'ಅಚ್ಚಾ' ಕನ್ನಡದ ಚಿತ್ರ', ಹೊಚ್ಚ ಹೊಸಾ ಕಾಪಿ ಬಿಡುಗಡೆಗೆ ಮುನ್ನ ತಮ್ಮ ಚಿತ್ರಗಳ ಬಗ್ಗೆ ಏನೆಲ್ಲ ಕೊಚ್ಚಿಕೊಳ್ಳುವ ಹಲವು ನಿರ್ದೇಶಕರು ಚಿತ್ರಮಂದಿರದಲ್ಲಿ ನಿರಾಸೆ ಮಾಡುವುದು ಕಾಮನ್. ಆದರೆ ಜಟ್ಟ ಚಿತ್ರದಲ್ಲಿ ನಿರ್ದೇಶಕ ಗಿರಿರಾಜ್ ಹೇಳಿದ್ದನ್ನು ಚಾಚೂ ತಪ್ಪದೆ ಮಾಡಿ ತೋರಿಸಿದ್ದಾರೆ. ಹಾಗಾಗಿ ಇಲ್ಲಿ ಹೆಚ್ಚು ಸರ್‌ಪ್ರೈಸ್‌ಗಳಿಲ್ಲದಿದ್ದರೂ ಒಂದು ಪ್ಲೆಸೆಂಟ್ ಅನುಭವವಂತೂ ಇದೆ. ಮೊದಲಲ್ಲದ ಮೊದಲ ಚಿತ್ರದಲ್ಲಿ ನಿರ್ದೇಶಕ ಗಿರಿರಾಜ್ ನಿಜಕ್ಕೂ ಗೆದ್ದಿದ್ದಾರೆ. ಕಥೆ, ಭಾಷೆ, ನಿರೂಪಣೆ, ಆ್ಯಶ್ಲೇ-ಅಭಿಲಾಶ್ ಸಂಗೀತ, ಕಿರಣ್ ಹಂಪಾಪುರ ಛಾಯಾಗ್ರಹಣ ಎಲ್ಲವು ಸೇರಿ ಇದೊಂದು 'ಅಚ್ಚಾ' ಕನ್ನಡದ ಚಿತ್ರ' ಎನಿಸುವುದು ಗ್ಯಾರಂಟಿ. ಅದೇ ಹಳೆಯ ಮಹಿಳಾ ದೌರ್ಜನ್ಯದ ವಿರುದ್ಧ ಮಾತನಾಡಿದರೂ ಇದು 'ಹೊಚ್ಚ ಹೊಸಾ ಕಾಪಿ'. ಹಾಗಾಗಿ, ಇಂಥದೊಂದು ಚಿತ್ರ 'ಬರುತ್ತದೆ' ಎಂದು ಕಾದು ಕೂತವರಿಗೆ ಖಂಡಿತಾ ನಿರಾಸೆ ಆಗುವುದಿಲ್ಲ. ಯಾವುದೋ ಕಾಲದಿಂದ ನೋಡುತ್ತಾ ಬಂದಿರುವ ಸಮಸ್ಯೆಯೇ ಆದರೂ 'ಇಂದೇ ನೋಡಿ' ಎಂದು ಶಿಪಾರಸು ಮಾಡಬಹುದಾದ ಚಿತ್ರ. ಹೋಮ್ ಸ್ಟೇಗಳಲ್ಲಿ ರೇವ್ ಪಾರ್ಟಿ ಮಾಡುವ ಹೆಣ್ಣುಮಕ್ಕಳ ಕಥೆಯಿಂದ ಶುರುವಾಗುವ ಜಟ್ಟ, ಹೆಣ್ಣಿನ ಸ್ವಾತಂತ್ರ್ಯ ಮತ್ತು ಗಂಡಿನ ದೌರ್ಜನ್ಯದ ಬಗೆಗೆ ಮಾತನಾಡುತ್ತದೆ. ಆದರೆ ಹೆಣ್ಣನ್ನು ಸಮರ್ಥಿಸಿಕೊಳ್ಳುವಂತೆ ಕಾಣುವ ಚಿತ್ರದಲ್ಲಿ 'ನಿಮ್ಮ ಕಷ್ಟ ನಮಗರ್ಥ ಆಗುತ್ತೆ. ಇದರಲ್ಲಿ ನಿಮ್‌ದೇನೂ ತಪ್ಪಿಲ್ಲ ಬಿಡಿ' ಎನಿಸುವಂಥ ಇಬ್ಬರು ಹೆಣ್ಣುಮಕ್ಕಳ ಪಾತ್ರಗಳ ಮೂಲಕ ಕಥೆ ಹೇಳಲಾಗಿದೆ. ಮಹಿಳಾ ದೌರ್ಜನ್ಯದ ವಿರುದ್ಧ ದನಿಯೆತ್ತುವ ಒಬ್ಬ ಮಾಡರ್ನ್ ಹುಡುಗಿ ಮತ್ತು ಗಂಡನನ್ನು ಬಿಟ್ಟು ಪ್ರಿಯಕರನ ಜೊತೆಗೆ ಓಡಿಹೋಗುವ ಹೆಂಡತಿಯ ಪಾತ್ರಗಳನ್ನಿಟ್ಟುಕೊಂಡು ಹೆಣ್ಣನ್ನು ಸಮರ್ಥಿಸಿಕೊಳ್ಳುವ ಪ್ರಯತ್ನ ಚಿತ್ರದ್ದು. ಆದರೆ ಅಪ್ಪಿ ತಪ್ಪಿಯೂ 'ಹಳೆಯದು ಚೆನ್ನಾಗಿದ್ದರೂ, ಚೇಂಜ್ ಬೇಕು ಎಂಬ ಕಾರಣಕ್ಕೆ ಹೊಸದನ್ನು ಬಯಸುವ' ಹುಡುಗಿಯರ ಸ್ವೇಚ್ಛೆಯ ಬಗ್ಗೆ ನಿರ್ದೇಶಕರು ಹೆಚ್ಚು ಮಾತನಾಡುವುದಿಲ್ಲ. ಅಂಥ ಹುಡುಗಿಯೊಬ್ಬಳಿಂದ 'ಹೌದು, ನನ್ ಲೈಫ್ ನನ್ನಿಷ್ಟ, ವಾಟ್ ದ ಹೆಲ್‌' ಎಂದು ಟಿವಿ ಚಾನೆಲ್‌ಗಳಲ್ಲಿ ಹೇಳಿಸಿ ಸುಮ್ಮನಾಗುವ ಜಾಣ್ಮೆ ಅವರದ್ದು. ಸ್ವೇಚ್ಛೆಯನ್ನು ಆರಿಸಿಕೊಂಡ ಹೆಣ್ಣುಗಳನ್ನು ದ್ವೇಷಿಸುವ ಜಟ್ಟ, 'ಆ್ಯಕ್ಸಿಡೆಂಟಲ್‌' ಆಗಿ ಸಿಗುವ ಹುಡುಗಿಯೊಬ್ಬಳನ್ನು ತನ್ನ ಮನೆಯಲ್ಲಿ ಕೂಡಿ ಹಾಕಿ ಅವಳನ್ನು ದಾರಿಗೆ ತರುತ್ತೇನೆ ಎಂದು ಹಠ ತೊಡುತ್ತಾನೆ. ಆದರೆ ಆಕೆ ಕೂಡ ಸುಲಭಕ್ಕೆ ಬಗ್ಗುವ ಹೆಣ್ಣಲ್ಲ ಎಂಬುದು ಅರಿವಾಗುವ ಹಾದಿಯಲ್ಲಿ 'ನಿನ್ ಹೆಸರೇನು?' ಎಂದರೆ 'ಹಾದರಗಿತ್ತಿ' ಎನ್ನುವ ಹುಡುಗಿಯ ಮಾತು ಕೇಳಿ ತಲೆಕೆಟ್ಟ ಜಟ್ಟ ಯಬುಡಾ, ತಬುಡಾ. ಈ ನಡುವೆ ಹೋದ ದಾರಿಗೆ ಸುಂಕವಿಲ್ಲ ಎಂಬಂತೆ ಗಂಡನ ಬಳಿ ವಾಪಸು ಬರುವ ಹೆಂಡತಿ. ಈ ಮೂವರ ಜಟಾಪಟಿಯಲ್ಲಿ ವಾದ ಪ್ರತಿವಾದಗಳು ಸಾಕಷ್ಟಿರುವುದರಿಂದ, ಹೇಳುವುದಕ್ಕೂ ಕೇಳುವುದಕ್ಕೂ ಅದು ಸರಿಯಾದ ಸಮಯ. ಚಿತ್ರದುದ್ದಕ್ಕೂ ಬಂದಿಯಾಗೇ ಇದ್ದರೂ ಕಿಶೋರ್ ಸುಕೃತಾ ಜುಗಲ್‌ಬಂದಿಯಲ್ಲಿ ಸೀಟಿ ಹೊಡೆಯುವಂಥ ದೃಶ್ಯ, ಸಂಭಾಷಣೆಗಳು ಹೇರಳ. ಆದರೆ, ನಿರೂಪಕರಂತೆ ಕಾಣುವ ಬಿ. ಸುರೇಶ್ ಮಾತುಗಳೂ ಸೇರಿದಂತೆ ಅಲ್ಲಲ್ಲಿ ಇದು ಭಾಷಣ ಪ್ರಧಾನ ಚಿತ್ರ ಎನಿಸಬಹುದು. ಅದು ಅವಶ್ಯಕವೂ ಹೌದು. ಕೊನೆಗೆ 'ನೀನು' ಸರಿಯಿಲ್ಲ, 'ನೀನು' ಸರಿಯಿಲ್ಲ ಎಂದು ಪ್ರತಿಪಾದಿಸುವ ಪಾತ್ರಗಳು 'ಯೂ' ಟರ್ನ್ ತೆಗೆದುಕೊಳ್ಳುತ್ತವೆ. ಹುಡುಗಿಯನ್ನು ಬದಲಾಯಿಸುತ್ತೇನೆ ಎಂದು ಹೊರಟ ಜಟ್ಟ ಹೆಂಡತಿಯ ಜೀವನ ರೂಪಿಸುತ್ತಾನೆ. ಎಲ್ಲ ಕ್ರಾಂತಿಕಾರಿ ಬದಲಾವಣೆಗಳಿಗೂ ತ್ಯಾಗ ಅವಶ್ಯಕ ಎನ್ನುವುದನ್ನು ನಿರೂಪಿಸುತ್ತಾನೆ. ಜಟ್ಟನಾಗಿ ಕಿಶೋರ್ ಅವರದ್ದು ಗಟ್ಟಿ ಅಭಿನಯ. ಗಟ್ಟಿಗಿತ್ತಿಯಾಗಿ ಸುಕೃತಾ ತಮ್ಮಲ್ಲಿ ಗಟ್ಸ್ ಇದೆ ಎಂದು ತೋರಿಸಿದ್ದಾರೆ. ಆದರೆ ಇಬ್ಬರಿಗಿಂತ ಭಿನ್ನವಾಗಿ ಇಷ್ಟವಾಗುವುದು ಜಟ್ಟನ ಹೆಂಡತಿಯಾಗಿರುವ ಪಾವನಾ. ಅಪಿಯರೆನ್ಸ್ ಮತ್ತು ಅಭಿನಯದಲ್ಲಿ ನಂದಿತಾ ದಾಸ್‌ರನ್ನು ನೆನಪಿಸುವ ಪಾವನಾ ಅದ್ಭುತ ಎನಿಸುತ್ತಾರೆ. ಬಹುಶಃ ಚಿತ್ರದಲ್ಲಿರುವ ಏಕೈಕ ಪಾಸಿಟಿವ್ ಮನುಷ್ಯ ಎಂದರೆ ಫಾರೆಸ್ಟ್ ಆಫೀಸರ್ ಪಾತ್ರಧಾರಿ ಪ್ರೇಮ್‌ಕುಮಾರ್. 'ನಿಮ್ಮಂಥವ್ರು ಇರೋದ್ರಿಂದಲೇ ಇನ್ನೂ ಭೂಮಿ ಮೇಲೆ ಮಳೆ ಬೆಳೆ ಆಗ್ತಾ ಇದೆ' ಎನ್ನುವ ಮಾತಿಗೆ ಅತಿ ಸೂಕ್ತ ಪಾತ್ರ. ತನ್ನ ಪ್ರಮೋಷನ್ ಬಿಟ್ಟು ಜಟ್ಟನ ಕೆಲಸ ಪರ್ಮನೆಂಟ್ ಮಾಡಿಸುವ ಅವರು ಪ್ರೇಕ್ಷಕರ ಮನದಲ್ಲೂ ಪರ್ಮನೆಂಟ್ ಆಗಿ ಕೂಡುತ್ತಾರೆ. ಜಟ್ಟ ಒಳ್ಳೆಯವನು ಎಂಬ ಕಾರಣಕ್ಕೆ ಅವನನ್ನು ತಲೆ ಮೇಲೆ ಹತ್ತಿಸಿಕೊಂಡು ಕೂರುವ ಪಾತ್ರದಲ್ಲಿ ಹೃದಯಕ್ಕೆ ಹತ್ತಿರವಾಗುತ್ತಾರೆ ಪ್ರೇಮ್‌ಕುಮಾರ್. - ಹರಿ