ಆನ್ಲೈನ್ ಪ್ರೀತಿ, ಆಫ್ ಆದ ಮದುವೆ! 'ಕನ್ನಡ ಚಿತ್ರರಂಗದ ಅತ್ಯಂತ ನಿರೀಕ್ಷೆಯ ಸಿನಿಮಾ' ಎಂಬ ಜಾಹೀರಾತಿನೊಂದಿಗೆ ಬಂದ ಈ ಚಿತ್ರ ಠುಸ್ ಪಟಾಕಿಯಂತೂ ಅಲ್ಲ. ಒಂದಿಷ್ಟು ರೊಮ್ಯಾನ್ಸ್, ನಗಿಸುವ ಪ್ರಯತ್ನ ಮಾಡುವ ಒಂದಿಷ್ಟು ದೃಶ್ಯಗಳು, ಕೇಳುವಂಥ ಹಾಡುಗಳು, ಸಮರ್ಥಿಸಿಕೊಳ್ಳುವ ಛಾಯಾಗ್ರಾಹಣ, ಲೊಕೇಶನ್ಗಳು, ನೋಡಲು ಮುದ್ದಾಗಿರುವ ಜೋಡಿ... ಈ ಕಾರಣಕ್ಕೆ ಪ್ರೇಕ್ಷಕ 'ಬರ್ಫಿ' ಸವಿಯಬಹುದು ಎಂದುಕೊಂಡರೆ ಅಚ್ಚರಿ ಇಲ್ಲ. ನಿರ್ದೇಶಕ ಶೇಖರ್ ತನ್ನ ಪ್ರತಿ ಚಿತ್ರದಲ್ಲೂ ಒಂದು ಹೊಸತನ ಬಯಸುವ ವ್ಯಕ್ತಿ. ಆ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನ ಸುರಿದಿದ್ದಾರೆ. ಆದರೆ ಪ್ರಯತ್ನವೇ ಅದ್ಭುತ, ಅಮೋಘ ಎಂದುಕೊಂಡು ನಿರ್ದೇಶಕರೇ ನೂರುಪಟ್ಟು ನಿರೀಕ್ಷೆ ಇಟ್ಟುಕೊಂಡರೆ ಪ್ರೇಕ್ಷಕನದ್ದು ಅದರ ಎರಡು ಪಟ್ಟು. ನಿರೀಕ್ಷೆ ತುದಿ ತಲುಪದೆ ಇದ್ದರೂ ತಳವನ್ನೂ ತಲುಪಿಲ್ಲ. ಪಂಜಾಬ್ ಲೇಖಕ ಬರೆದಿರುವ ಪುಸ್ತಕದ ಪುಟಗಳ ನೆರಳು 'ಬರ್ಫಿ'ಯಲ್ಲಿದೆ ಎಂದು ಸಾರಾಸಗಟಾಗಿ ಚಿತ್ರವನ್ನು ತಿರಸ್ಕರಿಸಬೇಕಿಲ್ಲ. ಒಳ್ಳೆಯ ಸಂದೇಶ ಕೊಡಲಿಕ್ಕೆ ನವಿರಾದ ಪ್ರೇಮ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎನ್ನುವುದು ನಿರ್ದೇಶಕನ ಜಾಣ್ಮೆ. ಚಿತ್ರದ ಕೊನೆಯಲ್ಲಿ ಬರುವ ಎಮೋಷನಲ್ ಟ್ರ್ಯಾಕ್ ಮನಸ್ಸಿಗೆ ನಾಟುತ್ತದೆ. ತಾನು ಕೆಲಸ ಮಾಡುವ ಕಂಪನಿಯಲ್ಲಿ ಸಿಇಓ ಆಗಬೇಕೆಂದು ಕನಸು ಕಾಣುವ ಸಂತೋಷ್. ಮದುವೆ ಮಾಡಿಕೊಳ್ಳುವಂತೆ ಒತ್ತಾಯ ಮಾಡುವ ಸಂತೋಷ್ನ ತಾಯಿ ಜಯಂತಿ. ಪ್ರೀತಿಸಿ ಮದುವೆಯಾಗಬೇಕಾ, ಅರೇಂಜ್ಡ್ ಮ್ಯಾರೇಜ್ ಆಗಬೇಕಾ? ಎನ್ನುವ ಜಿಜ್ಞಾಸೆಯಲ್ಲಿರುವಾಗಲೇ ಸ್ನೇಹಿತರ ಸಲಹೆಯಂತೆ ವಿವಾಹ್.ಕಾಂನಲ್ಲಿ ಪ್ರೊಫೈಲ್ ಹಾಕುತ್ತಾನೆ. ಆರಂಭದಲ್ಲಿ ನಿರಾಸೆಯಾದರೂ ನಂತರ ತನ್ನ ಮೆಚ್ಚಿನ ಹುಡುಗಿ ಸಿಗುತ್ತಾಳೆ. ಖುಷಿ ಹೆಸರಿನ ಆ ಹುಡುಗಿಯದ್ದು ಸಂತೋಷ್ನ ಇಷ್ಟಗಳ ಜೊತೆ ಮ್ಯಾಚ್ ಆಗುವ ಬಯೋಡೇಟಾ. ಈಕೆ ಪಂಜಾಬ್ನಲ್ಲಿದ್ದರೂ ಮೂಲ ತೀರ್ಥಹಳ್ಳಿ. ಅಪ್ಪ ಐಪಿಎಸ್ ಅಧಿಕಾರಿ. ಹೀಗಾಗಿ ಪರ ರಾಜ್ಯದಲ್ಲಿ ವಾಸ. ಸಂತೋಷ್ ಪ್ರೀತಿ, ಪ್ರೇಮ ಎಂದುಕೊಂಡು ಪಂಜಾಬ್ಗೆ ಪಯಣಿಸುತ್ತಾನೆ. ಆದರೆ ಕೈ ಹಿಡಿಯಬೇಕಾದವಳು ಕೈ ಕೊಡಬಹುದೇ? ಎಂಬ ಅನುಮಾನ ಮೂಡಿಸುವ ನಿರ್ದೇಶಕ, ಸಂತೋಷ್ನನ್ನು ವಿಮಾನ ನಿಲ್ದಾಣದಲ್ಲಿ ಕಾಯಿಸುತ್ತಾರೆ. ಆತ ಕಾದು ಕಾದು ಸುಸ್ತಾಗುತ್ತಾನೆ. ಭಯೋತ್ಪಾದನೆ ಭೂತಕ್ಕೆ ಪ್ರೇಮಿಗಳೂ ಬಲಿಯಾಗುತ್ತಾರೆಂಬ ಒಂದು ಸಾಲಿನ ಸಂದೇಶ ಹೇಳಲು ಹತ್ತಾರು ರೀಲು ಸುತ್ತಿರುವುದು ಅಲ್ಲಲ್ಲಿ ಪ್ರೇಕ್ಷಕನ ತಾಳ್ಮೆ ಪರೀಕ್ಷೆಸುತ್ತದೆ ಎನ್ನುವುದು ಬಿಟ್ಟರೆ ಉಳಿದೆಲ್ಲ ಓಕೆ. ಕೆ.ಎಂ. ಪ್ರಕಾಶ್ರ ಕತ್ತರಿ ಇನ್ನು ಶಾರ್ಪ್ ಆಗಬಹುದಿತ್ತು. ಗುಂಡ್ಲುಪೇಟೆ ಸುರೇಶ್ರ ಕ್ಯಾಮೆರಾ, ಅರ್ಜುನ್ ಜನ್ಯರ ಸಂಗೀತ ಚಿತ್ರವನ್ನು ಸಾಧ್ಯವಾದಷ್ಟು ಲಿಫ್ಟ್ ಮಾಡಿದೆ. ದಿಗಂತ್, ಭಾಮಾ ಜೋಡಿ ನೋಡಲು ಚೆಂದ. ಪಂಜಾಬಿ ಸಿಂಗ್ ಪಾತ್ರದಲ್ಲಿ ದಿಲೀಪ್ರಾಜ್ ಮೆಚ್ಚುಗೆಯಾಗುತ್ತಾರೆ. ಸುಚೇಂದ್ರ ಪ್ರಸಾದ್, ಪವಿತ್ರಾ ಲೋಕೇಶ್ ತೆರೆ ಮೇಲೂ ದಂಪತಿಗಳು. ಇಂದ್ರಜಿತ್ ಲಂಕೇಶ್ ಲಕಲಕನೆ ಹೊಳೆಯುತ್ತಾರೆ. -ಆರ್. ಕೇಶವಮೂರ್ತಿ