ಟೋಪಿವಾಲ ಅಂತೂ ಅಲ್ಲ... 'ಸಂಪಿಗೆ ಒಂದೂರು, ಮಲ್ಲಿಗೆ ಒಂದೂರು, ನಡುವಲ್ಲಿ ಸೇತುವೆಯು' ಎನ್ನುವ ಟ್ರೈಲರ್ ತೋರಿಸಿದ್ದ ನಿರ್ದೇಶಕ ಅನಿಲ್‌ಕುಮಾರ್ ಟ್ರೈಲರ್‌ಗೂ ಸಿನಿಮಾಕ್ಕೂ ಇರುವ ಸೇತುವೆಯ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಹಾಗಾಗಿ ದಿಲ್‌ವಾಲನ ಕಥೆಯಲ್ಲಿ ಅಸಾಮಾನ್ಯವಾದುದನ್ನು ನಿರೀಕ್ಷಿಸಿದರೆ ಸಾಮಾನ್ಯ ಪ್ರೇಕ್ಷಕನಿಗೆ ನಿರಾಸೆಯಾಗಬಹುದು. ನಿರ್ದೇಶಕರು ಪ್ರೇಮ ಸೇತುವೆಯನ್ನು ಬಳಸಿರುವ ಬಗೆಯನ್ನು ನೋಡುವ ಪ್ರೇಕ್ಷಕನಿಗೆ ಸೇತುವೆಯನ್ನು 'ಬಳಸಿಕೊಂಡು' ಬಂದ ಅನುಭವ ಆಗಬಹುದು. ಆದರೆ ಉಳಿದ ವಿಷಯಗಳಲ್ಲಿ ಅನಿಲ್ ಪ್ರೇಮಿಗಳನ್ನು ಒಂದು ತೀರಕ್ಕೆ ಸೇರಿಸುವ ಪ್ರೇಮಕಥೆಯಲ್ಲಿ ಖಂಡಿತ ತೀರಾ ಮೋಸ ಮಾಡಿಲ್ಲ. ಈ 'ಸೇತುವೆ' ಸ್ಟ್ರಾಂಗ್ ಅಲ್ಲ ನಿಜ. ಆದರೆ, ಅಷ್ಟಕ್ಕೂ ಇದೇನೂ 'ಬ್ರಿಡ್ಜ್‌' ಸಿನಿಮಾ ಅಲ್ಲವಲ್ಲ. ಹಾಗಾಗಿ ಒಂದು ಸರಳವಾದ ಪ್ರೇಮ ಕಥೆಯನ್ನು ತಮ್ಮ 'ಶಕ್ತಿ' ಮೀರಿ ಕಮರ್ಷಿಯಲ್ ಆಗಿ ಹೇಳಿದ್ದಾರೆ ಅನಿಲ್. ನಾಯಕ ಮತ್ತು ಅವನ ಗೆಳೆಯರ ತುಂಟತನ, ನಾಯಕನ ಹೀರೋಯಿಸಂ, ನಾಯಕಿಯ ಮುಗ್ಧತೆ ಎಲ್ಲವನ್ನೂ ಸೇರಿಸಿ ದಿಲ್‌ಗೆ ಹತ್ತಿರ ಆಗುವಂಥ ನಿರೂಪಣೆ ಮಾಡಲಾಗಿದೆ. 'ನಮ್ ಹುಡುಗ್ರು, ನಮ್ ಹುಡುಗೀರು' ಎಂದು ಕರೆಂಟ್ ಇಲ್ಲದ ರಾತ್ರಿಯಲ್ಲಿ ಕ್ಯಾಂಡಲ್ ಹಚ್ಚುವ ಅಪ್ಪ ಅಮ್ಮನ ಮೂಲಕ ಪ್ರೇಮಿಗಳ ಮಾತುಗಳನ್ನೇ ಹೇಳಿಸುವ ಅನಿಲ್‌ಕುಮಾರ್ ನಾಯಕ ನಾಯಕಿಯ ನಡುವೆ ಬೆಳಕಿನ ಅರಮನೆಯನ್ನೇ ಸೃಷ್ಠಿಸಿ ಬೆರಗುಗೊಳಿಸುತ್ತಾರೆ. ಅದರ ಜೊತೆ ತಮ್ಮ ಆ್ಯಕ್ಷನ್ ಅಭಿರುಚಿಯನ್ನು ಬಿಟ್ಟುಕೊಡದ ಅನಿಲ್, ರೋಸ್ ಕೊಡುವಂಥ ಪ್ರೇಮಕಥೆಯಲ್ಲಿ 'ಬಣ್ಣ ಇದೆ, ರುಚಿ ಇದೆ' ಎನ್ನುವುದರ ಜೊತೆಗೆ, 'ಶಕ್ತಿ' ಇದೆ ಎನಿಸುವಂತೆಯೂ ಮಾಡಿದ್ದಾರೆ. ಆದರೆ, ಕೆಲವೊಂದು ಹಳೆಯ ಜೋಕುಗಳು, ಕ್ಲೀಷೆ ಎನಿಸುವ ದೃಶ್ಯಗಳಿಂದಾಗಿ ನೀರಸ ಎನಿಸುವ ಅವಕಾಶಗಳನ್ನೂ ಸೃಷ್ಟಿಸಿದ್ದಾರೆ. ಚಿತ್ರದ ಟ್ರೈಲರ್‌ನಲ್ಲಿ ನಾಯಕಿ ರೈಲಿಗೆ ಸಿಕ್ಕಿ ಸಾಯುವುದನ್ನು ನೋಡಿ 'ಸತ್ ಮೇಲೆ ಇನ್ನೇನು? ಬಾಡಿ ಎತ್ತಾಕ್ಕೊಂಡ್ ಹೊಯ್ತಾ ಇರೋದೆ' ಎಂದುಕೊಂಡವರಿಗೊಂದು ಸಣ್ಣ ಚಮಕ್ ಇದೆ. ಸಾಕಷ್ಟು ಸುದ್ದಿ ಮಾಡಿದ್ದ, ನಾಯಕ ನಾಯಕಿಗೆ ಪ್ರಪೋಸ್ ಮಾಡುವ ಶೈಲಿ ಅಷ್ಟೇ ಅಲ್ಲ ಹಾಡುಗಳಲ್ಲಿ ಅವರಿಬ್ಬರೂ ಕ್ಯಾಮೆರಾಗೆ ಪೋಸ್ ಕೊಡುವ ಶೈಲಿಯೂ ಕಲರ್‌ಪುಲ್ ಆಗಿದೆ. ಈ ಟ್ರ್ಯಾಕ್ಟರ್ ಎಪಿಸೋಡ್‌ನಲ್ಲಿ ಸುಮಂತ್‌ರೊಳಗಿನ ಆ್ಯಕ್ಟರ್ ಒಂಚೂರು ಇಣುಕಿ ನೋಡುತ್ತಾನೆ. ದಿಲ್‌ವಾಲ ಚಿತ್ರದ ಕಥೆ ನೀರ್‌ದೋಸೆಯಷ್ಟೇ ತೆಳುವಾಗಿದೆ. ಅದಕ್ಕೆ ಕಲರ್‌ಫುಲ್ ಟಚ್ ಕೊಡಲು ಹಾಕಲಾಗಿರುವ ಸೆಟ್‌ಗಳನ್ನು ನೋಡಿದ ಮೇಲೆ ಅದಕ್ಕೆ ಸೆಟ್ ದೋಸೆಯ ರುಚಿಯೂ ಸೇರಿಕೊಳ್ಳುತ್ತದೆ. ಆದರೂ, ನಾಯಕನಿಗೆ ನಾಯಕಿಯ ಮೇಲಿದ್ದಷ್ಟೇ ಪ್ರೀತಿ ಚಿತ್ರದ ಸೆಟ್ ಬಗೆಗೂ ಇದೆ ಎನ್ನುವಂತೆ ನಾಯಕ ಒಂದೇ ಸೆಟ್‌ನಲ್ಲಿ ಸೆಟ್ಲ್ ಆಗಿ ಮದುವೆ ಸೆಟ್ ಆಗುವವರೆಗೂ ಅಲ್ಲೇ ಹಾಡಿ ಕುಣಿಯುತ್ತಾನೆ. ಮಧ್ಯಂತರದ ನಂತರ ಕಥೆಯಲ್ಲಿ ಏರಿಳಿತಗಳಿಲ್ಲದಿರುವುದರಿಂದ ಪ್ರೇಕ್ಷಕರಿಗೆ ಇವನು 'ಬಡಾ' ದಿಲ್‌ವಾಲಾ ಎನಿಸಬಹುದು. ಕಥೆಯಲ್ಲಿ ಕಿಕ್ ಇಲ್ಲದ ಕಾರಣ 'ರೀಲು ಸುತ್ತಾಕ್ಕೊಂಡ್ ಹೋಯ್ತಾ ಇರೋದೆ' ಎಂಬ ತಂತ್ರ ಬಳಸಲಾಗಿದೆಯೇ ಎಂಬ ಅನುಮಾನವೂ ಕಾಡಬಹುದು. ಆದರೆ ಆ ಕೊರತೆಯನ್ನು ಆನಂತರ ಬರುವ ರವಿಶಂಕರ್ ಎಪಿಸೋಡ್ ನೀಗಿಸಿದೆ. ಪ್ರೇಕ್ಷಕ ಆಕಳಿಸುತ್ತಿದ್ದಾನೆ ಎಂಬ ಸೂಚನೆ ಸಿಕ್ಕವರಂತೆ ರವಿಶಂಕರ್ ತಮ್ಮ ಪುಟ್ಟ ಕಾಮಿಡಿ ಎಪಿಸೋಡ್‌ನಲ್ಲಿ ಎಲ್ಲ ಪಾತ್ರಗಳನ್ನೂ ತಿಂದು ತೇಗುತ್ತಾರೆ. ಆದರೂ 'ಅನಿಲ' ಕುಮಾರ್ ಅವರ 'ಸಾಲಿಡ್‌' ಡೈಲಾಗ್ಸ್, ಅರ್ಜುನ್ ಜನ್ಯ ಹಾಡುಗಳು ದಿಲ್‌ವಾಲನ ಪ್ರಮುಖ ಆಸ್ತಿ. ಆಟ ಚಿತ್ರದ ಅಭಿನಯದಲ್ಲಿ ಹೆಚ್ಚು ಕಡಿಮೆ ಟ್ವೆಲ್ತ್ ಮ್ಯಾನ್‌ನಂತಿದ್ದ ಸುಮಂತ್ ಅವರದ್ದು ಇಲ್ಲಿ ಆಲ್‌ರೌಂಟ್ ಆಟ ಅಲ್ಲದಿದ್ದರೂ ಅವರ ಫಾರ್ಮ್ ಅಂತೂ ಸುಧಾರಿಸಿದೆ ಎನ್ನಬಹುದು. ಹೊಸನೀರುಗಳ ಜೊತೆಗೂ ಅಷ್ಟೇ ಸರಾಗವಾಗಿ ಹರಿಯುವ ನೀರೆ ರಾಧಿಕಾ ಪಂಡಿತ್ ಲವರ್ ಗರ್ಲ್ ಆಗಿ ಇಷ್ಟವಾಗುತ್ತಾರೆ. ಟೆನ್ನಿಸ್ ಕೃಷ್ಣ, ಮಿತ್ರ ಅವರ ಮಿಶ್ರಣದಂತಿರುವ ಪವನ್ ಡಬಲ್ ನಗು ಉಕ್ಕಿಸುತ್ತಾರೆ. ಆದರೆ, ಶರತ್ ಲೋಹಿತಾಶ್ವ ಅವರ ಸಾಮರ್ಥ್ಯಕ್ಕೆ ಈ ಪಾತ್ರ ನ್ಯಾಯ ಒದಗಿಸಿಲ್ಲ. ಅಪ್ಪ ಅಮ್ಮನ ಪಾತ್ರದಲ್ಲಿರುವ ಜೈಜಗದೀಶ್, ವೀಣಾ ಸುಂದರ್ ಕೂಡಾ ಪ್ರೇಮಿಗಳಂತೇ ಕಾಣುವುದು ದಿಲ್‌ವಾಲ ಎಂಬ ಪ್ರೇಮ ಕಥೆಯ ವಿಶೇಷ. - ಹರಿ