ಚನ ಪಾತ್ರದ ಮೂಲಕ ಬೋಧಿಸಲಾಗಿದೆ. ಸಂಗೀತ ನಿರ್ದೇಶಕ ವೀರ್ ಸಮರ್ಥರ ಸಾಮರ್ಥ್ಯ ಈ ಚಿತ್ರದಲ್ಲಿ ಕೇಳಿ ಬಂದಿಲ್ಲ, ಹಾಡುಗಳು ಮತ್ತೊಮ್ಮೆ ಮಾತ್ರವಲ್ಲ, ಒಮ್ಮೆಯೂ ಕೇಳಬೇಕೆನಿಸುವುದಿಲ್ಲ. ನಿರ್ದೇಶನದ ಜೊತೆ ಜೊತೆಗೇ ಸಂಭಾಷಣೆಯನ್ನೂ ಬರೆದಿರುವ ವೀರೇಂದ್ರ ನಿರಾಶೆ ಮೂಡಿಸುತ್ತಾರೆ. ಕೆಲವೊಂದು ಡಯಲಾಗುಗಳು ಮಾತ್ರ ಶಿಳ್ಳೆಗರ್ಹವಾಗಿವೆ. 'ಚಿಕ್ಕೋನಿದ್ದಾಗ ನನ್ ಅಂಡ್ ತೊಳ್ದಿರೋ ನಿಂಗೆ ಗುಂಡಿ ತೋಡೋ ಕಟುಕ ನಾನಲ್ಲ' ಅವುಗಳಲ್ಲೊಂದು. ಕತೆ- ನಾಯಕ, ಆತನೇ ಹೇಳುವಂತೆ 'ಬಾರ್ ಓನರ್ ಬೈ ವೆಲ್ತ್'. ಅಪ್ಪ ಇಲ್ಲ ಅಮ್ಮ ಇಲ್ಲ, ಚಿಕ್ಕಪ್ಪನೇ(ರಂಗಾಯಣ ರಘು) ಎಲ್ಲ, ಆಸ್ತಿಯಿರುವುದರಿಂದ ಹೊಟ್ಟೆಪಾಡಿಗೇನೂ ಕೊರತೆಯಿಲ್ಲ. ನಾಯಕನಿಗೊಬ್ಬಳು ತಂಗಿ. ಇವಿಷ್ಟು ನಾಯಕನ ಭಯೋಡಾಟಾ. ಒಮ್ಮೆ ತಂಗಿ ಕಾರು ಓಡಿಸುತ್ತಿದ್ದಾಗ ಆಪಘಾತವಾಗುತ್ತದೆ, ಇವರಿಗೇನೂ ಆಗುವುದಿಲ್ಲ ಆದರೆ ಮೊಪೆಡ್ ಚಲಾಯಿಸುತ್ತಿದ್ದ ವ್ಯಕ್ತಿಯೊಬ್ಬ ಸತ್ತಿರುತ್ತಾನೆ. ನಾಯಕನಿಗೆ ಅಪರಾಧಿ ಪ್ರಜ್ಞೆ ಕಾಡಿ ಸತ್ತವನ ಫ್ಯಾಮಿಲಿಗೆ ಸಹಾಯ ಮಾಡಲು ಮುಂದಾಗುತ್ತಾನೆ. ಇಲ್ಲಿ 'ಸ್ಪರ್ಶ'ದ ಕೊಂಚ ಸ್ಪರ್ಶವಿದೆ ಅಂತನಿಸಿದರೆ ಅದಕ್ಕೆ ನಿರ್ದೇಶಕರೇ ಜವಾಬುದಾರರು. ಅಪಘಾತದಲ್ಲಿ ಸತ್ತಾತ ನಾಯಕಿಯ ಅಪ್ಪನಾಗಿರುತ್ತಾನೆ. ಹೀಗೆ ಅವರ ಕುಟುಂಬವನ್ನು ಪ್ಯಾಚ್ ಮಾಡುವ ನೆಪದಲ್ಲಿ ನಾಯಕಿಗೆ ಕ್ಯಾಚ್ ಹಾಕುತ್ತಾನೆ. ಕೊನೆಗೆ ಅವರಿಬ್ಬರ ನಡುವೆ ಪ್ರೀತಿ ಅಂಕುರಿಸುತ್ತದೆ. ಕೊನೆಗೆ ನಾಯಕಿಗೆ ಅವರ ತಂದೆಯ ಸಾವಿಗೆ ತಾನೇ ಕಾರಣವೆಂದು ತಿಳಿದಾಗ ಎಲ್ಲಿ ಬೇಜಾರು ಮಾಡಿಕೊಳ್ಳುವಳೋ ಎಂದು ನಾಯಕಿಯ ತಾಯಿಯ ಸಲಹೆಯಂತೆ ತಾನೇ ಅವಳಿಂದ ದೂರವಾಗಿ ಅಮರಪ್ರೇಮಿಯಾಗುತ್ತಾನೆ. ಅದೂ ಮುಂಗಾರು ಮಳೆ ರೇಂಜಿನಲ್ಲಿ. ಏಕೆಂದರೆ ನಾಯಕ, ತಾನು ದೂರವಾಗಿದ್ದಲ್ಲದೆ ಅವಳ ಹಳೆ ಪ್ರೇಮಿಯೊಬ್ಬನನ್ನು ಮನವೊಲಿಸಿ ನಾಯಕಿಗೆ ಜೊತೆ ಮಾಡುವಷ್ಟು ಉದಾರಿ. ಕೊನೆಗೆ ಅವರಿಬ್ಬರನ್ನು ಜೋಡಿ ಮಾಡಿ ನಾಯಕ, ನಾಯಕಿಯಿಂದ ದೂರ ಬಂದು ರಸ್ತೆ ಮಧ್ಯದಲ್ಲಿ ಅಳುತ್ತಾ ಕಾರೊಳಗೆ ಕೂತಿದ್ದಾಗ ಅಲ್ಲಿಗೆ ನಾಯಕಿಯ ಆಗಮನವಾಗುತ್ತದೆ. 'ಪಂಚರಂಗಿ'ಯ ಕ್ಲೈಮ್ಯಾಕ್ಸ್ ಹೇಳುತ್ತಿಲ್ಲ, ಇದು ಇದೇ ಚಿತ್ರದ ದೃಶ್ಯ. ಆಮೇಲೆ ಅವರ ಪ್ರೀತಿ ಗೀತಿ ಇತ್ಯಾದಿ ಮುಂದುವರೆಯುತ್ತದೆ. ಒಟ್ಟಾರೆಯಾಗಿ ಚಿತ್ರದಾದ್ಯಂತ ಇತ್ಯಾದಿಗಳೇ ತುಂಬಿರುವುದರಿಂದ ಅದೊಂದು ವಿಷಯದಲ್ಲಿ ಮಾತ್ರ ಚಿತ್ರದ ಟೈಟಲ್ಲು ಚಿತ್ರಕ್ಕೆ ಪೂರಕ. ಹರ್ಷವರ್ಧನ್ ಕನ್ನಡಪ್ರಭ ಡಾಟ್ ಕಾಮ್