ಈ ಬಚ್ಚನ್ ಅಮಿತಾಬ್ ಅಲ್ಲ ಪ್ರೇಯಸಿಯನ್ನು ಕೊಂದ ಬಳ್ಳಾರಿಯ ಗಣಿ ಒಡೆಯರನ್ನು ಕೊಂದು ನಾಯಕ ಸೇಡು ತೀರಿಸಿಕೊಳ್ಳುತ್ತಾನೆ ಎಂಬುದು 'ಬಚ್ಚನ್' ಚಿತ್ರದ ಒನ್ಲೈನ್ ಕಥೆ. ಆದರೆ ಅದನ್ನು ಎಷ್ಟು ಕ್ಲಿಷ್ಟಕರವಾಗಿ ಹೇಳಬಹುದು ಎಂಬ ದಿಕ್ಕಿನಲ್ಲಿ ಎಲ್ಲ ಪ್ರಯತ್ನಗಳನ್ನೂ ಮಾಡಿರುವ ನಿರ್ದೇಶಕ ಶಶಾಂಕ್, ಚಿತ್ರದ ನಾಯಕನಷ್ಟೇ 'ಸ್ಟ್ರೈಟ್ ಫಾರ್ವಡ್' ಆಗಿರುವ ಸಾಹಸಮಯ ಕಥೆಯನ್ನು ಫ್ಲಾಷ್ಬ್ಯಾಕ್ಗಳ ಮೂಲಕ ಹೇಳುವ ಸಾಹಸ ಮಾಡಿದ್ದಾರೆ. ಹಾಗಾಗಿ, ಸಿನಿಮಾ ಶುರುವಾಗೋಕೆ ಮುಂಚೆ 'ಕಿಚ್ಚ ಸುದೀಪ್ಗೆ ಜೈ' ಎನ್ನುವ ಅಭಿಮಾನಿಗಳು ಒಂದು ಹಂತದಲ್ಲಿ 'ರಿಯಲ್ಸ್ಟಾರ್ ಉಪೇಂದ್ರಂಗೆ ಜೈ' ಎನ್ನುವಂತೆ ಮಾಡುವುದು 'ಬಚ್ಚನ್' ಚಿತ್ರದ ಸ್ಪೆಷಾಲಿಟಿ. ಚಿತ್ರದ ಪಾತ್ರಗಳು ಮತ್ತೆ ಮತ್ತೆ ಸುದೀಪ್ರ ಹೈಟ್ ಬಗ್ಗೆಯೇ ಮಾತನಾಡಿದರೂ, ನಾಝರ್ ಮತ್ತು ಆಶಿಷ್ ವಿದ್ಯಾರ್ಥಿ ಪಾತ್ರಗಳು ಮೊದಲರ್ಧದ ನಿಜವಾದ ಹೈಲೈಟ್ಗಳು. ಅವು ನಿಜವಾದ ಪಾತ್ರಗಳೋ ಅಥವಾ ನಾಯಕನ ಭ್ರಮೆಯೋ ಎಂಬ ಅನುಮಾನ ಮೂಡಿಸುತ್ತವೆ. ಹಾಗಾಗಿ, ಚೇಸ್, ಫೈಟ್ಗಳಿಂದಾಗಿ, ಫಸ್ಟ್ ಫಸ್ಟು 'ಮಾಸ್' ಎನಿಸಿದರೂ ನಾಜರ್ ಮತ್ತು ಆಶಿಶ್ ವಿದ್ಯಾರ್ಥಿ ಪಾತ್ರಗಳ ಪೋಷಣೆಯಿಂದಾಗಿ ಕ್ಲಾಸ್ ಟಚ್ ದೊರೆತು, ಫಸ್ಟ್ ಹಾಫ್ ನಿಜಕ್ಕೂ ಫಸ್ಟ್ 'ಕ್ಲಾಸ್' ಎನಿಸಿಕೊಳ್ಳುತ್ತದೆ. ಮಾಸ್ ಆಡಿಯೆನ್ಸ್ಗೆ ಸಿಗುವುದು ಒಂದೆರಡು ಫೈಟ್ ಮತ್ತು ಚೇಸ್ ಅಷ್ಟೇ ಆದರೂ, ಆ್ಯಕ್ಷನ್ ಚಿತ್ರದ ಫಸ್ಟ್ಹಾಫ್ನಲ್ಲ್ಲಿ ಪ್ರೇಕ್ಷಕನೊಂದಿಗೆ ಮೈಂಡ್ಗೇಮ್ ಆಡುವ ಮೂಲಕ ಗೆದ್ದಿದ್ದಾರೆ ಶಶಾಂಕ್. ಆದರೆ ಇದೇ ಮಾತನ್ನು ಚಿತ್ರದ ಉಳಿದ ಭಾಗಕ್ಕೆ ಹೇಳುವುದು ಕಷ್ಟ. ಚಿತ್ರದ ಆರಂಭದಲ್ಲಿ ನಡೆದ ಎರಡು ಕೊಲೆಗಳಿಗೆ ಪೊಲೀಸರ ಎದುರು ಕಾರಣ ಕೊಡುತ್ತಾನೆ ನಾಯಕ. ಆದರೆ, ಇಂಟರ್ವಲ್ನ ನಂತರ ಅದರ ನಿಜವಾದ ಬಣ್ಣ ಬಯಲಾಗುತ್ತದೆ. 'ಏನೋ, ಆಗಿದ್ ಆಗೋಯ್ತು, ಇಲ್ಲಿಯವರೆಗೂ ಆಗಿದ್ದೆಲ್ಲಾ ಮರ್ತುಬಿಡಿ, ನಾಯಕ ಒಬ್ಬ ಮೆಂಟಲ್ ಪೇಷಂಟ್' ಎನ್ನುವ ನಾಯಕಿಯ ಮೂಲಕ ಶಶಾಂಕ್ ಪ್ರೇಕ್ಷಕರನ್ನೂ ಡೈರೆಕ್ಟ್ ಮಾಡಲು ಶುರುಮಾಡುತ್ತಾರೆ. ಅದಾದ ನಂತರ ಮತ್ತೆ, ಶಶಾಂಕ್ ಮಿಸ್ಗೈಡ್ ಮಾಡಿದ್ದಾರೆ ಎಂಬುದು ಗೊತ್ತ್ತಾಗುತ್ತದೆ. ಈ ಹಂತದಲ್ಲೇ ಪ್ರೇಕ್ಷಕ 'ರಿಯಲ್ಸ್ಟಾರ್ ಉಪೇಂದ್ರಂಗೆ ಜೈ' ಎನ್ನುವುದು. ಅಲ್ಲಿಂದ ಮುಂದೆ, ಕತೆಗೆ ಮತ್ತೊಂದು ತಿರುವು ಸಿಕ್ಕು, ನಾಯಕನ ಹಳೆ ಪ್ರೇಮ ಪುರಾಣದ ಜೊತೆಗೆ ಬಳ್ಳಾರಿಯ ಮೈನಿಂಗ್ ಮಾಫಿಯಾ ಕೂಡ ತೆರೆದುಕೊಂಡಾಗ ಪ್ರೇಕ್ಷಕನಿಗೆ ಮತ್ತೊಂದು 'ವಿರಾಮ' ಸಿಕ್ಕ ಅನುಭವ. ಅಚ್ಯುತ್, ಶೃತಿ, ಭಾವನಾರಿಗೆ ಸೀಮಿತವಾಗಿರುವ ಈ ಭಾಗದಲ್ಲಿ ನಾಯಕ ಸುದೀಪ್ ನಾಪತ್ತೆ. ನಾಯಕಿಯ ಪಾತ್ರವೇ ಹೇಳುವಂತೆ ಪ್ರೇಕ್ಷಕ ಇಲ್ಲಿ ಕತೆ ಕೇಳುವಾಗ, ಶಾರ್ಟ್ ಆದರೂ ಸ್ವೀಟ್ ಎನಿಸದ ಕ್ಲೈಮ್ಯಾಕ್ಸ್ನಲ್ಲಿ ನಾಯಕ ಬಚ್ಚನ್ ಅಲ್ಲಿ 'ಬಚಾ ಹುವಾ' ಇಬ್ಬರು ವಿಲನ್ಗಳ ಕತೆ ಮುಗಿಸುತ್ತಿರುತ್ತಾನೆ. ಈ ಎಲ್ಲ ಕತೆ ಕೇಳಿದ ಪೊಲೀಸ್ ಆಫೀಸರ್, ಬಚ್ಚನ್ನನ್ನು ತಡೆಯಲು ಹೊರಟವನಂತೆ, ಅತಿ ಉತ್ಸಾಹದಿಂದ ಹೆಲಿಕಾಪ್ಟರ್ ಹತ್ತಿ ಬಳ್ಳಾರಿಗೆ ಬಂದು ವಿಲನ್ಗಳನ್ನು ಕೊಲ್ಲುವ ನಾಯಕನನ್ನು ಕ್ಷಮಿಸಿ ಹೋಗುತ್ತಾನೆ. ಕಾನೂನಿನ ಕೈಗಳು ಎಷ್ಟೇ ಉದ್ದ ಇದ್ದರೂ, ಬಚ್ಚನ್ ಉದ್ದಕ್ಕೆ ಸರಿಸಮ ಎನಿಸುವುದಿಲ್ಲ. ಅಲ್ಲಿಗೆ ಬಚ್ಚನ್ ಬಚ್ಗಯಾ. ಸಿನಿಮಾ ಬಚ್ಚನ್ 'ಹೈಟ್'ಗೆ ಏರಿಲ್ಲ ಎಂಬ ಕಾರಣಕ್ಕೋ ಏನೋ, ಬಚ್ಚನ್ ಎಂಬ ಹೆಸರನ್ನಾದರೂ ಸಮರ್ಥಿಸಿಕೊಳ್ಳಬೇಕು ಎಂಬ ಕಾರಣಕ್ಕೆ ಆಗಾಗ ಅಮಿತಾಬ್ ಬಚ್ಚನ್ರ ಇಮೇಜು ಮತ್ತು ಚಿತ್ರಗಳ ಹೆಸರಿನ ಮೂಲಕ ಪ್ರೇಕ್ಷಕನ ಮೇಲೆ ಒತ್ತಡ ಹಾಕಲಾಗಿದೆ. ಹಿಂದಿ ಚಿತ್ರಗಳಲ್ಲಿ ಅಮಿತಾಬ್ ಬಚ್ಚನ್, ವ್ಯವಸ್ಥೆಯ ವಿರುದ್ಧ ಹೋರಾಡುವ ಕಾರಣಕ್ಕೆ ಆ್ಯಂಗ್ರಿ ಯಂಗ್ ಮ್ಯಾನ್ ಎನಿಸಿಕೊಂಡಿದ್ದರು. ಆದರೆ, ಇಲ್ಲಿನ ಬಚ್ಚನ್ ಕೇವಲ ವೈಯಕ್ತಿಕ ವಿಷಯಕ್ಕೆ ಹೋರಾಡುತ್ತಾನೆ. ಹಾಗಾಗಿ 'ಬಚ್ಚನ್' ಎಂಬ ಶೀರ್ಷಿಕೆ ಸೋಲುವಲ್ಲಿ ಯಶಸ್ವಿಯಾಗಿದೆ. ಇಲ್ಲಿ ನಿಜಕ್ಕೂ ವ್ಯವಸ್ಥೆಯ ವಿರುದ್ಧ ಹೋರಾಡುವುದು ನಾಯಕಿ ಭಾವನಾ. ಹಾಗಾಗಿ ಆಕೆಯನ್ನು ಬೇಕಿದ್ದರೆ ಆ್ಯಂಗ್ರಿ ಯಂಗ್ ವುಮನ್ ಎನ್ನಬಹುದು. ಆದರೆ ಮಿತಿಗಳ ನಡುವೆಯೂ ಛಾಯಾಗ್ರಾಹಕ ಶೇಖರ್ ಚಂದ್ರು, ಸಾಹಸ ನಿರ್ದೇಶಕ ರವಿವರ್ಮ, ಸಂಕಲನಕಾರ ಕ್ರೇಜಿಮೈಂಡ್ಸ್ ಶ್ರೀ ಕಾಂಬಿನೇಶನ್ನಲ್ಲಿ ಅದ್ಭುತ ಎನಿಸದಿದ್ದರೂ ರೋಚಕ ಎನಿಸುವಂತಿರುವ ದೃಶ್ಯಗಳು ಬಚ್ಚನ್ನನ್ನು ಕಾಪಾಡುತ್ತವೆ. ಸುದೀಪ್ ಬಾಡಿ ಲ್ಯಾಂಗ್ವೇಜ್ ಮತ್ತು ಅಭಿನಯದಲ್ಲಿ ಅವರ ಆಗಿನ ಕಾಲದ ಚಿತ್ರಗಳು ಮತ್ತು 'ಈಗ' ಚಿತ್ರದ ನೆರಳು ಎರಡೂ ಇದೆ. 'ಬಚ್ನಾ ಏ ಹಸಿನೋ' ಎನ್ನಲು ಬಚ್ಚನ್ಗೆ ಮೂವರು ನಾಯಕಿಯರಿದ್ದರೂ, ಯಾರದ್ದೂ ನೆನಪಿನಲ್ಲುಳಿಯುವಂಥ ಅಭಿನಯ ಅಲ್ಲ. ಕೃತಕ ಎನಿಸುವ ಪ್ರಸನ್ನ ಅವರ ಸಂಭಾಷಣೆಯಲ್ಲಿ, ಅಮಿತಾಬ್ ಬಚ್ಚನ್ ಸಿನಿಮಾಗಳ ಸಂಭಾಷಣೆಯ ಖದರ್ ಹುಡುಕಬಾರದು. ಹರಿಕೃಷ್ಣ 3 ಹಾಡುಗಳಲ್ಲಿ ಚಿತ್ರವನ್ನು ಬಚಾವ್ ಮಾಡುವ ಯತ್ನ ಮಾಡಿದ್ದಾರೆ. - ಹರಿ