ಎರಡೂಕಾಲು ಗಂಟೆ ಫ್ರೀ 'ಟಾಕ್‌ಟೈಮ್‌' ಕೊಡುವ 'ಸುನಿ'ಕತೆ ಗಾಂಧಿನಗರದ ಸಿನಿಮಾಗಳ ನಡುವೆ ಗ್ಯಾಪಲ್ಲೊಂದ್ ನಮ್ಮದೂ ಇರ್ಲಿ ಎಂದುಕೊಂಡೇ ಸಿನಿಮಾ ಮಾಡುವವರ ಮಧ್ಯೆ ಸಿಂಪಲ್ಲಾಗೊಂದ್ ಲವ್‌ಸ್ಟೋರಿ ಮಾಡಿದ್ದಾರೆ ನಿರ್ದೇಶಕ ಸುನಿ. ಹಾಗಾಗಿ ಇದು ಗುಂಪಲ್ ಗೋವಿಂದ ಎನ್ನುವಂಥ ಸಿನಿಮಾ ಅಲ್ಲ. ಹೆಸರಿಗೆ ತಕ್ಕಂತೆ ಸಿಂಪಲ್ ಆಗಿದ್ದರೂ ಬ್ಯೂಟಿಫುಲ್ಲಾಗೊಂದು ಲವ್‌ಸ್ಟೋರಿ ಎನ್ನಬಹುದು. 'ಸಿನಿಮಾದಲ್ಲಿರೋ ಬೆಸ್ಟ್ ಪಾರ್ಟ್‌ಗಳನ್ನು ತೆಗೆದು ಟ್ರೈಲರ್ ಮಾಡಿರ್ತಾರೆ. ಆದ್ರೆ ಸಿನಿಮಾ ಹೆಂಗಿದೆ ಅಂತ ಗೊತ್ತಾಗಬೇಕಾದ್ರೆ ಥಿಯೇಟರ್‌ಗೆ ಹೋಗಿ ನೋಡಬೇಕು' ಎಂಬುದು ನಾಯಕಿಯ ಒಂದು ಸಂಭಾಷಣೆ. ಆದರೆ, ಸಿಂಪಲ್ಲಾಗೊಂದ್ ಲವ್‌ಸ್ಟೋರಿ ಸಿನಿಮಾ ನೋಡಿದ ಮೇಲೆ, ತಮ್ಮ ಚಿತ್ರದ ಟ್ರೈಲರ್ ಮೂಲಕ ಭರವಸೆ ಕೊಟ್ಟಿದ್ದ ನಿರ್ದೇಶಕ ಸುನಿ 'ಮಾತು' ತಪ್ಪದ ಮಗ ಎನಿಸಿಕೊಂಡಿದ್ದಾರೆ ಎಂಬ ಅಭಿಪ್ರಾಯಕ್ಕೆ ಬರಬಹುದು. ನಾಯಕಿಯ ಜ್ಞಾಪಕಶಕ್ತಿಗೆ ಕೇವಲ ಒಂದೇ ದಿನದ ಆಯುಸ್ಸು ಎನ್ನುವ '50 ಫಸ್ಟ್ ಡೇಟ್ಸ್‌' ಎಂಬ ಅಮೆರಿಕನ್ ಚಿತ್ರದ ಸಣ್ಣ ಎಳೆಯನ್ನಿಟ್ಟುಕೊಂಡು ಪ್ರೇಕ್ಷಕರನ್ನು 'ಮಾತಿಗೆಳೆಯುತ್ತಾರೆ' ನಿರ್ದೇಶಕ ಸುನಿ. ಹೆಣ್ಣು ನೋಡಲೆಂದು ಬಂದ ನಾಯಕನಿಗೆ ನಾಯಕಿ 'ನಾನವಳಲ್ಲ' ಎಂದು ಹೇಳುವ ಹೊತ್ತಿಗೆ ಇಬ್ಬರ ಮಧ್ಯೆ ಸಿಂಪಲ್ ಆಗಿ ಲವ್ ಆಗಿರುತ್ತದೆ. ಈ ಸಿಂಪಲ್ ಲವ್‌ಸ್ಟೋರಿಯ ಜೊತೆಗೆ ಇಬ್ಬರ ಫ್ಲ್ಯಾಷ್‌ಬ್ಯಾಕ್‌ಗಳಲ್ಲಿ ಅವರವರ ಹಳೆಯ ಕಿತ್ತೋಗಿರೋ ಲವ್‌ಸ್ಟೋರಿಗಳೂ ಇಣುಕುತ್ತವೆ. ಆದರೆ, ಹೊಸ ಗರ್ಲ್‌ಪ್ರೆಂಡ್‌ನಲ್ಲೂ ಹಳೆಯ ಹುಡುಗಿಯನ್ನೇ ಕಾಣುವ ಕಾನ್ಸೆಪ್ಟ್ ಇಷ್ಟವಾಗುತ್ತದೆ. ಈಗಿನ ಕಾಲೇಜು ಹುಡುಗ, ಹುಡುಗಿಯರನ್ನು ಮೆಚ್ಚಿಸಬೇಕು ಎಂದರೆ ಹೆಚ್ಚು ಹೆಚ್ಚು ಮಾತಾಡಬೇಕು ಎನ್ನುವ ಸಿನಿಕತೆಯಲ್ಲಿ ನಂಬಿಕೆ ಇಟ್ಟಿರುವ 'ಸುನಿ'ಕತೆ ಇದು. ಮಾತಿಗೆ ಹೆಸರಾದ ಯೋಗರಾಜಭಟ್ಟರ ಮಾರ್ಗದರ್ಶನದಲ್ಲಿ ಬೆಳೆದಂತೆ ಕಾಣುವ ಸುನಿ ಅವರ ಚಿತ್ರ ಯೋಗರಾಜವಾರ್ಗದಲ್ಲೇ ಸಾಗುತ್ತದೆ. ಮಾತು ಬಲ್ಲವನಿಗೆ ಜಗಳವಿಲ್ಲ ಎಂಬ ಮಾತು ಇಲ್ಲಿ ಸುಳ್ಳಾಗುತ್ತದೆ. ಮಾತನ್ನು ಜಗಳ ಆಡುವುದಕ್ಕೇ ಹೆಚ್ಚು ಬಳಸಿಕೊಳ್ಳುತ್ತಾರೆ ನಾಯಕ, ನಾಯಕಿ. ಇದರ ಜೊತೆ ಊಟ ಬಲ್ಲವನಿಗೆ ರೋಗವಿಲ್ಲ ಎನ್ನುತ್ತಾ ಆಗಾಗ ಅಡಿಗೆ ಎಕ್ಸ್‌ಪರ್ಟ್ ಕೂಡಾ ಆಗಿರುವ ನಾಯಕ, ಕೂಡ ಮಾತಲ್ಲಿಯೇ ಹೆಣ್ಣಾಡಿಸೋ ಗೋವಿಂದ ಕಲೆ ಕಲಿತ 'ಪಂಚರಂಗಿ' ಪುಟ್ಟ. ಮಾತಿನಲ್ಲಿ, 'ನನ್ನ ನೀನು ಗೆಲ್ಲಲಾರೆ' ಎನ್ನುವ ನಾಯಕಿ. 'ಏ ಬುಲ್‌ಬುಲ್ ಮಾತಾಡಕಿಲ್ವಾ?' ಎಂದು ಕೇಳುವ ಪ್ರಮೇಯವೇ ಇಲ್ಲ. ಅವರ ಲೆಕ್ಕದಲ್ಲಿ 'ಮಾತಿನಲ್ಲಿ ಹೇಳಲಾರೆನು' ಎನ್ನುವಂಥದ್ದು ಏನೂ ಇಲ್ಲ. ಹಾಗಾಗಿ, ಪ್ರೇಕ್ಷಕರಿಗೆ ಎರಡೂಕಾಲು ಗಂಟೆ ಫ್ರೀ 'ಟಾಕ್‌ಟೈಮ್‌'. ಸುನಿ ಅವರ ನಿರೂಪಣೆಯಲ್ಲಿ ಪಾತ್ರಗಳು ಮಾತಾಡ್ತಾ ಕೂತ್ರೆ ಹೊತ್ತು ಹೋಗೋದೇ ಗೊತ್ತಾಗಲ್ಲ. ತಮ್ಮ ಚಿತ್ರದಲ್ಲಿ ಮಾತಿಗೇ ಹೆಚ್ಚು ಪ್ರಾಶಸ್ತ್ಯ ಇರುವುದರಿಂದಲೋ ಏನೋ ಸುನಿ ಸಾಕಷ್ಟು ರೇಡಿಯೋ ಜಾಕಿಗಳನ್ನೂ ಬಳಸಿಕೊಂಡಿದ್ದಾರೆ. ಬಹುತೇಕ ಚಿತ್ರದ ತುಂಬಾ ನಾಯಕ ನಾಯಕಿ ಇಬ್ಬರೇ. 'ಸುತ್ತಮುತ್ತ ಯಾರೂ ಇಲ್ಲ, ನಾನು ನೀನೇ ಇಲ್ಲಿ ಎಲ್ಲ' ಎನ್ನುವ ಅವರ ಸಂಭಾಷಣೆಯಲ್ಲಿ 'ಸುತ್ತಿ ಬಳಸಿ' ಮಾತನಾಡುವ ಉಪಮೆಗಳ ಉಪಕಥೆಯೇ ಹೆಚ್ಚು. ನಾಯಕ ನಾಯಕಿಯರು 'ಸೊಂಟ ಸುತ್ತಿ ಬಳಸುವ' ರೊಮ್ಯಾಂಟಿಕ್ ಸನ್ನಿವೇಶಗಳು ಕಡಿಮೆಯೇ. ಆದರೆ, ಅವರ ಸಂಭಾಷಣೆ ಮಾತ್ರ ಒಮ್ಮೊಮ್ಮೆ 'ಸೊಂಟದ ಕೆಳಗೆ ಸುತ್ತಿ ಬಳಸುತ್ತದೆ'. ಇದು ಭಕ್ತಿ ಪ್ರಧಾನ ದೇವರ ಚಿತ್ರವೇನೂ ಅಲ್ಲವಾದ್ದರಿಂದ ಒಂದಷ್ಟು ತುಂಟ ಸಂಭಾಷಣೆಗಳಿಗೆ ಮಾರ್ಜಿನ್ ಕೊಡಬೇಕಾಗುತ್ತದೆ. ಹಾಗಂತ ಇದು ತೀರಾ 'ದೇವರ ಚಿತ್ರ'ವೇನೂ ಆಗಿಲ್ಲ. ಮಾತಿಗೆ ಮಾತು ಬೆಳೆದು ಸಿನಿಮಾ ಮುಗಿಯುವ ಹೊತ್ತಿಗೆ ಒಂದು ಸುಂದರವಾದ ಕ್ಲೈಮ್ಯಾಕ್ಸ್ ನೋಡುವ ಪ್ರೇಕ್ಷಕ ಚಿತ್ರದ ಬಗ್ಗೆ 'ಮಾತಾಡಂಗಿಲ್ಲ' ಎನ್ನುವ 'ಸೊಲ್ಲಿಲ್ಲದ ಸರದಾರ'. ಮಾತಾಡುವ ಮಶೀನ್‌ಗಳಂತೆ ಕಾಣುವ ನಾಯಕ ರಕ್ಷಿತ್ ಮತ್ತು ನಾಯಕಿ ಶ್ವೇತಾ ಅವರನ್ನು 'ಮಾತ್‌'ಮೆಟಿಷಿಯನ್‌ಗಳು ಎನ್ನಬಹುದು. ನೋಡಿದ ತಕ್ಷಣ ಹ್ಯಾಂಡ್‌ಸಮ್ ಮತ್ತು ಬ್ಯೂಟಿಫುಲ್ ಎಂದು ಹೇಳುವ ಚಾಕೊಲೇಟ್ ಹೀರೋ, ಹೀರೋಯಿನ್‌ಗಳಲ್ಲದಿದ್ದರೂ ಚಿತ್ರ ಮುಗಿಯುವ ಹೊತ್ತಿಗೆ ಪ್ರೇಕ್ಷಕರಿಂದ 'ನೀನಂದ್ರೆ ನಂಗಿಷ್ಟ' ಎನಿಸಿಕೊಳ್ಳುತ್ತಾರೆ. ರಕ್ಷಿತ್ ಅವರ ಮಾತನಾಡುವ ಶೈಲಿ, ಹಾವಭಾವಕ್ಕೆ, ಚೂಟಿ ಮತ್ತು ನಾಟಿ ಎನಿಸುವ ಶ್ವೇತಾ ಅವರ ತುಂಟತನ ಸೇರಿ 'ಸೂಪರ್ರಾಗೊಂದ್ ಲವ್‌ಸ್ಟೋರಿ' ಆಗಿದೆ ಎನ್ನಬಹುದು. ಇಂಪಾಗಿರುವ ಭರತ್ ಅವರ ಸಂಗೀತ, ತಂಪಾಗಿರುವ ಮನೋಹರ್ ಜೋಶಿ ಅವರ ಛಾಯಾಗ್ರಾಹಣ ಸಿಂಪಲ್ ಲವ್‌ಸ್ಟೋರಿಗೆ ಇನ್ನಷ್ಟು ಕಳೆತಂದಿದೆ. ಸಿನಿಮಾಗಳಿಗೆ ಮಾಧ್ಯಮಗಳಲ್ಲಿ ಏನೇ ಪ್ರಚಾರ ಸಿಕ್ಕರೂ ಪ್ರೇಕ್ಷಕರು ಕೊಡುವ 'ಮೌತ್ ಪಬ್ಲಿಸಿಟಿ' ಎಲ್ಲಕ್ಕಿಂತ ಮುಖ್ಯವಾಗುತ್ತದೆ. ಆದರೆ, ಸಂಭಾಷಣೆಯನ್ನೇ ಹೆಚ್ಚು ನಂಬಿಕೊಂಡಿರುವ 'ಸಿಂಪಲ್ಲಾಗೊಂದ್ ಲವ್‌ಸ್ಟೋರಿ' ಚಿತ್ರದ ಮಟ್ಟಿಗೆ ಅದರ 'ಮಾತ್‌' ಪಬ್ಲಿಸಿಟಿಯೇ ಅದನ್ನು ಕಾಪಾಡುವ ಸಾಧ್ಯತೆಗಳು ಹೆಚ್ಚು. - ಹರಿ