ಎಲ್ಲೆಲ್ಲು ಸಂಗೀತವೇ, ಎಲ್ಲೆಲ್ಲು ಸೌಂದರ್ಯವೇ 'ಇಂಡಿಯಾ' 'ಕ್ಲಾಸಿಕ್‌' 'ಆರ್ಟ್ಸ್‌' ಎಂಬ ತಮ್ಮ ಬ್ಯಾನರ್‌ನ ಹೆಸರಿಗೆ ಅನ್ವರ್ಥ ಎನಿಸುವಂತೆ 'ಚಂದ್ರ' ಸಿನಿಮಾ ಮಾಡಿದ್ದಾರೆ ನಿರ್ದೇಶಕಿ ರೂಪಾ ಅಯ್ಯರ್. ನಾಯಕ, ನಾಯಕಿಯರೇ ಇಲ್ಲಿ ಸೌಂದರ್ಯ ಸಾಧನಗಳು. ಪಿಕೆಎಚ್ ದಾಸ್ ಅವರ ಕಣ್ಣಲ್ಲಿ ಶ್ರೀಯಾ, ಪ್ರೇಮ್‌ರ ಸೌಂದರ್ಯ ಸಮರ, ಗೌತಮ್ ಶ್ರೀವತ್ಸ ಅವರ ಸಂಗೀತ ಸ್ವರ. ಅತಿ ಸರಳ ಎನಿಸುವ ಚಿತ್ರದ ಕಥೆ ನಿರಾಸೆ ಉಂಟು ಮಾಡುತ್ತದೆ. ನಿಜ. ಆದರೆ, ಕಲರ್‌ಪುಲ್, ಬ್ಯೂಟಿಫುಲ್ ಎಂಬ ವಿಶೇಷಣಗಳನ್ನು ಬಳಸಲು ಸೂಕ್ತವಾದ ಚಿತ್ರ ಇದು. ಇದೂ ಒಂಥರಾ ಸಿಂಪಲ್ಲಾಗೊಂದ್ ಲವ್ ಸ್ಟೋರಿ. ಚಿತ್ರಕಥೆಯಲ್ಲಿ ಆರೋಹಣ ಆವರೋಹಣಗಳಿಲ್ಲ, ಕೇವಲ ಆಲಿಂಗನ, ಆಲಾಪನಾ. ಸ್ಲೋ ಕೇಸ್ ಆದರೂ ಓಕೆ, ಚಿತ್ರ ಒಂದು ಶೋ ಕೇಸ್‌ನಂತೆ ಕಾಣಬೇಕು ಎಂಬ ನಿರ್ದೇಶಕಿಯ ಅನಿಸಿಕೆ ಎದ್ದು ಕಾಣುತ್ತದೆ. ಕೂದಲನ್ನು ಬೆನ್ನ ಮೇಲೆ ಎಸೆದುಕೊಂಡು, ಸೊಂಟಕ್ಕೆ ಸೆರಗು ಕಟ್ಟಿ ಕಾಲಲ್ಲೇ ನೆಲಕೆರೆಯುವಾಗ, 'ಅಯ್ಯೋ ಕಥೆನೇ ಮುಂದಕ್ಕೋಗ್ತಿಲ್ಲ' ಎಂದು ನಿಟ್ಟುಸಿರು ಬಿಟ್ಟರೆ ಆ ದೃಶ್ಯದ ಸೂಕ್ಷ್ಮಗಳನ್ನು ಮಿಸ್ ಮಾಡಿಕೊಳ್ಳಬಹುದಷ್ಟೇ. ಚಿತ್ರ 'ಟೇಕಾಫ್‌' ಆಗ್ಲಿ ಅಂತ ಕಾಯುತ್ತಾ ಕೂತರೆ 'ನಿಜವಾದ ಸಿನಿಮಾ'ನೇ ನೋಡಲಿಕ್ಕಾಗದು. ಹಾಗಾಗಿ, ಚಂದ್ರ ಚಿತ್ರದ ಕಥೆಯಲ್ಲಿ ರೋಚಕತೆ ಇಲ್ಲ ಎನಿಸಿದರೆ ಅದು 'ದಂಡುಪಾಳ್ಯ' ಚಿತ್ರದಲ್ಲಿ ಸಾಮಾಜಿಕ ಕಳಕಳಿ ಇಲ್ಲ, ಕಾಮಿಡಿ ಫಿಲ್ಮ್‌ನಲ್ಲಿ ಸೀರಿಯಸ್‌ನೆಸ್ ಇಲ್ಲ, ಭಕ್ತಿ ಪ್ರಧಾನ ಚಿತ್ರದಲ್ಲಿ ಚೇಸಿಂಗ್ ಸೀನ್‌ಗಳಿಲ್ಲ ಎಂದಹಾಗೆ. ಇಲ್ಲಿರುವುದು ಕೇವಲ ಬಚ್ಚಿಟ್ಟ ಪ್ರೇಮ, ಬಿಚ್ಚಿಟ್ಟ ಕಥೆ. ಒಂದು ದೃಶ್ಯದಲ್ಲಿ, ನಾಯಕ ಓದಿ ಹೇಳಿದ ಆ 112ನೇ ಪೇಜಿನಲ್ಲಿ ನಿಜಕ್ಕೂ ಏನಿದೆ ಎಂದು ಹುಡುಕುವ ನಾಯಕಿಯ ಕುತೂಹಲ ಕಥೆಗೆ ಅನ್ವಯವಾಗದು. ಇನ್ನೊಂದು ದೃಶ್ಯದಲ್ಲಿ, ನಾಯಕಿ ನಾಯಕನಿಗೆ 'ಎಷ್ಟು ಚೆನ್ನಾಗಿ ಹಾಡ್ತೀರೋ, ಅಷ್ಟೆ ಚೆನ್ನಾಗಿ ಮಾತಾಡ್ತೀರ' ಎಂದು ಹೇಳುತ್ತಾಳೆ. ಅದಕ್ಕೆ ನಾಯಕನಿಂದ ಬರುವ 'ನೀವು ಎಷ್ಟು ಚೆನ್ನಾಗಿ ಹಾಡ್ತೀರೋ, ಅಷ್ಟೇ ಚೆನ್ನಾಗಿ ಕಾಡ್ತೀರ' ಎನ್ನುವ ಉತ್ತರವೇ 'ಚಂದ್ರ' ಚಿತ್ರದ 'ಗ್ರಾಮರ್‌'. ಕ್ಲೋಸಪ್‌ಗಳನ್ನು ಬಳಸುವುದು ಒಬ್ಬ ಒಳ್ಳೆಯ ನಿರ್ದೇಶಕನ ಲಕ್ಷಣಗಳಲ್ಲೊಂದು ಎಂಬುದು ಸಿನಿಮಾ ಪಂಡಿತರ ಮಾತು. ಆದರೆ, ಸಿನಿಮಾ ಛಾಯಾಗ್ರಹಣದಲ್ಲಿ ಕ್ಲೋಸಪ್‌ಗಳನ್ನು ಬಳಸುವ ಸಂಸ್ಕೃತಿ ಇತ್ತೀಚಿಗೆ ಇಲ್ಲವೇ ಇಲ್ಲ. ಹಾಗಾಗಿ, ಜಿಮ್ಮಿ ಜಿಬ್‌ಗಳಲ್ಲಿ ಹಾರಾಡಿದರೆ ಮಾತ್ರ ಅದು ಅದ್ಭುತ ಛಾಯಾಗ್ರಹಣ ಎಂದುಕೊಂಡವರಿಗೆ ಪಿಕೆಎಚ್ ದಾಸ್ ಕ್ಲೋಸಪ್‌ಗಳ ಖುಷಿಯನ್ನು ತೋರಿಸಿದ್ದಾರೆ. ಅದಕ್ಕೆ ರೂಪಾ ಅಯ್ಯರ್‌ರ ಕಲಾ ನಿರ್ದೇಶನದ ಸ್ಪರ್ಶವಿದೆ. ಶ್ರೀಯಾ ಅವರನ್ನು ಕ್ಲೋಸಪ್‌ಗಳಲ್ಲಿ ತೋರಿಸಿರುವುದೇ ಚಿತ್ರದ ಸ್ಟ್ರೆಂಥ್. ಕ್ಲೋಸಪ್‌ಗಳಲ್ಲಿ ಅವರ ಕೋಲ್ಗೇಟ್ ಸ್ಮೈಲ್, ರಸಿಕತೆ ಇಲ್ಲದಿರುವ ರಸಹೀನ ಪ್ರೇಕ್ಷಕರಿಗೆ ಮಾತ್ರ ಕಸ ಎನಿಸಬಹುದು. ಇದೆಲ್ಲಾ ಸೇರಿ ಇಡೀ ಚಿತ್ರವೇ ಒಂದು ಹಾಡು ಎನಿಸುವ 'ಚಂದ್ರ' ಐರಾವತ ಬಸ್‌ನಲ್ಲಿ ಹೆದ್ದಾರಿ ಪಯಣದಂತೆ. ಏರಿಳಿತಗಳಿಲ್ಲದ ಸುಖಕರ ಪ್ರಯಾಣದ ಲಾಂಗ್ ಡ್ರೈವ್‌ನ ಆನಂದ. ರೋಚಕ ತಿರುವುಗಳನ್ನು ಘಾಟ್ ಸೆಕ್ಷನ್, ಅಪೇಕ್ಷಿಸಿದರೆ ನಿರಾಸೆ. ರಾಜಮನೆತನದ ಹುಡುಗಿಯೊಬ್ಬಳು ತನಗಿಂತ ಕಡಿಮೆ ಅಂತಸ್ತಿನ ಹುಡುಗನನ್ನು ಪ್ರೀತಿಸಿ ಮದುವೆಯಾಗುವ ಕಥೆ ಇದು. ಅರಮನೆ ಆಸ್ತಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳುವ ಸಂಕಷ್ಟಗಳು ಕೇವಲ ಮಾತಿಗಷ್ಟೇ ಸೀಮಿತ, ಕತೆಗಲ್ಲ. ಅದರ ಬದಲಾಗಿ ಹೆಣ್ಣಿನ ಪ್ರೀತಿ ಪ್ರೇಮ, ಪ್ರಣಯದ ಸೂಕ್ಷ್ಮಗಳೇ ಇಲ್ಲಿ ಆಸ್ತಿಯಾಗಿವೆ. ಹಾಗಾಗಿ, ಕೇವಲ ರಾಜಮನೆತನದವರಷ್ಟೇ ಅಲ್ಲದೆ, ಎಲ್ಲ ವರ್ಗದ ಮನೆಮಂದಿಯೂ ಕುಳಿತು ನೋಡಬಹುದಾದ ಚಿತ್ರವಾಗಿದೆ 'ಚಂದ್ರ'. ಚಿತ್ರದಲ್ಲಿ ಪ್ರೇಮ್, ಶ್ರೀಯಾರಷ್ಟೇ ಗಮನ ಸೆಳೆಯುವ ಇನ್ನೊಂದು ಜೋಡಿ ಎಂದರೆ, ಪಿಕೆಎಚ್ ದಾಸ್ ಮತ್ತು ಗೌತಮ್ ಶ್ರೀವತ್ಸ. ಗೌತಮ್ ಶ್ರೀವತ್ಸ ಸಂಗೀತದ ಎಲ್ಲಾ ಹಾಡುಗಳು ಚಂದ್ರನ ಮೇಲೇ ಬೆಳದಿಂಗಳ ಬೆಳಕು ಚೆಲ್ಲಿವೆ. ಕಥೆಯ ಸೂಕ್ಷ್ಮತೆ ಅರಿತುಕೊಂಡಿರುವ ಕ್ರೇಜಿಮೈಂಡ್ಸ್ ಶ್ರೀ ಕತ್ತರಿ ಕೂಡ ನಾಯಕಿ ಶ್ರೀಯಾರಂತೇ ರೊಮ್ಯಾಂಟಿಕ್ ಆಗಿ ಬಳುಕಿದೆ. ರಿಲೀಫ್‌ಗೆಂದು ಇಡಲಾಗಿರುವ ಕಲರಿಪಯಟ್ಟು ಫೈಟು, ಯಶ್ ನೃತ್ಯದ ಟಪಾಗುಚ್ಚಿ ಹಾಡಿನ ಕಲ್ಪನೆಯೂ ಖುಷಿಕೊಡುತ್ತದೆ. 'ಹ್ಯಾಂಡ್‌ಸಮ್ ಹೀರೋ' ಪ್ರೇಮ್, ಅಭಿನಯದಲ್ಲೂ ಫಸ್ಟ್‌ಕ್ಲಾಸ್. ನೀ ಸೆಳೆದೆ ಹಾಡಿನ ಕಪ್ಪು ದಿರಿಸಿನಲ್ಲಿನ ತಿಳಿಗಡ್ಡದ ಗೆಟಪ್ ಅನ್ನೇ ಪ್ರೇಮ್ ಪರ್ಮನೆಂಟ್ ಮಾಡಿಕೊಳ್ಳಬಹುದು. ನಾಯಕಿ ಶ್ರೇಯಾ, ತಾನೇ ಈ ರಾಜಮನೆತನದ ಚಿತ್ರದ ಪ್ರಮುಖ ಆಸ್ತಿ ಎಂಬುದನ್ನು ನಿರೂಪಿಸಿದ್ದಾರೆ. ಗಣೇಶ್ ವೆಂಕಟರಾಮನ್, ಶ್ರೀನಾಥ್, ಸಾಧುಕೋಕಿಲಾ, ಸುಮಿತ್ರ ಕೂಡ ಮನೆತನದ ಮರ್ಯಾದೆ ಉಳಿಸಿದ್ದಾರೆ. ವಿವೇಕ್‌ರ ಸ್ಪಷ್ಟವಾದ ಕನ್ನಡ ಹಿತವಾಗಿದೆ. - ಹರಿ