ಸ್ವರ್ಗ, ಒಂದ್ ಸೆಕೆಂಡ್ ರಪ್ಪಂತ ಪಾಸಾಯ್ತು ಇಂಟರ್‌ವಲ್‌ನ ಒಂದು ದೃಶ್ಯ. ತನಗೆ ಕಾಲಿಲ್ಲ ಎಂದು ನಾಟಕವಾಡಿದ್ದ ಹುಡುಗನ ವೇಷ ಬಯಲಾಗುತ್ತದೆ... ಇಂಟರ್‌ವಲ್‌ನ ಒಂದು ದೃಶ್ಯ. ತನಗೆ ಕಾಲಿಲ್ಲ ಎಂದು ನಾಟಕವಾಡಿದ್ದ ಹುಡುಗನ ವೇಷ ಬಯಲಾಗುತ್ತದೆ. ಅಲ್ಲಿಯವರೆಗೂ ಕುಳಿತೇ ಇರುವ ಪೋಲಿಯೋ ಪೀಡಿತ ನಾಯಕಿ ರೈಲಿಳಿದು ನೆಲದಲ್ಲಿ ತೆವಳುತ್ತಾ ಬರುತ್ತಾಳೆ. ಅದನ್ನು ನೋಡಿ ನಾಯಕನಿಗೆ ದಿಗ್ಭಮೆ. ಕಟ್ ಶಾಟ್‌ಗಳಲ್ಲಿ ಸತ್ಯ ಹೆಗಡೆ, ರೀರೆಕಾರ್ಡಿಂಗ್‌ನಲ್ಲಿ ಸಾಧು ಕೋಕಿಲಾ ಅಬ್ಬರಿಸುತ್ತಾರೆ. ಮುಂದಿನ ದೃಶ್ಯದಲ್ಲಿ ನಾಯಕ, ನಾಯಕಿಯ ಬಳಿ ಬಂದು ಏನೂ ಗೊತ್ತಿಲ್ಲದವನಂತೆ 'ಜಾರಿ ಬಿದ್ದುಬಿಟ್ಯಾ, ಎದ್ದೇಳು ಮೈನಾ, ಎಲ್ಲಾ ನೋಡ್ತಿದಾರೆ' ಎನ್ನುತ್ತಾನೆ. ಸತ್ಯ ಮತ್ತು ಸಾಧು ಹಂಗಾದ್ರೆ 'ನಾವ್ ಮಾಡಿದ್ದೆಲ್ಲಾ ವೇಸ್ಟಾ?' ಎಂದುಕೊಳ್ಳುತ್ತಾರೆ. ನಾಯಕಿ ಮೆಲ್ಲನೆ 'ಹೇಗೆ, ಏಳಲಿ, ನನಗೆ ಕಾಲಿಲ್ಲ' ಎನ್ನುತ್ತಾಳೆ. ನಾಯಕನ ಮುಖದಲ್ಲಿ ಮತ್ತೆ ದಿಗ್ಭ್ರಮೆ. ಹೃದಯಾಂತರಾಳದಲ್ಲಿ ಅಲ್ಲೋಲ ಕಲ್ಲೋಲ. ಮತ್ತೊಮ್ಮೆ ಸತ್ಯ ಹೆಗಡೆ, ಸಾಧುಕೋಕಿಲಾ ಹೊಸ ಹುರುಪಿನೊಂದಿಗೆ ಭೋರ್ಗರೆಯುತ್ತಾರೆ. ಇಂಟರ್‌ವಲ್‌ನ ನಂತರ ಮುಂದುವರೆಯುವ ದೃಶ್ಯದಲ್ಲಿ ನಾಯಕಿ 'ಹೇಳು, ಈಗಲೂ ನೀನು ನನ್ನ ಪ್ರೀತಿಸ್ತೀಯ?' ಎಂದು ಕೇಳುತ್ತಾಳೆ. ಅದಕ್ಕೆ 'ಮೈನಾ, ನಿನಗೆ ಕಾಲಿಲ್ಲದಿದ್ದರೇನು 'ಮೈ ಹೂ ನಾ" ಎನ್ನುವ ನಾಯಕ 'ನಿನಗೆ ಕಾಲಿಲ್ಲ ಅನ್ನೋದು ನನಗೆ ಮೊದಲೇ ಗೊತ್ತಿತ್ತು. ನಾನವತ್ತೇ ನೋಡಿದ್ದೆ' ಎನ್ನುತ್ತಾನೆ. ಈ ಬಾರಿ ಸತ್ಯ ಹೆಗಡೆ ಮತ್ತು ಸಾಧುಕೋಕಿಲಾ 'ಏನ್ ಆಟ ಆಡ್ತಿದಾನಾ ಇವ್ನು?' ಎಂದುಕೊಂಡು ಅಲ್ಲಿಂದ ಕಾಲು ಕೀಳುತ್ತಾರೆ. ಮನಸ್ಸುಮುಟ್ಟುವ ಪ್ರೇಮಕಥೆ, ಚೆಂದದ ನಾಯಕ, ನಾಯಕಿ, ಸತ್ಯ ಹೆಗಡೆ ಕ್ಯಾಮೆರಾ, ಕಣ್ಣಿಗೆ ತಂಪೆನಿಸುವ ಪರಿಸರ ಎಲ್ಲವೂ ಇದ್ದು ಮೈನಾ ನಿರೀಕ್ಷಿತ ಮಟ್ಟ ತಲುಪುವುದಿಲ್ಲ ಎಂದರೆ ಅದಕ್ಕೆ ಕಾರಣ ಮೇಲೆ ಹೇಳಿದಂಥ ನಿರೂಪಣಾ ಶೈಲಿ. ಒಂದು ಅಪ್ಪಟ ಪ್ರೇಮಕಥೆಯನ್ನು ಹೇಳುವ ಆಸಕ್ತಿ ಮತ್ತು ಮನಸ್ಥಿತಿ ಎರಡೂ ಇರುವ ನಿರ್ದೇಶಕ ನಾಗಶೇಖರ್‌ರ ಚಿತ್ರದಲ್ಲಿ, ಅದು ಪ್ರತಿಫಲಿಸಿಲ್ಲ. 35 ಕೊಲೆಗಳನ್ನು ಮಾಡಿದ ಕೋಲ್ಡ್ ಬ್ಲಡೆಡ್ ಕಿಲ್ಲರ್‌ನ ಕಥೆ ಎಂಬ ರೋಚಕತೆ ಕ್ರಮೇಣ ತಣ್ಣಗಾಗುತ್ತದೆ. ಆದರೆ, ಪ್ರೇಕ್ಷಕ ಚಿತ್ರಕ್ಕೆ 35, ಅಂಕಗಳನ್ನಷ್ಟೇ ಕೊಡುವ ಮನಸ್ಸು ಮಾಡಿದರೆ ಅದು ಕಡಿಮೆಯಾಯ್ತು ಎನ್ನುವುದು ನಾಯಕಿ ನಿತ್ಯಾ ಮೆನನ್ ಮತ್ತು ಸತ್ಯ ಹೆಗಡೆ. ದೂಧ್ ಸಾಗರ್ ಫಾಲ್ಸ್‌ನಷ್ಟೇ ಫ್ರೆಷ್ ಎನಿಸುವ ನಿತ್ಯಾ ಮೆನನ್ ಸೌಂದರ್ಯ ಮತ್ತು ಪ್ರಕೃತಿಯನ್ನು ಸೃಷ್ಟಿಸಿದ ದೇವರೂ ನಾಚಬೇಕು ಎನಿಸುವ ಸತ್ಯ ಹೆಗಡೆಯವರ ಛಾಯಾಗ್ರಹಣದಲ್ಲಿ ಮೈನಾ 'ನಿತ್ಯ' 'ಸತ್ಯ'ದ ಮುದ ನೀಡುತ್ತದೆ. ಆದರೆ, ಚಿತ್ರ ಹಲವಾರು ಸಮಯದಲ್ಲಿ, 'ಸ್ವರ್ಗ, ಒಂದ್ ಸೆಕೆಂಡ್ ರಪ್ಪಂತ ಪಾಸಾಯ್ತು' ಎಂಬ ಅನಿಸಿಕೆಗೆ ಮಾತ್ರ ಸೀಮಿತವಾಗಿದೆ. ಮನಸ್ಸಿಗೆ ತುಂಬ ಹತ್ತಿರ ಬಂದರೂ ಅದು ಎದೆಯಲ್ಲಿ ನಿಲ್ಲುವುದಿಲ್ಲ. 'ಸಂಜು ವೆಡ್ಸ್ ಗೀತಾ'ಹ್ಯಾಂಗೋವರ್ ಮೈನಾ ಬೆನ್ನು ಹತ್ತಿದೆ. ಅಲ್ಲಿನ 'ಬ್ಯೂಟಿ' ಇಲ್ಲಿ 'ಕಲರ್‌ಪುಲ್‌' ಆಗಿದೆ. ಇಲ್ಲೂ ಹೆಣ್ಣಿನ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯಕ್ಕೆ ಜಾಗವಿದೆ. ಮೊದಲಾರ್ಧ ಪ್ರಕೃತಿಯ ಮಡಿಲಲ್ಲಿ ನಡೆಯುವ ಎವರ್‌ಗ್ರೀನ್ ಪ್ರೇಮ ಕಥೆ, ನಂತರದ ದುರಂತಗಳಿಗೆ ಪ್ರೇಕ್ಷಕ ಸಾಕ್ಷಿಯಾಗುತ್ತಾನೆ. ನಾಯಕ, ನಾಯಕಿಯ ಪಾತ್ರಗಳಲ್ಲಿ ಕಾಂಟ್ರಾಸ್ಟ್ ಇರಲಿ ಎಂಬ ಕಾರಣಕ್ಕೋ ಏನೋ ನಾಯಕ ಆಗಾಗ ಶರವೇಗದಲ್ಲಿ ಓಡುತ್ತಿರುತ್ತಾನೆ, ಪೋಲಿಯೋ ಪೀಡಿತ ನಾಯಕಿ ತೆವಳುತ್ತಾಳೆ. ರೆಟ್ರೋ ಟಚ್ ಇರುವ ಕತೆಗೆ, ರಿಯಾಲಿಟಿ ಶೋಗಳನ್ನು ಬಳಸುವುದರ ಜೊತೆಗೆ 'ಮೆಟ್ರೋ' ಟ್ರೈನ್‌ನ ಟಚ್ ಕೂಡ ಕೊಡಲಾಗಿದೆ. ಆದರೆ, ಪ್ರೇಕ್ಷಕನಿಗೆ ಚಿತ್ರದ ಕೊನೆಯ ಬಗ್ಗೆ ನಿರೀಕ್ಷೆ, ಅಪೇಕ್ಷೆಗಳು ಹುಟ್ಟುವುದಿಲ್ಲ. ನಾಯಕ ನಾಯಕಿ ಒಂದಾಗಬೇಕು ಎನ್ನಲು, ಅವರಿಬ್ಬರೂ ಒಂದಾಗಿಯೇ ಇದ್ದಾರೆ, ನಾಯಕ 35 ಕೊಲೆ ಮಾಡಿದ್ದು ನಿಜವೇ ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರವಿಲ್ಲ, ನಾಯಕಿಗೆ ಕಾಲು ಬರಬೇಕು ಎಂಬುದೊಂದೇ ಇಲ್ಲಿರುವ ನಿರೀಕ್ಷೆ. ಆದರೂ, ನಿರ್ದೇಶಕರು ನಾಯಕ, ನಾಯಕಿಯರಿಗೆ ಒಂದು 'ಎಂಡ್‌' ಕೊಡಲು ಯಶಸ್ವಿಯಾಗಿದ್ದಾರೆ. ಹ್ಯಾಂಡ್‌ಸಮ್ ಹೀರೋ ಚೇತನ್ ಒಂದೆರಡು ಎಕ್ಸ್‌ಪ್ರೆಶನ್‌ಗಳಲ್ಲೇ ಪಾತ್ರ ನಿಭಾಯಿಸಿದ್ದಾರೆ. ಶರತ್‌ಕುಮಾರ್ ಕೇವಲ ಆರಂಭ ಶೂರ ಎನಿಸುತ್ತಾರೆ. ತಬಲಾ ನಾಣಿ ತಮ್ಮ 'ಬ್ಯ್ರಾಂಡ್‌'ನ ಕಿಕ್ ಕೊಟ್ಟಿದ್ದಾರೆ. ಸುಮನ್ ರಂಗನಾಥ್ ಅವರನ್ನು ಹಾಕ್ಕೊಂಡಿದ್ದು ವೇಸ್ಟ್ ಆಗಬಾರದು ಎನ್ನುವಂತೆ ಅವರಿಂದ ಒಂದು ಐಟಂ ಡ್ಯಾನ್ಸ್ ಮಾಡಿಸಲಾಗಿದೆ. ಸುಹಾಸಿನಿ, ಅನಂತ್‌ನಾಗ್, ರವಿಶಂಕರ್‌ರಂಥ ನಟರು ಕೇವಲ ಬಂದುಹೋಗುತ್ತಾರೆ. 'ಜೀವನಪೂರ್ತಿ ನಿನಗೆ ನಾನು ಕಾಲಾಗಿ ನಿಲ್ಲುತ್ತೇನೆ' ಎನ್ನುವ ಸಂಭಾಷಣೆ ಚಿತ್ರಕ್ಕೆ ಕಾವಲಾಗಿ ನಿಲ್ಲುವಷ್ಟು ಪರಿಣಾಮಕಾರಿಯಾಗಿಲ್ಲದಿದ್ದರೂ, 'ನನಗೆ ಕಾಲು ಬಂದರೆ, ನೀನು ಇಷ್ಟು ಹತ್ತಿರ ಇರೊಲ್ಲ, ಹಾಗಾಗಿ ಕಾಲು ಬರೋದೇ ಬೇಡ' ಎನ್ನುವಾಗ ಮನಸ್ಸಿಗೆ ಹತ್ತಿರವಾಗುತ್ತದೆ. ಜೆಸ್ಸಿ ಗಿಫ್ಟ್ ಹಾಡುಗಳಲ್ಲಿ ಶೀರ್ಷಿಕೆ ಗೀತೆ ಕಲರ್‌ಪುಲ್ ಮತ್ತು ಬ್ಯೂಟಿಪುಲ್. 'ಕಾಣದ ಕಡಲಿಗೇ' ಎನ್ನುವ ಕೆಲವು ಹಾಡುಗಳು ಕಾಣಿಸುವುದು, ಕೇಳಿಸುವುದು ಬಿಟ್ ರೂಪದಲ್ಲಿ. ಮೈನಾದಲ್ಲಿ ನಾಗಶೇಖರ್ ತೀರಾ ಫೇಲ್ ಆಗುವ ವಿದ್ಯಾರ್ಥಿಯಂತೂ ಅಲ್ಲ. ಒಂದು ಕೈಗೆ ಚಪ್ಪಲಿ ಹಾಕಿಕೊಂಡ ನಾಯಕಿ, ನೆಲದಲ್ಲಿ ತೆವಳುವುದನ್ನು ಕಂಡಾಗ ಅಷ್ಟು ಚೆಂದದ ನಾಯಕಿ ಇದ್ದರೂ ಪ್ರೇಕ್ಷಕನಿಗೆ ಕಣ್ಣುಮುಚ್ಚಿಕೊಳ್ಳಬೇಕೆನಿಸುವುದು ಆ ಪಾತ್ರದ ಗೆಲುವು. ಆದರೆ, ಪ್ರೇಕ್ಷಕ, ನಾಯಕಿಗೆ ಕಾಲಿಲ್ಲ ಎಂಬ ಅನುಕಂಪವನ್ನು ಸಿನಿಮಾದ ಮೇಲೆ ತೋರಿಸಿದರೆ ಅದು 'ಮೈನಾ' ಗೆಲುವಲ್ಲ. - ಹರಿ