'ಡೆಡ್‌' ಎಂಡಿನಲ್ಲೂ ಇದೆ ಬದುಕು! ಆರಂಭದಲ್ಲೇ ಈ ಮೇಲಿನ ಸಾಲು ದೃಶ್ಯರೂಪ ಪಡೆದುಕೊಳ್ಳುತ್ತದೆ. ಒಂದೇ ರಸ್ತೆ. ಎರಡು ವಿರುದ್ಧ ದಿಕ್ಕಿನ ಪಯಣಗಳಲ್ಲಿ ಎರಡು ಸಮಾನಾಂತರವಾದ ಪ್ರೇಮ ಕಥೆಗಳು. 'ಡೆಡ್‌' ಎಂಡಿನಲ್ಲೂ ಇದೆ ಬದುಕು! ಎಚ್ಚರ ಮುಂದಿದೆ ಡೆತ್ ಪಾಯಿಂಟ್...! ಆರಂಭದಲ್ಲೇ ಈ ಮೇಲಿನ ಸಾಲು ದೃಶ್ಯರೂಪ ಪಡೆದುಕೊಳ್ಳುತ್ತದೆ. ಒಂದೇ ರಸ್ತೆ. ಎರಡು ವಿರುದ್ಧ ದಿಕ್ಕಿನ ಪಯಣಗಳಲ್ಲಿ ಎರಡು ಸಮಾನಾಂತರವಾದ ಪ್ರೇಮ ಕಥೆಗಳು. ಈ ಕಥೆಗಳಲ್ಲಿ ಕ್ರಮೇಣ ಒಂದಿಷ್ಟು ತಿರುವುಗಳು. ಭೂತ, ವರ್ತಮಾನ, ಭವಿಷ್ಯ ಎಲ್ಲವನ್ನೂ ಹದವಾಗಿ ಕಲಕಿದ ಪಯಣ ಅದು. ಈ ಎರಡು ಪ್ರೇಮ ಪಯಣಗಳನ್ನು ಹೊತ್ತ ವಾಹನಗಳಿಗೆ ಅಲ್ಲೊಂದು 'ಡೆಡ್‌'ಲೈನ್ ಇದೆ. ಅದೇ ಎಂಡಿಂಗೂ ಅನಿಸಿದರೂ, ಪ್ರೇಕ್ಷಕ ಮಾತ್ರ 'ಆ ಡೆಡ್ ಎಂಡಿನಲ್ಲೂ ಇದೆ ಕಣ್ರೀ ಬದುಕು' ಎಂದು ಉದ್ಗರಿಸುತ್ತಾನೆ. ತಮಿಳಿನ 'ಎಗೆಯಂ ಎಪ್ಪೋದಂ' ಚಿತ್ರವನ್ನು ನೋಡಿದವರ ಅನುಭವ ಇದು. ನಡುರಸ್ತೆಯ 'ಡೆಡ್‌'ಲೈನ್ ಬದುಕನ್ನು ಕನ್ನಡಿಗರೂ ಅನುಭವಿಸಲಿ ಎಂದು ನಿರ್ದೇಶಕ ಮಹೇಶ್ ರಾವ್, ಅದೇ 'ಎಂಗೆಯಂ ಎಪ್ಪೋದಂ' ಚಿತ್ರವನ್ನು 'ಎಂದೆಂದೂ ನಿನಗಾಗಿ' ರೂಪದಲ್ಲಿ ಪ್ರೇಕ್ಷಕನ ಮುಂದಿಟ್ಟಿದ್ದಾರೆ. ಮೂಲ ಚಿತ್ರವನ್ನು ನೋಡಿದವರಿಗೆ ಈ ರಿಮೇಕ್ ಚಿತ್ರ, 'ಒರಿಜಿನಲ್ ಚಾಯ್ಸ್ ಅಲ್ಲ' ಅನಿಸಿದರೆ ಇದಕ್ಕೆ ಕಾರಣಗಳು ಹಲವು. ಮೂಲದಲ್ಲಿ ಕಂಡ ಭಾವ ತೀವ್ರತೆ, ಪಾತ್ರಗಳ ಆಯ್ಕೆ, ಹಿನ್ನೆಲೆ ಸಂಗೀತದಲ್ಲಿ ನಿರ್ದೇಶಕರು ಎಡವಿದ್ದಾರೆ. ಹೀಗಾಗಿ ಪುಳಿಯೋಗರೆಯನ್ನು ಚಿತ್ರಾನ್ನ ಎಂದುಕೊಂಡು, ಚಿತ್ರಾನ್ನವನ್ನು ಮೊಸರನ್ನ ಅಂತಲೋ, ವಾಂಗಿಬಾತ್ ಎಂದುಕೊಂಡೋ ತಿಂದ ಅನುಭವವನ್ನು ಈ ರಿಮೇಕ್ ಅವತರಣಿಕೆ ದಯಪಾಲಿಸುತ್ತದೆ. ಆದರೆ, ಇಡೀ ಚಿತ್ರ ನಿಂತಿರುವುದು ಅದರ 'ಡೆಡ್‌' ಎಂಡಿನಲ್ಲೇ! ಹೀಗಾಗಿ ಕ್ಲೈಮ್ಯಾಕ್ಸ್ ತನಕ ಕಾದು ಸಾವನ್ನು ಕಣ್ತುಂಬಿಕೊಳ್ಳುವ ಅನಿವಾರ್ಯತೆ ಪ್ರೇಕ್ಷಕನ ಪಾಲಿಗೆ ದಕ್ಕಿದೆ. ಅಂದರೆ 'ಮುಂದಿದೆ ಮಾರಿಹಬ್ಬ' ಎಂಬ ಸೂಚನೆಯಲ್ಲೇ ಸಾಗುವ ಚಿತ್ರವಿದು. 'ಎಚ್ಚರ! ಇದು ಅಪಘಾತ ವಲಯ, ನಿಧಾನಕ್ಕೆ ಚಲಿಸಿ' ಎಂದು ಡೆಡ್ ಪಾಯಿಂಟ್‌ಗಳಲ್ಲಿ ಡೆತ್ ಬೋರ್ಡ್‌ಗಳನ್ನು ಹಾಕಿದ್ದರೂ ಜವರಾಯನ ಮುಂದೆ ವಾಹನ ಸವಾರರು ಸೋತಿದ್ದೇ ಹೆಚ್ಚು. ಇವರ ಸೋಲಿಗೆ ಬಲಿಯಾದ ಅಮಾಯಕ ಜೀವಗಳಿಗೆ ಲೆಕ್ಕವಿಲ್ಲ. ಈ ನಡು ರಸ್ತೆಯ ನರಕ ದೃಶ್ಯಗಳನ್ನು ಮಾಧ್ಯಮಗಳು ನಿತ್ಯ ಕಣ್ಣಿಗೆ ಕಟ್ಟಿದಂತೆ ಹೇಳುತ್ತಿದ್ದರೂ ಪ್ರಯೋಜನವಿಲ್ಲ. ಈಗ ಅಂಥದ್ದೇ ನರಕ 'ದೃಶ್ಯ'ವನ್ನು ಹೇಳುವ ಚಿತ್ರ, 'ಎಂದೆಂದೂ ನಿನಗಾಗಿ'. ತಮಿಳಿನಿಂದ ಫ್ರೇಮ್ ಟು ಫ್ರೇಮ್ ಜೆರಾಕ್ಸ್ ತೆಗೆದಿರುವ ಮಹೇಶ್ ರಾವ್, ಒಂಚೂರು ಟ್ರಿಮ್ ಮಾಡಿಕೊಂಡಿದ್ದಾರೆ ಎನ್ನುವುದು ಬಿಟ್ಟರೆ ಯಾವ ಬದಲಾವಣೆಗಳೂ ಇಲ್ಲ. ಮುಗ್ಧ ಹುಡುಗ ಮತ್ತು ಗಂಡುಬೀರಿ ಹುಡುಗಿ, ಆಕಸ್ಮಿಕವಾಗಿ ಪರಿಚಯವಾಗುವ ಹುಡುಗ ಮತ್ತು ಹಳ್ಳಿಯಿಂದ ಬಂದ ಹುಡುಗಿ ನಡುವೆ ಪ್ರಯಾಣ, ಪ್ರೇಮ ಎರಡೂ ಆಗುತ್ತದೆ. ದಾವಣಗೆರೆಯಿಂದ ಬೆಂಗಳೂರಿಗೆ, ಬೆಂಗಳೂರಿನಿಂದ ದಾವಣಗೆರೆಗೆ ಹೊರಡುವ ಎರಡು ಬಸ್ಸುಗಳು, ಇದರಲ್ಲಿನ ಪಾತ್ರಧಾರಿಗಳ ಮೂಲಕ ಕಥೆ ಸಾಗುತ್ತದೆ. ಆದರೆ, ಫ್ಲ್ಯಾಷ್‌ಬ್ಯಾಕ್ ಕಥೆಯನ್ನು ಮನಬಂದಂತೆ ನಿರೂಪಿಸುತ್ತ, ಆರಂಭದಲ್ಲೇ ತೋರಿಸುವ ಕ್ಲೈಮ್ಯಾಕ್ಸ್ ದೃಶ್ಯವನ್ನು ಪದೇಪದೆ ರಿಪೀಟ್ ಮಾಡಿ ಪ್ರೇಕ್ಷಕನ ಕುತೂಹಲಕ್ಕೆ ನಿರ್ದೇಶಕರು ತಣ್ಣೀರೆರಚುತ್ತಾರೆ. ಸ್ಪರ್ಧೆಗೆ ಬಿದ್ದಂತೆ ಎರಡು ಬಸ್ಸುಗಳು ಸಾಗುವ ರಸ್ತೆಯನ್ನು ಪರಿಣಾಮಕಾರಿಯಾಗಿ ತೋರಿಸಿಲ್ಲ. ಹೀಗಾಗಿ ಜೈ ಆನಂದ್ ಕ್ಯಾಮೆರಾ ಕ್ಲೈಮ್ಯಾಕ್ಸ್‌ವರೆಗೂ ಕಾಯುತ್ತದೆ. ಮೂಲ ಪಾತ್ರಧಾರಿಯನ್ನು ಅನುಕರಿಸಲು ಹೋಗಿ ದೀಪಾ ಸನ್ನಿಧಿಗೆ ಇಲ್ಲಿ ಪಾತ್ರ ಭಾರ ಎನಿಸಿದೆ. ವಿವೇಕ್ ನಟನೆಯಲ್ಲಿ ನಿಜಕ್ಕೂ ಮುಗ್ಧ, ಅಪ್ರಾಪ್ತ. ಇವರ ನಡುವೆ ಹೆಚ್ಚು ಮಾತನಾಡದ ಅನೀಶ್, ಪೆದ್ದು ಪೆದ್ದಳಾಗಿ ಸಿಂಧು ಲೋಕನಾಥ್ ಪಾತ್ರಗಳಿಗೆ ಡೆಡ್‌ಲೈನ್‌ನಲ್ಲೂ ಜೀವ ಬರುತ್ತದೆ. ಎಂದಿನಂತೆ ವಿ. ಹರಿಕೃಷ್ಣ ಹೆಚ್ಚು ಸ್ಕೋರ್ ಮಾಡುತ್ತಾರೆ. ಕೆಲ ಕೊರತೆಗಳ ನಡುವೆಯೂ ಒಂದು ಒಳ್ಳೆಯ ಚಿತ್ರವನ್ನು ಮಹೇಶ್‌ರಾವ್ ಕನ್ನಡಕ್ಕೆ ತರುವ ಸಾಹಸ ಮಾಡಿದ್ದಾರೆ ಅಷ್ಟೇ. 'ಡೆಡ್‌'ಎಂಡಿನಲ್ಲೂ ಬದುಕು ಇದೆ ಎನ್ನುವ ಹಾಗೆ ಆರಂಭದ ರೀಲುಗಳನ್ನು ಸಹಿಸಿಕೊಂಡರೆ ಕ್ಲೈಮ್ಯಾಕ್ಸ್ ಖುಷಿ ಸಿಗಬಹುದು. -ಆರ್. ಕೇಶವಮೂರ್ತಿ