ಟೈಟಲ್ ಭಿನ್ನವಾಗಿದ್ದರೆ ಚಿತ್ರ ಸೂಪರ್ ಹಿಟ್ ಆಗುತ್ತಾ? ಚಿತ್ರ ಹಿಟ್ ಮತ್ತುಫ್ಲಾಪ್ ಆಗಲಿಕ್ಕೆ ಅದರ ಟೈಟಲ್ ಮುಖ್ಯ ಅಂತ ಗಾಂಧಿನಗರದ ಮಂದಿ ಕಿವಿಗೆ ಯಾರು ಊದಿದರೋ ಗೊತ್ತಿಲ್ಲ. ಚಿತ್ರ- ವಿಚಿತ್ರ ಶೀರ್ಷಿಕೆಗಳ ಚಿತ್ರಗಳನ್ನು ನೋಡಲು ಹೋಗಿ ಪ್ರೇಕ್ಷಕ ಪಿತ್ತ ನೆತ್ತಿಗೇರಿಸಿಕೊಂಡು ಏನೂ ಮಾಡಲಿಕ್ಕಾಗದೆ ಕೊಟ್ಟ ಹಣ ವ್ಯರ್ಥವಾಗದಿರಲಿ ಅಂತ ಕೂತಲ್ಲೇ ಗೊರಕೆ ಹೊಡೆದು ಬರುತ್ತಾನೆ. 'ಲೈಫು ತುಂಬಾ ಬೋರು ಗುರು' ಅಂತ ಸಿನಿಮಾ ನೋಡಲು ಹೋಗುವವರಿಗೆ 'ನಾನ್ಯಾಕೆ ಇಲ್ಲಿಗೆ ಬಂದೆ? ನನ್ ಲೈಫ್ ಎಲ್ಲಿ?' ಎಂದು ಗಾಬರಿಯಿಂದ ಎದ್ದೇಳುವವನಿಗೆ ಇಂಟರ್‌ವೆಲ್ ನಂತರ ಕೊಂಚ ಸಮಾಧಾನ ಆಗಬಹುದು. ಇದಷ್ಟೂ ಮಾತು 'ನನ್ ಲೈಫ್ ಅಲ್ಲಿ' ಎನ್ನುವ ಟಿಪಿಕಲ್ ಟೈಟಲ್ ಸಿನಿಮಾಗೆ ಸಲ್ಲುವಂಥದ್ದು. ಗಾಂಧಿನಗರಕ್ಕೆ ಬರುವ ಹೊಸ ನಿರ್ದೇಶಕರಿಗೆ 'ಟೈಟಲ್ ವಿಭಿನ್ನವಾಗಿದ್ದರೆ ಸಿನಿಮಾ ಸೂಪರ್ ಹಿಟ್ ಆಗುತ್ತೆ' ಎಂದು ಹೇಳಿದ್ದು ಯಾರೋ ಗೊತ್ತಿಲ್ಲ. ಆದರೆ, ಸಿನಿಮಾ 'ಹಿಟ್‌'ಗೂ ಮನೆ 'ಹಿಟ್ಟಿ'ಗೂ ಅರ್ಧ ಅಕ್ಷರ ಮಾತ್ರ ವ್ಯತ್ಯಾಸ ಎನ್ನುವುದು 'ನನ್ ಲೈಫ್ ಅಲ್ಲಿ' ಚಿತ್ರದ ನಿರ್ದೇಶಕ ರಾಮ್ ದೀಪ್‌ರಿಗೆ ಗೊತ್ತಿರಲಿ. ಚಿತ್ರ ಎತ್ತ ಸಾಗುತ್ತಿದೆ ಎಂದು ಪ್ರೇಕ್ಷಕನಿಗೆ ಮಾತ್ರವಲ್ಲ, ಸ್ವತಃ ನಿರ್ದೇಶಕರಿಗೂ ಕಾಡಿರಬೇಕು. ಹೀಗಾಗಿ ಕಲಾವಿದರನ್ನು ಎಲ್ಲೆಲ್ಲೋ ಸುತ್ತಾಡಿಸಿ ಇಂಟರ್‌ವೆಲ್ ಕೊಡುತ್ತಾರೆ. ಅನೀಶ್, ದಿಲೀಪ್ ರಾಜ್, ಸಿಂಧು ಲೋಕ್‌ನಾಥ್, ಅಜಯ್‌ರಾಜ್, ಮಿತ್ರ ಮುಂತಾದವರು 'ಲೈಫ್‌'ನ ಮುಖ್ಯ ಪಿಲ್ಲರ್‌ಗಳು. ಒಂದು ಪಿಲ್ಲರ್ ಸಾಯುವುದರೊಂದಿಗೆ ಚಿತ್ರ ತಿರುವು ಪಡೆದುಕೊಳ್ಳುತ್ತದೆ. ಜವಾಬ್ದಾರಿ ಇಲ್ಲದ ತಮ್ಮ ಓದಿ ನಾರ್ವೆ ದೇಶಕ್ಕೆ ಹೋಗಲು ರೆಡಿಯಾಗುತ್ತಾನೆ. ಜವಾಬ್ದಾರಿಯುತ ಅಣ್ಣನಿಗೆ ಪ್ರೀತಿ, ಪ್ರೇಮದ ಜೊತೆಗೆ ಒಂಚೂರು ಸಾಮಾಜಿಕ ಕಾಳಜಿ ಬೇರೆ. ಆದರೆ, ಸೋದರ ಹೊರ ದೇಶಕ್ಕೆ ಹೋಗಲ್ಲ. ಕಾರಣ ಅಣ್ಣನ ಸಾವು. ಅಣ್ಣ ಯಾಕೆ ಸತ್ತ? ಎನ್ನುವ ಪ್ರಶ್ನೆ ಜೊತೆ ಮತ್ತೊಂದು ತಿರುವು. ತಮ್ಮ ಬದಲಾಗುತ್ತಾನೆ. ಸ್ವದೇಶದಲ್ಲೇ ಕಾಲೇಜು ಸೇರುತ್ತಾನೆ. ಪೋಕರಿಯಾಗಿದ್ದವನು ಸಾಫ್ಟ್ ವಿದ್ಯಾರ್ಥಿಯಾಗುತ್ತಾನೆ. ಪ್ರೀತಿಸಿದ ಹುಡುಗಿಯ ಅಣ್ಣನನ್ನು ನೋಡಿ ಶಾಕ್ ಆಗುತ್ತಾನೆ. ಯಾಕೆ? ಮಗದೊಂದು ತಿರುವುದು. ಹೀಗೆ ಅಲ್ಲೇ ತಿರುಗಮುರಗಾ ಬೀಚ್‌ನಲ್ಲೇ ಪಲ್ಟಿ ಹೊಡೆಯುತ್ತದೆ ಚಿತ್ರ. ಇದರ ನಡುವೆಯೂ ಗಮನಸೆಳೆಯುವುದು ಅನೀಶ್, ಅಜಯ್‌ರಾಜ್ ಅಭಿನಯ, ಸಿಂಧು ಮುಗ್ಧತೆ, ಮನೋಜ್ ಗಲಗಲಿ ಸಂಭಾಷಣೆಗಳು, ಮನೋಹರ್ ಜೋಶಿ ಕ್ಯಾಮರಾ ಕೈ ಚಳಕ, ಅಜನೀಶ್ ಲೋಕ್‌ನಾಥ್ ಸಂಗೀತ. - ಆರ್. ಕೇಶವಮೂರ್ತಿ