ಸೂರಿ ದುನಿಯಾ ಮತ್ತು ಶಿವರಾಜ್‌ಕುಮಾರ್ ರಸ್ತೆ - ಅದು ಚಿತ್ರದ ಟೈಟಲ್ ಕಾರ್ಡ್. ಮಳೆಯಲ್ಲಿ ನೆಂದ ಕಾರಿನ ಗ್ಲಾಸ್ ಅನ್ನು ವೈಪರ್ ಒರೆಸುತ್ತಿರುತ್ತದೆ. ಅದು ತನ್ನ ಕೈಗಂಟಿದ ರಕ್ತವನ್ನು ಒರೆಸಿಕೊಳ್ಳಲು ಯತ್ನಿಸುವ ರೌಡಿಯ ಕಥೆ ಎಂಬುದರ ಸಂಕೇತವೇ? - ಕಡ್ಡಿಪುಡಿಯ ಫಸ್ಟ್‌ನೈಟ್‌ಗೆ ಬೆಡ್‌ರೂಮ್ ಸಿಂಗರಿಸುತ್ತಿರುವ ಗೆಳೆಯರ ಮಾತುಕತೆ. ಕಡ್ಡಿಪುಡಿಗೆ ಇದು ನಿಜವಾಗ್ಲೂ ಫಸ್ಟ್‌ನೈಟಾ? ಹೂ ಕಣೋ. ಮತ್ತೆ, ಅವತ್ತು 'ಅಲ್ಲೆಲ್‌ಗೋ' ಹೋಗ್‌ಬಂದಿದ್ದ. ಹೋಗಿದ್ದ ನಿಜ, ಆದ್ರೆ ಏನೂ ಮಾಡಿರಲ್ಲ. ನಂಗೇನೋ ಡೌಟಪ್ಪ... ರೌಡಿಯೊಬ್ಬ ನಾನು ರೌಡಿಸಂ ಬಿಟ್ಟಿದ್ದೇನೆ ಎಂದರೂ ಈ ಸಮಾಜ ನಂಬುವುದಿಲ್ಲ ಎಂಬುದನ್ನು ಈ ದೃಶ್ಯ ಕೂಡ ಸೂಚ್ಯವಾಗಿ ಹೇಳುತ್ತಿದೆಯೇ? ಇಂಥ ಸಂಗತಿಗಳು ನಿರ್ದೇಶಕ ಸೂರಿಗೆ ಅರಿವಿದ್ದು ಮಾಡಿದ್ದೋ ಅಥವಾ 'ಒಂದು ಒಳ್ಳೆಯ ಸಿನಿಮಾ ಮಾಡುವಂಥದ್ದಲ್ಲ, ತಾನಾಗೇ ಆಗುವಂಥದ್ದು' ಎನ್ನುವಂತೆ ಆಗಿದ್ದೋ ಗೊತ್ತಿಲ್ಲ. ಆದರೆ, ಅದೇನೇ ಇರಲಿ. ಒಂದಂತೂ ನಿಜ. ಆನಂದ್ ಎಂಬ ಹೆಸರು ಶಿವರಾಜ್‌ಕುಮಾರ್ ಪಾಲಿಗೆ ಮತ್ತೆ ಮ್ಯಾಜಿಕ್ ಮಾಡಿದೆ. ಶಿವರಾಜ್‌ಕುಮಾರ್ ಅವರನ್ನು ಯಾವ ನಿರ್ದೇಶಕರೂ ಸರಿಯಾಗಿ ಬಳಸಿಕೊಳ್ಳುತ್ತಿಲ್ಲ ಎಂಬ ಇತ್ತೀಚಿನ ದಿನಗಳ ನಿರಾಸೆಗೆ ತೆರೆ ಬಿದ್ದಿದೆ. 'ಕಡ್ಡಿಪುಡಿ' ಕೂಡ ಒಂದು ರೌಡಿಸಂ ಚಿತ್ರವಾದರೂ ಇಂಥ ಚಿತ್ರಗಳು ಬೇಕಾದಷ್ಟು ಬಂದಿವೆ ಎಂದರೆ ಅದು ಬಾಲಿಶತನವಾಗುತ್ತದೆ. ರೌಡಿಸಂ ಚಿತ್ರಗಳಲ್ಲಿ 'ಓಂ' ಗಿಂತಲೂ ಬಹಳಷ್ಟು ಹೆಜ್ಜೆ ಮುಂದಿರುವ 'ಕಡ್ಡಿಪುಡಿ'ಯನ್ನು ಕನ್ನಡದ 'ದಿ ಬೆಸ್ಟ್ ರೌಡಿಸಂ ಚಿತ್ರ' ಎಂದರೆ ಅತಿಶಯೋಕ್ತಿ ಅಲ್ಲ. ಅದರ ಜೊತೆಗೆ, ಸೂರಿಯ ಇದುವರೆಗಿನ ಬೆಸ್ಟ್ ಸಿನಿಮಾ ಎಂದರೂ ಅಷ್ಟೇ. ವಿಶೇಷ ಎಂದರೆ ಕ್ಲಾಸ್ ಮತ್ತು ಮಾಸ್ ಪ್ರೇಕ್ಷಕರಿಬ್ಬರಿಗೂ ಇದು 'ಮಸ್ಟ್ ವಾಚ್‌' ಸಿನಿಮಾ. ವಿಕೆಟ್ ಕೀಪರ್, ಫಸ್ಟ್ ಸ್ಲಿಪ್‌ನತ್ತ ಹೋಗುತ್ತಿರುವ ಚೆಂಡನ್ನು ಹಾರಿ ಒಂದೇ ಕೈಲಿ ಹಿಡಿಯುವಂತೆ ಲಾಂಗ್ ಅನ್ನು ಕ್ಯಾಚ್ ಹಿಡಿಯುವ ಶಿವಣ್ಣ, ಅಭಿಮಾನಿಗಳನ್ನು ಹುಚ್ಚೆಬ್ಬಿಸುತ್ತಾರೆ. ರಾಧಿಕಾ ಪಂಡಿತ್ ಲಾಂಗ್ ಹಿಡಿದು ಶಿವಣ್ಣನನ್ನು ಅಟ್ಟಿಸಿಕೊಂಡು ಹೋಗುವ ದೃಶ್ಯದ ಕೊನೆಯಲ್ಲಿ ಕತೆಯ ಕೊಂಡಿ ಸೇರಿಕೊಳ್ಳುತ್ತದೆ. ಕ್ಯಾಷುಯಲ್ ಆಗಿ ಬಗ್ಗಿ ನೆಲದ ಮೇಲೆ ಬಿದ್ದಿದ್ದ ಲಾಂಗ್ ಅನ್ನು ಶಿವಣ್ಣ ಕೈಗೆತ್ತಿಕೊಳ್ಳುತ್ತಲೇ, ತನ್ನನ್ನು ಹೊಡೆಯಲು ಸ್ಕೆಚ್ ಹಾಕಿ ಬಂದಿದ್ದ ರೌಡಿಗಳ ಆಟೋ ಸದ್ದು ಕೇಳಿ ಹಿಂದೆ ತಿರುಗುತ್ತಾರೆ. ಕಡ್ಡಿಪುಡಿ ಕೈಗೆ ಮತ್ತೆ ಮಚ್ಚು ಬಂದಿದೆ ಎಂದುಕೊಂಡೋ ಅಥವಾ ನಾವು ಅಟ್ಯಾಕ್ ಮಾಡುವುದು ಕಡ್ಡಿಪುಡಿಗೆ ಗೊತ್ತಿದೆ ಎಂದುಕೊಂಡೋ ಅವರು ಅಲ್ಲಿಂದ ಕಂಬಿ ಕೀಳುತ್ತಾರೆ. ಇಲ್ಲಿ ಸೂರಿ ಸಂಯಮ ಕೆಲಸ ಮಾಡಿದೆ. ಕಡ್ಡಿಪುಡಿಯನ್ನು ಅರೆಸ್ಟ್ ಮಾಡುವ ಪೊಲೀಸರು ಮೆಜೆಸ್ಟಿಕ್, ಅವಿನ್ಯೂ ರೋಡ್ ಮಧ್ಯದಲ್ಲಿ ಅವನ ಕೈಗೆ ಲಾಂಗ್ ಕೊಟ್ಟು ಕೆಳಗಿಳಿಸಿ, ಜನರ ಮಧ್ಯೆ ರಸ್ತೆಯಲ್ಲಿ ನಡೆದುಕೊಂಡು ಹೋಗುವಂತೆ ಮಾಡಿ ಜನರ ಮುಂದೆ ಅವನು ಈಗಲೂ ರೌಡಿಯೇ ಎಂದು ನಂಬಿಸುತ್ತಾರೆ. ಇಂಥ ತಾಜಾ ದೃಶ್ಯಗಳನ್ನು ನೋಡಿದಾಗ, ಇದು ಸೂರಿ ದುನಿಯಾನಾ ಅಥವಾ ಶಿವರಾಜ್‌ಕುಮಾರ್ ರಸ್ತೆಯಾ ಎಂಬ ಅನುಮಾನ ಬಂದರೆ, ಅದು ಎರಡೂ ಹೌದು. ಚಿತ್ರದ ಕತೆ ಏನು ಎಂದು ಕಡ್ಡಿಪುಡಿ ನೋಡಿದ ಯಾರನ್ನೇ ಕೇಳಿದರೂ ರೌಡಿಸಂ ಬಿಟ್ಟಿರುವ ರೌಡಿಯ ಕಥೆ ಎಂದಷ್ಟೇ ಹೇಳಲು ಸಾಧ್ಯ. ಏಕೆಂದರೆ ಚಿತ್ರದ ಉಳಿದ ಕಥೆ ಇಲ್ಲಿ ಅಷ್ಟು ಸುಲಭಕ್ಕೆ ನಿಲುಕುವುದಿಲ್ಲ. 'ನಮ್ಮದು ಸ್ಕ್ರೀನ್ ಪ್ಲೇ ಬೇಸ್ಡ್ ಸಿನಿಮಾ' ಎಂದು ಹೇಳುವವರಿಗೆ ಕಡ್ಡಿಪುಡಿಯ ಮೂಲಕ ಒಂದು ಅತ್ಯುತ್ತಮ ಉದಾಹರಣೆಯಾಗಿದ್ದಾರೆ ಸೂರಿ. ಎಲ್ಲವೂ ತನ್ನಷ್ಟಕ್ಕೆ ತಾನೇ ಆಗುತ್ತಿದೆ ಎನಿಸುವಂತೆ ಮಾಡಿರುವುದು ಸೂರಿ ಮತ್ತು ರಾಜೇಶ್‌ರ ಚಿತ್ರಕಥೆಯ ವಿಶೇಷ. ಚಿತ್ರದ ಕ್ಲೈಮ್ಯಾಕ್ಸ್ ಕೂಡ ಅತಿ ಸಹಜ. ಅಲ್ಲದೆ, ಫೈಟ್‌ಗಳಲ್ಲೂ ನಾಯಕ ರೋಪ್ ಹಾಕಿಕೊಂಡು ಹಾರಾಡಿ, ಹೊಡೆದಾಡುವುದಿಲ್ಲ. ನಾಯಕ, ನಾಯಕಿಗೆ 'ವಿದೇಶ'ದಲ್ಲಿ ಡ್ರೀಮ್ ಸಾಂಗ್ ಇಲ್ಲ. ಅದೇ ಕಾರಣಕ್ಕೆ 'ಡ್ರೀಮ್ ಕಮ್ ಟ್ರೂ' ಎನ್ನುವಂಥ ಅಪ್ಪಟ 'ಸ್ವದೇಶಿ' ಚಿತ್ರವಾಗಿದೆ ಕಡ್ಡಿಪುಡಿ. ಹಾಗೆ ಮಾಡಿದ್ದಿದ್ದರೆ, ಹೀಗೆ ಮಾಡಿದ್ದಿದ್ದರೆ ಕಡ್ಡಿಪುಡಿ ಒಳ್ಳೆಯ ಸಿನಿಮಾ ಆಗುತ್ತಿತ್ತೇನೋ ಎಂಬುದೆಲ್ಲಾ ಸಿನಿಮೀಯ. ಹೀಗಿದ್ದೇ ಅದು ಅದ್ಭುತ ಸಿನಿಮಾ ಆಗಿದೆ ಎನ್ನುವುದು ವಾಸ್ತವ. ಸಾಧಾರಣ ಚಿತ್ರಗಳನ್ನೂ ಅಸಾಧಾರಣ ಎನಿಸುವಂತೆ ಮಾಡುವ ಶಿವರಾಜ್‌ಕುಮಾರ್, ಕಡ್ಡಿಪುಡಿಯ ನಂ.1 ಕಿಕ್. ಕೈಯಲ್ಲಿ ಲಾಂಗ್ ಇರಲಿ, ಇಲ್ಲದಿರಲಿ, ಪ್ರತಿ ಫ್ರೇಮ್‌ನಲ್ಲೂ ಸ್ಪೆಷಲ್ ಎನಿಸುವ ಅವರ ಅಭಿನಯದಲ್ಲಿ 'ಅಷ್ಟಿಲ್ಲದೆ ನೂರು ಸಿನಿಮಾ ಮಾಡೋಕಾಗ್ತಿತ್ತಾ' ಎಂಬ ಖದರ್ ಕಾಣುತ್ತದೆ. ಈಕೆ ಅದೆಲ್ಲಿಂದ ಅಭಿನಯ ಕಲಿತು ಬಂದಳೋ ಎಂಬ ಅಚ್ಚರಿ ಹುಟ್ಟಿಸುವುದು ರಾಧಿಕಾ ಪಂಡಿತ್. ಅದು, ಪ್ರಥಮ ರಾತ್ರಿಯ ಮಾತುಕತೆ ಇರಲಿ, ಹಾಡೊಂದರಲ್ಲಿ ಶಿವಣ್ಣನನ್ನು ಅನುಕರಿಸುವ ಮಾತಿಲ್ಲದ ಕತೆ ಇರಲಿ, ರಾಧಿಕಾ ರೋಮಾಂಚನ ಮೂಡಿಸುತ್ತಾರೆ. ರಂಗಾಯಣ ರಘು ಸೂರಿ ಸಿನಿಮಾಗಳ ತಮ್ಮ ಖದರ್ ಮುಂದುವರೆಸಿದ್ದಾರೆ. ಇಂಥ ಪಾತ್ರ ಸಿಕ್ಕಿದ್ದಕ್ಕೋ ಏನೋ ಅನಂತ್‌ನಾಗ್ ಕೂಡ ಎನರ್ಜೆಟಿಕ್ ಆಗಿ ಕಾಣುತ್ತಾರೆ. ಮಾಮೂಲಿ ಪಾತ್ರವಾದರೂ ತಮ್ಮೊಳಗೊಬ್ಬ ಹೊಸ ನಟ ಕಾಣಿಸುವಂತೆ ಮಾಡಿರುವುದು ಶರತ್ ಲೋಹಿತಾಶ್ವ. ಅವಿನಾಶ್ ಕೂಡ ತಮ್ಮ ಎಂದಿನ ಸಂಭಾಷಣೆಯ ಶೈಲಿ ಬಿಟ್ಟು ಹೊಸದಾಗಿ ಕೇಳಿಸುತ್ತಾರೆ. ಇತ್ತೀಚೆಗೆ ಫೀನಿಕ್ಸ್‌ನಂತೆ ಕಾಣುತ್ತಿರುವ ರಾಜೇಶ್‌ಗೆ ಅಭಿನಯದಲ್ಲೂ ಪುಲ್ ಮಾರ್ಕ್ಸ್. ನಾಯಿಚಂದ್ರು, ರೇಣುಕಾಪ್ರಸಾದ್ ಕೂಡ ಸೂರಿ ಗರಡಿಯಲ್ಲಿ ಮಿನುಗಿದ್ದಾರೆ. ಐಂದ್ರಿತಾ ರೇ ಬೆನ್ನಿನ ನೋಟಗಳು ಕಡ್ಡಿಪುಡಿಯ ಆ್ಯಡೆಡ್ ಫ್ಲೇವರ್. ಟೈಟಲ್ ಕಾರ್ಡ್ ಮತ್ತ್ತು ಅದರ ನಂತರದ ಕೆಲವು ದೃಶ್ಯಗಳಲ್ಲೇ ಛಾಯಾಗ್ರಾಹಕ ಕೃಷ್ಣ, ತಮ್ಮ ಮ್ಯಾಜಿಕ್ ಶುರುವಾಗಿದೆ ಎಂಬ ಸ್ಪಷ್ಟ ಸೂಚನೆ ನೀಡುತ್ತಾರೆ. ಇಂಥ ಛಾಯಾಗ್ರಾಹಕರೂ ನಮ್ಮಲ್ಲೂ ಇದ್ದಾರೆ ಎಂಬ ಹೆಮ್ಮೆಗೆ ಕಾರಣವಾಗುವ ಕೃಷ್ಣ ಅವರಿಗೆ ಹ್ಯಾಟ್ಸ್ ಆಫ್. ಹರಿಕೃಷ್ಣ ಸಂಗೀತದ ಎಲ್ಲ ಹಾಡುಗಳೂ ಮತ್ತು ಆರಂಭವಾದ ರೀತಿಯಲ್ಲೇ ಸಿನಿಮಾವನ್ನು ಮುಗಿಸುವ ರೀರೆಕಾರ್ಡಿಂಗ್ ಕಡ್ಡಿಪುಡಿಯ ಇನ್ನೊಂದು ವೈಭವ. ಸೂರಿ, ರಾಜೇಶ್, ಮಂಜು ಪ್ರಭಾಸ್ ಅವರ ಸಂಭಾಷಣೆ ಕ್ಲಾಸ್ ಮತ್ತು ಮಾಸ್‌ನ ಬೆಸ್ಟ್ ಕಾಂಬಿನೇಶನ್. - ಹರಿ