ಅಂಬರ ನೋಡೋಕೆ ನೂಕುನುಗ್ಗಲೇ? ಪ್ರೀತಿ, ಪ್ರೇಮ, ಎಲ್ಲ ಪುಸ್ತಕದ್ ಬದ್ನೇಕಾಯಿ ಎಂದು ಯಾರು ಏನೇ ಹೇಳಿದರೂ ಬೆಳ್ಳಿತೆರೆಯ ಮೇಲಿನ ಪ್ರೇಮಕಥೆಗಳಿಗೆ ಬರವಿಲ್ಲ... ಪ್ರೀತಿ, ಪ್ರೇಮ, ಎಲ್ಲ ಪುಸ್ತಕದ್ ಬದ್ನೇಕಾಯಿ ಎಂದು ಯಾರು ಏನೇ ಹೇಳಿದರೂ ಬೆಳ್ಳಿತೆರೆಯ ಮೇಲಿನ ಪ್ರೇಮಕಥೆಗಳಿಗೆ ಬರವಿಲ್ಲ ಎಂದು ಸಾರಿ ಹೇಳುವ ಚಿತ್ರ ಅಂಬರ. ಚಿತ್ರದ ಆರಂಭದಲ್ಲೇ ಹರಿದ್ವಾರದಲ್ಲೊಂದು ಅವಾಂತರ. ಆತ್ಮಹತ್ಯೆ ಮಾಡಿಕೊಳ್ಳಲು ಹುಡುಗಿಯೊಬ್ಬಳ ಯತ್ನ. ಅದನ್ನು ತಪ್ಪಿಸುವ ನಾಯಕ. ಅಲ್ಲಿಯವರೆಗೂ ಹುಡುಗಿಯ ಬೆನ್ನು ಮಾತ್ರ ತೋರಿಸುವುದರಿಂದ, ಕೊನೆಗೆ ಅವಳ ಮುಖ ನೋಡಿದ ನಾಯಕನಿಗೆ, ಜೀವನಕ್ಕೆ ಬೆನ್ನು ಹಾಕಿ ಸಾಯಲು ಹೊರಟಿದ್ದು ತಾನು ಪ್ರೀತಿಸಿದ ಹುಡುಗಿಯೇ ಎಂದು ತಿಳಿದ ಮೇಲೆ ಶುರುವಾಗುವ ಫ್ಲ್ಯಾಷ್ಬ್ಯಾಕ್. ಪ್ರೀತಿಯಲ್ಲಿ ಬಿದ್ದ ಹುಡುಗಿ, ಪ್ರೀತಿ ಎಂಬುದು ಹರಿಯುವ ನದಿಯಂತೆ ಎಂದು ನಂಬಿದವಳಂತೆ ನದಿಗೆ ಬಿದ್ದಿರುತ್ತಾಳೆ. ಈ ಹಿನ್ನೆಲೆಯೊಂದಿಗೆ, ಕಾಲೇಜಿನ ಜ್ಞಾನದೇಗುಲದಿಂದ ಶುರುವಾಗುವ ಪ್ರೇಮಕಥೆ, ಹರಿದ್ವಾರ, ಹೃಷಿಕೇಷದ ದೇಗುಲಗಳ ದ್ವಾರಕ್ಕೆ ಟ್ರಾನ್ಸ್ಫರ್ ಆಗುತ್ತದೆ. ಜೀವನದಲ್ಲಿ ನಮ್ಮ ಸ್ವಂತ ಕಾಲ ಮೇಲೆ ನಿಂತುಕೊಳ್ಳುವವರೆಗೆ ಲವ್, ಮದುವೆ ಬೇಡ ಎನ್ನುತ್ತಾಳೆ ನಾಯಕಿ. ಅದಕ್ಕಾಗಿ ನಾಯಕ ಲೈಫಲ್ಲಿ ಸೆಟ್ಲ್ ಆಗಲು ಹೊರಡುತ್ತಾನೆ. ಆದರೆ ಅಷ್ಟರಲ್ಲಿ ನಾಯಕಿಯ ಮದುವೆ ಸೆಟ್ಲ್ ಆಗುತ್ತದೆ. ಪ್ರೀತಿಯಲ್ಲಿ ತಲೆಕೆಡಿಸಿಕೊಂಡು ಇನ್ವಾಲ್ವ್ ಆಗಿ 'ಕೊಲ್ಲು ಹುಡುಗಿಯೊವ್ಮು ನನ್ನ ಹಾಗೇ ಸುಮ್ಮನೆ' ಎಂದು ರೊಮ್ಯಾಂಟಿಕ್ ಆಗಿ ಕನವರಿಸುವ ನಾಯಕ ಕೊಲೆ ಕೇಸೊಂದರಲ್ಲಿ ಇನ್ವಾಲ್ವ್ ಆಗಿ ತಲೆತಪ್ಪಿಸಿಕೊಳ್ಳುತ್ತಾನೆ. ತಾನು ಯಾರನ್ನೋ ಪ್ರೀತಿಸುತ್ತಿದ್ದೇನೆ ಎಂಬ ಕಾರಣಕ್ಕೆ ತನ್ನ ಅಪ್ಪ ಅಮ್ಮ ತನಗೆ ಗೊತ್ತಿಲ್ಲದಂತೆ ಮದುವೆ ಅರೇಂಜ್ ಮಾಡಿ ತನ್ನನ್ನು ಸೀದಾ ಮದುವೆ ಮಂಟಪಕ್ಕೆ ಕರ್ಕೊಂಡ್ಬರ್ತಾರೆ ಎಂಬುದು ಅರಿವಿಲ್ಲದ ಕಾರಣ ನಾಯಕ ನಾಯಕಿ ಇಬ್ಬರೂ ಕೊನೆಯಲ್ಲಿ ಅಂಬರತಾರೆಗಳೇ ಆಗಿಬಿಡುತ್ತಾರೆ. ಅಲ್ಲಿಗೆ, ದುರಂತದಿಂದ ಶುರುವಾದ ಕಥೆ ಸುಖಾಂತ್ಯ ಕಾಣುತ್ತದೆ ಎಂಬ ಪ್ರೇಕ್ಷಕರ ನಂಬಿಕೆ ಸುಳ್ಳಾಗುತ್ತದೆ. ಹಳೆಯ ಜೋಕುಗಳ ಕಲೆಕ್ಷನ್ನಂತೆ ಕಾಣುವ ಸಂಭಾಷಣೆಗಳ ಮಧ್ಯೆ ಕಾಲೇಜು ಎಪಿಸೋಡ್ ನೀರಸ ಎನಿಸುತ್ತದೆ. ಎಲ್ಲರೂ ತಮ್ಮ ತಮ್ಮ ಪ್ರೇಮಿಗಳಿಗೆ ಪ್ರಪೋಸ್ ಮಾಡಿದರೆ ಇಲ್ಲಿ ನಾಯಕ, ನಾಯಕಿ ಇಬ್ಬರೂ ತಮ್ಮ ಪ್ರೀತಿ ಹೇಳಿಕೊಳ್ಳುವುದು ನಾಯಕನ ಗೆಳೆಯನ ಬಳಿ ಎಂಬುದು ವಿಶೇಷ. ಆದರೆ, ರಾಮಕೃಷ್ಣರಂಥ ನಟ ಕೂಡ ಡಲ್ ಆಗಿ ಕಾಣುವುದು ಚಿತ್ರದ ನಿರೂಪಣೆಯ ನೀರಸತನಕ್ಕೆ ಸಾಕ್ಷಿ. ಕಥೆಯಲ್ಲಿರುವ ತಿರುವುಗಳೇ ಚಿತ್ರಕ್ಕೆ ಶ್ರೀರಕ್ಷೆ. ನಾಯಕ, ನಾಯಕಿಯರ ಪಾತ್ರದಲ್ಲಿ ಕಂಡು ಬರುವ ಮೆಚ್ಯೂರಿಟಿ ಚಿತ್ರದಲ್ಲಿ ಕಾಣಸಿಗುವುದಿಲ್ಲ. ಯೋಗೀಶ್ರಂಥ ಬಿಡುಬೀಸಾದ ನಾಯಕ, ಭಾಮಾಳಂಥ ಬೆಳದಿಂಗಳ ಬಾಲೆ, ತಿಲಕ್ನಂಥ ಇನ್ಸೇನ್ ಖಳನಾಯಕ ಎಲ್ಲರೂ ಸೇನ್ ಪ್ರಕಾಶ್ ನಿರ್ದೇಶನದ ಅಂಬರ ಚಿತ್ರದಲ್ಲಿದ್ದರೂ ಸಿನಿಮಾ ಮಾತ್ರ ಅಂದುಕೊಂಡ ಎತ್ತರ ತಲುಪುವುದಿಲ್ಲ. ಹಾಗಾಗಿ, ಮಾಮೂಲಿ ಪ್ರೇಮಕಥೆಯಾಗಿ ಉಳಿಯುವ ಅಂಬರ ನೋಡಲು ನೂಕು ನುಗ್ಗಲು ಸೃಷ್ಠಿಯಾಗುವಂಥ ಲಕ್ಷಣಗಳು ಕಡಿಮೆ. ಆದರೆ, ಅನೇಕ ವಿಷಯಗಳಲ್ಲಿ ಏಕತಾನತೆ ಕಾಡಿದರೂ ಅಂಬರದ ಅಂಚಿನ ಬೆಳ್ಳಿಗೆರೆಯಂತೆ ಕಾಣುವುದು ಮನಸ್ಸಿಗೆ ಹತ್ತಿರ ಎನಿಸುವ ಪ್ರೇಮಕಥೆ ಮತ್ತು ಪ್ರೀತಿಸುವ ನಾಯಕ, ನಾಯಕಿ ಪಾತ್ರಗಳ ಪ್ರಾಮಾಣಿಕತೆ. ಅಭಿಮನ್ ರಾಯ್ ಸಂಗೀತದಲ್ಲಿ 'ಸನಿಹ ಬಂದಮೇಲೆ' ಹಾಡು ಟಾಪ್ ಆಫ್ ದಿ ಚಾರ್ಟ್ ಎನಿಸಿಕೊಳ್ಳುತ್ತದೆ. ಛಾಯಾಗ್ರಾಹಕ ಸಿನಿಟೆಕ್ ಸೂರಿ ಅವರ ಟೇಕ್ಗಳು ಅಂಬರವನ್ನು ಒಂದಿಷ್ಟು ಸುಂದರವನ್ನಾಗಿಸಿವೆ. - ಹರಿ