ಜಸ್ಟ್ ಲವ್ವಲ್ಲಿ ಬಿದ್ದೀರಾ ಜೋಕೆ ಕಿರುತರೆಯಲ್ಲಿ 'ಅಶ್ವಿನಿ ನಕ್ಷತ್ರ'ದ ಮೂಲಕ ಹೆಸರುವಾಸಿಯಾಗಿರುವ ನವ ನಾಯಕ ಜೆ.ಕೆ ಉರುಫ್ ಜೆ. ಕಾರ್ತಿಕ್ ಗೆ ಈ ಚಿತ್ರ ಬ್ರೇಕೇನೂ ಕೊಡುವುದಿಲ್ಲ.. ' ಲವ್' ಸಿನೆಮಾ ಪ್ರೇಮಿಗಳ ಅದ್ಭುತ, ಅನನ್ಯ, ಅಮೋಘ ಕಥಾನಕ, ತಮ್ಮೆದೆಗಳಲ್ಲಿ ಅದಮ್ಯ ಆಸೆಗಳನ್ನಿರಿಸಿಕೊಂಡ ಪ್ರೇಮಿಗಳಿಬ್ಬರ ಮನಮುಟ್ಟುವ ಹೃದಯಂಗಮ ಕತೆ ಅಂತೆಲ್ಲಾ ನೀವು ತಿಳಕೊಂಡಿದ್ದರೆ ಅದು ತಪ್ಪು. ಚಿತ್ರದ ಹೆಸರೇ ಹೇಳುವಂತೆ ಇದು 'ಲವ್' ಅಷ್ಟೆ. ಲವ್ ನ ಮುಂದಿನ ಹಂತಗಳಾದ ಮದುವೆ ಮುಂಜಿ ಯಾವುದರ ನಿರೀಕ್ಷೆಯನ್ನಿಟ್ಟುಕೊಂಡು ಮಾತ್ರ ಥಿಯೇಟರ್ ಗೆ ಹೋಗಬೇಡಿ. ಅಂತಂದ ಮಾತ್ರಕ್ಕೆ ಕಣ್ಣಿಗೆ ಹಬ್ಬವೆನಿಸುವ ದೃಶ್ಯಗಳಿಲ್ಲವೆಂದು ತಿಳಿಯಬೇಡಿ! ಆದೊಂದು ವಿಷಯದಲ್ಲಿ ಛಾಯಾಗ್ರಾಹಕ ಮತ್ತು ನಾಯಕಿ ನೇಹಾ ಸಕ್ಸೇನ ! ಕಿರುತರೆಯಲ್ಲಿ 'ಅಶ್ವಿನಿ ನಕ್ಷತ್ರ'ದ ಮೂಲಕ ಹೆಸರುವಾಸಿಯಾಗಿರುವ ನವ ನಾಯಕ ಜೆ.ಕೆ ಉರುಫ್ ಜೆ. ಕಾರ್ತಿಕ್ ಗೆ ಈ ಚಿತ್ರ ಬ್ರೇಕೇನೂ ಕೊಡುವುದಿಲ್ಲ ಎನ್ನುವುದು ಚಿತ್ರ ನೋಡಿದವರ ಅನಿಸಿಕೆ. ಬ್ರೇಕ್ ಬೀಳದಿದ್ದರೆ ಸಾಕು, ಅಷ್ಟೆ! ಮೊದಲ ಚಿತ್ರದ ವಂತರ ತಮ್ಮ ಹೆಸರುಗಳ ಮುಂದೆ ಇತ್ಯಾದಿ ಸ್ಟಾರ್ ಗಳನ್ನು ಹಾಕಿಕೊಳ್ಳುವ ಈ ಜಮಾನದಲ್ಲಿ ಕಾರ್ತಿಕ್ ಗೆ 'ಅಶ್ವಿನಿ ಸ್ಟಾರ್' ಎಂದಿಡಬಹುದೇನೋ! ಏಕೆಂದರೆ ಈ ಚಿತ್ರವನ್ನು ನೋಡಲು, ಧಾರಾವಾಹಿ ನೋಡಲು ಬೇಕಾದಷ್ಟೇ ತಾಳ್ಮೆ ಬೇಕು. ಅನೇಕ ಕಡೆ 'ಮುಂಗಾರು ಮಳೆ'ಯನ್ನು ನೆನಪಿಸುವ ಸೀನುಗಳು, ಡಯಲಾಗುಗಳು ಈ ಚಿತ್ರದಲ್ಲಿದೆ. ಚಿತ್ರದಲ್ಲಿನ ನೆಗೆಟಿವ್ ಸಂಗತಿಗಳ ಬಗೆಗೆ ಉದ್ದುದ್ದ ಬರೆಯುವುದಕ್ಕಿಂತ, ಒಂದೆರಡು ಸಾಲುಗಳಲ್ಲೇ ಮುಗಿಸಬಹುದಾದ್ದರಿಂದ ಪಾಸಿಟಿವ್ ಅಂಶಗಳನ್ನು ಮಾತ್ರ ಬರೆಯುವುದು ಬಹಳ ಸುಲಭ. ಹಾಡುಗಳಲ್ಲಿನ ಸುಂದರ ಫಾರಿನ್ ಲೊಕೇಶನ್ ಗಳು, ಚಿಕ್ಕಣ್ಣ ಕಾಮಿಡಿ, ಅಂಡರ್ ವಾಟರ್ ಚಿತ್ರೀಕರಣ, ಅರುಣ್ ಸುರೇಶರ ಛಾಯಾಗ್ರಹಣ ಅದ್ಭುತವೆನ್ನಲಾಗದಿದ್ದರೂ ಓ.ಕೆ ಎನ್ನಲಡ್ಡಿಯಿಲ್ಲ. ನಾಯಕನ ತಂದೆಯಾಗಿ ಅಚ್ಯುತ್ ಕುಮಾರ್, ತಾಯಿ ಸಂಗೀತ, ನಾಯಕಿಯ ತಂದೆಯಾಗಿ ಲೋಹಿತಾಶ್ವ ನಟಿಸಿದ್ದಾರೆ. ನಟನೆಯ ವಿಷಯಕ್ಕೆ ಬಂದರೆ ಅಭಿವೃದ್ಧಿಗೆ ತುಂಬಾ ಅವಕಾಶಗಳಿವೆ, ನಾಯಕ ನಾಯಕಿಯರ ಅಭಿನಯವೂ ಅಷ್ಟೆ. ನಿರ್ದೇಶಕ ನಾಗೇಂದ್ರ ಅರಸ್ ಹೋಮ್ ವರ್ಕ್ ಮಾಡಿಲ್ಲವೆನ್ನುವುದನ್ನು ತಿಳಿಯಲು ಪೂರ್ತಿ ಚಿತ್ರ ನೋಡಬೇಕಾಗಿಲ್ಲ ಆದರೆ ಕ್ಲೈಮ್ಯಾಕ್ಸ್ ತನಕ ಕಾದರೆ ನಿಮಗೆ ಅದು ಖಚಿತವಾಗುತ್ತದೆ. ಸತೀಶ್ ಬಾಬು ಸಂಗೀತದಲ್ಲಿ ಗುನುಗುವಂಥದ್ದೇನೂ ಇಲ್ಲ. ಕತೆ: ನಾಯಕ ಬಿ.ಇ ನಲ್ಲಿ ಎಳು ಸಲ ಓತ್ಲಾ ಹೊಡೆದಿದ್ದರೂ ಹೊಟ್ಟೆ ತುಂಬ ಉಣ್ಣುವ ಉಂಡಾಡಿ ಗುಂಡ, ಸೂರ್ಯ. ಮುದ್ದು ಮಾಡೋ ಅಮ್ಮ ಸಂಗೀತ, ಹೆಂಡತಿಯನ್ನು ಸದಾ 'ಫ್ರೀ ಇದೀಯ' ಅಂತ ಕೇಳೋ ಅಪ್ಪ ಅಚ್ಯುತ್ ಕುಮಾರ್. ಬಡ ಸ್ನೇಹಿತನ ಮಗಳ ಮದುವೆಗೆ ತಾಳಿ ಭಾಗ್ಯ ಕರುಣಿಸುವ ಸಲುವಾಗಿ ಬೇಜವಾಬ್ದಾರಿ ಮಗನ ಬಳಿ ತಾಳಿ ಕೊಟ್ಟು ನೈಟ್ ಬಸ್ಸಿಗೆ ಕಳಿಸುತ್ತಾನೆ ಅಪ್ಪ. ಆದರೆ ದಾರಿ ಮಧ್ಯ ಕೆಲವು ಸಿಲ್ಲೀ ಕನ್ ಫ್ಯೂಶನ್, ಕಾರಣಗಳಿಂದ ಮರುದಿನ ಬೆಳಿಗ್ಗೆ ನಾಯಕ ವಾಪಸ್ಸು ಮನೆಗೇ ತಿರುಗಿ ಬಂದಿರುತ್ತಾನೆ, ಅದೂ ದಾರಿಯಲ್ಲಿ ಸಿಕ್ಕಿದ್ದ, ಮನೆ ಬಿಟ್ಟು ಓಡಿ ಬಂದಿದ್ದ ಅಪರಿಚಿತ ನಾಯಕಿಯ ಜೊತೆಗೆ. ಎಲ್ಲಾ ಹೆಣ್ಮಕ್ಳು ಮದುವೆ ದಿನ ಮನೆ ಬಿಟ್ಟು ಓಡಿ ಬಂದರೆ ಈಕೆ ನಿಶ್ಚಿತಾರ್ಥದ ದಿನವೇ ಮನೆ ಬಿಟ್ಟು ಬರುತ್ತಾಳೆ. ಯಾಕೆ ಅಂತ ಮಾತ್ರ ಕೇಳಬೇಡಿ! ಹೀಗೆ ಮನೆಯಲ್ಲಿ ಕೆಲವು ದಿನ ಉಳಿಯುವ ಶ್ರೀಮಂತ ಮನೆಯ ನಾಯಕಿಗೆ ನಾಯಕನ ಮೇಲೆ ಅಂಕುರಿಸುವುದು ಪ್ರೀತಿ, ಅದನ್ನೂ ಯಾಕೆ ಎಂದು ಕೇಳುವಂತಿಲ್ಲ! ನಾಯಕನಿಗೆ ಪ್ರೀತಿ ಹುಚ್ಚು ಹತ್ತಿಸಿ ತವರು ಮನೆ ಸೇರುವ ನಾಯಕಿಯನ್ನು ಸೇರಲು ನಾಯಕನ ಪಯಣ. ಅಲ್ಲಿ ಹೋದರೆ ನಾಯಕಿ ಉಲ್ಟಾ ಹೊಡೆಯುತ್ತಾಳೆ, ಮುಂದೆ ಆಕೆಯನ್ನೊಪ್ಪಿಸಲು ಆಕೆಯ ತಂದೆಯ ಬಳಿ ವಾರದ ಗಡುವನ್ನು ಸಂಪಾದಿಸುತ್ತಾನೆ ನಾಯಕ. ಏಷ್ಟು ಸಲ ಹೇಳೋದು ನಿಮಗೆ, ಯಾಕೇಂತ ಕೇಳಬೇಡಿ ಅಂತ! ಆಮೇಲೆ ಜೆ.ಕೆ ಹುಡುಗಿಯ ಮಾವನನ್ನು ಎದುರು ಹಾಕಿಕೊಳ್ಳುತ್ತಾನೆ. ತರಗಲೆಗಳು ಹಾರುತ್ತದೆ, ರೌಡಿಗಳೂ ಹಾರುತ್ತಾರೆ, ಕೋಲುಗಳು ಮುರಿಯಲ್ಪಡುತ್ತವೆ, ಹಾವು ಸಾಯುವುದಿಲ್ಲ, ಯಾರೂ ಸಾಯುವುದಿಲ್ಲ. ಇಷ್ಟೆಲ್ಲಾ ಆದಮೇಲೆ ಮುಂದೇನಾಗ್ತೈತೆ ಅನ್ನೋದು ನಿಮಗೆ ಗೊತ್ತಿದೆಯಲ್ಲವೇ? ಗೊತ್ತಿದೆಯೆಂದುಕೊಂಡರೆ ನಿಮಗೆಲ್ಲೋ ಭ್ರಮೆ.. ಚಿತ್ರದ ಟೈಟಲ್ ಆಗಲೇ ಮರೆತುಬಿಟ್ಟಿರಾ? ಇದು ' ಲವ್' ಅಷ್ಟೆ! ಕ್ಲೈಮ್ಯಾಕ್ಸ್ ಆನ್ನು ಊಹಿಸಲು ಯಾವ ಬುದ್ಧಿವಂತ ಮಾತ್ರವಲ್ಲ ಎಂತಹ ದಡ್ಡನಿಗೂ ಸಾಧ್ಯವಾಗದು. ನೀವು ಕಿರುತರೆಯ ಭಕ್ತರಾಗಿದ್ದು, ಜೆ.ಕೆಯ ಮೇಲೆ ಅಪಾರ ಪ್ರೀತಿಯನ್ನಿಟ್ಟುಕೊಂಡಿದ್ದರೆ, ಈ ಚಿತ್ರ ನಿಮಗಲ್ಲ. ಪ್ರೀತಿಯನ್ನು ಕೊಲ್ಲುವುದು ಮಹಾಪಾಪವಂತೆ! - ಹರ್ಷವರ್ಧನ್ (ಕನ್ನಡಪ್ರಭ ಡಾಟ್ ಕಾಮ್)