ಸಂತು 'ಡಾರ್ಲಿಂಗ್'ನಲ್ಲಿ ಸಂತೋಷ ಇಲ್ಲ! ಕತೆ ತುಂಬಾ ಸಿಂಪಲ್, ಟ್ಯಾಟೂ ಅಂಗಡಿ ನಡೆಸುವ ಯೋಗಿ "ಯೋಗಿ"ಯಂತಿರದೆ... ಚಿತ್ರ ಬಹಳಷ್ಟು ಕಡೆ ಸೆನ್ಸಾರ್ ನ 'ಬಿ' ಗ್ರೇಡ್ ನಿಂದ ತಪ್ಪಿಸಿಕೊಳ್ಳಲು ಬೀಪ್ ಸೌಂಡುಗಳು ಮತ್ತು ದೃಶ್ಯಗಳ ಬ್ಲರ್ ಆಪರೇಶನ್ ಗೆ ಒಳಗಾಗಿದೆ. ಕತೆ ತುಂಬಾ ಸಿಂಪಲ್, ಟ್ಯಾಟೂ ಅಂಗಡಿ ನಡೆಸುವ ಯೋಗಿ "ಯೋಗಿ"ಯಂತಿರದೆ ಗಿರಾಕಿಯಾಗಿ ಬರುವವಳನ್ನು ನಾಯಕಿ ಮಾಡುತ್ತಾರೆ. ಚಿತ್ರ ಈಗ ತಾನೆ ಶುರುವಾಯಿತೆಂದುಕೊಳ್ಳುವಷ್ಟರಲ್ಲಿ 2 ಹಾಡುಗಳು ಅನವಶ್ಯಕವಾಗಿ ಬಂದು ಹೋಗುತ್ತದೆ. ಟ್ಯಾಟೂ ಹಾಕಿಸಿಕೊಳ್ಳಲು ಬಂದ ನಾಯಕಿಯನ್ನು ನಾಯಕ ನೋಡುವುದು, ಪ್ರೀತಿಯಲ್ಲಿ ಬೀಳುವುದು, ಪ್ರಪೋಸ್ ಮಾಡುವುದು, ನಾಯಕಿಯ ರೌಡಿ ಅಣ್ಣನನ್ನು ಎದುರು ಹಾಕಿಕೊಳ್ಳುವುದು ಮಧ್ಯದಲ್ಲಿ ಯೋಗಿ ಫ್ಯಾನುಗಳಿಗೆ 2 ಹಾಡುಗಳು ಇವೆಲ್ಲವೂ ಕೆಲವೇ ನಿಮಿಷಗಳಲ್ಲಿ ನಡೆದು ಹೋಗುವುದರಿಂದ ಚಿತ್ರಕತೆ ಪ್ರಾರಂಭದಲ್ಲೇ ಗಂಭೀರತೆಯನ್ನು ಕಳೆದುಕೊಳ್ಳುತ್ತದೆ. ಇನ್ನೇನುಳಿದಿದೆ ಅಂತೀರ? ಉಳಿದ ಚಿತ್ರ ಪೂರ್ತಿ ಅಣ್ಣ ಅಶ್ವಥ್ ನೀನಾಸಂ ತನ್ನ ತಂಗಿಯ ಮದುವೆ ತಪ್ಪಿಸಲು ಆಡುವ ಡಬಲ್ ಗೇಮ್, ಮತ್ತೋರ್ವ ವಿಲನ್ ಆದಿ ಲೋಕೇಶ್ ಏಂಟ್ರಿ, ಆಮೇಲೆ ಚಿತ್ರದ ಕತೆಗೆ ಯಾವುದೇ ರೀತಿಯಲ್ಲಿ ಸಂಬಂಧವಿಲ್ಲದ ಇನ್ನೊಬ್ಬ ರೇಪಿಸ್ಟ್ ವಿಲನ್ 'ಜಯಮ್ಮನ ಮಗ' ಉದಯ್ ರೀ ಏಂಟ್ರಿ, ಮೊದಲನೆ ಸಲ ಕತೆ ಇನ್ನೂ ಶುರುವಾಗದಿದ್ದಾಗ ಒಮ್ಮೆ ಎಂಟ್ರಿ ಕೊಟ್ಟಿರುತ್ತಾರೆ, ಹೀಗೆ ಕತೆಯನ್ನು ರಬ್ಬರ್ ಎಳೆದಂತೆ ಎಳೆದಾಡಿದ್ದಾರೆ ಸಂತು. ಚಿತ್ರಕತೆ, ಕತೆಯನ್ನು ಕಟ್ಟಿಕೊಡುವುದರಲ್ಲಿ ಸೋತಿದೆ. 'ಹುಡುಗೀರು ಅಷ್ಟು ಸುಲಭವಾಗಿ ಒಳಗಿರೋದನ್ನ ತೋರಿಸಲ್ಲ' ಎಂಬ ಫೀಲಿಂಗ್ ಕುರಿತಾದ ಡಬ್ಬಲ್ ಮೀನಿಂಗ್ ಡಯಲಾಗು ಕಾಶಿನಾಥ್ ಪ್ರಿಯರಿಗೆ ಇಷ್ಟವಾಗಬಹುದು. ಇದ್ದಿದ್ದರಲ್ಲಿ ನಾಯಕನ ಗೆಳೆಯನಾಗಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ಚಿಕ್ಕಣ್ಣ ಮತ್ತು ಮಾರಿಮುತ್ತು ಮನರಂಜಿಸುತ್ತಾರೆ. ಆದರೆ ಅವರುಗಳು ಕಾಣಿಸಿಕೊಳ್ಳುವುದು ಕೆಲವೇ ಸೀನುಗಳಲ್ಲಾದ್ದರಿಂದ ಬಾಕಿ ಸೀನುಗಳನ್ನು ತಡೆದುಕೊಳ್ಳಬೇಕು ಇಲ್ಲವಾದಲ್ಲಿ ಸೀಟಲು ಕರ್ಚೀಫ್ ಬಳಸಿ. ಅರ್ಜುನ್ ಜನ್ಯರ ಹಾಡುಗಳು ಅಷ್ಟಕ್ಕಷ್ಟೆ, ಯಾವ ಹಾಡು ಕೂಡ ಥಿಯೇಟರ್ ನಿಂದ ಹೊರಬರುವಷ್ಟರಲ್ಲಿ ನೆನಪಿರುವುದಿಲ್ಲ, ಹಾಗಂತ ನಿಮಗೆ 'ಅಮ್ನೀಸಿಯಾ' ಇದೆ ಅಂತಲ್ಲ. ನಾಯಕ ಯೋಗೀಶ್ ನಟನೆಯಲ್ಲಿ ಹೊಸ ಬೆಳವಣಿಗೆಯಿಲ್ಲ, ಅದೇ ಪಾನ ಮತ್ತ ಡಯಲಾಗ್ ಡೆಲಿವರಿ ಸ್ಟೈಲ್, ಟಪ್ಪಾಂಗುಚ್ಚಿ ಡ್ಯಾನ್ಸು. ನವ ನಾಯಕಿ ಮುಕ್ತಾ ಕಲಿಯೋದು ತುಂಬಾ ಇದೆ. ಛಾಯಾಗ್ರಾಹಕರಾಗಿ ಮಂಜುನಾಥ್ ಬಿ ನಾಯಕ ಗಮನ ಸೆಳೆಯುತ್ತಾರೆ. ಚಿತ್ರದ ಕೆಲವು ಶಾಟ್ ಗಳು ಬಹಳ ಚೆನ್ನಾಗಿ ಮೂಡಿಬಂದಿದೆ. ಕತೆ ಚಿತ್ರಕತೆ ನಿರ್ದೇಶನ ಮೂರನ್ನೂ ಮಾಡಿರುವ 'ಅಲೆಮಾರಿ' ಸಂತು ಪ್ರಯತ್ನ ಯಶಸ್ವಿಯಾಗಿಲ್ಲ, ಯಾವುದಾದರೂ ಒಂದನ್ನು ಕರೆಕ್ಟಾಗಿ ಮಾಡಿದ್ದರೆ ಯಶಸ್ವಿಯಾಗುತ್ತಿತ್ತೋ ಏನೋ! ಮಾಟದಿಂದ ಸಿ.ಡಿಯಲ್ಲಿದ್ದ ವೀಡಿಯೋದಲ್ಲಿನ ಮನುಷ್ಯ ಅದಲು ಬದಲಾಗೋದು, ಪೋಲೀಸರು ನಕ್ಸಲ್ ನಿಗ್ರಹ ದಳದವರಂತೆ ಕಾಸ್ಟ್ಯೂಮ್ ತೊಟ್ಟಿರುವುದು ಇನ್ನೂ ಅನೇಕ ಹುಳುಕುಗಳು ಚಿತ್ರಕತೆಯಲ್ಲಿವೆ. ಚಿತ್ರ ಮುಗಿದ ಮೇಲೆ ನಿರುಮ್ಮಳವಾಗಿ ಥಿಯೇಟರ್ ಬಿಡುವಾಗ ಕಟ್ಟ ಕಡೆಗೆ ಉಳಿಯುವ ಪ್ರಶ್ನೆ, ಚಿತ್ರಕ್ಕೆ 'ಡಾರ್ಲಿಂಗ್' ಅಂತ ಯಾಕೆ ಹೆಸರಿಟ್ಟರು?