ಕ್ಲೀನ್ ಬೋಲ್ಡುಗಳು, ಇನ್‌ಸೈಡ್ ಎಡ್ಜುಗಳು ಚಿತ್ರಕಥೆಯನ್ನೇ ನಂಬಿಕೊಂಡ ಚಿತ್ರಗಳ ಸಾಲಿಗೆ ಹೊಸ ಸೇರ್ಪಡೆ ಗೂಗ್ಲಿ. ಒಂದು ಹುಡುಗ ಹುಡುಗಿ ಲವ್ ಮಾಡ್ತಿರ್ತಾರೆ, ಮಿಸ್ ಅಂಡರ್‌ಸ್ಟ್ಯಾಂಡಿಂಗ್‌.. ಚಿತ್ರಕಥೆಯನ್ನೇ ನಂಬಿಕೊಂಡ ಚಿತ್ರಗಳ ಸಾಲಿಗೆ ಹೊಸ ಸೇರ್ಪಡೆ ಗೂಗ್ಲಿ. ಒಂದು ಹುಡುಗ ಹುಡುಗಿ ಲವ್ ಮಾಡ್ತಿರ್ತಾರೆ, ಮಿಸ್ ಅಂಡರ್‌ಸ್ಟ್ಯಾಂಡಿಂಗ್‌ನಿಂದ ದೂರ ಆಗ್ತಾರೆ. ಕೊನೆಗೆ ಮತ್ತೆ ಒಂದಾಗ್ತಾರೆ ಎಂದರೆ ಅದು ತೀರಾ ಸರಳ ಕಥೆ ಆಗುತ್ತದೆ. ಹಾಗಾಗಿ, ಒಂದು ಫ್ಲ್ಯಾಶ್‌ಬ್ಯಾಕ್ ಬಳಸೋಣ. ನಾಯಕ ಒಬ್ಬನೇ ಕಥೆ ಹೇಳಿದರೆ ಅದೂ ಕೂಡ ಬೋರ್ ಆಗಬಹುದು. ಹಾಗಾಗಿ ಅರ್ಧ ನಾಯಕನ ಫ್ಲ್ಯಾಷ್‌ಬ್ಯಾಕ್, ಇನ್ನರ್ಧ ನಾಯಕಿಯದ್ದು ಅಂತ ಡಿವೈಡ್ ಮಾಡಿಕೊಂಡ ಚಿತ್ರಕಥೆ ಇದು. ಹಾಗೆ ನೋಡಿದರೆ ಇತ್ತೀಚಿನ ಅದ್ದೂರಿಯ ಬೆಟರ್ ವರ್ಷನ್ ಗೂಗ್ಲಿ. ಆದರೆ ನಾಯಕ, ನಾಯಕಿಯ ಪ್ರೀತಿ ಅಲ್ಲಿಗಿಂತ ಇಲ್ಲಿ ಹೆಚ್ಚು ತಿರುಗುತ್ತದೆ, ತಟ್ಟುತ್ತದೆ ಎಂಬುದು ವ್ಯತ್ಯಾಸ. ಇಂಥ ಸಿಂಪಲ್ ಕಥೆ ಇಟ್ಟುಕೊಂಡ ನಿರ್ದೇಶಕ ಪವನ್ ಒಡೆಯರ್ ಮನರಂಜನೆಗೆ ಮೋಸ ಮಾಡಿಲ್ಲ. ಕೊಟ್ಟ ದುಡ್ಡಿಗಿಂಥ ಹೆಚ್ಚನ್ನೇ ವಾಪಸ್ಸು ಕೊಡುತ್ತದೆ ಗೂಗ್ಲಿ. ಹಂಗೇ ಒಂದ್ ಗೂಗ್ಲಿ ಬಿಡಿ, ಉಳಿದಿದ್ದೆಲ್ಲಾ ಹೋಗ್ಲಿ ಬಿಡಿ ಎಂಬ ಸೂತ್ರ ಗೂಗ್ಲಿ ನಿರ್ದೇಶಕರದು. ಅದು, ಕೆಲವು ಕಡೆ ಕ್ಲೀನ್ ಬೋಲ್ಡ್ ಆಗಿದ್ದರೆ, ಇನ್ನು ಕೆಲವು ಕಡೆ ಇನ್‌ಸೈಡ್ ಎಡ್ಜ್. ಒಟ್ಟಾರೆ, ಯೋಗರಾಜ್ ಭಟ್ ಚಿತ್ರಗಳ ಸೈಡ್ ಎಫೆಕ್ಟ್‌ನಂತೆ ಕಂಡರೂ ಚಿತ್ರಕಥೆಯನ್ನು, ಓವರ್‌ಟೇಕ್ ಎನ್ನುವ ಸೊಫೆಸ್ಟಿಕೇಟೆಡ್ ಪದದ ಬದಲು 'ಸೈಡ್ ಹಾಕುವುದು' ಎಂಬ ಜವಾರಿ ರೀತಿಯಲ್ಲಿ ಹೇಳಿದ್ದಾರೆ ಪವನ್. ಒಂದಾದ ಮೇಲೊಂದರಂತೆ ಬರುವ ಮಾತು ತುಂಬಿದ ಫಟಾಫಟ್ ದೃಶ್ಯಗಳು ಶಾಹಿದ್ ಅಫ್ರಿದಿಯ ಬಿಡುವಿಲ್ಲದ ಬೌಲಿಂಗ್ ಅನ್ನು ನೆನಪಿಸುತ್ತವೆ. ಚಿತ್ರದ ಹೆಸರು ಗೂಗ್ಲಿ ಆದರೂ ನಾಯಕ ಸ್ಟ್ರೈಟ್ ಫಾರ್‌ವರ್ಡ್. ಎಲ್ಲರ ಬಾಯಲ್ಲಿ 'ಪೋಲಿ' ಎನಿಸಿಕೊಂಡ ಈ ನಾಯಕನನ್ನು ನಾಯಕಿ 'ಪ್ರೇಮಿ' ಎಂದುಕೊಳ್ಳುತ್ತಾಳೆ. ಆದರೆ ಇಬ್ಬರಲ್ಲೊಬ್ಬರು, 'ಲವ್ ಮಿ' ಎಂದು 'ಪ್ರೇ' ಮಾಡುವಷ್ಟರಲ್ಲಿ ಇಂಟರ್‌ವಲ್ ಬ್ರೇಕ್‌ಗೆ ಮುಂಚೆನೇ ಇಬ್ಬರ ನಡುವೆ ಬ್ರೇಕಪ್ ಆಗುತ್ತದೆ. ಕಾಲೇಜು ಪಾಸಾದೆ, ಪ್ರೇಮದಲಿ ಫೇಲಾದೆ ಎಂದುಕೊಂಡು, ಅಲ್ಲಿಯವರೆಗೂ ಗೂಗ್ಲಿಯ ನಾಯಕ ಹಾಳಾಗೋಗ್ಲಿ ಅಂತ ಅವಳನ್ನ ಮರೆಯೋಕೆ ಟ್ರೈ ಮಾಡುತ್ತಾನೆ. ನಾಯಕ ಕಾಲೇಜಿನಲ್ಲಿ ವಿದ್ಯೆ ಕಲಿಯುತ್ತಾನೆ. ಆದರೆ, ಕಾಲೇಜು ಬಿಟ್ಟ ಮೇಲೆ ಬುದ್ಧಿ ಕಲಿತವನಂತೆ ಕಾಣುತ್ತಾನೆ. ಎಲ್ಲಿಂದ ಹೇಳುವುದೋ ಎಂಬ ಯೋಚನೆಯಲ್ಲಿ ನಿರ್ದೇಶಕ ಪವನ್, ಗೂಗ್ಲಿಯನ್ನು ಫ್ಲ್ಯಾಷ್‌ಬ್ಯಾಕ್‌ನಿಂದ ಶುರುಮಾಡಿದ್ದರೂ, ಆಸ್ಪತ್ರೆಯಲ್ಲಿ ನಾಯಕನ ಎದೆಯ ಮೇಲೆ ಒರಗುವ ನಾಯಕಿಯನ್ನು ನೋಡಿದಾಗ ಇಂಟರ್‌ವಲ್ ಹೊತ್ತಿಗೆ ಸಿನಿಮಾ ಮುಗೀತಲ್ಲ ಎನಿಸಬಹುದು. ಬ್ರೇಕ್ ಕೆ ಬಾದ್‌ನ ಬಾಕಿ ಸಮಾಚಾರ್ ಏನಿರಬಹುದು ಎಂಬ ಕುತೂಹಲ ಪ್ರೇಕ್ಷಕನದು. ಆದರೆ, ಮುಗೀತಪ್ಪ ಅಂದುಕೊಂಡ್ರೆ ಮತ್ತೆ ಶುರುವಾಗುವುದೋ ಎಂಬಂತೆ ಕಥೆ ನಾಯಕನ ಕಣ್ಣಿಗೆ ಶಿಫ್ಟ್ ಆಗುತ್ತದೆ. ಆ ನಿನ್ನ ಕಥೆ, ಈ ನನ್ನ ಕಥೆ ಎರಡರದೂ ಒಂದೇ ವ್ಯಥೆ ಎನ್ನುವಂತೆ, ಮೊದಲರ್ಧದ ಧಾಟಿಯಲ್ಲೇ ಸ್ವಿಫ್ಟ್ ಆಗುತ್ತದೆ. ದೂರಾಗಿದ್ದ ಪ್ರೇಮಿಗಳು ಆಸ್ಪತ್ರೆಯಲ್ಲಿ ಹೇಗೆ ಒಂದಾದರು ಎಂಬುದನ್ನು, ಚಿತ್ರದ ದ್ವಿತೀಯಾರ್ಧದಲ್ಲಿ ಟೂ ವೇ ಜರ್ನಿಯೊಂದರ ಮೂಲಕ ಹೇಳಲಾಗಿದೆ. ಮಾತಿನ ಮೆರವಣಿಗೆಯಲ್ಲಿ ಮೈಮರೆಸಿದರೂ, ಗೂಗ್ಲಿ ಕೆಲವು ಕಡೆ ಸಿಲ್ಲಿ ಎನಿಸುವುದೂ ನಿಜ. ಹುಡುಗ ತನ್ನ ಎಡಗೆನ್ನೆಗೆ ಹೊಡೆದಿದ್ರೂ, ಹುಡುಗಿ, ಬಲಗೆನ್ನೆಯ ಮೇಲೆ ಕೈಯಿಟ್ಕೊಂಡ್ ಅಳುತ್ತಾಳೆ. ಹಾಗಂತ ಅವಳು ನಾಯಕ ತನ್ನ ಕೆನ್ನೆಗೆ ಹೊಡಿದ್ದನ್ನು ಮರೆತುಬಿಟ್ಟಿದ್ದಾಳೆ ಅಂದ್ಕೊಂಡ್ರೆ ಅದು ತಪ್ಪು. ಏಕೆಂದರೆ, ಅವಳು ಕೊನೆವರೆಗೂ ಆ ಹಠ ಸಾಧಿಸ್ತಾಳೆ ಅನ್ನೋದೇ ಚಿತ್ರದ ಕತೆ. ಅಷ್ಟು ದೊಡ್ಡ ವಿಐಪಿ ಆಗಿದ್ದರೂ ಮಗನಿಗೆ ಅಫಘಾತ ಆಗಿ ಅವನು ಚಿಕಿತ್ಸೆ ಪಡೆಯುವ ವಿಷಯ ಅಪ್ಪ ಅಮ್ಮಂದಿರಿಗೆ ಟಿವಿಯಲ್ಲಿನ ಬ್ರೇಕಿಂಗ್ ನ್ಯೂಸ್ ನೋಡಿದ ಮೇಲೆ ಗೊತ್ತಾಗುತ್ತದೆ. ನಾಯಕ ನಾಯಕಿಯ ಕಥೆಗೆ ಮೀನಿಂಗ್ ಫುಲ್ ಆಗಬಹುದಾಗಿದ್ದ ಸಾಧು ಕೋಕಿಲ ಎಪಿಸೋಡ್ ಅನ್ನು ಡಬಲ್ ಮೀನಿಂಗ್‌ಗೆ ಸೀಮಿತಗೊಳಿಸಲಾಗಿದೆ. ಕ್ಲೈಮ್ಯಾಕ್ಸ್ ಕೂಡ ಸಾಧಾರಣ ಎಸೆತಕ್ಕೆ ವಿಕೆಟ್ ಒಪ್ಪಿಸಿದೆ. ಯಶ್, ಕೃತಿ ಖರಬಂದ, ಅನಂತ್‌ನಾಗ್, ಸುಧಾ ಬೆಳವಾಡಿ ಗೂಗ್ಲಿಗೆ ತಕ್ಕಂತೆ ಮೌಲ್ಡ್ ಆಗಿದ್ದಾರೆ. 'ಪ್ಯಾರ್‌ಗೇ ಆಗ್‌ಬುಟ್ಟೈತೆ' ಹಾಡಿನ ಇನ್ನೊಂದು ವರ್ಷನ್‌ನಂತಿರುವ 'ಏನೋ ಏನೋ ಆಗಿದೆ' ಸೇರಿದಂತೆ ಜೋಶ್ವಾ ಶ್ರೀಧರ್ ಸಂಗೀತದಲ್ಲಿ, ಎರಡು ಹಾಡುಗಳು ಕೇಳುವಂತಿವೆ. ವೈದಿ ಅವರ ಕ್ಯಾಮೆರಾ ಗೂಗ್ಲಿಯ ಚಿತ್ರಕತೆಗೆ ತಕ್ಕಂತೆ ತಿರುಗಿದೆ. - ಹರಿ