'ಕಾಮಾ'ಲೆ ಕಣ್ಣಿಗೆ ಲೋಕವೆಲ್ಲಾ ನೀಲಿ 'ಇಷ್ಟು ದಿನ ನನ್ನ ಮೈಯನ್ನ ಯಾರ್ಯಾರೋ ಬಳಸಿಕೊಂಡಿದ್ದರೂ, ನನ್ನ ಪವಿತ್ರವಾದ ಮನಸ್ಸನ್ನು ಮಾತ್ರ ಯಾರಿಗೂ ಕೊಟ್ಟಿರಲಿಲ್ಲ, ಈಗ ಅದು ನಿನ್ನದು'... 'ಇಷ್ಟು ದಿನ ನನ್ನ ಮೈಯನ್ನ ಯಾರ್ಯಾರೋ ಬಳಸಿಕೊಂಡಿದ್ದರೂ, ನನ್ನ ಪವಿತ್ರವಾದ ಮನಸ್ಸನ್ನು ಮಾತ್ರ ಯಾರಿಗೂ ಕೊಟ್ಟಿರಲಿಲ್ಲ, ಈಗ ಅದು ನಿನ್ನದು' ಎನ್ನುತ್ತಾ ಗಂಡನನ್ನು ತಬ್ಬಿಕೊಳ್ಳುತ್ತಾಳೆ ಸಿಲ್ಕ್. ಆದರೆ, ಮರುಕ್ಷಣದಲ್ಲೇ 'ಮೈ ಮುಟ್ಟು ಬಾ, ಸುಖವ ಕೊಡು ಬಾ' ಎನ್ನುವ ಮತ್ತದೇ ಸಿಲ್ಕ್ ಸೂತ್ರದ ಹಾಡು ಶುರು. ಸಿಲ್ಕ್ ಎಂಬ ಚಿತ್ರದ ಮೂಲ ಉದ್ದೇಶ ಏನು ಎಂಬುದನ್ನು ಅರ್ಥ ಮಾಡಿಕೊಳ್ಳಲು ಇದೊಂದೇ ದೃಶ್ಯ ಸಾಕು. 'ಕಾಮಾ'ಲೆ ಕಣ್ಣಿಗೆ ಲೋಕವೆಲ್ಲಾ ನೀಲಿ ಎನ್ನುವಂಥ ಚಿತ್ರ ಇದು. ಆಸಿಡ್ ಟೆಸ್ಟ್ ಎನ್ನಿ ಅಥವಾ ಲಿಟ್‌ಮಸ್ ಟೆಸ್ಟ್ ಎನ್ನಿ, ಇದು ಯಾವಾಗಲೂ ನೀಲಿ ಬಣ್ಣಕ್ಕೇ ತಿರುಗುತ್ತದೆ. ಸದಾ ಕಿರುಚಾಡುವ ಸನಾ ಎಂಬ ಪಾತ್ರಧಾರಿ, ವಿಜಯಲಕ್ಷ್ಮಿ ಎಂಬ ಹಳ್ಳಿ ಹುಡುಗಿಯನ್ನು ಸಿನಿಮಾದಲ್ಲಿ ಅವಕಾಶ ಕೊಡಿಸುತ್ತೇನೆಂದು ನಂಬಿಸಿ ತನ್ನ 'ಧರ್ಮ ಛತ್ರ'ಕ್ಕೆ ಸೇರಿಸಿಕೊಳ್ಳುತ್ತಾಳೆ. ಅದು ಧರ್ಮ ಛತ್ರ ಅಲ್ಲ 'ಮೈ'ದಾನ ಮಾಡುವ ಲಾಡ್ಜ್ ಎಂದು ಗೊತ್ತಾದರೂ, ಅಲ್ಲಿ, ಪೊಲೀಸರೂ ಶಾಮೀಲಾಗಿರುವುದರಿಂದ ಕಂಪ್ಲೇಂಟ್ ಲಾಡ್ಜ್ ಮಾಡುವ ಪ್ರಶ್ನೆಯೇ ಇಲ್ಲ. ಹಾಗಾಗಿ ಹುಡುಗಿ, ಅನಿವಾರ್ಯವಾಗಿ ಅದಕ್ಕೆ ಒಗ್ಗಿಕೊಳ್ಳುತ್ತಾಳೆ. ನಟಿಯಾಗುವ ಆಸೆಯಲ್ಲಿ 'ಸಿನಿಸಿಟಿ' ಸೇರಲು ಬರುವವಳಿಗೆ ತಾನು ಬಂದಿರುವುದು 'ಸಿನ್‌ಸಿಟಿ'ಗೆ ಎಂದು ಗೊತ್ತಾಗುವಷ್ಟರಲ್ಲಿ, ಸರಿ ತಪ್ಪು ಎಂದು ಯೋಚಿಸುವ, ಸೆನ್ಸಿಟಿವಿಟಿಯನ್ನೂ ಕಳೆದುಕೊಂಡಿರುವ ಕಾರಣಕ್ಕೆ, 'ಸಿಲ್ಕ್‌' ಕರ್ಮಕಾಂಡಗಳನ್ನು ತೋರಿಸುವ ಚಿತ್ರವಾಗಿ ಮಾರ್ಪಡುತ್ತದೆ. ಅಲ್ಲಿಂದ ಮುಂದೆ 'ವಿಜಯಲಕ್ಷ್ಮಿ' 'ಮೈ''ಸೂರು' ಸಿಲ್ಕ್ ಆಗುತ್ತಾಳೆ. ಮಂಡಿ ಮೇಲೆಯೇ ಬಟ್ಟೆ ಧರಿಸುವ ಆಕೆಯ ಬಟ್ಟೆಗಳನ್ನು ನೋಡಿದರೆ ಕೆಲವೊಮ್ಮೆ ಅದು 'ಮೊಣಕಾಲ್ಮೂರು' ಸಿಲ್ಕ್ ಇರಬಹುದೇ ಎಂಬ ಗುಮಾನಿಯೂ ಬರಬಹುದು. ಈ ಮಧ್ಯೆ ಅವಳಿಗೆ ರೌಡಿಯೊಬ್ಬನ ಪರಿಚಯ. ಈ ಕಡೆ, ನಾಯಕಿಯ ಬಟ್ಟೆ ಆಗಾಗ ಕೆಳಗೆ ಬೀಳುತ್ತಿದ್ದರೂ, ನಾಯಕ ಅದು ಗೊತ್ತಿಲ್ಲದೆ ಅವಳ ಪ್ರೇಮದಲ್ಲಿ ಬೀಳುತ್ತಾನೆ. ಸಿನಿಮಾ ನಟಿಯಾಗಲು ಬಂದು ಅನಿವಾರ್ಯವಾಗಿ ವೇಶ್ಯೆಯಾದ ಅವಳೂ ಕೂಡ, ನಟಿಯಾಗಲು ಅವಕಾಶ ಸಿಗದೇ ಇದ್ದುದಕ್ಕೋ ಏನೋ ನಾಯಕನ ಎದುರು ಸಾಚಾ ಎಂಬಂತೆ ನಟಿಸುತ್ತಾಳೆ. ಅವಳದೇ ಅಡ್ಡದಲ್ಲಿ ಅಡ್ಡಾಡಿದ ಅನುಭವ ಇರುವ ಅವನೂ ಸಭ್ಯಸ್ಥನಂತೆ ವರ್ತಿಸುತ್ತಾನೆ. ಕೊನೆಗೆ ಇಬ್ಬರ ಬಂಡವಾಳ ಬಯಲಾದ ಮೇಲೆ, ಮದುವೆ ಆಗಿ, ಮರ್ಯಾದಸ್ಥರಂತೆ ಬಾಳಲು ಯತ್ನಿಸುತ್ತಾರೆ. ಅದಕ್ಕೆ ಒಂದಿಷ್ಟು ಅಡೆತಡೆಗಳು, ಆಫ್ಟರ್ ಎಫೆಕ್ಟ್ಸ್‌ಗಳನ್ನು ಸೇರಿಸಿ, ಕೊನೆಯಲ್ಲಿ ನಾಯಕ ಶಿವ, 'ಶಿವಾ ಎಂದ ಮೇಲೆ' ವಿಜಯಲಕ್ಷ್ಮಿ ಮತ್ತೆ 'ಸಿಲ್ಕ್‌' ಆಗುತ್ತಾಳೆ ಎಂಬಲ್ಲಿಗೆ ಶುಭಂ. ಚಿತ್ರದ ನಾಯಕಿ ಥರ್ಟಿ ಪ್ಲಸ್ ಆದವಳಂತೆ ಕಾಣುವುದಕ್ಕೋ, ಸಿನಿಮಾ ನೋಡಿದ ಮೇಲೆ ಒಂದು ಥರ್ಟಿ ಬೇಕು ಎನಿಸುವ ಕಾರಣಕ್ಕೋ ಇದನ್ನು ಥರ್ಟಿ ಪಿಕ್ಚರ್ ಎನ್ನಲೂಬಹುದು. ನಾಯಕಿ, ಸಾಫ್ಟ್‌ಸಿಲ್ಕ್ ಬಟ್ಟೆಗಳಲ್ಲಿ ಕಾಣಿಸಿಕೊಂಡರೂ, ಅಮಾಯಕ ಹುಡುಗಿ ಎಂಬ ಕಾರಣಕ್ಕೆ ಪ್ರೇಕ್ಷಕರ ಸಾಫ್ಟ್ ಕಾರ್ನರ್ ಗಿಟ್ಟಿಸಿಕೊಳ್ಳುವ ತಂತ್ರವೂ ಇಲ್ಲಿದೆ. ಆದರೂ ಇದು ಸಾಫ್ಟ್ ಪೋರ್ನ್ ಸಿನಿಮಾದಂತೆ ಮಾತ್ರ ಕಾಣುತ್ತದೆ. ವೀಣಾ ಮಲ್ಲಿಕ್ ಮೈಮೇಲಿನ ಬಟ್ಟೆ ಮೂರೇ ಗೇಣು, ಅದನ್ನು ನೋಡುವ ಪಡ್ಡೆಗಳಿಗೂ ಸ್ವರ್ಗ ಬರೀ ಮೂರೇ ಗೇಣು. ಹೀಗಾಗಿ, ನಾಟಿ ನಟಿ ಎನಿಸಿದರೂ, ಕನ್ನಡದ ಸೆನ್ಸಾರ್ ಸಮಸ್ಯೆಯಿಂದಾಗಿ ನಮ್ಮ ನೇಟಿವಿಟಿಗೆ ತಕ್ಕಂತೆ ಬಿಚ್ಚಿದ್ದಾರೆ ವೀಣಾ. ಇದು ದೇವರ ಚಿತ್ರ ಎಂಬ ಕಾರಣಕ್ಕೋ ಏನೋ, ನಾಯಕ ಅಕ್ಷಯ್ ಮೈಮೇಲೆ ದೇವರು ಬಂದಂತೆ ಆಡುತ್ತಾರೆ. ಚಿತ್ರದಲ್ಲಿ ಶಿವ ಎಂಬ ಹೆಸರಿಟ್ಟುಕೊಂಡ ಕಾರಣಕ್ಕೆ ಸಂಭಾಷಣೆಯ ವಿಷಯದಲ್ಲಿ ಮೈಮೇಲೆ ಶಿವರಾಜ್‌ಕುಮಾರ್ ಬಂದಂತೆಯೂ ಆಡುತ್ತಾರೆ. ಮತ್ತೆ ಮತ್ತೆ, ಎರಡನೇ ಕಣ್ಣು, ಮೂರನೇ ಕಣ್ಣು ಎಂಬ ಡೈಲಾಗ್ ಕೇಳಿ, ಕಣ್ಣಿನ ಜೊತೆ ಕಿವಿಗೂ ಕಷ್ಟವಾಗಿ, ಸೆನ್ಸಾರ್‌ನವರು ಈ ಡೈಲಾಗ್‌ನಾದ್ರೂ ಮ್ಯೂಟ್ ಮಾಡಬಾರದಿತ್ತೇ ಎಂದುಕೊಳ್ಳುತ್ತಾನೆ ಪ್ರೇಕ್ಷಕ. ಅವಿನಾಶ್, ಅಚ್ಯುತ್ ಮುಂತಾದವರು ಇಂಥ ಚಿತ್ರದಲ್ಲೂ 'ಗೌರವ ನಟರು' ಎನಿಸಿಕೊಂಡಿದ್ದಾರೆ. ಜೆಸ್ಸಿ ಗಿಫ್ಟ್ ಹಾಡುಗಳು ಸಖತ್ ಹಾಟ್ ಮಗಾ ಎನಿಸಿದರೂ, ಜೈ ಆನಂದ್ ಛಾಯಾಗ್ರಹಣದಲ್ಲಿ 'ಸಖತ್ ಶಾಟ್ ಮಗಾ' ಎನಿಸುವ ಅವಕಾಶಗಳು ಕಡಿಮೆ. - ಹ್ಯಾರಿ