ನಿಮ್ಮ ನೆಚ್ಚಿನ ಚಿತ್ರಮಂದಿರದಲ್ಲಿ ಎಕ್ಸ್‌ಪರಿಮೆಂಟಲ್ ಕಥೆಗಳನ್ನಿಟ್ಟುಕೊಂಡು ನಿರ್ಮಾಪಕರ ಬಳಿ ಅಲೆಯುವ ನಿರ್ದೇಶಕನಿಗೆ ಇನ್ನೆರಡು ದಿನಗಳಲ್ಲಿ ತಾನು... ಲೂಸಿಯಾ ಚಿತ್ರದಲ್ಲಿ ಯಾರು ಟ್ಯಾಬ್ಲೆಟ್ ತಗೊಂಡು ಯಾರ ಕನಸು ಕಾಣ್ತಾ ಇದ್ರೋ ಗೊತ್ತಿಲ್ಲ. ಆದರೆ ಅದಾದ ನಂತರ ಚಿತ್ರರಂಗದಲ್ಲಿ ಕನಸುಗಾರರ ಸಂಖ್ಯೆಯಂತೂ ಜಾಸ್ತಿಯಾದಂತಿದೆ. ನಿನ್ನೆ ಮೊನ್ನೆ ಜಟ್ಟ ಚಿತ್ರದ ನಿರ್ದೇಶಕ ಗಿರಿರಾಜ್ ಈ ಪಟ್ಟಿಯಲ್ಲಿ ಸೇರಿಕೊಂಡಿದ್ದರು. ಈಗ 'ಚಿತ್ರಮಂದಿರದಲ್ಲಿ' ಎನ್ನುವ ಚಿತ್ರದ ಮೂಲಕ ವಿ. ಚಲ, ಕನಸೆಂಬೋ ಕುದುರೆಯನ್ನೇರಿದ್ದಾರೆ. ಲೂಸಿಯಾ, ಜಟ್ಟ ಚಿತ್ರ ನೋಡಿದ ಪ್ರೇಕ್ಷಕರು ಅದೇ ಹುಮ್ಮಸ್ಸಿನಿಂದ ಚಿತ್ರಮಂದಿರದಲ್ಲಿ ಹೋಗಿ ಕುಳಿತರೆ ಆ ಎರಡು ಚಿತ್ರಗಳ ಲೆವೆಲ್‌ಗಿಲ್ಲದಿದ್ದರೂ ಒಂದ್ ಲೆವೆಲ್‌ಗೆ ಓಕೆ ಎನಿಸುವಂಥ ಚಿತ್ರ ಇದು. ನಿರ್ದೇಶಕ ವೆಂಕಟಾಚಲ ಒಳ್ಳೆ ನಿರ್ಮಾಪಕ, ಮತ್ತು ಒಂದಷ್ಟು ಬಜೆಟ್ ಸಿಕ್ಕರೆ ನಾನು ಒಳ್ಳೆಯ ಸಿನಿಮಾ ಮಾಡಬಲ್ಲೆ ಎಂಬುದನ್ನಂತೂ ಸೂಚ್ಯವಾಗಿ ಹೇಳಿದ್ದಾರೆ. ಹಳೆಯ ಚಿತ್ರಮಂದಿರಗಳನ್ನು ಕೆಡವಿ ಮಲ್ಟಿಪ್ಲೆಕ್ಸ್‌ಗಳನ್ನು ನಿರ್ಮಿಸುವಂತೆ ಹಳೆಯ ಯೋಚನೆಗಳನ್ನು ಮಡಚಿ ಬದಿಗಿಟ್ಟು ಹೊಸತನ ತೋರಿಸುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಚಲ. ಸ್ಟಾರ್‌ಗಳಲ್ಲದ ಕಲಾವಿದರನ್ನಿಟ್ಟುಕೊಂಡು ಚಿತ್ರಮಂದಿರದಲ್ಲಿ ಕಥೆ ಹೇಳುವ ಸಾಹಸ ಮಾಡಿದ್ದಾರೆ. ತಮ್ಮ ಚಿತ್ರವನ್ನು 'ನಿಮ್ಮ ನೆಚ್ಚಿನ ಚಿತ್ರಮಂದಿರದಲ್ಲಿ' ಎನಿಸುವಂತೆ ಮಾಡಲು ಶ್ರಮ ವಹಿಸಿರುವುದು ಎದ್ದು ಕಾಣುತ್ತದೆ. ಒಂದು ಸಿನಿಮಾ ಗೆಲ್ಲಿಸುವಲ್ಲಿ ಪ್ರೇಕ್ಷಕನೇ ಕಿಂಗ್ ಆದರೂ ಮೇಕಿಂಗ್ ವಿಷಯದಲ್ಲಿ ನಿರ್ಮಾಪಕರೇ ಕಿಂಗ್ ಆದ್ದರಿಂದ ಬಜೆಟ್ ವಿಷಯದಲ್ಲಿ ಸಹಕಾರ ಸಿಗದಿದ್ದರೂ ಛಲ ಬಿಡದ ನಿರ್ದೇಶಕರು ತಾವಂದುಕೊಂಡ ಕಥೆಯನ್ನು ತಮ್ಮ ಮಿತಿಯಲ್ಲೇ ಹೇಳಿ ಮುಗಿಸಿದ್ದಾರೆ. ಇಲ್ಲಿ 'ಚಿತ್ರಮಂದಿರದಲ್ಲಿ ಚಿತ್ರವು ಕಾಣಲೇ ಇಲ್ಲ' ಎನ್ನುವ ಪ್ರಮೇಯವೇ ಇಲ್ಲ. ಸಿನಿಮಾ ನಿರ್ದೇಶನದ ಆಸೆ ಹೊತ್ತ ನಿರ್ದೇಶಕನ ಸಿನಿಮಾ, ಚಿತ್ರಮಂದಿರದಲ್ಲಿ ಪ್ರದರ್ಶನವಾಗುವ ಸಾಂಗ್ಲಿಯಾನ ಸಿನಿಮಾ, ಅದರ ಜಾಗದಲ್ಲಿ ಈ ನಿರ್ದೇಶಕ ನೋಡುವ ತನ್ನದೇ ನಿರ್ದೇಶನದ ಸಿನಿಮಾ, ಅವನ ಕನಸು ಈಡೇರಿದ ನಂತರ ಅವನು ಮಾಡುವ ಸಿನಿಮಾ ಹೀಗೆ ಇಲ್ಲಿ ಹಲವು ಚಿತ್ರಗಳಿವೆ. ಎಕ್ಸ್‌ಪರಿಮೆಂಟಲ್ ಕಥೆಗಳನ್ನಿಟ್ಟುಕೊಂಡು ನಿರ್ಮಾಪಕರ ಬಳಿ ಅಲೆಯುವ ನಿರ್ದೇಶಕನಿಗೆ ಇನ್ನೆರಡು ದಿನಗಳಲ್ಲಿ ತಾನು ಎಕ್ಸ್‌ಪೈರ್ ಆಗುತ್ತೇನೆ ಎಂದು ಗೊತ್ತಾದಾಗ ತನ್ನ ಕನಸಿನ ಚಿತ್ರವೊಂದನ್ನು ಚಿತ್ರಮಂದಿರದಲ್ಲೇ ಕುಳಿತು ನೋಡುವ ಎಕ್ಸ್‌ಪರಿಮೆಂಟ್ ಮಾಡುತ್ತಾನೆ. ಪರದೆಯ ಮೇಲೆ ಸಾಂಗ್ಲಿಯಾನ ಇದ್ದರೆ ಇವನ ಕಲ್ಪನೆಯಲ್ಲಿ ಇವನ ಚಿತ್ರ ಕೂಡ ಥೇಟ್ ಶಂಕರ್‌ನಾಗ್‌ರಂತೆ ಆಕರ್ಷಕ ಶೈಲಿಯಲ್ಲಿಯೇ 'ನಡೆಯುತ್ತದೆ'. ಪಾತಾಳ ಗರಡಿ ಹಾಕಿ ಬಾವಿಯಿಂದ ಬಿಂದಿಗೆ ತೆಗೆಯುವ ಭೈರ ಎಂಬುವವನ ಕಥೆಯಲ್ಲಿ ನಿರ್ದೇಶಕರಾಗಿ ಚಲ ಆಕಾಶ ತೋರಿಸಿದ್ದಾರೆ. ಭೈರನ ಈ ಎಪಿಸೋಡಿಗೆ ಪತ್ರಿಕೆಗಳ ವಿಶೇಷಾಂಕಗಳಲ್ಲಿ ಪ್ರಕಟವಾಗುವ ಅಪ್ಪಟ ದೇಸಿ ಕಥೆಗಳ ಸ್ಪರ್ಶವಿದೆ. ಭೈರನ ಈ ಕಥೆ ನೋಡಿ ಸಾಂಗ್ಲಿಯಾನ ಕೂಡ ಬೆರಗಾಗಬೇಕು. ಸ್ವಲ್ಪ ಹೊತ್ತಿನ ನಂತರ ಇವನ ಕಥೆ ಮುಗಿದರೂ 'ಚಿತ್ರಮಂದಿರದಲ್ಲಿ' ಮಾತ್ರ ಇಂಟರ್‌ವಲ್. ಅಲ್ಲಿಂದ ಮುಂದೆ ನಿರ್ದೇಶಕ ನಿಜಕ್ಕೂ ಸಾಯುತ್ತಾನಾ, ಅಲ್ಲಿಗೆ ಅವನ ಸಿನಿಮಾ ಕಥೆ ಏನು ಎಂದುಕೊಳ್ಳುವಷ್ಟರಲ್ಲಿ 'ಅವನ ಕಥೆ' ಶುರುವಾಗುತ್ತದೆ. ಅಲ್ಲಿ ಕಥೆಯಲ್ಲಿನ ಒಂದಷ್ಟು ಗೊಂದಲಗಳ ಸಮಸ್ಯೆ, ನೀರಸ ಕ್ಲೈಮ್ಯಾಕ್ಸ್‌ನ ಸಮಸ್ಯೆ ಮತ್ತು ಅದರ ಜೊತೆಗೆ ತೆರೆಯ ಮೇಲೆ ಪಾತ್ರಗಳ ಲಿಪ್ ಸಿಂಕ್ ಆಗದ 'ಚಿತ್ರಮಂದಿರದಲ್ಲಿ'ನ ಸಮಸ್ಯೆಯೂ ಸೇರಿ, ಮೊದಲರ್ಧಕ್ಕೆ ಹೋಲಿಸಿದರೆ ದ್ವಿತೀಯಾರ್ಧ ಕೊಂಚ ಡಲ್ ಎನಿಸಿದರೂ ಒಟ್ಟಾರೆ ಚಿತ್ರಮಂದಿರದಲ್ಲಿ ಕುಳಿತು ನೋಡಿದರೆ ಒಂದು ವಿಭಿನ್ನ ಅನುಭವವನ್ನಂತೂ ನೀಡುವ ಚಿತ್ರವಾಗಿದೆ 'ಚಿತ್ರಮಂದಿರದಲ್ಲಿ'. ಕಿರುತೆರೆಯ ಪ್ರತಿಭೆ ಶಂಕರ್ ಆರ್ಯನ್ ಹಿರಿತೆರೆಯಲ್ಲಿ ಅಚ್ಚರಿ ಹುಟ್ಟಿಸುತ್ತಾರೆ. ಮೊದಲ ಚಿತ್ರದಲ್ಲೇ ಇಷ್ಟೊಂದು ವೆರೈಟಿ ತೋರಿಸಿರುವ ಅವರ ಅಭಿನಯಕ್ಕೆ 'ಚಿತ್ರಮಂದಿರದಲ್ಲಿ'ಯೇ ಪ್ರಶಂಸೆ ಸಿಗಬಹುದು. ನಾಯಕಿ ನಮಿತಾ ಪಾತ್ರಕ್ಕೆ ಅಷ್ಟೊಂದು ಅವಕಾಶವಿಲ್ಲ. ಉಳಿದಂತೆ ಗೋಪಿ, ಶೃಂಗೇರಿ ರಾಮಣ್ಣ ಸಾಥ್ ಕೊಟ್ಟಿದ್ದಾರೆ. ಚಿತ್ರದ ಛಾಯಾಗ್ರಹಣದಲ್ಲಿ ವಿಶೇಷವೇನಿಲ್ಲ. - ಹರಿ