ಕಡ್ಡಾಯವಾಗಿ ... ಕದ್ದು ಪ್ರೀತಿಸುವ 'ದೇಹ'ಗಳಿಗೆ ಮಾತ್ರ ! ಕೂಡಿ ಕಳೆಯೋ ಲೆಕ್ಕದಲ್ಲಿ ಅಪರೂಪಕ್ಕೆ ತಪ್ಪು ಉತ್ತರ ಬಂದರೆ ಅದು ಹಿಟ್ ಆಗುತ್ತದೆ. ಲೆಕ್ಕ ತಪ್ಪಿದ್ದರೂ ಸ್ಟೆಪ್ಸ್‌ಗೆ ಅಂಕಗಳನ್ನು ಕೊಡಲಾಗುತ್ತೆ. ಆದರೆ ತಪ್ಪುತಪ್ಪಾಗಿ 'ಕೂಡಿಕಳೆಯೋದೇ' ಅಭ್ಯಾಸ ಆಗಿಬಿಟ್ಟರೆ ಅದು ಪ್ರೇಕ್ಷಕರ ಬಾಯಿಂದ ಕೆಟ್ಟದಾಗಿ ರುಬ್ಬಿಸಿಕೊಂಡು ಹಿಟ್ಟಾಗುತ್ತದೆ. ಚಿತ್ರದಲ್ಲಿ ಆರೋ ಐದೋ ಮೈನಸ್ ಇದ್ರೆ ಒಪ್ಕೋಬಹುದು. ಇಡೀ ಚಿತ್ರವೇ ಮೈನಸ್‌ಗಳ ಸಂಕಲನವಾಗಿ ಬಿಟ್ಟರೆ ಪಾಸ್ ಮಾಡೋದು ಹೇಗೆ? ಹಾರರ್ ಪಿಕ್ಚರ್ ಅಂದ್ರೆ ಹಸಿಹಸಿಪ್ರೇಮಿಗಳ ಪಾಲಿಗೆ ಸ್ವರ್ಗಕ್ಕೆ ಮೂರೇ ಗೇಣಿದ್ದಂತೆ. ಯಾಕಂದ್ರೆ ಚಿತ್ರ ಹೌಸ್‌ಫುಲ್ ಆಗುವುದಿಲ್ಲ. ಫ್ಯಾಮಿಲಿ ಕ್ರೌಡು ಬರುವುದಿಲ್ಲ. ಭಯದ ನೆಪದಲ್ಲಿ ಸುಳ್ಳುಸುಳ್ಳಾದರೂ ಕ್ಷಣಕ್ಕೊಮ್ಮೆ ಅಪ್ಪಿಕೊಂಡು ರೋಮಾಂಚನ ಅನುಭವಿಸಬಹುದು. ಚಿತ್ರ ಮುಗಿಯುವ ತನಕ ಪ್ರಿಯಕರ ಪ್ರಿಯತಮೆಯ ಕೈಬಿಡುವುದಿಲ್ಲ. ಜಗಕೆ ಹೆದರುವವರು ಈ ಹೆದರಿಕೆಯ ಸಿನಿಮಾಗೆ ಬಂದು ನಿರ್ಭಯವಾಗಿ ಪ್ರೀತಿ ಮಾಡಬಹುದು. ಇಲ್ಲಿ 'ಪ್ರೀತಿ ಮಾಡಬಹುದು.. ಮಾಡಿದರೆ ಜಗಕೆ ಕಾಣಲಾರದು'. ಇಂಥ ಹಾರರ್ ಪಿಕ್ಚರ್‌ಗೆ ಸಂಭಾಷಣೆ ಮತ್ತು ರೀರೆಕಾರ್ಡಿಂಗ್ ಕೂಡ ಅಗತ್ಯವಿಲ್ಲ. ಸಂದರ್ಭಕ್ಕೆ ತಕ್ಕಂಥ ಶಬ್ದಗಳನ್ನು ಹಾಗೂ ಸಂಭಾಷಣೆಗಳನ್ನು ಪಡ್ಡೆ ಪ್ರೇಕ್ಷಕರೇ ಹರಿದುಬಿಡುತ್ತಿರುತ್ತಾರೆ. ಅಂಥಾ ಪ್ರೇಕ್ಷಕರನ್ನೇ ನಂಬಿಕೊಂಡು ಬಂದಿರೋದು ಈ ಹಾರರ್ ಪಿಕ್ಚರ್. ಈ ಹಾರರ್ ಪಿಕ್ಚರ್ ಭಯಗಳ ಹುಟ್ಟಿಸುವ ಚಿತ್ರವಲ.್ಲ ಬರೀ ಬಯ್ಗುಳ ಹುಟ್ಟಿಸುವ ಚಿತ್ರ!. ಚಿತ್ರದ ಹಿನ್ನೆಲೆ ಸಂಗೀತದ ಛಮಕ್ಕಿಗೆ ನಟನಟಿಯರು ವಿನಾಕಾರಣ ಹೆದರಿಕೊಳ್ತಾರೆ. ಹಾಗಾಗಿ ಇದನ್ನು ಹಾರರ್ ಪಿಕ್ಚರ್ ಅನ್ನೋದಕ್ಕಿಂತ 'ಹೌಹಾರೋವ್ರ' ಪಿಕ್ಚರ್ ಅನ್ನಬಹುದು. ಇದು ಒಮ್ಮೆ ನೋಡಿದರೆ ಮತ್ತೊಮ್ಮೆ ನೋಡಬೇಕೆನಿಸುವ ಚಿತ್ರ ಅಲ್ಲ. ಅದು ನಿರ್ದೇಶಕರಿಗೂ ಗೊತ್ತು. ಅದಕ್ಕೇ ಅವರು ಚಿತ್ರವನ್ನು ಅರ್ಧಂಬರ್ಧಕ್ಕೆ ಕೊನೆಗೊಳಿಸಿ 'ಹಾರರ್ ರಿಟರ್ನ್ಸ್‌' ಅಂತ ತೋರಿಸಿ 'ಎರಡನೇ ಭಾಗಕ್ಕೆ ಮರಳಿ ಬನ್ನಿ' ಅಂತ ಹೆದರಿಸಿದ್ದಾರೆ. ಆದರೆ ಇಂಟರ್ವಲ್ಲಲ್ಲಿ ಹೊರಗೆ ಹಾರಿ ಹೋದವರು ರಿಟರ್ನ್ ಆಗದ ಕಾರಣ ಅವರು ಭಯಮುಕ್ತರು. ಪಟ್ರೆ ಅಜಿತ್, ಹಾರೋ ಸ್ಟಾರ್ ಹರೀಶ್ ರಾಜ್, ರೂಪಶ್ರೀ, ನೇಹಾಪಾಟೀಲ್, ಮುಂತಾದ ಯುವಪ್ರತಿಭೆಗಳನ್ನು ಈ ಚಿತ್ರ ಭೂತಕಾಲಕ್ಕೆ ತಳ್ಳುವಲ್ಲಿ ಯಶಸ್ವಿಯಾಗಿದೆ. ಕಾಜಲ್ ರಾವತ್ ಎಂಬ ಮುಂ'ಬಾಯಿ' ಹುಡುಗಿಯ ಘೋಸ್ಟ್ ಅಪಿಯರೆನ್ಸ್ ಹಾಗೂ ಮಾಜೀ ಸತ್ಯಾನಂದ ರವಿಚೇತನ್‌ರ ರಾಸಲೀಲೆ ದೃಶ್ಯಗಳು ಸೀಡಿಯಾಗಲು ಲಾಯಕ್ಕಾಗಿವೆ. -ನವೀನ್ ಸಾಗರ್