ಅಭಿಮಾನಿಗಳಿಗೆ ರೆಡ್‌ಬುಲ್ ಒಂದೋ, ಯಾವುದಾದರೂ ಕಂಡು ಕೇಳರಿಯದಂಥ ಸ್ಪೆಷಲ್ ಎನಿಸುವ ವಿಷಯವನ್ನಿಟ್ಟುಕೊಂಡು ಹೊಸರೀತಿಯ ಸಿನಿಮಾ ಕೊಡಲು ಪ್ರಯತ್ನಿಸುವುದು, ಇಲ್ಲವೇ, ಈಗಾಗಲೇ ಪ್ರೂವ್ ಆಗಿರುವ ಜನಪ್ರಿಯ ಸೂತ್ರವನ್ನಿಟ್ಟುಕೊಂಡು ಸಿನಿಮಾ ಮಾಡುವುದು. ಮೊದಲ ರೀತಿಯ ಪ್ರಯತ್ನದಲ್ಲಿ ಮುಂಗಾರು ಮಳೆ ಸುರಿದರೆ ಖುಷಿಯ ಆಲಿಕಲ್ಲು, ಹಳ್ಳಕ್ಕೆ ಬಿದ್ದರೆ ಆಳಿಗೊಂದು ಕಲ್ಲು. ಎರಡನೇ ಪ್ರಯತ್ನದಲ್ಲಿ ಮಿನಿಮಂ ಗ್ಯಾರಂಟಿ ಫಲಿತಾಂಶ. ಇದು, ಇಂದು ಸಿನಿಮಾ ಮಾಡುವವರು ಸಾಧಾರಣವಾಗಿ ಅನುಸರಿಸುವ ಸೂತ್ರ. ಹಾಗಾಗಿ ಗುಣಮಟ್ಟದಲ್ಲಿ ಸಿನಿಮಾ ಸಾಧಾರಣ ಎನಿಸಿಕೊಂಡರೂ ಪರವಾಗಿಲ್ಲ ಎಂಬ ಲೆಕ್ಕದಲ್ಲಿ ತಯಾರಾಗುವಂಥ ಚಿತ್ರಗಳ ಸಾಲಿನಲ್ಲಿ 'ಬುಲ್‌ಬುಲ್‌' ಕೂಡ ಒಂದು. ನಾಯಕ, ನಾಯಕಿಯ ತಂದೆ ಬಹಳ ವರ್ಷಗಳ ನಂತರ ಹಳೆಯ ಸ್ನೇಹಿತರೆಲ್ಲಾ ಮತ್ತೆ ಒಟ್ಟಾಗಿ ಸೇರುವ ಯೋಜನೆ ಹಾಕುತ್ತಾರೆ. ಹಾಗಂತ ಇದು 'ಚಾರ್‌ಮಿನಾರ್‌' ಅಲ್ಲ. ಫ್ಲ್ಯಾಷ್‌ಬ್ಯಾಕ್‌ನಲ್ಲಿ ನಾಯಕಿಗೆ ಶಾರ್ಟ್ ಟರ್ಮ್ ಮೆಮೊರಿ ಲಾಸ್ ಸಮಸ್ಯೆ. ಹಾಗಂತ ಇದು 'ಸಿಂಪಲ್ಲಾಗೊಂದ್ ಲವ್‌ಸ್ಟೋರಿ' ಕೂಡ ಅಲ್ಲ. ತೆಲುಗಿನ ಡಾರ್ಲಿಂಗ್ ಚಿತ್ರದ ರಿಮೇಕು. ನಾಯಕ, ನಾಯಕಿಯ ಫ್ಯಾಮಿಲಿ ಅಫೈರ್. ಅಲ್ಲಿ ನಾಯಕ ಎಲ್ಲರ ಮನವೊಲಿಸಿ ನಾಯಕಿಯನ್ನು ಗೆಲ್ಲುವ ಸ್ಟೋರಿ. ಆದರೆ, ನಾಯಕ ಹೇಳುವ ಫ್ಲ್ಯಾಷ್‌ಬ್ಯಾಕ್ 'ಸುಳ್ಳೇ ಸುಳ್ಳು' ಎನ್ನುವಂಥದ್ದಾದ್ದರಿಂದ ಒಂದು ಲೆಕ್ಕದಲ್ಲಿ 'ಬುಲ್‌ಬುಲ್‌' ಅನ್ನು 'ಕಾಕ್ ಅಂಡ್ ಬುಲ್ ಸ್ಟೋರಿ' ಎನ್ನಲಡ್ಡಿಯಿಲ್ಲ. ಅಲ್ಲದೆ, ನಾಯಕ ಹೇಳುವ ಕಟ್ಟು ಕತೆಯಲ್ಲಿ ನಾಯಕಿಯ ಕಾರು ಎರಡು ಸಲ 'ಗೂಳಿ'ಗೆ ಡಿಕ್ಕಿ ಹೊಡೆಯುವುದರಿಂದ 'ಬುಲ್‌'ಬುಲ್ ಎಂಬ ಹೆಸರು ಸಾರ್ಥಕ. ಈ ಕಾಕ್ ಅಂಡ್ ಬುಲ್ ಸ್ಟೋರಿ 'ಫಿಫ್ಟಿ ಫಸ್ಟ್ ಡೇಟ್ಸ್‌' ಎಂಬ ವಿದೇಶಿ ಚಿತ್ರದಿಂದ ಎತ್ತಿಕೊಂಡಿದ್ದು ಎಂಬ ಆಪಾದನೆ ಬಂದರೆ, ನಾಯಕನ ಬಾಯಲ್ಲೇ, 'ನೆನ್ನೆ ರಾತ್ರಿ ಯಾವುದೋ ಇಂಗ್ಲಿಷ್ ಸಿನಿಮಾ ನೋಡಿದ್ದೆ, ಅದಕ್ಕೆ ಒಂದಿಷ್ಟು ಮಸಾಲಾ ಸೇರಿಸಿ ಹಂಗ್ ಬಿಟ್ಟೆ' ಎಂಬ ಸ್ಪಷ್ಟೀಕರಣ ಲಭ್ಯವಾಗುತ್ತದೆ. ಆದರೆ, ಸಿನಿಮಾ ಸೃಷ್ಠೀಕರಣದ ವಿಷಯಕ್ಕೆ ಬಂದರೆ ಈ ಭಾಗ ಚಿತ್ರದ ಸುಮಾರು ಶೇಕಡಾ 50ರಷ್ಟಿದೆ. ಹಾಗಾಗಿ, 100 ಪುಟದ ಪುಸ್ತಕ ಬರೆಯಲು ಹೊರಟವರು, ಯಾವುದೋ ಪುಸ್ತಕದಲ್ಲಿ ಹೀಗಿತ್ತು ಎಂದು ಹೇಳುತ್ತ ಆ ಇನ್ನೊಂದು ಪುಸ್ತಕದ 50 ಪುಟಗಳನ್ನು ತಮ್ಮ ಪುಸ್ತಕದಲ್ಲೂ ಬಳಸಿಕೊಂಡರೆ ಹೇಗೆ ಎಂಬುದು ಕೇಳಬಹುದಾದ ಪ್ರಶ್ನೆ. ಇವೆಲ್ಲವನ್ನೂ ಬಿಟ್ಟು ನೋಡಿದರೆ, ಬುಲ್‌ಬುಲ್ ಅಭಿಮಾನಿಗಳನ್ನು ದೃಷ್ಠಿಯಲ್ಲಿಟ್ಟುಕೊಂಡು ಮಾಡಿರುವ ಚಿತ್ರ. ಒಂದು ದೃಶ್ಯದಲ್ಲಿ ವಿಲನ್ ಅಡ್ಡಕ್ಕೆ ಬಂದು ತನ್ನ ಮಗನನ್ನು ಬಿಟ್ಟು 'ಹೊಡಿ ಮಗ ಹೊಡಿ ಮಗ' ಎನ್ನುತ್ತಾನೆ ಅಪ್ಪ. ಅಪ್ಪ, ಫುಲ್ ಪರ್ಮಿಷನ್ ಕೊಟ್ಟಿದ್ದಾರೆ, ಈಗ ನಿಮ್ಮನ್ನು ಹೆಂಗೆಲ್ಲಾ ಹೊಡೀತೀನಿ ನೋಡಿ ಎಂದು ಫೈಟ್‌ಗೆ ಮುನ್ನ ನಿಂತಲ್ಲೇ ಡ್ಯಾನ್ಸ್ ಮಾಡುತ್ತಾನೆ ನಾಯಕ. ಅಭಿಮಾನಿಗಳೇನೋ ಕುಣಿದಾಡುತ್ತಾರೆ. ಆದರೆ ಅಲ್ಲದವರು, ಕುಂತಲ್ಲೇ ಚಡಪಡಿಸುತ್ತಾರೆ. ಆದರೆ ರಂಜನೆಯೇ ಪ್ರಧಾನವಾಗಿರುವ ಚಿತ್ರಕತೆಯಲ್ಲಿ ಇವೆಲ್ಲ ಸಹಜ. ಹಾಗಾಗಿ, ರಿಮೇಕ್ ಸ್ಪೆಷಲಿಸ್ಟ್ ಎಂ.ಡಿ.ಶ್ರೀಧರ್ ಅವರ ಚುರುಕಾದ ಚಿತ್ರಕತೆ, ಮುಂದೇನಾಗುತ್ತದೆ ಎಂಬ ಕುತೂಹಲವಿಲ್ಲದಿದ್ದರೂ ಕವಿರಾಜ್‌ರ ಕಚಗುಳಿ ಇಡುವ ಸಂಭಾಷಣೆ, ವೆರೈಟಿ ಇರುವ ಪಾತ್ರಗಳು ಮತ್ತು ಹರಿಕೃಷ್ಣರ ಹಾಡು ಮತ್ತು ಫೈಟ್‌ಗಳ ಮೂಲಕ 'ಬುಲ್‌ಬುಲ್‌' ನೋಡಿ 'ಕಬೂಲ್ ಹೈ' ಎನ್ನಲಡ್ಡಿಯಿಲ್ಲ. ದರ್ಶನ್ ಸಾಹಸ ದೃಶ್ಯಗಳಷ್ಟೇ ಲೀಲಾಜಾಲವಾಗಿ ಅಭಿನಯಿಸಿದ್ದಾರೆ. ಅಂಬರೀಶ್ ಅವರದ್ದು ಸಾಹಸೀ ಮುಖಭಾವದ ಸಧೃಢ ಅಭಿನಯ. ನಾಯಕಿ ರಚಿತಾ ರಾಂ ಸೌಂದರ್ಯಕ್ಕಿಂತ ಅಭಿನಯದಿಂದ ಗಮನಸಳೆಯುತ್ತಾರೆ. ಅಶೋಕ್, ಟೆನ್ನಿಸ್ ಕೃಷ್ಣ, ಶರತ್ ಲೋಹಿತಾಶ್ವ, ಶರಣ್, ಸಾಧು ಕೋಕಿಲಾ, ರಮೇಶ್‌ಭಟ್ ಅವರಿಗೆ ಬುಲ್‌ಬುಲ್ ಕುಟುಂಬದ ಕಷ್ಟಸುಖದಲ್ಲಿ ಪಾಲಿದೆ. ಹರಿಕೃಷ್ಣ ಸಂಗೀತದ 'ಹೂ ಚೆಂಡು ಹುಡುಗಿ', 'ಜಗದಲ್ಲಿರೋ ಹುಚ್ಚರಲಿ','ಬುಲ್ ಬುಲ್ ಮಾತಾಡಕಿಲ್ವಾ?' ಹಾಡುಗಳು ಚಿತ್ರಕ್ಕೆ 'ರೆಡ್‌ಬುಲ್‌'ನಂತೆ ಎನರ್ಜಿ ತುಂಬಿವೆ. - ಹರಿ