ಸುಮ್ಕೆ ಸುಮ್ಕೆ ನೋಡೋಕ್ ಹೋದ್ರೆ... ಐಡಿಯಾ ಆಗಿ ಕಥೆಯಲ್ಲಿ ವಿಶೇಷವಿದ್ದರೂ, ಅದನ್ನು ನಿರೂಪಿಸುವಲ್ಲಿ ನಿರ್ದೆಶಕರು... ಐಡಿಯಾ ಆಗಿ ಕಥೆಯಲ್ಲಿ ವಿಶೇಷವಿದ್ದರೂ, ಅದನ್ನು ನಿರೂಪಿಸುವಲ್ಲಿ, ಸಿನೆಮಾ ಆಗಿ ಅಳವಡಿಸಿಕೊಳ್ಳುವಲ್ಲಿ ನಿರ್ದೆಶಕರು ಎಲ್ಲೋ ಎಡವಿದ್ದಾರೆ ಎನ್ನಿಸುತ್ತದೆ. ಪ್ರಜ್ವಲ್ ದೇವರಾಜ್ ಅವರ ಮತ್ತೊಂದು ಸಿನೆಮಾ ತೆರೆ ಕಂಡಿದೆ. ಪ್ರಜ್ವಲ್ 'ದೇವ್' ಆಗಿ ನಟಿಸಿರುವ ಈ ಪಾತ್ರದ ಸುತ್ತಲೇ ಸತ್ಯ ಕಥೆ ಆಧಾರಿತ ಎನ್ನಲಾದ ಈ ಕಥೆಯನ್ನು ಅಳವಡಿಸಲಾಗಿದೆ. ಯಾವುದು ಪ್ರೀತಿ, ಯಾವುದು ಸ್ನೇಹ, ಹೆಣ್ಣು ಗಂಡಿನ ಜೀವನದಲ್ಲಿ ಯಾವಾಗ ಬೇಕು, ಹೆಣ್ಣಿನ ನಡವಳಿಕೆ ಹೇಗಿರಬೇಕು ಎಂಬೆಲ್ಲಾ ಜಿಜ್ಞಾಸೆಗೆ ಬೀಳುವ ಚಿತ್ರದ ಹೀರೋ, ಹಲವೊಮ್ಮೆ ತತ್ವಜ್ಞಾನಿಯಾಗಿಯೂ ಇನ್ನೂ ಕೆಲವೊಮ್ಮೆ ಆಕ್ಷನ್ ಹೀರೋ ಆಗಿಯೂ ತಮ್ಮ ಅಭಿಮಾನಿಗಳನ್ನು ರಂಜಿಸುತ್ತಾರೆ. ಬಹುತೇಕ ಒಳಾಂಗಣದಲ್ಲೇ ಚಿತ್ರೀಕರಣಗೊಂಡಿರುವ ಈ ಸಿನೆಮಾ ಡ್ರಾಮಾ ಎನ್ನಬಹುದಾದ ಸಿನೆಮಾ ವಿಭಾಗಕ್ಕೆ ಸೇರಿಸಬಹುದಾಗಿದೆ. ತಮ್ಮ ಹಿಂದಿನ ಚಿತ್ರದ(ಮುರಳಿ ಮೀಟ್ಸ್ ಮೀರಾ) ಹಿಟ್ ಆದ "ನೀನಾದೆ ನಾ' ಹಾಡೇ ಚಿತ್ರದ ಶೀರ್ಷಿಕೆಯಾಗಿದೆ. ಚಿತ್ರಕ್ಕೆ ಇಬ್ಬರು ನಾಯಕಿಯರು, ಪ್ರಿಯಾಂಕ ಕಾಂಡ್ವಾಲ್ ಮತ್ತು ಅಂಕಿತ. ಹಾಸ್ಯಪಾತ್ರದಲ್ಲಿ ಬುಲೆಟ್ ಪ್ರಕಾಶ್ ಮತ್ತು ಇತರ ಮುಖ್ಯ ಪಾತ್ರಗಳನ್ನು ಅವಿನಾಶ್, ಪವಿತ್ರ ಲೋಕೇಶ್ ಮತ್ತು ದೊಡ್ಡಣ್ಣ ಪೋಷಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನದಲ್ಲಿ ೫ ಹಾಡುಗಳಿವೆ. ಕಂದಾಸ್ ನಿರ್ದೇಶನದಲ್ಲಿ ಚಿತ್ರ ಮೂಡಿ ಬಂದಿದೆ. ಬ್ಯಾಂಡು ಬಾಜಾ ಎಂಬ ಹಾಡು- ಪ್ರಜ್ವಲ್ ದೇವರಾಜ್ ರ ನೃತ್ಯದಿಂದ ಪ್ರಾರಂಭವಾಗುವ ಈ ಚಲನಚಿತ್ರ, ನಂತರ ಪ್ರಜ್ವಲ್ ದೇವರಾಜ್ ತನ್ನನ್ನೇ ಹೀರೋ ಆಗಿ ಕಲ್ಪನೆ ಮಾಡಿಕೊಂಡು ರಾಕ್ಲೈನ್ ವೆಂಕಟೇಶ್ ಅವರಿಗೆ ಕಥೆ ಹೇಳುವ ಹಾಗೆ ಸಿನೆಮಾಗೆ ಚಾಲನೆ ಸಿಗುತ್ತದೆ. ಮೊದಲಾರ್ಧದಲ್ಲಿ ಹೆಚ್ಚೇನೂ ಘಟಿಸದೆ ಹೋದರೂ, ದೇವ್(ಪ್ರಜ್ವಲ್) ಮತ್ತು ಪವಿ(ಪ್ರಿಯಾಂಕ ಕಾಂಡ್ವಾಲ್) ಅವರ ಸಂಬಂಧ ಏನು ಎಂಬ ಕುತೂಹಲವನ್ನು ಪ್ರೇಕ್ಷಕನಲ್ಲಿ ಹುಟ್ಟಿಸುತ್ತದೆ. ವಿ ನಾಗೇಂದ್ರ ಪ್ರಸಾದ್ ಬರೆದ "ಸುಮ್ಕೆ ಸುಮ್ಕೆ" ಹಾಡು ಮತ್ತು ಕುಣಿತ ಪಡ್ಡೆ ಯುವಕರ ತನು ಮನ ತಣಿಸುವಲ್ಲಿ - ಚಿತ್ರಮಂದಿರದಲ್ಲೇ ಪಡ್ಡೆ ಪ್ರೇಕ್ಷಕರನ್ನು ನೃತ್ಯ ಮಾಡುವಂತೆ ಪ್ರೇರೇಪಿಸುವುದರಲ್ಲಿ ಯಶಸ್ವಿಯಾಗಿದೆ. ಸಂಭಾಷಣೆಯಲ್ಲಿ ಹೊಸತೇನೂ ಇಲ್ಲದೆ ಸ್ವಲ್ಪ ವಿಪರೀತ ಅನ್ನಿಸುವುದಲ್ಲದೆ, ಕೆಲವೊಮ್ಮೆ ಹೀರೋನನ್ನು ವೈಭರೀಕರಿಸಲು ಅತಿಯಾದ ನೈತಿಕತೆಯನ್ನು ತುಂಬಿದಂತಿದೆ. ನಟಿ ಅಂಕಿತಾ ವಾಲಿಬಾಲ್ ಆಟಗಾರ್ತಿ. ಅವಳನ್ನು ಕೆಟ್ಟ ದೃಷ್ಟಿಯಿಂದ ನೋಡಿ ದುರುಪಯೋಗಿಸಿಕೊಳ್ಳಲು ಪ್ರಯತ್ನಿಸುವ ಕೋಚ್ ನ ಬಗ್ಗೆ ಹೀರೋನಲ್ಲಿ ದೂರು ಕೊಟ್ಟಾಗ, ಹೀರೋ "ಕೆಸರಿನಲ್ಲಿ ಹುಟ್ಟುವ ಕಮಲದ" ಉದಾಹರಣೆಯನ್ನು ಕೊಟ್ಟು, ಶೀಲವನ್ನು ಕಾಪಾಡಿಕೊಳ್ಳುವಲ್ಲಿ ಹೆಣ್ಣಿನ ವರ್ತನೆಯೇ ಮುಖ್ಯ ಎಂಬಂತೆ ಕೊಡುವ ಭಾಷಣಕ್ಕೆ ಪಡ್ಡೆಗಳಿಂದ ಶಿಳ್ಳೆ ಚಪ್ಪಾಳೆಗಳು ದೊರೆತರೂ, ಇದು ಗಂಡಸಿನ ಹುಸಿಅಭಿಮಾನ-ಹೆಚ್ಚುಗಾರಿಕೆಯನ್ನು ಎತ್ತಿ ಹಿಡಿದು ತಪ್ಪು ಸಂದೇಶವನ್ನು ತಲುಪಿಸುವಂತಿದೆ. ನಂತರ ಆ ಕೋಚ್ ಗೆ ಹೊಡೆದ ಎಂಬುದು ಹೀರೋನನ್ನು ಮತ್ತೆ ವೈಭವೀಕರಿಸುತ್ತದೆ. ಇನ್ನು ಮಧ್ಯಂತರದ ನಂತರದ ಭಾಗ, ದೇವ್ (ಪ್ರಜ್ವಲ್) ಮತ್ತು ಪವಿ (ಪ್ರಿಯಾಂಕ ಕಾಂಡ್ವಾಲ್) ಇವರ ಹಿಂದಿನ ಸಂಬಂಧವೇನು? ಇವರ ನಡುವಿದ ಈಗಿನ ಸಂಬಂಧವೇನು ಎಂಬುದನ್ನು ತಿಳಿಸುವ ಒಂದು ಸಣ್ಣ ತಿರುವಿದೆ. ಪ್ರಜ್ವಲ್ ಶಾಲಾ ಬಾಲಕನಾಗಿ ಇಲ್ಲಿ ಕಾಣಿಸಿಕೊಳ್ಳುತ್ತಾರೆ. ಯಾವುದು ಸ್ನೇಹ, ಯಾವುದು ಪ್ರೀತಿ ಎಂಬ ಜಿಜ್ಞಾಸೆ ಪ್ರೇಕ್ಷಕನನ್ನೂ ಒಳಗೊಳ್ಳುತ್ತದೆಯೇ ಎಂಬುದು ಸಂದೇಹ. ಐಡಿಯಾ ಆಗಿ ಕಥೆಯಲ್ಲಿ ವಿಶೇಷವಿದ್ದರೂ, ಅದನ್ನು ನಿರೂಪಿಸುವಲ್ಲಿ, ಸಿನೆಮಾ ಆಗಿ ಅಳವಡಿಸಿಕೊಳ್ಳುವಲ್ಲಿ ನಿರ್ದೆಶಕರು ಎಲ್ಲೋ ಎಡವಿದ್ದಾರೆ ಎನ್ನಿಸುತ್ತದೆ. ಪ್ರಜ್ವಲ್ ತಮ್ಮ ಸಾಮರ್ಥ್ಯಕ್ಕೆ ತಕ್ಕ ನಟನೆಯಿಂದ ಮತ್ತು ತಮ್ಮ ನೃತ್ಯಗಳಿಂದ ತಮ್ಮ ಅಭಿಮಾನಿಗಳಿಗೆ ಮೆಚ್ಚಿಗೆಯಾಗುತ್ತಾರೆ. ಉಳಿದಂತೆ ಎಲ್ಲ ನಟ ನಟಿಯರೂ ಸಿನೆಮಾ ಬೇಡುವಷ್ಟು ನಟಿಸಿದ್ದಾರೆ. ಕೆಲವೊಮ್ಮೆ ಸತ್ಯ ಕಥೆಗಳೂ ಕೂಡ ಚೆನ್ನಾಗಿಲ್ಲದೆ ಹೋಗಬಹುದು. ಸತ್ಯ ಕಥೆ ಎಂಬುದೇ ಒಂದು ಸಿನೆಮಾವನ್ನು ಉತ್ತಮ ಸಿನೆಮಾವನ್ನಾಗಿ ಬದಲಾಯಿಸುವುದಿಲ್ಲ. ಹಾಡುಗಳಲ್ಲಿ ಪ್ರಜ್ವಲ್ ದೇವರಾಜ್ ನ ತಮ್ಮ ಪ್ರಣಾಜ್ ದೇವರಾಜ್ ನನ್ನು ಪರಿಚಯ ಮಾಡಬೇಕು ಎಂಬ ತವಕಕ್ಕಿಂತ ಸಿನೆಮಾ ಮೇಲಿನ ಹೆಚ್ಚಿನ ಪ್ರೀತಿ ಬೇಕಾಗುತ್ತದೆ. ಇನ್ನೂ ಬಹಳಷ್ಟು ಸುಧಾರಿಸಿಕೊಳ್ಳಬಹುದಾಗಿದ್ದ ಸಿನೆಮಾ ಇದು! ಆದರೆ ಪ್ರೇಕ್ಷಕ ತನಗಾದ ಸುಸ್ತಿನಿಂದ ಸುಧಾರಿಸಿಕೊಳ್ಳಲು ಬಹಳಷ್ಟು ಸಮಯ ಹಿಡಿಯುವ ಸಿನೆಮಾ ಕೂಡಾ ಹೌದು. - ಗುರುಪ್ರಸಾದ್ ಕನ್ನಡಪ್ರಭ.ಕಾಮ್