ಇವ್ನ ನೋಡ್ಕೊಳಿ, ನೆಮ್ದಿ ಪಡ್ಕಳಿ ದೆವ್ವ ಹಿಡಿದು ಅತಂತ್ರರಾದವರಿಗೆ ದುಷ್ಟಶಕ್ತಿಯಿಂದ ಸ್ವಾತಂತ್ರ್ಯ ಕೊಡಿಸುವ ಕಥೆ ಇರುವ ಜಯಮ್ಮನ ಮಗ ಚಿತ್ರವನ್ನು ಸ್ವಾತಂತ್ರ್ಯ ದಿನಾಚರಣೆ... ದೆವ್ವ ಹಿಡಿದು ಅತಂತ್ರರಾದವರಿಗೆ ದುಷ್ಟಶಕ್ತಿಯಿಂದ ಸ್ವಾತಂತ್ರ್ಯ ಕೊಡಿಸುವ ಕಥೆ ಇರುವ ಜಯಮ್ಮನ ಮಗ ಚಿತ್ರವನ್ನು ಸ್ವಾತಂತ್ರ್ಯ ದಿನಾಚರಣೆಯಂದೇ ಬಿಡುಗಡೆ ಮಾಡಿ, ದೆವ್ವಗಳ ದುನಿಯಾ ತೋರಿಸಿದ್ದಾರೆ ವಿಜಯ್. ಅದರಲ್ಲಿ ಗೆಲುವನ್ನೂ ಕಂಡು 'ಜಯ'ಂನ ಮಗ ಎನಿಸಿಕೊಂಡಿದ್ದಾರೆ. ವಿಜಯ್‌ರ ದುನಿಯಾ ಚಿತ್ರ ಮನುಷ್ಯರ ನಡುವಿನ ಸಂಬಂಧಗಳಿಗೆ ಸಂಬಂಧಪಟ್ಟಿದ್ದಾಗಿತ್ತು. ಆದರೆ, ಜಯಮ್ಮನ ಮಗ ಮನುಷ್ಯ ಮತ್ತು ದೆವ್ವಗಳ ನಡುವಿನ ಕಥೆ. ಅಲ್ಲಿಯದು ಮನಸ್ಸಾಕ್ಷಿ, ಇಲ್ಲಿನದು 'ಆತ್ಮ' ಸಾಕ್ಷಿ. ಹಾಗಾಗಿ ಇದು 'ಮತ್ತೊಂದು' ದುನಿಯಾ. ಉಡಾಫೆ ತುಂಬಿದ ಪ್ರೇಮಕಥೆಗಳನ್ನು ನೋಡಿ ಬೋರಾದ ಪ್ರೇಕ್ಷಕರಿಗೆ ಒಂದು ಸರ್‌ಪ್ರೈಸ್ ಅಂತೂ ವಿಕಾಸ್ ನಿರ್ದೇಶನದ ಮೊದಲ ಚಿತ್ರದಲ್ಲಿದೆ. ಅಲ್ಲಲ್ಲಿ, ಬೇಬಿ ಶ್ಯಾಮಿಲಿ ಅಭಿನಯದ ಚಿತ್ರ ಸೇರಿದಂತೆ, ಕೆಲವು ಹಳೆಯ ಕಥೆಗಳ 'ಆತ್ಮ' ನೆನಪಾದರೂ, ಇಲ್ಲಿ ಕಾಣುವುದು ಜಯಮ್ಮನ ಮಗ. ಹಾಗಂತ ಇವನು ಶಾಮಿಲಿಯಂತೆ ಬಾಲನಟ ಅಲ್ಲ. ಇದು ಜಯಮ್ಮನ ಮಗ, ವರ್ಸಸ್ ಖಳನಾಯಕನ ಮಗನ ಕಥೆ. ಇವನು ಮಾತೆತ್ತಿದರೆ ಅಮ್ಮ ಎಂದರೆ, ಅವನು ಮಾತೆತ್ತಿದರೆ ಅಪ್ಪ ಎನ್ನುತ್ತಾನೆ. ಹಾಗಂತ ಇದು ಅಪ್ಪನ್, ಅಮ್ಮನ್ ಎನ್ನುವ ಸಾಯಿಕುಮಾರ್ ಸಿನಿಮಾ ಅಲ್ಲ. ಇವ್ನ ನೋಡ್ಕೊಳಿ, ನೆಮ್ದಿ ಪಡ್ಕಳಿ ಎನ್ನುವ ಜಯಮ್ಮನ ಮಗನ ಕಥೆ. ಸತ್ತಿರುವ ತಂದೆಗೆ ಮತ್ತೆ ಜೀವ ಕೊಡುವ ಪಿತೃಕಾಮೇಷ್ಠಿಯಾಗ ಮಾಡುವ ಖಳನಾಯಕನ ವ್ಯಥೆ. ಅದು ಹಳೆಯ ಜಿದ್ದು ಇಟ್ಟುಕೊಂಡಿರುವ ಭೂತ, ಈತ ದೈವಾಂಶಸಂಭೂತ. ಇವರಿಬ್ಬರ ನಡುವಿನ ಜಟಾಪಟಿ, ಎಲ್ಲವೂ ದೈವೇಚ್ಛೆ ಎನ್ನುವ ನಂಬಿಕೆ, ದೆವ್ವದ ಆಟ ಬಲ್ಲವರ್ಯಾರು ಎಂಬ ಆತಂಕದ ನಡುವೆ ಚಿತ್ರಕಥೆ ಸಾಗುತ್ತದೆ. ಜಯಮ್ಮನ ಮಗನಿಗೆ ಈ ಮಧ್ಯೆ ಒಂದು ಹುಡುಗಿಯ ಮೇಲೆ ದೆವ್ವದಂಥ ಪ್ರೀತಿ. ಆ ಹುಡುಗಿಯ ಮೈ ಮೇಲೆ ಬರುವ ದೆವ್ವಕ್ಕೂ ಆಕೆಯನ್ನು ಕಂಡರೆ ಪ್ರೀತಿ. ಹಾಗಾಗಿ, ಲವ್ವಾ ಡವ್ವಾ ಎಂಬ ಪ್ರಶ್ನೆ ಮೂಡುವ ಹಾದಿಯಲ್ಲೇ ಪ್ರತ್ಯಕ್ಷವಾಗುವುದು ದೆವ್ವ. ಅಲ್ಲಿಂದ ಹಿಡಿದು ದೈವಶಕ್ತಿ ಗೆಲ್ಲುವವರೆಗೆ ನಿರಂತರವಾಗಿ ಸಾಗುವ ಚಿತ್ರ ಕ್ಲೈಮ್ಯಾಕ್ಸ್‌ನಲ್ಲಿ ನಿಜಕ್ಕೂ ಅಚ್ಚರಿ ಹುಟ್ಟಿಸುತ್ತದೆ. ಅಲ್ಲಿನ ವಿಜಯ್‌ರ ಹೊಸ ಅವತಾರವನ್ನು ನೋಡಿಯೇ ಖುಷಿಪಡಬೇಕು. ವಾಮಾಚಾರದ ನಡುವೆ ಚಿತ್ರದಲ್ಲಿ ಅಲ್ಲಲ್ಲಿ ನುಸುಳಿರುವ 'ಡ್ರಾಮಾಚಾರ' ಕೂಡ ಖುಷಿ ಕೊಡುತ್ತದೆ. ಫ್ಲ್ಯಾಷ್‌ಬ್ಯಾಕ್‌ನ ಕಥೆಯನ್ನು ಹೆಚ್ಚು ಎಳೆಯದೆ ಶಾರ್ಟ್ ಆಗಿ ಮುಗಿಸಿರುವುದು ವಿಶೇಷ. ಜೂನಿಯರ್ ನವರಸನಾಯಕನಂತೆ ಅಭಿನಯದಲ್ಲಿ ವೆರೈಟಿ ತೋರಿಸಿರುವ ವಿಜಯ್, ಚಿತ್ರದಲ್ಲಿ ಅಮ್ಮನ ಮಗನಾದ್ರೂ ಅಭಿನಯದಲ್ಲಿ ಅಪ್ಪನಿಗುಟ್ಟಿದ ಖದರ್ ತೋರಿಸಿದ್ದಾರೆ. ಡಾಕ್ಟರ್ ಭಾರತಿ, ಆಕ್ಟರ್ ಆಗುವ ಕೆಲವು ಲಕ್ಷಣಗಳನ್ನಾದರೂ ತೋರಿಸಿದ್ದಾರೆ. ಪಕ್ಕಾ ಖಳನಾಯಕನ ವರಸೆ ತೋರಿಸಿರುವ ಉದಯ್, ಇಂಥ ಪಾತ್ರ ಮಾಡಲು ಪಕ್ಕದ ಚಿತ್ರರಂಗದ ನಟರೇ ಆಗಬೇಕಿಲ್ಲ ಎಂದು ನಿರೂಪಿಸಿದ್ದಾರೆ. 'ಸೂಪರ್ ನ್ಯಾಚುರಲ್‌' ಪವರ್ ಅನ್ನು ಪ್ರತಿನಿಧಿಸುವ ಪಾತ್ರದಲ್ಲಿ ಉದಯ್ ಅವರದ್ದು ಅಷ್ಟೇ ಸೂಪರ್ 'ನ್ಯಾಚುರಲ್‌' ಅಭಿನಯ. ನಮ್ಮಲ್ಲಿ, ಆ್ಯಕ್ಟಿವ್ ಆಗಿರೋ ಅಮ್ಮನ ಪಾತ್ರ ಸಿಕ್ಕಾಗ ಓವರ್ ಆ್ಯಕ್ಟಿಂಗ್ ಮಾಡುವವರೇ ಹೆಚ್ಚು. ಆದರೆ, ಅಮ್ಮನಾಗುವಷ್ಟು ವಯಸ್ಸಾಗಿಲ್ಲದಿದ್ದರೂ, ಕಲ್ಯಾಣಿ ಪೋಷಕ ನಟಿ ವಿಭಾಗದಲ್ಲಿ ಮತ್ತೊಮ್ಮೆ ರಾಜ್ಯ ಪ್ರಶಸ್ತಿ ಬಾಚಿದರೂ ಅಚ್ಚರಿಯಿಲ್ಲ. ನರೇಂದ್ರ ಬಾಬು ಅವರದ್ದು ಪಾತ್ರಕ್ಕೆ ತಕ್ಕ ಸಂಯಮ. ರಂಗಾಯಣ ರಘು ಮಿತಿ ಮೀರದೆ ನಗಿಸುತ್ತಾರೆ. ಇತ್ತೀಚಿನ ಹಲವು ಚಿತ್ರಗಳಲ್ಲಿ ಮತ್ತೆ ಮತ್ತೆ ಸಿಕ್ಸರ್ ಬಾರಿಸುತ್ತಲೇ ಇರುವ, ಅರ್ಜುನ್ ಜನ್ಯ, ಜಯಮ್ಮನ ಮಗನ ನಾಲ್ಕೂ ಹಾಡು ಮತ್ತು ರೀರೆಕಾರ್ಡಿಂಗ್‌ನಲ್ಲಿ ಪಾಂಚಜನ್ಯ ಮೊಳಗಿಸಿದ್ದಾರೆ. ಬಲಿ ಪೀಠವಾಗಲಿ, ದೇವಿ ಮಂಡಲವಾಗಲೀ, ಸುಜ್ಞಾನ್ ಛಾಯಾಗ್ರಹಣ ಚಿತ್ರಕ್ಕೆ ತಕ್ಕ ಮೂಡ್ ಕಟ್ಟಿಕೊಟ್ಟಿದೆ. ಆದರೆ, ಚಿಂತನ್ ಸಂಭಾಷಣೆ ಸ್ವಲ್ಪ ಡಲ್. ದುನಿಯಾ ವಿಜಯ್ ದನಿಯಲ್ಲಿ ಧಮ್ ತುಂಬಿದ್ದರೂ, ಪ್ರಶಾಂತ್‌ರಂಥ ಹೊಸ ಪ್ರತಿಭೆಗೆ ನ್ಯಾಯ ಸಿಕ್ಕಿಲ್ಲ. ಚಿತ್ರಕ್ಕೆ ಮೇಕಪ್ ಮ್ಯಾನ್ ಮತ್ತು ಕಲಾ ನಿರ್ದೇಶಕರ ಕೊಡುಗೆ ಕೂಡ ದೊಡ್ಡದು. ಹಾಗೆಯೇ ಸೆನ್ಸಾರ್ ಮಂಡಳಿಯ 'ಕೊಡುಗೆ' ಕೂಡ. ಸೆನ್ಸಾರ್‌ನ ಅನವಶ್ಯಕ ಹಾವಳಿಯಿಂದಾಗಿ ಟ್ರೈಲರ್‌ನಲ್ಲಿದ್ದ ನಾಯಿ, ಶೆಹನಾಯಿ, ತನ್‌ಹಾಯಿ, ಎನ್ನುವ ಹಾಡುಗಳ ಕೆಲವು ಬಿಡಿ ಭಾಗಗಳು ಕಾಣೆಯಾಗಿವೆ. ಅದರ ಜೊತೆಗೆ, ಕೋಳಿ ಕತ್ತನ್ನೂ ಹಿಚುಕಿರುವ ಸೆನ್ಸಾರ್ ಕಿರಿಕಿರಿಯನ್ನು ಕೋಳಿ ಜಗಳ ಎನ್ನದೆ ವಿಧಿಯಿಲ್ಲ. ಸಿನಿಮಾ ಚೆನ್ನಾಗಿದೆ, ಆದರೆ, ಫ್ಯಾಮಿಲಿ ಪ್ರೇಕ್ಷಕರು ಇಂಥ ಚಿತ್ರ ನೋಡುವುದಿಲ್ಲ ಎನ್ನುವುದಕ್ಕೆ ಯಾವ ಕಾರಣಗಳೂ ಇಲ್ಲ. ಇಂಥದೇ ಕಥೆ ಹೊಂದಿದ 'ಅರುಂಧತಿ'ಯಂಥ ಅನೇಕ ತೆಲುಗು ಚಿತ್ರಗಳನ್ನು ನೋಡಿದ ಅಪ್ಪಟ ಕನ್ನಡಿಗರು ಜಯಮ್ಮನ ಮಗನನ್ನು ಖಂಡಿತಾ ನೋಡಬಹುದು. - ಹರಿ