ವಕೀಲರು ಬೀದಿ ಕಾಳಗ ಮಾಡಬಾರದಂತ ರೂಲ್ಸ್ ಇಲ್ವಲ್ಲ! ಆತ ಕಾನೂನು ಪದವಿ ಮುಗಿಸಿ ಪ್ರಾಕ್ಟೀಸ್‌ಗೆ ಅಂತ ಕೋರ್ಟ್‌ಗೆ ಬಂದವ. ಆದರೆ, 'ಲಾ' ದೇಗುಲ ಬಿಟ್ಟು ಲಾಂಗ್ ಹಿಡಿದವರನ್ನು ಅಟ್ಟಾಡಿಸಿಕೊಂಡು ಸದೆಬಡಿಯುವುದೇ ಈತನ ಮುಖ್ಯ ವೃತ್ತಿ. ಹಾಗಾದರೆ ಕಾನೂನು ಪಾಠ ಕಲಿತ ವಕೀಲರೇ ಕಾನೂನು ಕೈಗೆತ್ತಿಕೊಂಡರೆ ಹೇಗೆ? ಇದು ಕೇವಲ ಪ್ರಶ್ನೆಯಲ್ಲ, ಪ್ರೇಕ್ಷಕನ ಪಾಲಿಗೆ ಒಂದು 'ಸವಾಲ್‌' ಆಗಿ ಉಳಿಯುತ್ತದೆ. ಇಷ್ಟಕ್ಕೂ ಕೇಸು ಹಿಡಿದು ಕೋರ್ಟ್‌ನಲ್ಲಿ ವಾದ ಮಾಡಬೇಕಾದ ಲಾಯರ್ ಬೀದಿಗಿಳಿದು ರೌಡಿಗಳನ್ನು ಅಟ್ಟಾಡಿಸಿಕೊಂಡು ಹೊಡೆಯುತ್ತಾನೆಂದು ಬೇಸರ ಮಾಡಿಕೊಳ್ಳುವಂತಿಲ್ಲ. ಯಾಕೆಂದರೆ 'ಲಾ ಓದಿವರು ಬೀದಿ ಜಗಳ ಮಾಡಬಾರದು ಅಂತ ಏನಾದರೂ ರೂಲ್ಸ್ ಇದಿಯೇ?' ಎಂದು ಯಾರಾದರು ಕೇಳಿದರೂ ಅಚ್ಚರಿ ಇಲ್ಲ. ಹೀಗಾಗಿ ಸಾಮಾನ್ಯ ವ್ಯಕ್ತಿ 'ಲಾ ಪಾಯಿಂಟ್‌' ಹಿಡಿದು ಮಾತನಾಡಿದರೆ ಲಾ ಪದವಿಯನ್ನೇ ಲಾಂಗ್ ಆಗಿ ಬಳಸುವ ಎಲ್ಲ ಅಪಾಯಗಳು ಇಲ್ಲಿವೆ! ಅರೇ, ವಕೀಲರ ಬೀದಿ ಕಾಳಗ ಕಥೆ ಓದಿ ನೀವು ಏನನ್ನೋ ನೆನಪಿಸಿಕೊಳ್ಳಬೇಡಿ. ನಟ ಪ್ರಜ್ವಲ್ ದೇವರಾಜ್‌ರ 'ಸವಾಲ್‌' ಚಿತ್ರದ ವ್ಯಥೆ ಇದು. ಇಲ್ಲಿ ಚಿತ್ರದ ನಾಯಕ ಜ್ಯೂನಿಯರ್ ಲಾಯರ್. ನಾಯಕಿ ಮತ್ತು ಅವನ ಸ್ನೇಹಿತರು ಕೂಡ. ಜೊತೆಗೆ ನಾಯಕಿಯ ತಂದೆಯೂ ಸಹ ಪ್ರಸಿದ್ಧ ಕ್ರಿಮಿನಲ್ ನ್ಯಾಯವಾದಿ. ಹಾಗಾದರೆ ಆರೋಪಿಗಳ್ಯಾರು? ಚಿತ್ರದ ಖಳನಾಯಕ ಶೋಭರಾಜ್, ಅವನ ತಮ್ಮ ರಾಜ್ ಕೆ. ಪುರೋಹಿತ್ ಅಂದುಕೊಂಡಿದ್ದರೆ ಅದು ನಿಮ್ಮ ತಪ್ಪು. ಚಿತ್ರ ನೋಡಲು ಹೋಗುವ ಪ್ರೇಕ್ಷಕರೇ ಆರೋಪಿಗಳು. ಯಾಕೆಂದರೆ ಕೇಸು ಹಿಡಿದು ಕೋರ್ಟ್‌ಲ್ಲಿ ವಾದ ಮಾಡಿ ಕಾನೂನು ಮೂಲಕ ನ್ಯಾಯ ಕೊಡಿಸಬೇಕಾದ ಲಾಯರ್ ರೌಡಿಗಳೊಂದಿಗೆ ಚೇಸಿಂಗ್ ಆಟವನ್ನು ನೋಡಿದಾಗ ಪ್ರೇಕ್ಷಕನಿಗೆ ಚಿತ್ರಮಂದಿರದ ಸೀಟ್‌ನಲ್ಲಿ ಕೂತಿದ್ದೇನೆ ಎನ್ನುವುದಕ್ಕಿಂತ ಕೋರ್ಟ್ ಕಟಕಟೆಯಲ್ಲಿ ನಿಂತ ಅನುಭವ! ಚಿತ್ರ ನೋಡುವ ಪ್ರೇಕ್ಷಕರನ್ನೇ ಅರೋಪಿಗಳನ್ನಾಗಿಸಿದ ಕೀರ್ತಿ ನಿರ್ದೇಶಕ ಧನಂಜಯ ಬಾಲಾಜಿ ಅವರಿಗೆ ಸಲ್ಲಬೇಕು. ಇದರ ನಡುವೆ ಪಿ.ಕೆ.ಎಚ್. ದಾಸ್‌ರ ಕ್ಯಾಮೆರಾ ಯೌವ್ವನ ಭರಿತವಾಗಿ ನಾಯಕಿ ಸೋನಾ ಛಾಬ್ರಾ ಅವರ ದೇಹದ ಉಬ್ಬು- ತಗ್ಗು ಪ್ರದೇಶಗಳಲ್ಲಿ ಅಡ್ಡಾಡುತ್ತ ಪ್ರೇಕ್ಷಕನಿಗೆ ಒಂಚೂರು ರಿಲ್ಯಾಕ್ಸ್ ಕೊಡುತ್ತದೆ ಅಂದರೆ ಅದನ್ನ ಪೋಲಿತನ ಅನ್ನಬೇಡಿ. ತಿಮ್ಮರಾಜು ನಿರ್ಮಾಣದ ಈ ಚಿತ್ರದ ಕಥೆಯಲ್ಲಿ ಧಮ್ ಇಲ್ಲ ಎನ್ನುವುದಕ್ಕೆ ಇಷ್ಟೆಲ್ಲ ರಾಮಾಯಣ ಹೇಳಬೇಕಾಯಿತು. ಆಗಷ್ಟೆ ಕಾನೂನು ಓದಿ ಬಂದಿರುವ ನಾಯಕ ಅರ್ಜುನ್ ಮತ್ತವನ ಸ್ನೇಹಿತರು ಹಿರಿಯ ವಕೀಲ ಮೆಣಸಿನಕಾಯಿ ಬಳಿ ಪ್ರಾಕ್ಟೀಸ್‌ಗೆ ಬರುತ್ತಾರೆ. ಆದರೆ, ಮೆಣಸಿನಕಾಯಿ ಕ್ರಿಮಿನಲ್ ಲಾಯರ್ ಎನ್ನುವುದಕ್ಕಿಂತ ಕಾಮಿಡಿ ಪೀಸು ಎನಿಸಿಕೊಳ್ಳುತ್ತಾನೆ. ಆಗಾಗ ನಗೆಪಾಟಲಿಗೆ ಒಳಗಾಗುವ ಮೆಣಸಿನಕಾಯಿ, ಕೋರ್ಟ್‌ನ್ನೂ ಹಾಸ್ಯ ಕಚೇರಿಯನ್ನಾಗಿಸುತ್ತಾನೆ. ಇಂಥ ಕಾಮಿಡಿ ಲಾಯರ್‌ಗಳು ಮತ್ತು ಕೋರ್ಟ್ ಖಳನಾಯಕನ ತಮ್ಮ ಆದಿಯಿಂದ ಗಂಭೀರವಾಗುವ ಪ್ರಯತ್ನ ಮಾಡುತ್ತದೆ. ಖಳನ ಕಾನೂನು ಬಾಹಿರ ಚಟುವಟಿಕೆಗಳನ್ನು ಕಾನೂನು ಮೂಲಕವಲ್ಲದೆ ಹೀರೋಯಿಸಂ ಆಗಿ ಹೇಗೆ ನಾಯಕ ಬಯಲಿಗೆ ತರುತ್ತಾನೆ ಎನ್ನುವುದು ಮುಂದಿನ ಲಾ ಪಾಯಿಂಟ್. ಇದರ ಜೊತೆಗೆ 'ಲಯಲ್ ಜಗಪತಿರಾವ್‌' ಚಿತ್ರದ ಕಾಲಘಟ್ಟದ ಒಂದು ಫ್ಲ್ಯಾಷ್ ಬ್ಯಾಕ್ ಬರುತ್ತದೆ. ಯಾವ ಪಾತ್ರಕ್ಕೂ ಗಂಭೀರತೆ ಇಲ್ಲ. ಕಥೆಗೆ ಬೇಕಾದ ಸೂಕ್ಷ್ಮ ತಿರುವುಗಳಿಲ್ಲ. ಹೇಗೆ ಬೇಕೋ ಹಾಗೆ ಸಾಗುವ ಈ ಚಿತ್ರವನ್ನು ನೋಡಿದಾಗ ನಿಜಕ್ಕೂ ನಟನಾಗಿ ಪ್ರಜ್ವಲ್ ಎಡುವುತ್ತಿದ್ದಾರೋ, ಅವರ ಚಿತ್ರಗಳು ಸೋಲುತ್ತಿವೆಯೋ? ಎನ್ನುವ ಲಾ ಪ್ರಶ್ನೆ ಅಲ್ಲದಿದ್ದರೂ ಕಾಮನ್ ಅಭಿಪ್ರಾಯ ಮೂಡುವಲ್ಲಿಗೆ 'ಸವಾಲ್‌' ಚಿತ್ರ ಸಮಾಪ್ತಿಯಾಗುತ್ತದೆ. - ಆರ್. ಕೇಶವಮೂರ್ತಿ