ಇಲ್ಲಿ ಅಧ್ವಾನವೂ ಸಾವಿನ ಬೆನ್ನೇರಿದೆ! ಸಾವೆನ್ನುವ ಸಂಗತಿಗೆ ಚಿತ್ತ ಕಲಕುವುದಕ್ಕೆ ಗೊತ್ತು. 'ಕುಂಭರಾಶಿ'ಗಿಲ್ಲಿ ಮರಣಗಳ ತೋರಣವೇ ಕಥೆಯ ಸ್ವತ್ತು. ಸಾವೆನ್ನುವ ಸಂಗತಿಗೆ ಚಿತ್ತ ಕಲಕುವುದಕ್ಕೆ ಗೊತ್ತು. 'ಕುಂಭರಾಶಿ'ಗಿಲ್ಲಿ ಮರಣಗಳ ತೋರಣವೇ ಕಥೆಯ ಸ್ವತ್ತು. ಹೊತ್ತಿ ಉರಿಯುವ ಶವದ ಕಿಡಿಯಲ್ಲೊಂದು, ಸುತ್ತಲಿನ ಕಣ್ಣೀರಿನ ಬಿಂದುವಿನಲ್ಲೊಂದು ಭಾವುಕತೆಯ ಕಿರಣ ಹೊಮ್ಮಿಸಲು ಮಸಣವೆಂಬ ಭೂಮಿಕೆಯೂ ಇಲ್ಲಿತ್ತು. ಆದರೆ, ಯಾವ ದೃಶ್ಯಗಳೂ ಪ್ರೇಕ್ಷಕನನ್ನು ಸೆಂಟಿಮೆಂಟಿನ ಕಡಲಿಗೆ ತಳ್ಳುವುದಿಲ್ಲ. 'ಸಾವನ್ನೂ ತೀರಾ ಕಾಮನ್ನಾಗಿ ನೋಡಿ' ಎಂಬ ನಿರ್ದೇಶಕರ ಭಾವಶೂನ್ಯತೆ ಇಲ್ಲಿ ನೈಜ ಕತೆಯ ಕೈಕಾಲು ಕಟ್ಟಿ ಕೂರಿಸಿದೆ. ತಿರುವುಗಳಿಲ್ಲದ ಕಥಾರಸ್ತೆ. ಲಾಸ್ಟ್ ಪಾಯಿಂಟಿನ ದರ್ಶನ ಸಲೀಸು. ಕುತೂಹಲಕ್ಕೆ ಜಾಗ ಕಲ್ಪಿಸದೆ, ರೀಲು ಸುತ್ತಿರುವ ನಿರ್ದೇಶಕರು ಇಲ್ಲಿ ನಪಾಸು. ಸ್ಮಶಾನದಲ್ಲಿ ಚಿತೆಯ ಸ್ಪರ್ಶಕ್ಕೆ ಹಾತೊರೆದ ಶವ. ಹೆತ್ತ ಕರುಳಿನ ಹೆಗಲ ಮೇಲೊಂದು ನೀರಿನ ಕುಂಭ. ಆತ ಶವಕ್ಕೆ ಪ್ರದಕ್ಷಿಣೆ ಹಾಕುವಾಗ, ಸ್ಮಶಾನ ಕಾಯುವವ ಆ ಗಡಿಗೆಯ ಬುಡಕ್ಕೆ ಕತ್ತಿಯ ಮೂತಿಯಿಂದ ಮಾಡುವ ತೂತು. ಹಾಗೆ ಕುಂಭ ಒಡೆದು, ಕೊಳ್ಳಿ ಹಸ್ತಾಂತರ ಮಾಡಿದರಷ್ಟೇ ಸ್ಮಶಾನ ಕಾಯುವವನಿಗೆ ಸೇರು ಅಕ್ಕಿ. ತನಗೆ ಸಿಕ್ಕ ಅನಾಥ ಮಗನ ಹೊಟ್ಟೆಗೆ ಚಿತ್ರಾನ್ನ. ಹೀಗಾಗಿ, ಅವರದ್ದು ಕುಂಭರಾಶಿ! ಆ ಅನಾಥ ಮಗ ಸಿದ್ದೇಶನೇ ಇಲ್ಲಿ ಹೀರೋ (ಚೇತನ್‌ಚಂದ್ರ). ಅಪ್ಪ ರುದ್ರಪ್ಪ (ಗುರುರಾಜ್ ತಾಳಿಕೋಟೆ) ಸ್ಮಶಾನ ಕಾದರೆ, ಮಗ ಸಿದ್ದೇಶ ತಿಪ್ಪೆಗಳಲ್ಲಿ ಪೇಪರ್ ಆಯುತ್ತಾನೆ. 'ಸಿದ್ದೇಶ' ಕೈಬಿಟ್ಟು 'ತಿಪ್ಪೇಶ' ಅಂತಿಡಬಹುದಿತ್ತು. ಡೆತ್‌ಸರ್ಟಿಫಿಕೇಟ್ ಇಲ್ಲದೆ ಶವ ಸುಡುವುದಿಲ್ಲ ಎಂಬ ನಿಷ್ಠುರತೆಯ ರುದ್ರಪ್ಪನ ವೃತ್ತಿಯಲ್ಲಿ ಕೊಲೆಚತುರ ರಾಜಕಾರಣಿ ಶರತ್ ಭಂಡಾರಿ (ಶರತ್ ಲೋಹಿತಾಶ್ವ) ಸಂಕಟದ ಸುಂಟರಗಾಳಿಯೆಬ್ಬಿಸುತ್ತಾನೆ. ಭಂಡಾರಿ, ಡಿಸಿಯನ್ನು ಕೊಲೆಗೈದು ಮಸಣಕ್ಕೆ ಕಳುಹಿಸಿಕೊಟ್ಟಾಗ ಶವ ಸುಡಲು ರುದ್ರಪ್ಪ ಒಪ್ಪುವುದಿಲ್ಲ. ಅಲ್ಲೊಂದು ಕಾಳಗ ಗಮನ ಸೆಳೆಯುತ್ತದೆ. ಭಂಡಾರಿ ಬಳಗ ಸದೆಬಡಿದ ಸಿದ್ದೇಶ ಜೈಲುಪಾಲು. ಕೊನೆಗೆ ಭಂಡಾರಿಯೇ ಅವನನ್ನು ಬಿಡಿಸಿ, ತನ್ನ ತಂಡದಲ್ಲಿಟ್ಟುಕೊಂಡು ಪಾತಕಿಲೋಕಕ್ಕೆ ರಂಗಪ್ರವೇಶ ಮಾಡಿಸುತ್ತಾನೆ. ಬಡವರ ಮುಗ್ಧತೆಯೇ ಭಂಡಾರಿಗಿಲ್ಲಿ ಬಂಡವಾಳ. ಭಂಡಾರಿ, ಸಿದ್ದೇಶನ ಮೂಲಕ ವಿರೋಧಪಕ್ಷದ ರಾಜಕಾರಣಿಯನ್ನು ಕೊಂದಾಗ ಕಥೆಯ ಕರಾಳ ಆಳ ಗೊತ್ತಾಗುತ್ತದೆ. ಅರಿವಿಲ್ಲದೆ ಭಂಡಾರಿಯ ಮಗನನ್ನು ಕೊಂದ ಸಿದ್ದೇಶನೂ ಕೊನೆಗೆ ಖಲಾಸ್. ಸಿದ್ದೇಶನ ಶವವನ್ನು ತಂದೆಯ ಸ್ಮಶಾನಕ್ಕೆ ತಂದುಬಿಡುವುದು ಕಣ್ಣು ಹಿಂಡುವ ದೃಶ್ಯ. ಅರೆಬೆಂದ ಶವದಲ್ಲಿ ಮಗ ಕಂಡಾಗ, ಪ್ರೇಕ್ಷಕನೊಳಗೂ ಕಣ್ಣೀರ ನಾಲೆ. ರೋಮ್ಯಾಂಟಿಕತೆಯೂ ಎಕ್ಸ್‌ಟ್ರಾ ಎನ್ನಿಸಿಕೊಳ್ಳುತ್ತದೆ. ನಾಯಕಿ ರೂಪಿಕಾಳ ಹಿಂದೆ ಬೀಳುವ ಸಿದ್ದೇಶನ ಪ್ರೇಮನಿವೇದನೆಗಳು ಪೇಲವ. ಗಾತ್ರದಲ್ಲಿ ನಟಿ ರಮ್ಯಾಳನ್ನು ಸೈಡುಹೊಡೆಯುವ ರೂಪಿಕಾ, ಡ್ಯಾನ್ಸಿನಲ್ಲೂ ಭಾರದ ಹೆಜ್ಜೆಯಿಡುವ ಪಿಕಾಕ್. ಈಕೆಗೆ ಅವಕಾಶ ಕಮ್ಮಿ. ಭಾವುಕ ಸನ್ನಿವೇಶಗಳಲ್ಲಿ ಸೋತಿದ್ದರೂ, ಅದರ ಕೊರತೆಯನ್ನು ಮಿಕ್ಕ ಕಡೆ ಟ್ಯಾಲಿ ಮಾಡಲೆತ್ನಿಸಿದ್ದಾರೆ ಚೇತನ್. ಅವರ 'ಎಯ್ಟ್‌ಪ್ಯಾಕ್‌' ಸಾಹಸಕ್ಕೆ ಜೀವ ತುಂಬಿದೆ. ಗುರುರಾಜ್ ತಾಳಿಕೋಟೆ, ಶರತ್ ಲೋಹಿತಾಶ್ವರ ನಟನೆಯ ಬಗ್ಗೆ ಏನೂ ಕಂಪ್ಲೇಂಟಿಲ್ಲ. 'ಮುಗಿಲಿನ ನಗುವಿಗೆ ಮಳೆಹನಿ ಜನಿಸಿದೆ...' ಹಾಡೊಂದೇ ಪರ್ವಾಗಿಲ್ಲ. ಕಾಮಿಡಿ, ಸಂಭಾಷಣೆ ಬಗ್ಗೆ ಹೇಳುವಂಥದ್ದೇನಿಲ್ಲ. ಜೈ ಆನಂದ್ ಛಾಯಾಗ್ರಹಣಕ್ಕೆ ಜೈಕಾರ. - ಕೀರ್ತಿ ಕೋಲ್ಗಾರ್