'ಗೆಸ್ಟ್' ಅಪಿಯರೆನ್ಸ್ ಹಾಸ್ಯ ಚಿತ್ರಗಳು ಎಂದರೆ ಅಲ್ಲಿ ನಗು ಆನೆ ಪಟಾಕಿಯಂತೆ ಸಿಡಿಯುತ್ತದೆ. ಹಾಸ್ಯ ಚಿತ್ರಗಳು ಎಂದರೆ ಅಲ್ಲಿ ನಗು ಆನೆ ಪಟಾಕಿಯಂತೆ ಸಿಡಿಯುತ್ತದೆ. ಆದರೆ ದಿನೇಶ್ ಬಾಬುರಂಥ ನಿರ್ದೇಶಕರ ಚಿತ್ರಗಳಲ್ಲಿ ಅದು ಕೇವಲ ಮೆಲ್ಲನೆ ಉರಿಯುವ ತಂತಿ ಮತಾಪು. ಶೇಖರ್ ಬಂಡಿಯಪ್ಪ ನಿರ್ದೇಶನದ 'ಆನೆ ಪಟಾಕಿ' ಚಿತ್ರ ಕೂಡ ನಗುವಿನ ಅಲೆಗಳನ್ನು ಏಳಿಸದಿದ್ದರೂ ಮಂಪರಿಗೆ ಜಾರುವ ಪ್ರೇಕ್ಷಕನನ್ನು ಏಳಿಸಬೇಕಾದ ಅವಶ್ಯಕತೆ ಇರುವ ಚಿತ್ರವೇನಲ್ಲ. ಆರಂಭದಿಂದಲೂ ಕೊನೆಯವರೆಗೆ ಒಂದೇ ವೇಗ ಕಾಯ್ದುಕೊಂಡಿರುವ ಚಿತ್ರಕಥೆ 'ಆನೆ ಪಟಾಕಿ' ಚಿತ್ರದ್ದು. ಎದ್ದು ಬಿದ್ದು ನಗುವ ಅವಕಾಶಗಳು ಕಡಿಮೆಯಾದರೂ ಚಿತ್ರಮಂದಿರದಿಂದ ಎದ್ದು ಬರುವವರೆಗೆ ಒಂದಿಷ್ಟು ನಗು ಮಾತ್ರ ಗ್ಯಾರಂಟಿ. ಕ್ರಿಕೆಟ್ ಆಗಲೀ, ಸಿನಿಮಾ ಆಗಲೀ 'ಲೈನ್ ಅಂಡ್ ಲೆಂಗ್ತ್‌' ಕಾಪಾಡಿಕೊಳ್ಳುವುದು ಮುಖ್ಯ. ಆದರೆ ಒಂದು ಮಜಬೂತಾದ ಒನ್ 'ಲೈನ್‌' ಸ್ಟೋರಿ ಇಟ್ಟುಕೊಂಡಿರುವ ನಿರ್ದೇಶಕ ಶೇಖರ್ ಲೆಂಗ್ತ್ ವಿಷಯದಲ್ಲಿ ಮಾತ್ರ ಒಂದಿಷ್ಟು ಎಡವಿದ್ದಾರೆ. ಆದರೆ ಇದು ಚಿತ್ರದ ಒಟ್ಟಾರೆ ಲೆಂಗ್ತ್‌ನ ಸಮಸ್ಯೆ ಮಾತ್ರ ಅಲ್ಲ. ಕಾಮಿಡಿ ದೃಶ್ಯಗಳಲ್ಲಿ ಶಾರ್ಟ್ ಈಸ್ ಸ್ವೀಟ್ ಎಂಬುದನ್ನು ಮರೆತವರಂತೆ ಪ್ರತಿಯೊಂದು ದೃಶ್ಯವನ್ನೂ ಅನಗತ್ಯವಾಗಿ ಬೆಳೆಸಿರುವುದು ಚಿತ್ರದ ನೆಗೆಟಿವ್ ಅಂಶ. ಸಿನಿಮಾ ನಟನಾಗಲು ಬಂದ ಬೆಸಗರಹಳ್ಳಿಯ ಭೈರೇಗೌಡನಿಗೆ ಸೆಟ್ ಹಾಳು ಮಾಡಿದ ಕಾರಣಕ್ಕೆ ಸಿನಿಮಾದಿಂದ 'ಗೇಟ್ ಪಾಸ್‌' ಕೊಡಲಾಗುತ್ತದೆ. ಆದರೆ ಆಕಸ್ಮಿಕವಾಗಿ ಅವನಿಗೆ ಅದೇ ನಿರ್ಮಾಪಕನ ಮನೆಯ ಗೇಟ್‌ನಲ್ಲಿ ರೆಡ್ ಕಾರ್ಪೆಟ್ ಸ್ವಾಗತ ದೊರೆಯುತ್ತದೆ. ನಿರ್ಮಾಪಕನ ವೆಡ್ಡಿಂಗ್ ಆ್ಯನಿವರ್ಸರಿ ಕಾರ್ಯಕ್ರಮಕ್ಕೆ ನಾಯಕ ಭೈರೇಗೌಡನಿಗೆ ಆಕಸ್ಮಿಕ ಆಮಂತ್ರಣ ದೊರೆಯುತ್ತದೆ. ಅಲ್ಲಿಂದ ಇಡೀ ಚಿತ್ರದ ಕತೆ ಒಂದೇ ಮನೆಯಲ್ಲಿ ನಡೆಯುತ್ತದೆ. ಆ ಸಂತೋಷ ಕೂಟಕ್ಕೆ ಬರುವವರ ಸಂತೋಷ ಹಾಳು ಮಾಡುವ ಕೆಲಸ ನಾಯಕನದ್ದು. ಮನೆಗೆ ಬರುವ ಅಷ್ಟೊಂದು ಜನ ಅತಿಥಿಗಳೇ ಚಿತ್ರದ ಪಾತ್ರಗಳು. ಹಾಗಾಗಿ ಇಲ್ಲಿ ಬಹುತೇಕ ಎಲ್ಲ ನಟರದ್ದೂ 'ಗೆಸ್ಟ್ ಅಪಿಯರೆನ್ಸ್‌' ಎನ್ನಬಹುದು. ಆದರೆ, ಮೊದ ಮೊದಲು ತ ಣ್ಣಗೆ ಹರಿಯುವ ನೀರಿನಂಥ ಕಥೆಗೆ ಕೊನೆಯಲ್ಲಿ 'ಸೋಪಿನ ನೊರೆ' ಸೇರಿದರೂ ಹಾಸ್ಯ ಉಕ್ಕುವ ಮಟ್ಟಕ್ಕೆ ಹೋಗಿಲ್ಲ ಎಂಬುದು ಸಣ್ಣ ನಿರಾಸೆಯ ವಿಷಯ. ಸೃಜನ್ ಲೋಕೇಶ್‌ರ ಹಾಸ್ಯಪ್ರಜ್ಞೆ, ಬಹಳ ದಿನಗಳ ನಂತರ ನಾಯಕನಾದರೂ ಲೀಲಾಜಾಲ ಎನಿಸುವಂಥ ಅವರ ಸ್ಕ್ರೀನ್ ಪ್ರೆಸೆನ್ಸ್ ಆನೆಪಟಾಕಿಗೆ ವರವಾಗಿದೆ. ಹಾಗಾಗಿ, ಸೃಜನ್ ಎಂಬ 'ನಗೆಬಾಂಬು', ಮಾತೇ ಇಲ್ಲದೆ ಸದಾ ನಗುವ ನಾಯಕಿ ಪಾರ್ವತಿಯ ನಗೆ 'ಬಾಣ', ತರಲೆ ಮಾಡಿ 'ಅವರಿಗೂ ಇವರಿಗೂ ತಂದಿಡುವ ಕೆಲಸ' ಮಾಡುವ ಸಾಧು ಕೋಕಿಲಾ ಎಂಬ ಸುರ್ ಸುರ್ 'ಬತ್ತಿ'. ಸಾಲಗಾರನಾಗಿ ಸದಾ ಮೊಬೈಲ್‌ನಲ್ಲೇ ಮಾತನಾಡುವ ರಂಗಾಯಣ ರಘು ಎಂಬ 'ತಂತಿ' ಮತಾಪು, 'ಮೈಯಲ್ಲಿ ಎಲ್ಲಂದ್ರಲ್ಲೆ ನೊಣ ಹೋಗ್ತಾ ಇದ್ರೂ ತಡ್ಕೊಂಡಿರೋಕೆ ನಾನೇನು ಈಗ ಸಿನಿಮಾದ ಸುದೀಪಾ?' ಎನ್ನುವಂಥ ಸಂಭಾಷಣೆಯ 'ಬಿರುಸು' ಆನೆ 'ಪಟಾಕಿ'ಯ ಆಸ್ತಿಗಳು. ಕಾಮಿಡಿ ಸಿನಿಮಾ ಆದ್ದರಿಂದ ಇಲ್ಲಿ 'ರೈಲ್‌' ಪಟಾಕಿಯ ಕಿಡಿಯೂ ಉಂಟು. ಜೈಜಗದೀಶ್, ವಿಜಯಲಕ್ಷ್ಮಿ ಮನೆಗೆ ಬರುವ ಅತಿಥಿಗಳನ್ನು ನಿಭಾಯಿಸಿ ಸುಸ್ತಾದವರಂತೆ ಕಂಡರೆ ಅದರ ಕ್ರೆಡಿಟ್ ಕಥೆಗೆ ಹೋಗಬೇಕು. ಧರ್ಮ್ ವಿಷ್ ಸಂಗೀತದ ಎಲ್ಲಾ ಹಾಡುಗಳಲ್ಲೂ ಗುಂಗು ಹಿಡಿಸುವ ಹೊಸತನವಿದೆ. ಅವರ ಐಟಂ ಸಾಂಗ್ ಕೂಡಾ ಒಂಥರಾ ಹಿತವಾಗಿದೆ. ಜಗದೀಶ್ ವಾಲಿ ಅವರ ಕ್ಯಾಮೆರಾಕ್ಕೆ ಸಿಕ್ಕಿರುವುದು ಒಂದೇ ಮನೆ. ಆದರೂ ಅಲ್ಲಿ ಏಕತಾನತೆ ಇದೆ ಎಂದು ದೂರುವಂತಿಲ್ಲ. - ಹರಿ