ಕತ್ಲಲ್ಲಿ ಹುಡುಗೀಗೆ ಪಿಜ್ಜಾನ ತಿನಿಸೋಕೆ ಯಾವತ್ತು ಹೋಗ್‌ಬಾರ್ದು ರೀ ಇದು ರಿಮೇಕ್ ಚಿತ್ರ ಆಗಿದ್ದರೂ 'ಪ್ರಶಾಂತ್ ರಾಜ್ ಸಿನಿಮಾ' ಎಂದಿದ್ದ 'ವಿಜಲ್‌' ಚಿತ್ರದ ನಿರ್ದೇಶಕರ ಮಾತು, ಸಿನಿಮಾ ನೋಡುತ್ತಿದ್ದಂತೆ ಸುಳ್ಳಾಗುತ್ತದೆ. ರಿಮೇಕ್ ಎಂಬ ಶಾರ್ಟ್ ಕಟ್‌ನಲ್ಲಿ ತಮಿಳಿನ 'ಪಿಜ್ಜಾ' ಚಿತ್ರವನ್ನು ಒಂದಿಷ್ಟು ಕಟ್ ಶಾರ್ಟ್ ಮಾಡಿ, ವಿಜಲ್ ಹೊಡೆದಿದ್ದಾರೆ ಪ್ರಶಾಂತ್. ರಿಮೇಕ್ ಮಾಡೊಲ್ಲ ಎಂದು ಪಣತೊಟ್ಟ ನಿರ್ದೇಶಕನೊಬ್ಬನನ್ನು ರಿಮೇಕ್ ಮಾಡುವಂತೆ ಟೆಂಪ್ಟ್ ಮಾಡುವಂಥ 'ಸ್ಪೆಷಲ್ ಪಿಜ್ಜಾ' ಏನಲ್ಲ ಇದು. ಹಾಗಂತ, 'ಪಿಜ್ಜಾ ಬೇಸ್‌' ತಮಿಳಿನದ್ದಾದರೂ, ಹಳಸಿದ ಚಿತ್ರಾನ್ನವೂ ಆಗಿಲ್ಲ. ತಮಿಳಿನ ಪಿಜ್ಜಾಧಾರಿತ 'ವಿಜಲ್‌' ಚಿತ್ರದಲ್ಲಿ 'ಹಟ್‌'ಕೇ ಎನ್ನುವಂಥ ಕತೆಯಿದೆ, ದೆವ್ವ, ಭೂತದಂಥ 'ಡಾಮಿನೆಂಟ್‌' ಫ್ಯಾಕ್ಟರ್‌ಗಳಿವೆ, 'ಕಾರ್ನರ್‌' ಸೀಟಿನಲ್ಲಿ ಕೂತವರನ್ನೂ ಸೀಟಿನ ಕಾರ್ನರ್‌ನಲ್ಲಿ ಕೂರಿಸುವ ದೃಶ್ಯಗಳಿವೆ, ಆದರೆ ಅದು, ಯಾವಾಗ ಎದ್ದು ಹೋಗುತ್ತೇವೋ ಎಂಬ ಆತುರಕ್ಕೇನಲ್ಲ. ಪಿಜ್ಜಾ ಬಾಯ್ ಒಬ್ಬ ಭೂತ ಬಂಗಲೆಯೊಂದಕ್ಕೆ ಡೆಲಿವರಿ ಕೊಡಲು ಹೋಗುತ್ತಾನೆ. ಆ ಮನೆಯಲ್ಲಿದ್ದ್ದ ಹೆಣ್ಣು ಬಿಲ್ ಕೊಡುವ ವೇಳೆ, ಇವನ ಕಡೆ ತಿರುಗಿ ರೊಮ್ಯಾಂಟಿಕ್ ಬಿಲ್ಡ್ ಅಪ್ ಕೂಡ ಕೊಡುತ್ತಾಳೆ. ಆ ಸಮಯದಲ್ಲಿ ಕರೆಂಟ್ ಹೋಗಿ, ಆಕೆ ಸಾವಿರ ರುಪಾಯಿಗೆ ಛೇಂಜ್ ಕೇಳುತ್ತಾಳೆ. ಅಲ್ಲಿಯವರೆಗೂ ನೀರಸ ಕಥೆ ನೋಡಿ ಸಾಕಾಗಿ ಪ್ರೇಕ್ಷಕ ಕೂಡ ಛೇಂಜ್ ಕೇಳುತ್ತಾನೆ. ಮತ್ತದು ಸಿಗುತ್ತದೆ. ಚಿಲ್ಲರೆ ತರಲು ಆಕೆ, ಕ್ಯಾಂಡಲ್ ಹಿಡಿದು ಮಹಡಿಯ ಮೇಲೆ ಹೋಗುತ್ತಾಳೆ. ಆಗ ಬಾಗಿಲ ಬಳಿ ನಿಂತಿದ್ದ ನಾಯಕನ ಹಿಂದೆ, ಹೊರಗಿನಿಂದ ಡೋರ್ ಲಾಕ್ ಆಗುತ್ತದೆ. ಅಲ್ಲಿಂದ ಮುಂದೆ, ದೆವ್ವಗಳಿಂದ ಲಾಕ್ ಹಾಕಿಸಿಕೊಂಡು ರುಬ್ಬಿಸಿಕೊಳ್ಳುವ ಅಂದರ್ ಬಾಹರ್ ಆಟ, ಪರದಾಟ ಅವನದ್ದು. ಅಲ್ಲಿಂದ ಸುಮಾರು ಅರ್ಧಗಂಟೆ ಥಿಯೇಟರ್ರಲ್ಲೂ ಕತ್ತಲೆ, ಸ್ಕ್ರೀನ್ ಮೇಲೂ ಕತ್ತಲೆ. ಮನೆಯಲ್ಲಿ ಕರೆಂಟ್ ಹೋದಮೇಲೆ ಕಥೆ ಕತ್ತಲಲ್ಲೇ 'ನಡೆಯುತ್ತದೆ'. ಕತ್ತಲಾದ್ದರಿಂದ ಸಹಜವಾಗಿ ಅಲ್ಲಲ್ಲಿ ಎಡವುತ್ತದೆ. ಕೊನೆಗೆ, ನಾಯಕನಿಗೆ, 'ಕತ್ಲಲ್ಲಿ ಹುಡುಗೀಗೆ ಪಿಜ್ಜಾನ ತಿನಿಸೋಕೆ ಯಾವತ್ತೂ ಹೋಗ್‌ಬಾರ್ದು ರೀ' ಎನ್ನುವಂಥ ಪರಿಸ್ಥಿತಿ. ಮೊದಲರ್ಧದಲ್ಲಿ ಪುರಸೊತ್ತಾಗಿ ನಿರೂಪಣೆ ಮಾಡಿದಂತೆ ಕಾಣುವ ನಿರ್ದೇಶಕ ಪ್ರಶಾಂತ್ ರಾಜ್ ಚಿತ್ರದ ದ್ವಿತೀಯಾರ್ಧ ಸೇರಿದಂತೆ ಕ್ಲೈಮ್ಯಾಕ್ಸ್‌ನಲ್ಲೂ 20 ನಿಮಿಷದಲ್ಲಿ ಡೆಲಿವರಿ ಆಗಬೇಕು ಎಂಬ ಪಿಜ್ಜಾ ಬಾಯ್‌ನ ಅವಸರ ತೋರಿಸುತ್ತಾರೆ. ಕೊನೆಯಲ್ಲಿ ನಾಯಕ ಅಲ್ಲಿಯವರೆಗಿನ ಕಥೆಯ ಬಗೆಗಿನ ಸತ್ಯ ಹೇಳುತ್ತಾನೆ. ಆದರೆ ಅದರ ಕಂಟೆಂಟ್ ಮಾತ್ರ ಸುಳ್ಳು. ಆ ಲೆಕ್ಕದಲ್ಲಿ, ಸತ್ಯಘಟನೆ ಆಧಾರಿತ ಚಿತ್ರಗಳ ನಡುವೆ ವಿಷಲ್ ಚಿತ್ರವನ್ನು ಸುಳ್ಳು ಘಟನೆ ಆಧಾರಿತ ಚಿತ್ರ ಎನ್ನಬಹುದು. ಕತ್ತಲಲ್ಲಿ ನಡೆಯುವ ಭಾಗವೇ ನಿಜವಾದ ವಿಜಲ್ ಬ್ಯೂಟಿ. ಉಳಿದಂತೆ ಚಿತ್ರದ ಆರಂಭದಿಂದ ಮಧ್ಯಂತರದವರೆಗೂ ಇರುವ ನಾಯಕಿ ಪ್ರಣಿತಾರನ್ನು ಬಿಟ್ಟರೆ ವಿಷ್ಯುಯಲ್ ಬ್ಯೂಟಿಗೆ ಹೆಚ್ಚು ಅವಕಾಶವಿಲ್ಲ. ಈ ಮಧ್ಯೆ, ಡೆಲಿವರಿ ಬಾಯ್, ಅಂಗಡಿಯಲ್ಲಿ ಕೊಟ್ಟ ಡೆಲಿವರಿ ಅಡ್ರೆಸ್ ಬಿಟ್ಟು ಭೂತದ ಬಂಗಲೆಗೆ ಯಾಕೆ ಹೋದ ಎನ್ನುವ ಪ್ರಶ್ನೆ ಪ್ರೇಕ್ಷಕನನ್ನು ದೆವ್ವಕ್ಕಿಂತ ಜಾಸ್ತಿ ಕಾಡುತ್ತದೆ. ಕತೆಯಲ್ಲಿ ಏನೂ ಆಗದಿದ್ದರೂ ದೆವ್ವದ ಚಿತ್ರಕ್ಕೆ ಚಿತ್ರಮಂದಿರದಲ್ಲಿ ಪ್ರಶಾಂತ ವಾತಾವರಣ ಇರಬಾರದು ಎಂಬ ಕಾರಣಕ್ಕೆ, ಕಥೆಯಲ್ಲಿ ಕಾರಣವಿಲ್ಲದೆ ಭುಸುಗುಟ್ಟುವ ರೀರೆಕಾರ್ಡಿಂಗ್, ಕಿರಿಕಿರಿ ಮಾಡುತ್ತದೆ. ಇದೆಲ್ಲ ಸೇರಿ, ವಿಜಲ್ ಕೇವಲ ಒಂದು ಸಾಧಾರಣ ಶಾರ್ಟ್ ಫಿಲ್ಮ್‌ನಂತೆ ಭಾಸವಾಗುತ್ತದೆ ಎಂದರೆ ಅದಕ್ಕೆ ಚಿತ್ರದ ಅವಧಿ ಕಾರಣವಲ್ಲ. ಆದರೆ, ಶಾರ್ಟ್ ಆಗಿರೋದೆಲ್ಲಾ ಸ್ವೀಟ್ ಅಲ್ಲ. ಯಾಕಂದ್ರೆ ಇದು ಪಿಜ್ಜಾ. ಚಾಕೊಲೇಟ್ ಹೀರೋ ಎನಿಸಿಕೊಳ್ಳದಿದ್ದರೂ ಪಿಜ್ಜಾ ಹೀರೋ ಆಗೋಣ ಎಂಬ ಹುಮ್ಮಸ್ಸಿನಲ್ಲಿ, ಚಿರಂಜೀವಿ ಸರ್ಜಾ ಪಿಜ್ಜಾ ಡೆಲಿವರಿ ಬಾಯ್ ಆಗಿದ್ದರೂ ಅವರ ಡೈಲಾಗ್ ಡೆಲಿವರಿ ಮಾತ್ರ ಬದಲಾಗಿಲ್ಲ. ನಾಯಕಿ ಪ್ರಣಿತಾ ಪಿಜ್ಜಾ ಡೆಲಿವರಿ ಬಾಯ್‌ನ ಗೆಳತಿ ಆದ್ದರಿಂದ ಗ್ಲಾಮರ್ ವಿಷಯದಲ್ಲಿ 'ತೂ 'ಚೀಸ್‌' ಬಡೀ ಹೈ ಮಸ್ತ್ ಎನ್ನಬಹುದು'. ಕತ್ತಲು ಮತ್ತು ಬೆಳಕನ್ನು ಸೇರಿಸಿ ಚಿತ್ರಕ್ಕೆ ಎಕ್ಟ್ರ್ಸಾ ಟಾಪಿಂಗ್ಸ್ ಕೊಟ್ಟಿರುವ ಸಂತೋಷ್ ರೈ ಪಾತಾಜೆ ಛಾಯಾಗ್ರಹಣದಲ್ಲಿ ವಿಜಲ್ ಒಂದು 'ಬ್ಲ್ಯಾಕ್ ಅಂಡ್ ಲೈಟ್‌' ಚಿತ್ರವಾಗಿದೆ. ಜೋಶ್ವಾ ಶ್ರೀಧರ್‌ರ 2 ನೀರಸ ಹಾಡುಗಳಿಂದ ವಿಜಲ್ ಸದ್ದು ಕ್ಷೀಣವಾಗಿದೆ. - ಹರಿ