ಸಂದೇಶಭರಿತ ಸವಾರಿಯ ಸವಾಲ್! ಒಗ್ಗರಣೆ ಮಾಡಿದ ಸಾಸಿವೆ, ಬೆಳ್ಳುಳ್ಳಿ ಹಾಕಿದರೆ ಮೊಸರನ್ನದ ರುಚಿ ಹೆಚ್ಚು. ಒಗ್ಗರಣೆ ಮಾಡಿದ ಸಾಸಿವೆ, ಬೆಳ್ಳುಳ್ಳಿ ಹಾಕಿದರೆ ಮೊಸರನ್ನದ ರುಚಿ ಹೆಚ್ಚು. ಆದೇ ಹೆಚ್ಚು ಪ್ರಮಾಣದಲ್ಲಿ ಸಾಸಿವೆ ಹಾಕಿದರೆ ಮೊಸರನ್ನ ರುಚಿಸುತ್ತದೆಯೇ. ಅದು ಸವಾರಿ ಭಾಗ ಎರಡು! ಔಷಧಿ ಒಳ್ಳೇದು ಅಂತ ಬರೀ ಅದನ್ನೇ ಕುಡಿಯಲಾಗದು. ಮೆಸೇಜುಗಳು ಭಾಳಾ ಒಳ್ಳೇದು ಅಂತ ಬರಿ ಅವನ್ನೇ ಪಾರಾಯಣ ಮಾಡಲಾಗದು. 'ಒಂದು ಎರಡು ಬಾಳೆಲೆ ಹರಡು' ಅನ್ನೋ ಹಾಗೆ ಭಾಗ ಒಂದನ್ನು ನೋಡಿ ನಿರೀಕ್ಷೆಯನ್ನಿಟ್ಟುಕೊಂಡು ಬಾಳೆಲೆ ಹರಡಿ ಭೋಜನಕ್ಕೆ ತಯಾರಾಗಿ ಕುಳಿತಿದ್ದ ಪ್ರೇಕ್ಷಕರಿಗೆ ಭಾಗ ಎರಡು ಅಷ್ಟು ಬೇಗ ಜೀರ್ಣವಾಗಲಿಕ್ಕಿಲ್ಲ. 'ಉಪ್ಪಿಗಿಂತ ರುಚಿ ಬೇರೆ ಇಲ್ಲ' ಎಂಬುದನ್ನು ನಿರ್ದೇಶಕ ಜೇಕಬ್ ವರ್ಗೀಸರು ಅಲ್ಲಲ್ಲಿ ಮರೆಯುತ್ತಾರೆ. ಈ ಮೊಸರನ್ನದಲ್ಲಿ 'ಕಾಮಿಡಿ' ಬೆಳ್ಳುಳ್ಳಿ, ಅಲ್ಲಲ್ಲಿ ತನ್ನ ಚಟ್ ಪಟ್ ಗರ್ಮಿ ರುಚಿಯನ್ನು ತೋರಿಸಿ ಮೊಸರನ್ನವನ್ನು ಸಹ್ಯವಾಗಿಸುತ್ತದೆ, ಆ ಮೂಲಕ ಅರ್ಧದಲ್ಲೇ ಯಾರೂ ಊಟ ಬಿಟ್ಟು ಏಳದಂತೆ ಅದು ಪ್ರಯತ್ನಿಸಿದೆ. ಈ ಬೆಳ್ಳುಳ್ಳಿಯ ಕ್ರೆಡಿಟ್ಟು ಸಂಭಾಷಣೆ ಬರೆದ ಮಂಜು ಮಾಂಡವ್ಯರಿಗೆ ಸಲ್ಲಬೇಕು! ಚಿತ್ರದಲ್ಲಿನ ಪಾತ್ರವರ್ಗ ದೊಡ್ಡದಿದೆ. ಶ್ರೀನಗರ ಕಿಟ್ಟಿ, ಗಿರೀಶ್ ಕಾರ್ನಾಡ್, ಅಬ್ಬಾಸ್, ಕರಣ್ ರಾವ್, ಶ್ರುತಿ ಹರಿಹರನ್, ಮುಖ್ಯಮಂತ್ರಿ ಚಂದ್ರು, ಕಡ್ಡಿಪುಡಿ ಚಂದ್ರು, ಸಾಧು ಕೋಕಿಲ, ಚಿಕ್ಕಣ್ಣ, ದೊಡ್ಡಣ್ಣ, ಇತ್ಯಾದಿ. ಹೆಸರು ಬಿಟ್ಟುಹೋದವರಿಗಾಗಿ 'ಇತ್ಯಾದಿ' ಇದೆ. 'ಮುಖ್ಯಮಂತ್ರಿ' ಚಂದ್ರು ಇಲ್ಲಿ 'ಗೃಹಮಂತ್ರಿ'ಯಾಗಿದ್ದಾರೆ. ಗಿರೀಶ್ ಕಾರ್ನಾಡ್ ಪತ್ರಕರ್ತ ಎಣ್ಣೆ ಮಾಸ್ತರರಾಗಿದ್ದಾರೆ, ಅವರಿಗೆ ಕಂಪನಿ ಕೊಡಲು ಶಿಷ್ಯನಾಗಿ ಇಂತೀ ನಮ್ಮ ಪ್ರೀತಿಯ ಶ್ರೀನಗರ ಕಿಟ್ಟಿ ಇದ್ದಾರೆ. ನಿರ್ದೇಶಕ ಓಂಪ್ರಕಾಶ್ ರಾವ್ ಹಾಸ್ಯ ಪಾತ್ರದಲ್ಲಿ ನಿರ್ದೇಶಕನಾಗಿಯೇ ಕಾಣಿಸಿಕೊಂಡಿರುವುದು ವಿಶೇಷ. ಚಿತ್ರದಲ್ಲಿ ಶ್ರೀನಗರ ಕಿಟ್ಟಿಯವರ ಪಾತ್ರದ ಚಿತ್ರಣ ಮತ್ತು ಅಭಿನಯ ಸೊಗಸಾಗಿದೆ, ಅದರಲ್ಲಿ 'ಮಂಜುನಾಥ' ಇದ್ದಾನೆ, 'ಇಂತೀ ನಿನ್ನ ಪ್ರೀತಿಯ' ಕುಡುಕನಿದ್ದಾನೆ. ಆ ಚಿತ್ರಗಳಷ್ಟು ಭಾವ ತೀವ್ರತೆಯಿಲ್ಲವಷ್ಟೆ. ಪಯಣದ ಹೆಸರುಳ್ಳ ಈ ಚಿತ್ರದ ಛಾಯಾಗ್ರಹಣದಲ್ಲಾಗಲಿ, ಕಥಾ ನಿರೂಪಣೆಯಲ್ಲಾಗಲಿ ಗಮನಾರ್ಹವಾದುದನ್ನು ಸಾಧಿಸಲು ಬಹಳಷ್ಟು ಅವಕಾಶಗಳಿದ್ದವು, ಇನ್ನು ಮಣಿಕಾಂತ್ ಕದ್ರಿಯವರ ಸಂಗೀತ ನಿರಾಶೆ ಮೂಡಿಸಿಲ್ಲವಾದರೂ ಮೊದಲಿನ ಸವಾರಿಯ ಮಜಾ ನೀಡಿಲ್ಲ. ಚಿತ್ರದ ಕತೆ- ಬೇಜವಾಬ್ದಾರಿ ಮತ್ತು ನಾಯಿ ಕಳ್ಳ 'ನಾಯಕ', ಮೇಷ್ಟ್ರ ಮಗ. ಆತ ಸಣ್ಣ ಪಟಾಲಮ್ಮು ಕಟ್ಟಿಕೊಂಡು ಊರಲ್ಲಿ ಚಿಕ್ಕಪುಟ್ಟ ಕತ್ರಿ ಕೆಲಸ ಮಾಡಿ ಕೊಂಡಿರುತ್ತಾನೆ. ಆತನಿಗೆ ಒಮ್ಮೆಲೇ ಲಾಟರಿ ಹೊಡೆಯುವುದು ಗೃಹಮಂತ್ರಿಯ ಮಗಳನ್ನು(ಶ್ರುತಿ ಹರಿಹರನ್) ಪಟಾಯಿಸಿದಾಗ. ಆಗ ಆತ ಶ್ರೀಮಂತಿಕೆಯ ಕನಸು ಕಾಣತೊಡಗುತ್ತಾನೆ ಆದರೆ ಗೃಹಮಂತ್ರಿ ಮಾವನ ಪ್ರಾಮಾಣಿಕತೆ ಆತನ ಹಣಗಳಿಕೆಯ ಅಡ್ಡದಾರಿಗಳಿಗೆಲ್ಲ ಅಡ್ಡವಾಗುತ್ತದೆ. ಕ್ಲೈಮ್ಯಾಕ್ಸ್ ನಲ್ಲಿಯೂ ಒಂದೊಳ್ಳೆ ಸಂದೇಶವೊಂದನ್ನು ಹುದುಗಿಸಿ, ಮೆಸೇಜಿನೊಂದಿಗೇ ಚಿತ್ರವನ್ನು ಕೊನೆಗಾಣಿಸಿದ್ದಾರೆ ನಿರ್ದೇಶಕರು. ಕತೆಯಲ್ಲಿನ ಪಾತ್ರವರ್ಗವನ್ನು ಚಿಕ್ಕ ಚೊಕ್ಕದಾಗಿಸಿ, ಕತೆಯ ನಿರೂಪಣೆಯನ್ನು ಸ್ವಲ್ಪ ಮಟ್ಟಿಗೆ ಸ್ವಾರಸ್ಯಕರವಾಗಿಸಿದ್ದರೆ ಕತೆಯೇ ಬೇರೆ ಇರುತ್ತಿತ್ತು! ಹೆಚ್ಚು ಮಸಾಲೆ ಬೇಕಿಲ್ಲದವರಿಗೆ ಈ ಮೊಸರನ್ನ ರುಚಿಸುವುದು. - ಹರ್ಷವರ್ಧನ್ (ಕನ್ನಡಪ್ರಭ ಡಾಟ್ ಕಾಮ್)