ಪ್ರೇಕ್ಷಕರ ಒತ್ತಾಯದ ಮೇರೆಗೆ! ಒಮ್ಮೆ ತೆರೆಕಂಡ ಚಿತ್ರ ಮತ್ತೆ ಬಿಡುಗಡೆಯಾದರೆ ಸಿನಿಮಾ ಭಾಷೆಯಲ್ಲಿ 'ಪ್ರೇಕ್ಷಕರ ಒತ್ತಾಯದ ಮೇರೆಗೆ' ಎನ್ನುತ್ತೇವೆ. ಆದರೆ, ನಿರ್ದೇಶಕ ಟಿ.ಎಸ್. ನಾಗಾಭರಣರಂಥ ಚಿತ್ರಗಳೂ ಸಹ 'ಎರಡನೇ ಸಲ' ಶೋ ಕೊಡುತ್ತವೆ ಎಂದರೆ, ಅದು ಗಾಂಧಿನಗರದ 8ನೇ ಅದ್ಭುತ! ಯಾಕೆಂದರೆ ಇಂಥವರ ಚಿತ್ರಗಳು ಉದ್ಯಮದ ಪಾಲಿಗೆ 'ಅವಾರ್ಡ್ ಸ್ಟೋರ್‌'. ಅಂದಹಾಗೆ ಮೊದಲು ತೆರೆಕಂಡಿದ್ದು ಗಾಂಧಿನರದಲ್ಲಿ ಅಲ್ಲ, ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮಾ ಸಂತೆಯಲ್ಲಿ. ಈ ಹಿನ್ನೆಲ್ಲೆಯಲ್ಲಿ 'ವಸುಂಧರ'ಗೆ ಇದು ಎರಡನೇ ಇನ್ನಿಂಗ್ಸ್. ಅದು ಭಯೋತ್ಪಾದಕರ ಕಥೆಯೋ ಅಥವಾ ರಾಸಾಯಿನಿಕ ಕಾರ್ಖಾನೆಯ ಕೆಮಿಕಲ್ ಸ್ಟೋರಿಯೋ? ಎರಡೂ ಇಲ್ಲಿ ಮಿಲನಗೊಳ್ಳುತ್ತವೆ. ಚಿತ್ರದ ಮುಖ್ಯ ವಸ್ತು ಯಾವುದೆಂದು ಪ್ರೇಕ್ಷಕ ಗೊಂದಲಗೊಳ್ಳದೆ ಚಿತ್ರ ನೋಡುವುದು ಟಿ.ಎಸ್.ನಾಗಾಭರಣರ ನಿರೂಪಣೆಯ ಜಾಣ್ಮೆಯಿಂದ. ಬೆಂಗಳೂರಿನಲ್ಲಿ ನಡೆದ ಸರಣಿ ಬಾಂಬ್ ಸ್ಪೋಟ ಹಾಗೂ ಕೆಮಿಕಲ್ ಕಾರ್ಖಾನೆಯ ಅವಾಂತರ. ಈ ಎರಡೂ ಒಂದಕ್ಕೊಂದು ಹೇಗೆ ಲಿಂಕ್ ಆಗುತ್ತವೆ, ಒಂದನ್ನು ಮತ್ತೊಂದಕ್ಕೆ ನೇತು ಹಾಕಿ ನಿಜವಾದ ಸಮಸ್ಯೆಯನ್ನು ಹೇಗೆ ದಾರಿತಪ್ಪಿಸಲಾಗುತ್ತದೆಂದು ಸರಳವಾಗಿ ಹೇಳಿದ್ದಾರೆ. ದಾರಿ ತಪ್ಪಿಸುವ ಕೆಲಸದಲ್ಲಿ ಮಾಧ್ಯಮಗಳ ಟಿಪಿಆರ್ ರೋಚಕತೆಯೂ ಕಾರಣವಾಗುವ ಮೂಲಕ ಕಥೆ, ಸಮಕಾಲೀನತೆಯನ್ನು ಮೈಗೂಡಿಸಿಕೊಳ್ಳುತ್ತದೆ. ಇದ್ದಕ್ಕಿದಂತೆ ಬಾಂಬ್ ಸ್ಪೋಟ. ಇದರ ನಡುವೆ ಕೆಮಿಕಲ್ ಕಾರ್ಖಾನೆಯೊಂದು ಭಯಾನಕ ರೋಗ ಹರಡುವ ಕೆಮಿಕಲ್ ತಯಾರಿಸಿ ಜನರ ಪ್ರಾಣದ ಜತೆ ಚೆಲ್ಲಾಟ. ಅದನ್ನ ಬಯಲು ಮಾಡಲು ಹೊರಡುವ ಅದೇ ಕಾರ್ಖಾನೆಯ ಮುಸ್ಲಿಂ ವಿಜ್ಞಾನಿ ಮಾಧ್ಯಮಗಳ ಪ್ರಾಯೋಜಿತ ಸುದ್ದಿಗಳಿಂದ ಭಯೋತ್ಪಾದಕನಾಗುವುದು, ಇದರ ಬಗ್ಗೆ ಹೆಚ್ಚು ಮಾಹಿತಿ ಇಲ್ಲದ ವೈದ್ಯೆ ಬಂಧನ, ಲವ್ ಜಿಹಾದ್ ಹೀಗೆ ಹತ್ತಾರು ತಿರುವುಗಳು 'ವಸುಂಧರ' ತನ್ನೊಳಗೆ ಸೇರಿಸಿಕೊಂಡಿದೆ. ಹಿರಿಯ ನಟ ರಾಜೇಶ್, ಜಯಂತಿ ಅವರಿಗೆ ಇಲ್ಲಿ ಉತ್ತಮ ಪಾತ್ರ ಸಿಕ್ಕಿರುವುದಲ್ಲದೆ, ಜುಗಾರಿ ಅವಿನಾಶ್, ಐಶ್ವರ್ಯನಾಗ್, ಶೋಭರಾಜ್‌ರಂಥ ಕಮರ್ಷಿಯಲ್ ಪಿಲ್ಲರ್‌ಗಳು ಈ ಚಿತ್ರದಲ್ಲಿ ಕಾಣಿಸಿರುವುದು ಒಳ್ಳೆಯ ಬೆಳವಣಿಗೆ. ಭರತ್ ಕಲ್ಯಾಣ್, ಪನ್ನಗ ಭರಣ, ಸುಧಾರಾಣಿ, ಟಿ.ಎಸ್.ನಾಗಾಭರಣ ಮತ್ತಿತರರು ಚಿತ್ರದಲ್ಲಿದ್ದಾರೆ. 'ಚರಿತ್ರೆ ಉದ್ದಕ್ಕೂ ಅನ್ನ ಮತ್ತು ತತ್ವದ ಆಯ್ಕೆ ವಿಚಾರ ಬಂದಾಗ, ಸೋತಿದ್ದು ತತ್ವ' ಎನ್ನುವ ತೂಕದ ಸಂಭಾಷಣೆಗಳಿವೆ. ಆದರೂ ಕಡಿಮೆ ಬಜೆಟ್ಟಿನ, ಸದಾಭಿರುಚಿಯ ಇಂಥ ಚಿತ್ರಗಳು ಈಗಿನ ಸಿನಿಮಾ ವ್ಯವಸ್ಥೆಯ ಪಾಲಿಗೆ ನಿರ್ಲಕ್ಷಿತ ಎಲೆಗಳು ಎನ್ನುವ ಸತ್ಯವನ್ನು ಮತ್ತೊಮ್ಮೆ 'ವಸುಂಧರ' ಸಾಬೀತು ಮಾಡಿದೆ. ಅಥವಾ ಇಂಥ ಚಿತ್ರಗಳನ್ನು ಮಾಡುವವರೇ ಅವುಗಳನ್ನು ಪ್ರೇಕ್ಷಕರಿಗೆ ತಲುಪಿಸುವಲ್ಲಿ ಎಡವುತಿದ್ದಾರೆಯೇ? -ಆರ್.ಕೇಶವಮೂರ್ತಿ