ನಿರೀಕ್ಷೆ ತಣ್ಣೀರು! ಪ್ರೀತಿ ಎರಡೆರಡು ಬಾರಿ ಆಗುತ್ತೋ ಇಲ್ಲವೋ... ಆದರೆ ಪ್ರೀತಿಯ ಬಗೆಗಿನ ಸಿನಿಮಾಗಳು ಮಾತ್ರ ಎರಡು ಬಾರಿ ಆಗಬಹುದು ಎಂಬುದಕ್ಕೆ ಉದಾಹರಣೆಯಂತೆ... ಪ್ರೀತಿ ಎರಡೆರಡು ಬಾರಿ ಆಗುತ್ತೋ ಇಲ್ಲವೋ... ಆದರೆ ಪ್ರೀತಿಯ ಬಗೆಗಿನ ಸಿನಿಮಾಗಳು ಮಾತ್ರ ಎರಡು ಬಾರಿ ಆಗಬಹುದು ಎಂಬುದಕ್ಕೆ ಉದಾಹರಣೆಯಂತೆ ಬಂದಿದೆ 'ಆಶಿಖಿ 2' ಸಿನಿಮಾ. 1990ರಲ್ಲಿ ಮಹೇಶ್‌ಭಟ್ ನಿರ್ದೇಶನದಲ್ಲಿ ರಾಹುಲ್ ರಾಯ್, ಅನು ಅಗರ್‌ವಾಲ್ ಅಭಿನಯದಲ್ಲಿ ತೆರೆಕಂಡಿದ್ದ 'ಆಶಿಖಿ' ಚಿತ್ರ ತೆರೆಯ ಮೇಲಿನ ಲವ್‌ಸ್ಟೋರಿಗಳಲ್ಲಿ ಮೈಲುಗಲ್ಲಾದ ಚಿತ್ರ ಎನಿಸಿಕೊಂಡಿತ್ತು. ನದೀಮ್ ಶ್ರವಣ್ ಸಂಗೀತದಲ್ಲಿ ಕುಮಾರ್ ಸಾನು ಎಂಬ ಹೊಸ ಸ್ಟಾರ್‌ನ ಅನಾವರಣಕ್ಕೆ ಈ ಚಿತ್ರ ನಾಂದಿಯಾಗಿತ್ತು. ಈಗ ಮೋಹಿತ್ ಸೂರಿ ನಿರ್ದೇಶನದಲ್ಲಿ ಪ್ರೀತಿ ಮತ್ತೆ ಮರುಕಳಿಸುತ್ತದೆ ಎಂಬಂತೆ 'ಆಶಿಖಿ 2' ಬಿಡುಗಡೆಯಾಗಿದೆ. ಆದಿತ್ಯಾ ರಾಯ್ ಕಪೂರ್, ಶ್ರದ್ಧಾಕಪೂರ್ ಆಶಿಖಿಯ ಎರಡನೇ ಆವೃತ್ತಿಯ ನಾಯಕ, ನಾಯಕಿಯರು. ಆದರೆ, ಈ ವಾರ ಬಿಡುಗಡೆಯಾದ 'ಆಶಿಖಿ 2' ತನ್ನ ಮೂಲ ಚಿತ್ರದ ಮಟ್ಟಕ್ಕೆ ಏರಿಲ್ಲ ಎನ್ನುವುದು ಸಿನಿಮಾ ನೋಡಿದವರ ಅಭಿಪ್ರಾಯ. ಹಾಡುಗಳು ಕೇಳುವಂತಿದ್ದರೂ ಆಶಿಖಿಯಂತೆ ಎವರ್‌ಗ್ರೀನ್ ಅಲ್ಲ. ನಾಯಕ, ನಾಯಕಿ ಅಭಿನಯ ಇಷ್ಟವಾದರೂ ರಾಹುಲ್, ಅನು ಮಾಡಿದ ಮೋಡಿ ಕಾಣಿಸುವುದಿಲ್ಲ ಎಂಬುದು ಚಿತ್ರದ ಬಗೆಗಿನ ಕಾಮನ್ ಅಭಿಪ್ರಾಯ. ಹಾಗಾಗಿ 'ಫಸ್ಟ್ ಅಟೆಂಪ್ಟ್ ವಾಸ್ ದಿ ಬೆಸ್ಟ್ ಅಟೆಂಪ್ಟ್‌' ಎನ್ನುತ್ತಿದ್ದಾನೆ ಪ್ರೇಕ್ಷಕ. ಎಷ್ಟೇ ಆದರೂ ಅದು 'ಫಸ್ಟ್ ಲವ್‌'! ಕಥೆಯ ವಿಷಯದಲ್ಲಂತೂ 'ಆಶಿಖಿ 2' ಅಮಿತಾಭ್ ಬಚ್ಚನ್, ಜಯಾ ಬಾಧುರಿ ಅಭಿನಯದ ಅಭಿಮಾನ್ ಚಿತ್ರವನ್ನು ಹೋಲುತ್ತದಂತೆ. ದೊಡ್ಡ ಗಾಯಕನೊಬ್ಬ, ಹೊಸ ಹುಡುಗಿಯನ್ನು ಗಾಯನ ಕ್ಷೇತ್ರದಲ್ಲಿ ಬೆಳೆಸುವುದು, ಇಬ್ಬರ ನಡುವೆ ಪ್ರೀತಿ ಹುಟ್ಟುವುದು, ನಂತರ ಅವಳು ಇವನಿಗಿಂತ ಹೆಚ್ಚು ಜನಪ್ರಿಯತೆ ಪಡೆದು ಇವನಿಗೆ ಅದನ್ನು ಸಹಿಸಲು ಕಷ್ಟವಾಗುವುದು, ಹೀಗೆ. ಆದರೆ, ಆಶಿಖಿಯ ಮೂಲ ಚಿತ್ರಕ್ಕೆ ಅದರ ಎರಡನೇ ಭಾಗ ಯಾವ ರೀತಿಯಲ್ಲೂ ಮ್ಯಾಚ್ ಆಗಿಲ್ಲ ಎಂಬ ಪ್ರತಿಕ್ರಿಯೆ ಈಗಾಗಲೇ ವ್ಯಕ್ತವಾಗಿದೆ. ಹೇಳಿ ಕೇಳಿ ಮೋಹಿತ್ ಸೂರಿ ಥ್ರಿಲ್ಲರ್ ಚಿತ್ರಗಳನ್ನು ನಿರ್ದೇಶಿಸಿದ ಖ್ಯಾತಿ ಇರುವವರು. ಹಾಗಾಗಿ ಪ್ರೀತಿಯ ಫ್ಲೇವರ್ ಅವರಿಗೆ ಒಗ್ಗಿ ಬಂದಿಲ್ಲ ಎಂಬುದು ಮಹೇಶ್ ಭಟ್‌ರ ಆಶಿಖಿಯ ಇತಿಹಾಸ ಮರುಕಳಿಸುತ್ತದೆ ಎಂಬ ನಂಬಿಕೆಯಲ್ಲಿ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಹೋಗಿ, ಲವ್ ಫೈಲ್ಯೂರ್ ಆದವರಂತೆ ಹೊರಬಂದ ಪ್ರೇಕ್ಷಕರ ಅನಿಸಿಕೆ. - ಹರಿ