ಮಾ ಚಂದ್ರು ತುಝೆ ಸಲಾಮ್ ಮಧ್ಯಂತರಕ್ಕೆ ಮುನ್ನ ಚಿತ್ರದ ನಾಯಕ ಬಂಗಾರಿಯನ್ನು ವಿಲನ್‌ಗಳು ಯದ್ವಾ ತದ್ವಾ ತದುಕುವ ದೃಶ್ಯ. ಪಕ್ಕದಲ್ಲಿ ನಾಯಕಿ. ಜೊತೆಗೊಬ್ಬ ಚಿಕ್ಕ ಹುಡುಗ. ಆ ಹುಡುಗ ಬಂಗಾರಿಯನ್ನು ಹೊಡೆಯುವ ವಿಲನ್‌ನ ಕಾಲು ಹಿಡಿದುಕೊಂಡು ದಯನೀಯವಾಗಿ ಬೇಡಿಕೊಳ್ಳುತ್ತಾನೆ, 'ಬಿಟ್‌ಬಿಡಣ್ಣ, ಅಣ್ಣಾ ಬಿಟ್‌ಬಿಡಣ್ಣ, ಪ್ಲೀಸ್ ಬಿಟ್‌ಬಿಡಣ್ಣ'. ಅಲ್ಲಿ ಪ್ರೇಕ್ಷಕ ಅಲರ್ಟ್ ಆಗುತ್ತಾನೆ. 'ಬಿಟ್‌ಬಿಡಣ್ಣಾ' ಎಂದು ಬೇಡಿಕೊಳ್ಳುತ್ತಿರುವ ಆ ಹುಡುಗ ಚಿತ್ರದ ಇಂಟರ್‌ವಲ್ ಬಗ್ಗೆ ಹೇಳುತ್ತಿದ್ದಾನಾ ಎನ್ನುವ ಪ್ರೇಕ್ಷಕನ ಅನುಮಾನ ನಿಜವಾಗುತ್ತದೆ. ಚಿತ್ರದ ಕೊನೆಯಲ್ಲೂ, ನಾಯಕ ಬಂಗಾರಿ ಬಸ್‌ನಲ್ಲಿ ಪ್ರಯಾಣಿಸುತ್ತ ಫ್ಲ್ಯಾಷ್‌ಬ್ಯಾಕ್‌ನಲ್ಲಿರುವಾಗ 'ಲಾಸ್ಟ್‌ಸ್ಟಾಪ್ ಬಂತು' ಎಂಬ ಹಿಂಟ್ ಕೊಡಲಾಗುತ್ತದೆ. ಅದಾಗಿ ಎರಡು ನಿಮಿಷಕ್ಕೆ ಸಿನಿಮಾ ಮುಗಿಯುತ್ತದೆ. ಈ ಲೆಕ್ಕಾಚಾರದಲ್ಲಿ ಮಾತ್ರ ನಿರ್ದೇಶಕ ಮಾಚಂದ್ರು 'ಬಂಗಾರಿ'ಯನ್ನು ನೋಡಲು ಬರುವ ಪ್ರೇಕ್ಷಕರನ್ನು ಕೊನೆಯವರೆಗೂ ಕೂಡಿಸುತ್ತಾರೆ ಎನ್ನಬಹುದು. ಅದನ್ನು ಬಿಟ್ಟರೆ, ಗಂಭೀರವಾದ ಸಭೆಯಲ್ಲಿ ಗಣ್ಯರ ಭಾಷಣದ ಕೊರೆತ ತಾಳಲಾಗದೆ ಇದ್ದರೂ, ಮುಂದಿನ ಸೀಟಿನಲ್ಲಿ ಕೂತಿದ್ದೇವೆ ಎಂಬ ಕಾರಣಕ್ಕೆ, ಎದ್ದು ಹೋಗಲಾರದೆ ಅಲ್ಲೇ ಚಡಪಡಿಸುವ ಸಭಿಕರ ಪರಿಸ್ಥಿತಿ 'ಬಂಗಾರಿ' ಪ್ರೇಕ್ಷಕರದ್ದು. ಚಿತ್ರದ ಕತೆಯನ್ನು ನಿರ್ದೇಶಕರು, ನಿರ್ಮಾಪಕರಿಗೆ ಹೇಗೆ ಹೇಳಿದರೋ ಗೊತ್ತಿಲ್ಲ, ಆದರೆ ಅದನ್ನು ಪ್ರೇಕ್ಷಕನಿಗೆ ಹೇಳುವ ಜವಾಬ್ದಾರಿಯನ್ನು ಮಾತ್ರ ಲೈಟಾಗಿ ತೆಗೆದುಕೊಂಡಿದ್ದಾರೆ. ಚಿತ್ರದಲ್ಲಿ ತಾಯಿ ಸೆಂಟಿಮೆಂಟ್ ಇದ್ದರೆ ಸಿನಿಮಾ ಗೆಲ್ಲುತ್ತದೆ ಎಂಬ ಮಾರ್ನಿಂಗ್ ಶೋನಲ್ಲಿ ಬಿದ್ದ ಹಗಲುಕನಸಿನ ಹಿಂದೆ ಬಿದ್ದು ತಾಯಿಯ ಶೋಷಣೆ ಮಾಡಿದ್ದಾರೆ ನಿರ್ದೇಶಕ ಮಾಚಂದ್ರು. 'ತಾಯಿಯನ್ನು' ಚಿತ್ರದಿಂದ ಹೊರಗೆ ಹಾಕಿದರೂ, ಕಥೆಗೆ ಯಾವ ಹಾನಿಯೂ ಆಗಲಾರದು ಎಂಬಂತಿರುವ ಚಿತ್ರಕಥೆಯಲ್ಲಿ, ಪ್ರೇಕ್ಷಕ ತಾಯಿಯ ಮಡಿಲಲ್ಲಿ ಮಲಗಿ ನಿದ್ದೆ ಮಾಡುತ್ತಾನೆ. ಅಷ್ಟರಮಟ್ಟಿಗೆ ತಾಯಿಯ ಜೋಗುಳ ಕೆಲಸ ಮಾಡಿದೆ. ತಮ್ಮ ಹೆಸರಿನಲ್ಲೇ ಮಾ ಇಟ್ಟುಕೊಂಡು, 'ಮೇರೆ ಪಾಸ್ 'ಮಾ' ಹೈ' ಎನ್ನುವ ಕಾರಣಕ್ಕಾಗಿ ಅನಗತ್ಯ 'ಮಾ' ಸೆಂಟಿಮೆಂಟ್ ತುರುಕಿರುವ ನಿರ್ದೇಶಕರ ಪ್ರಯತ್ನಕ್ಕೆ ಒಂದೇ ಮಾತು, 'ಮಾ ಚಂದ್ರು ತುಝೆ ಸಲಾಮ್‌'. ಇವನು ಬಂಗಾರಿ, ಆಕೆ ಬಿಂಕದ ಸಿಂಗಾರಿ. ಬುಲ್‌ಬುಲ್‌ಗೆ ಬಂಗಾರಿಯ ಮೇಲೆ ಲವ್. ಈ ಬಂಗಾರಿ, ಕೈಯಲ್ಲಿ ಕಾಸಿಲ್ಲದ ದಿಲ್‌ವಾಲಾ, ಒಮ್ಮೊಮ್ಮೆ ಅರ್ಜುನನ ವೇಷದಲ್ಲಿ 'ಬಿಲ್‌'ವಾಲಾ. ಮಗಳ ಪ್ರೀತಿಯನ್ನು ವಿರೋಧಿಸುವ ತಂದೆ, ಅವನ ರಾಜಕೀಯ ವಿರೋಧಿಗಳ ಆಟ, ಅದಕ್ಕೆ ದಾಳವಾಗುವ ಬಂಗಾರಿಯ ಕಥೆ ಇದು. ಒಂದು ಹಾಡು, ಒಂದು ಫೈಟು, ಒಂದು ಕಾಮಿಡಿ, ಒಂದು ತಾಯಿ ಸೆಂಟಿಮೆಂಟು, ಇದು ಬಂಗಾರಿ ಚಿತ್ರದ ಸೀನ್ ಡಿವಿಷನ್. ಆದರೆ ಈ ಭಾಗಾಕಾರ ಎಡವಟ್ಟಾಗಿ, ನಿರ್ದೇಶಕರ ಸಿನಿಮಾ ಗುಣಾಕಾರಕ್ಕೆ ತೀವ್ರ ಸಂಚಕಾರ ಬಂದಿದೆ. ಇದರ ಜೊತೆಗೆ ಒಂದಷ್ಟು ಗುಂಪಿಗೆ ಸೇರದ ದೃಶ್ಯಗಳೂ ಸೇರಿ, ಪ್ರೇಕ್ಷಕರ ಹಾಹಾಕಾರ ಚಿತ್ರದ ರೀರೆಕಾರ್ಡಿಂಗ್ ಅನ್ನೂ ಮೀರಿಸುವಂತೆ ಕೇಳಿಸುತ್ತದೆ. ಚಿತ್ರದ ಕಥೆಯ ಸೈಡ್‌ವಿಂಗ್ ಕಾಮಿಡಿ ದೃಶ್ಯಗಳಲ್ಲಿ, ಸಾಧು ಕೋಕಿಲಾ ಆಗಾಗ ಬಂದು ಒದೆ ತಿಂದು ಹೋಗುವುದಕ್ಕೆ ಸೀಮಿತವಾಗಿರುವುದರಿಂದ, ಅದು ಕಾಮಿಡಿನಾ ಅಥವಾ ಫೈಟಾ ಎಂದು ಪ್ರೇಕ್ಷಕ ಮತ್ತೆ ಗಲಿಬಿಲಿಗೊಳ್ಳುತ್ತಾನೆ. ಫೈಟಿಂಗ್ ದೃಶ್ಯವೊಂದರಲ್ಲಿ, ಹಾರೆಯನ್ನು ಎದೆಗೆ ಚುಚ್ಚಿದರೂ ಬಂಗಾರಿ ಬದುಕುತ್ತಾನೆ. ಸತ್ತಮೇಲೆ ಎಲ್ಲರೂ ಸ್ವರ್ಗಕ್ಕೋ ನರಕಕ್ಕೋ ಹೋಗುವುದು ವಾಡಿಕೆ, ಆದರೆ ಇಲ್ಲಿ ಬಂಗಾರಿ ಸತ್ತ ಮೇಲೆ ಜೈಲಿಗೆ ಹೋಗುತ್ತಾನಲ್ಲ ಎಂಬ ಗೊಂದಲ ಪ್ರೇಕ್ಷಕರದು. 'ಲೂಸ್‌'ಮಾದ ಅಪ್ಪಿತಪ್ಪಿ 'ಗುಣಮುಖ'ರಾಗಿದ್ದಾರಾ ಎಂಬ ಅನುಮಾನ ಹುಟ್ಟಿಸುವಂತೆ ಇಲ್ಲಿ ಅವರ ಟ್ರೇಡ್‌ಮಾರ್ಕ್ ಅಭಿನಯ ಕಾಣಿಸುವುದಿಲ್ಲ. ರಾಗಿಣಿಗೆ ಕಂಠದಾನದ ಜೊತೆ ಅಭಿನಯವನ್ನೂ ಯಾರಾದ್ರೂ ದಾನ ಮಾಡುವ ಅವಶ್ಯಕತೆಯಿದೆ. ವಿಭಿನ್ನ ಪಾತ್ರದಲ್ಲಿ ರಮೇಶ್‌ಭಟ್ ತೃಪ್ತಿಪಟ್ಟಿದ್ದಾರೆ. ನೀಲ್ ಸಂಗೀತದಲ್ಲಿ ಒಂದೆರಡು ಕೇಳುವಂಥ ಹಾಡುಗಳಿವೆ. ನಿರಂಜನ್‌ಬಾಬು ಕ್ಯಾಮೆರಾ ಕೂಡ ಹಾಡುಗಳನ್ನೇ ನೆಚ್ಚಿಕೊಂಡಿದೆ. ಆ್ಯಕ್ಷನ್ ದೃಶ್ಯಗಳಲ್ಲಿ ಲೂಸ್‌ಮಾದ - ಮಾಸ್‌ಮಾದ ಕಾಂಬಿನೇಶನ್ ಮುದನೀಡುತ್ತದೆ. -ಹರಿ